Sunday, September 8, 2024

ಕರವೇ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸಚಿವ ಸಂಪುಟ ಒಪ್ಪಿಗೆ, ವಿಧೇಯಕ ಮಂಡನೆಗೆ ಕ್ಷಣಗಣನೆ!

Most read

ಕನ್ನಡ ನಾಡಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಎಲ್ಲಾ ಹಂತದ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡುವಂತೆ ಸೂಕ್ತ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಕಳೆದ ವಾರವಷ್ಟೇ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೃಹತ್ ಹೋರಾಟ ಆರಂಭಿಸಿದೆ. ಇದರ ಬೆನ್ನಲ್ಲೇ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾನೂನು ತರಲು ಮುಂದಾಗಿದೆ.

ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಶುರು ಮಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಹ ಮಾಡಿದ್ದರು. ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿ ಕಳೆದ ಸೋಮವಾರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಒಪ್ಪಿಗೆ ಸೂಚಿಸಿದೆ.

ಈ ಕುರಿತು ಸಿಎಂ ಸಿದ್ದಾರಾಮಯ್ಯ ಟ್ವೀಟ್ ಮಾಡಿದ್ದು, ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ.

ಈ ಕುರಿತು ಸಂತೋಷ್‌ ಲಾಡ್‌ ಮಾತನಾಡಿ, ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬ ಖುಷಿಯಾಗುತ್ತಿದೆ. ಈ ವಿಧೇಯಕದಿಂದ ಶೇ 50 ರಷ್ಟು ಮ್ಯಾನೇಜ್ ಮೆಂಟ್ ಹುದ್ದೆಗಳು ಹಾಗೂ ಶೇ 75 ರಷ್ಟು ನಾನ್ ಮ್ಯಾನೇಜ್ ಮೆಂಟ್ ಹುದ್ದೆಗಳಲ್ಲಿ ಸ್ಥಳಿಯರಿಗೆ ಮೀಸಲಾತಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇಕಡಾ 100 ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಇತರೆ ಗ್ರೂಪ್‌ಗಳಲ್ಲಿ ಶೇಕಡಾ 80 ರಷ್ಟು ಮೀಸಲಾತಿ ನೀಡುವಂತೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಗ್ರಹಿಸಲಾಗಿತ್ತು.

ರಾಜ್ಯದಲ್ಲಿ ಶೇ.60ರಷ್ಟು ಕನ್ನಡ ಇರುವ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ, ಕಳೆದ ವರ್ಷ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ದೊಡ್ಡ ಹೋರಾಟವನ್ನೇ ಮಾಡಿತ್ತು. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ದ ಅನ್ವಯ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಲೇಬೇಕು ಎಂಬ ಕಾನೂನನ್ನು ಜಾರಿಗೆ ತಂದಿತ್ತು. ಇದೀಗ ಕನ್ನಡಿಗರ ಪರವಾಗಿ ಹೋರಾಟಕ್ಕೆ ಜಯ ಸಿಕ್ಕಿದೆ.

ಖಾಸಗಿ ಸಂಸ್ಥೆ ಮತ್ತು ಉದ್ಯಮಿಗಳಿಂದ ವಿರೋಧ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಮಸೂದೆಗೆ ಟಿ.ವಿ.ಮೋಹನ್ ದಾಸ್ ಪೈ ವಿರೋಧ ವ್ಯಕ್ತಪಡಿಸಿದ್ದು, ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದರೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ವೆಚ್ಚ ಮಾಡಲಿ. ಕನ್ನಡಿಗರಿಗೆ ಉದ್ಯೋಗಕ್ಕೆ ಸೂಕ್ತ ತರಬೇತಿ ನೀಡಲಿ. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ವೆಚ್ಚ ಮಾಡಲಿ. ಇಂಟರ್ನ್ ಶಿಪ್, ಅಪ್ರೆಂಟಿಷಿಪ್‌ಗೆ ಹೆಚ್ಚಿನ ಹಣ ವೆಚ್ಚ ಮಾಡಲಿ. ಇದರಿಂದ ಕನ್ನಡಿಗರು ಕೂಡ ಕೌಶಲ್ಯ ಹೊಂದಿದವರು ಆಗುತ್ತಾರೆ. ಆದರೆ ಕನ್ನಡಿಗರಿಗೇ ಉದ್ಯೋಗ ನೀಡಬೇಕೆಂದು ಕಾನೂನು ಮಾಡುವುದು ಸರಿಯಲ್ಲ. ಇದರಿಂದ ಸರ್ಕಾರ ಏನು ಸಾಧನೆ ಮಾಡುತ್ತೆ? ಖಾಸಗಿ ಕಂಪನಿಗಳ ನೇಮಕಾತಿ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿ ಏಕಿರಬೇಕು? ಕರ್ನಾಟಕದಲ್ಲಿ ಭ್ರಷ್ಟರಿದ್ದಾರೆ, ಕಾರ್ಮಿಕ ಇನ್ಸ್ಪೆಕ್ಟರ್‌ಗಳೆಲ್ಲ ಲಂಚ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ವಿರೋಧದ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಈ ಅಧಿವೇಶನದಲ್ಲಿ ಹೊಸ ಕಾನೂನು ವಿಧೇಯಕ ತರುತ್ತೇವೆ. ಆದರೆ, ಕೆಲ ಕಂಪನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಅದು ಸಹ ನಮ್ಮ ಗಮನಕ್ಕೆ ಬಂದಿದೆ. ಮಜುಂದಾರ್ ಶಾ ನನಗೆ ಮೆಸೇಜ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಬಳಿಕ ಮೆಸೇಜ್ ಮಾಡಿದ್ದರು. ನಾನು ಸಹ ವ್ಯವಹಾರದ ಕುಟುಂಬದಿಂದ ಬಂದವನು. ನನಗೂ ಅದರ ಬಗ್ಗೆ ಮಾಹಿತಿ ಇದೆ. ಅವರು ಬಂದು ನಮ್ಮ ಬಳಿ ಹೇಳಲಿ. ಕಂಪನಿಗಳಿಗೆ ಇದರಿಂದ ನಷ್ಟ ಆಗುತ್ತೆ ಅನ್ನೋದಾದ್ರೆ ನಮ್ಮ ಬಳಿ ಬಂದು ಹೇಳಲಿ.

More articles

Latest article