ಬೆಂಗಳೂರು: ಎಟಿಎಂಗಳಿಗೆ ತುಂಬಿಸಬೇಕಿದ್ದ ಸುಮಾರು 1 ಕೋಟಿ ರೂ ಹಣವನ್ನು ಸಿಬ್ಬಂದಿಯೇ ದೋಚಿರುವ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ.
ಕೆಲವು ತಿಂಗಳ ಹಿಂದ ನಗರದಲ್ಲಿ ಇಂತಹುದೇ ಪ್ರಕರಣ ವರದಿಯಾಗಿತ್ತು ಮತ್ತು ಪೊಲೀಸರು ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದೀಗ ಮತ್ತೊಂದು ಎಟಿಎಂ ದರೋಡ ಪ್ರಕರಣ ವರದಿಯಾಗಿದೆ.
ಕೋರಮಂಗಲದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರಿದ ಒಂದು ಕೋಟಿ ಹಣವನ್ನು ವಿವಿಧ ಎಟಿಎಂಗಳಿಗೆ ತುಂಬಲು ಎರಡು ಪ್ರತ್ಯೇಕ ತಂಡಗಳಿಗೆ ನಗದು ಹಂಚಿಕೆ ಮಾಡಲಾಗಿತ್ತು. ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬುವರು ಈ ಜವಬ್ದಾರಿ ಹೊತ್ತಿದ್ದರು. ಇವರೆಲ್ಲರೂ ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಬ್ಬಂದಿ ಎಂದು ತಿಳಿದು ಬಂದಿದೆ.
ಹಣದೊಂದಿಗೆ ಈ ನೌಕರರು ಪರಾರಿಯಾಗಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಒಂದು ತಂಡ ಸುಮಾರು 57 ಲಕ್ಷ ರೂ.ಹಣದೊಂದಿಗೆ ಮತ್ತೊಂದು ತಂಡ ಸುಮಾರು 80 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದೆ. ಎಟಿಎಂಗಳಲ್ಲಿ ಹಣ ಜಮಾ ಆಗದೇ ಇರುವುದು ಬೆಳಕಿಗೆ ಬಂದ ನಂತರವಷ್ಟೇ ದರೋಡೆ ನಡೆದಿರುವುದು ತಿಳಿದು ಬಂದಿದೆ.
ಹಿಟಾಚಿ ಪೇಮೆಂಟ್ ಸರ್ವಿಸ್ ಕಂಪನಿ ಅಧಿಕಾರಿ ಮಿಥುನ್ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸಿಸಿಟಿವಿ ಹಾಗೂ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

