ಬೆಳಗಾವಿ: ಅನ್ನಭಾಗ್ಯ ಯೋಜನೆಯಡಿಯಲ್ಲಿ ಜನವರಿಯಿಂದ 5 ಕೆಜಿ ಅಕ್ಕಿಗೆ ಬದಲಾಗಿ ʻಇಂದಿರಾ ಕಿಟ್ʼ ವಿತರಿಸುವುದಾಗಿ ಆಹಾರ ಮತ್ತು ನಾಗರಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ವಿಧಾನ ಪರಿಷತ್ ಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ಪ್ರಶ್ನೆಗೆ ಉತ್ತರಿಸಿದ ಅವರು, ಅನ್ನ ಭಾಗ್ಯದ ಅಕ್ಕಿ ಅಕ್ರಮ ಸಾಗಾಟ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಂತೆ 10 ಕೆಜಿ ಅಕ್ಕಿ ವಿತರಿಸುತ್ತಿದ್ದೇವೆ. ಸರ್ಕಾರ ಇಂದಿರಾ ಕಿಟ್ ಕೊಡುವ ನಿರ್ಧಾರ ತೆಗೆದುಕೊಂಡಿದೆ. ಜನವರಿಯಿಂದ ಇಂದಿರಾ ಕಿಟ್ ವಿತರಿಸಲಾಗುತ್ತಿದ್ದು, ಅಕ್ರಮ ಅಕ್ಕಿ ಸಾಗಾಟ ತಡೆಗಟ್ಟಬಹುದು ಎಂಬ ನಿರೀಕ್ಷೆ ಇದೆ ಎಂದರು. ಈ ಪ್ರಕರಣ ಕುರಿತು ತನಿಖೆ ನಡೆಸಲು ಎಸ್‌ಐಟಿ ರಚನೆ ಅವಶ್ಯತೆ ಇಲ್ಲ ಎಂದೂ ಹೇಳಿದರು.
ಅನ್ನಭಾಗ್ಯ ಅಕ್ಕಿ ಹೊರ ದೇಶ, ರಾಜ್ಯಕ್ಕೆ ಸಾಗಾಟ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಸಿದಂತೆ ಈ ವರ್ಷದಲ್ಲಿ ಸುಮಾರು 485 ಪ್ರಕರಣಗಳನ್ನು ದಾಖಲಿಸಲಾಗಿದ್ದು, 29,603 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಕೊಪ್ಪಳ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಒಟ್ಟಾರೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಪ್ರಶ್ನೆ ಕೇಳಿದ ಸಿ.ಟಿ ರವಿ ಅನ್ನಭಾಗ್ಯ ಅಕ್ಕಿ ಹೊರ ದೇಶಗಳಿಗೆ ರಫ್ತಾಗುತ್ತಿದೆ. ಸಿಂಗಾಪುರದಲ್ಲಿ, ದುಬೈನಲ್ಲಿ ಇದೇ ಅಕ್ಕಿಯನ್ನು ಪಾಲಿಶ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದು ತನಿಖೆಗೆ ಎಸ್ ಐಟಿ ಎಚಿಸುವಂತೆ ಆಗ್ರಹಪಡಿಸಿದರು.

