ಸಕಲೇಶಪುರ: ಕೂಲಿ ಕೆಲಸಕ್ಕೆ ತೆರಳುತ್ತಿದ್ದವನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ವಾಟೆಹಳ್ಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಡಾನೆ ತುಳಿತದಿಂದಾಗಿ ಕೂಲಿ ಕಾರ್ಮಿಕನ ಕಾಲು ಮುರಿದುಹೋಗಿದೆ.
ದಿವಾಕರ್ ಶೆಟ್ಟಿ (60) ಗಾಯಗೊಂಡ ವ್ಯಕ್ತಿ
ಇಂದು ಬೆಳಿಗ್ಗೆ ಕಾಫಿ ತೋಟದ ಕೆಲಸಕ್ಕೆ ದಿವಾಕರ್ ಶೆಟ್ಟಿ ತೆರಳುತ್ತಿದ್ದಾಗ ಆನೆಯೊಂದು ಏಕಾಏಕಿ ದಾಳಿ ನಡೆಸಿತು.
ದಿವಾಕರ್ ಶೆಟ್ಟಿಯನ್ನು ಕಾಲಿನಿಂದ ತುಳಿದ ಕಾಡಾನೆ ಆತನ ಮೇಲೆ ತೀವ್ರ ದಾಳಿ ನಡೆಸಿತು. ಕಾಡಾನೆ ತುಳಿತದಿಂದ ಆತನ ಬಲಗಾಲು ಮುರಿದುಹೋಯಿತು.
ಅದೃಷ್ಟವಶಾತ್ ಪ್ರಾಣಾಪಾಯದಿಂದ ದಿವಾಕರ್ ಶೆಟ್ಟಿ ಪಾರಾಗಿದ್ದು, ಆತ ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಹಾಗೇ ಬಿಟ್ಟು ಕಾಫಿ ತೋಟದೊಳಗೆ ನುಗ್ಗಿದೆ.
ಗಾಯಾಳುವಿಗೆ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ತಂಡ ಭೇಟಿ, ಪರಿಶೀಲನೆ ನಡೆಸಿದೆ.
ಕಾಡಾನೆ ದಾಳಿಯಿಂದಾ ಕಂಗಾಲಾಗಿರುವ ಈ ಭಾಗದ ಜನರು ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.