ಟೋಲ್‌ ಪಾಸ್‌: ವಾಣಿಜ್ಯ ಸಾರಿಗೆ ವಾಹನಗಳಿಗೂ ವಿಸ್ತರಿಸಲು ಅಗ್ರಹ

Most read

ಬೆಂಗಳೂರು: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಖಾಸಗಿ ವಾಹನಗಳಿಗೆ 3,000 ರೂಪಾಯಿಗಳಿಗೆ ಫಾಸ್ಟ್‌ ಟ್ಯಾಗ್ ವಾರ್ಷಿಕ ಟೋಲ್ ಪಾಸ್‌ ಘೋಷಿಸಿದ ಬೆನ್ನಲ್ಲೇ ವಾಣಿಜ್ಯ ಸಾರಿಗೆದಾರರು, ಕ್ಯಾಬ್‌, ಮ್ಯಾಕ್ಸಿ ಕ್ಯಾಬ್‌, ಟ್ರಕ್‌ ಮತ್ತು ಖಾಸಗಿ ಬಸ್‌ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ವಾಹನಗಳಿಗೂ ವಾರ್ಷಿಕ ಪಾಸ್‌ ಸೌಲಭ್ಯ ವಿಸ್ತರಿಸಬೇಕೆಂದು ಒತ್ತಾಯಿಸಲಾಗುತ್ತಿದೆ.

ಸಧ್ಯಕ್ಕೆ ಕೇವಲ ವೈಟ್‌ ಬೋರ್ಡ್‌ ಖಾಸಗಿ ವಾಹನಗಳಿಗೆ ಮಾತ್ರ ಪಾಸ್‌ ಸೌಲಭ್ಯವಿದೆ. ಕಾರು, ಜೀಪ್‌ ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ವಾಹನಗಳಿಗೆ ಮಾತ್ರ ಈ ಟೋಲ್‌ ಪಾಸ್‌ ಅನ್ವಯಿಸುತ್ತದೆ. ವಾಣಿಜ್ಯ ವಾಹನಗಳಿಗೆ ಈ ಪಾಸ್‌ ಇರುವುದಿಲ್ಲ. ವಾರ್ಷಿಕ ಪಾಸ್‌ ಶುಲ್ಕ 3 ಸಾವಿರ ರೂಪಾಯಿ ಇದ್ದು, ಆಗಸ್ಟ್‌ 15ರಿಂದ ಈ ಯೋಜನೆ ಜಾರಿಗೆ ಬರಲಿದೆ. ಈ ಪಾಸ್‌ ಅನ್ನು ತೆಗೆದುಕೊಂಡ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ಟ್ರಿಪ್‌ ಗಳವರೆಗೆ ಈ ಪಾಸ್‌ ನ ಅರ್ಹತೆ ಇರುತ್ತದೆ. ಟೋಲ್ ಪ್ಲಾಜಾಗಳ 60 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಪ್ರಯಾಣಿಕರಿಗೆ ಪಾಸ್‌ ಅನುಕೂಲಕರವಾಗಿರುತ್ತದೆ.

ವಾಣಿಜ್ಯ ಸಾರಿಗೆ ಒಕ್ಕೂಟಗಳು ವಾಣಿಜ್ಯ ಬಳಕೆ ವಾಹನಗಳಿಗೂ ಈ ವಾರ್ಷಿಕ ಪಾಸ್‌ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಸಲ್ಲಿಸಿವೆ. ಕರ್ನಾಟಕ ರಾಜ್ಯ ಪ್ರಯಾಣ ನಿರ್ವಾಹಕರ ಸಂಘ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ವಾಣಿಜ್ಯ ವಾಹನಗಳಿಗೆ ರಿಯಾಯಿತಿ ವಾರ್ಷಿಕ ಟೋಲ್ ಪಾಸ್‌ಗಳ ಅಗತ್ಯ ಹೆಚ್ಚಾಗಿದೆ ಎಂದು ಹೇಳುತ್ತಾರೆ.

ಬಸ್‌ ಮತ್ತು ಟ್ರಕ್‌ ಗಳು ಪ್ರತಿದಿನ ಸುಮಾರು 600 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸುತ್ತವೆ. ಆದ್ದರಿಂದ ವಾಣಿಜ್ಯ ಬಳಕೆ ವಾಹನಗಳಿಗೆ ವಿಸ್ತರಿಸಿದರೆ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮತ್ತು ಸಾರ್ವಜನಿಕ ಸಾರಿಗೆ ಸೇವಾ ಪೂರೈಕೆದಾರರು ಪ್ರತಿದಿನ ಮತ್ತು ಪದೇ ಪದೇ ಹೆದ್ದಾರಿಗಳನ್ನು ಬಳಸುತ್ತಾರೆ. ಸಣ್ಣ ಟ್ಯಾಕ್ಸಿ ಚಾಲಕ ಕೂಡ ವಾರ್ಷಿಕವಾಗಿ 30,000-40,000 ರೂಪಾಯಿ ಟೋಲ್ ಪಾವತಿಸುತ್ತಾರೆ. ಬಸ್‌ ಮತ್ತು ಟ್ರಕ್‌ ಗಳು ಪಾವತಿಸುವ ಟೋಲ್‌ಗಳ ಮೊತ್ತವನ್ನು ಊಹಿಸಿ ವಾಣಿಜ್ಯ ವಾಹನ ನಿರ್ವಾಹಕರಿಗೆ ರಿಯಾಯಿತಿ ಟೋಲ್ ಯೋಜನೆಯನ್ನು ಜಾರಿಗೊಳಿಸುವಂತೆ ಸಚಿವ ಗಡ್ಕರಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆಯ ಕಾರ್ಯಾಚರಣೆಯ ವೆಚ್ಚ ಹೆಚ್ಚಳಕ್ಕೆ ದೈನಂದಿನ ಟೋಲ್ ಶುಲ್ಕ ಪ್ರಮುಖ ಕಾರಣವಾಗಿದ್ದು, ಈ ವೆಚ್ಚವನ್ನು ಗ್ರಾಹಕರಿಗೆ ಅಂತಿಮವಾಗಿ ಜನರಿಗೆ ವರ್ಗಾಯಿಸಲಾಗುತ್ತದೆ. ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರೂ ಸಹ ಟೋಲ್ ರಿಯಾಯಿತಿಯ ಪ್ರಯೋಜನವನ್ನು ಬಿಳಿ ಬೋರ್ಡ್ ವಾಹನಗಳ ಜತೆಗೆ ವಾಣಿಜ್ಯ ವಾಹನಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

More articles

Latest article