ಸಕಲೇಶಪುರ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಕಳಪೆ ಗುಣಮಟ್ಟದ ಈ ರಸ್ತೆಯನ್ನು ಕೂಡಲೇ ಬಂದ್ ಮಾಡದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾಹುತವಾದರೆ ಆಶ್ಚರ್ಯಪಡಬೇಕಾಗಿಲ್ಲ. ಇದು ಪ್ರಕೃತಿ ವಿಕೋಪವಲ್ಲ, ಗುತ್ತಿಗೆದಾರನ ಮಹಾಲೋಪ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಶಿರಾಡಿಘಾಟ್ 75 ನಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಮಣ್ಣಿನಡಿ ಹಲವು ವಾಹನಗಳು ಸಿಲುಕಿವೆ. ಕಾರೊಂದರಲ್ಲಿ ಸವಾರರೂ ಇದ್ದು ಅವರನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ. ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ.
ಕಳೆದ ವಾರವೂ ಸಕಲೇಶಪುರ ತಾಲ್ಲೂಕಿನ ಇದೇ ದೊಡ್ಡತಪ್ಲು ಬಳಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿತ್ತು. ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ಘಾಟ್ ರಸ್ತೆಯನ್ನು ಬಂದ್ ಮಾಡಲಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರುಗಳಿಗೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ಕುರಿತು ದೂರು ನೀಡಿದ್ದರು.
ಗುಡ್ಡ ಕಡಿದು ರಸ್ತೆ ಮಾಡುವ ಸಂದರ್ಭದಲ್ಲಿ 90 ಡಿಗ್ರಿ ಕೋನದಲ್ಲಿ ರಸ್ತೆ ಕಡಿದಿದ್ದು, ಗುಡ್ಡಕುಸಿತವಾಗುವುದು ನಿರೀಕ್ಷಿತವಾಗಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿತ್ತು. ರಸ್ತೆಗಾಗಿ ಗುಡ್ಡ ಕಡಿಯುವಾಗ 45 ಡಿಗ್ರಿ ಕೋನದಲ್ಲಿ ಕಡಿಯಬೇಕಾಗಿದ್ದರೂ ಗುತ್ತಿಗೆ ನಿರ್ವಹಿಸುತ್ತಿರುವ ರಾಜ್‌ಕಮಲ್ ಸಂಸ್ಥೆ ಮನಸಿಗೆ ಬಂದಂತೆ ಅವೈಜ್ಞಾನಿಕವಾಗಿ ಗುಡ್ಡ ಕಡಿದು ರಸ್ತೆ ಮಾಡಿರುವುದರಿಂದಲೇ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿದ್ದು, ದೊಡ್ಡ ಅಪಾಯಗಳನ್ನು ಸೃಷ್ಟಿಸುತ್ತಿದೆ.
ಕಾಮಗಾರಿಯನ್ನು ವೀಕ್ಷಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆದಿಯಾಗಿ ಎಲ್ಲ ರಾಜಕೀಯ ನಾಯಕರು ಅವೈಜ್ಞಾನಿಕ, ಕಳಪೆ ಕಾಮಗಾರಿ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದುವರೆಗೆ ರಾಜ್ ಕಮಲ್ ವಿರುದ್ಧ ದೂರು ದಾಖಲಿಸಿ, ಉನ್ನತಮಟ್ಟದ ತನಿಖೆಗೆ ಆದೇಶ ನೀಡಲಾಗಿಲ್ಲ. ಗುತ್ತಿಗೆದಾರ ಪ್ರಭಾವಶಾಲಿಯಾಗಿರುವುದರಿಂದ ಆತನನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲದಂತಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.
ದೊಡ್ಡತಪ್ಲು ಮಾತ್ರವಲ್ಲದೆ ಈ ಕಳಪೆ ರಸ್ತೆಯಲ್ಲಿ ಇನ್ನಷ್ಟು ಭಾಗಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ದಟ್ಟವಾಗಿದ್ದು, ಶಿರಾಡಿ ಘಾಟ್ ರಸ್ತೆ ಬಂದ್ ಆಗದಿದ್ದರೆ ಭಾರಿ ಪ್ರಮಾಣದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕಳಪೆ ಕಾಮಗಾರಿ ಸರಿಪಡಿಸದ ಹೊರತು ಈ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲದೇ ಇದ್ದರೂ ರಸ್ತೆ ಬಂದ್ ಮಾಡಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿರುವುದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.