ಡಿ ಗ್ಯಾಂಗ್ ಗೆ ಮತ್ತೆ ಐದು ದಿನಗಳ ಪೊಲೀಸ್ ಕಸ್ಟಡಿ

Most read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಚಿತ್ರನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ ಬಹುತೇಕ ಆರೋಪಿಗಳಿಗೆ ನ್ಯಾಯಾಲಯ ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಹೀಗಾಗಿ ಡಿ ಗ್ಯಾಂಗ್‌ ಜೂನ್‌ 20ರವರೆಗೆ ಪೊಲೀಸ್‌ ಕಸ್ಟಡಿಯಲ್ಲೇ ಕಾಲ ಕಳೆಯಬೇಕಿದೆ.

ಎ1 ಪವಿತ್ರಾಗೌಡ, ಎ2 ನಟ ದರ್ಶನ್, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ10 ವಿನಯ್, ಎ11 ನಾಗರಾಜು, ಎ12 ಲಕ್ಷ್ಮಣ್, ಎ13 ದೀಪಕ್, ಎ14 ಪ್ರದೋಶ್, ಎ16 ಕೇಶವಮೂರ್ತಿ ಅವರುಗಳನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

24ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ನೀಡಿದ್ದ ಪೊಲೀಸ್ ಕಸ್ಟಡಿ ಮುಗಿಯುವ ಹಿನ್ನೆಲೆಯಲ್ಲಿ, ನಾಳೆ ರಜಾದಿನವಾಗಿರುವುದರಿಂದ ಇಂದೇ ದರ್ಶನ್ ಮತ್ತು ಸಹಚರರನ್ನು ಹಾಜರುಪಡಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ನಿನ್ನೆಯಷ್ಟೇ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರುಗಳನ್ನು ಈ ಆರೋಪಿಗಳೊಂದಿಗೆ ಮುಖಾಮುಖಿ ವಿಚಾರಣೆ ಮಾಡಬೇಕಿದೆ. ಇನ್ನಷ್ಟು ಸ್ಥಳಗಳಲ್ಲಿ ಮಹಜರ್ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕನಿಷ್ಠ ಪಕ್ಷ ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ವಿನಂತಿಸಿದರು. ಕೊನೆಯ ಪಕ್ಷ ಐದು ದಿನಗಳ ಕಸ್ಟಡಿಯಾದರೂ ಬೇಕು ಎಂದು ಅವರು ಪಟ್ಟುಹಿಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಮತ್ತು ಇತರ ಆರೋಪಿಗಳ ಪರ ವಕೀಲರು. ಈಗಾಗಲೇ ಸ್ಥಳ ಮಹಜರ್ ಕೂಡ ನಡೆದಿದೆ. ಮತ್ತೆ ಕಸ್ಟಡಿಗೆ ಕೊಡುವ ಅಗತ್ಯವಿಲ್ಲ ಎಂದು ವಾದಿಸಿದರು.

ಈ ಸಂದರ್ಭದಲ್ಲಿ ಮುಚ್ಚಿದ ಲಕೋಟೆಯಲ್ಲಿ ರೇಣುಕಾಸ್ವಾಮಿಯ ಸಾಕ್ಷಿಗಳೂ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ನ್ಯಾಯಾಧೀಶರಿಗೆ ನೀಡಲಾಯಿತು. ಕೇಸ್ ಡೈರಿಯನ್ನು ಕೂಡ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ವಿಶ್ವನಾಥ ಸಿ ಗೌಡರ್ ದರ್ಶನ್‌, ಪವಿತ್ರ ಗೌಡ ಸೇರಿದಂತೆ ಪ್ರಮುಖ ಆರೋಪಿಗಳನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

More articles

Latest article