ಬೆಂಗಳೂರು:2025-26ನೇ ಸಾಲಿನ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಗೌರವ ಧನವನ್ನು ಕಾರ್ಯಕರ್ತೆಯರಿಗೆ ರೂ. 15 ಸಾವಿರ ಮತ್ತು ಸಹಾಯಕಿಯರಿಗೆ ರೂ.10ಸಾವಿರಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.
ಫ್ರೀಡಂ ಪಾರ್ಕ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಸಾವಿರಾರು ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಭರವಸೆ ನೀಡಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನವನ್ನು ಹೆಚ್ಚಿಸುವುದು ಮತ್ತು ನಿವೃತ್ತಿ ಪರಿಹಾರ ರೂ.2 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ 2025-26ನೇ ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರಿಗೆ ಗ್ರಾಚ್ಯುಯಿಟಿ ನೀಡಬೇಕು. ಅದಕ್ಕಾಗಿ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ಅರ್ಹ ಎಲ್ಲಾ ನೌಕರರಿಗೆ ಗ್ರಾಚ್ಯುಯಿಟಿ ಪಾವತಿಸಬೇಕು. ಅಂಗನವಾಡಿ ನೌಕರರನ್ನು ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು ಎನ್ನುವ ನೌಕರರ ಬಹುದಿನಗಳ ಬೇಡಿಕೆಯನ್ನು ಎತ್ತಿ ಹಿಡಿದಿರುವ ಗುಜರಾತ್ ಹೈಕೋರ್ಟ್ ನ ಆದೇಶದಂತೆ, ಅಂಗನವಾಡಿ ನೌಕರರ ಸೇವೆಯನ್ನು ಖಾಯಂ ಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ನಿಧಿಯಿಂದ ಅವರ ವಿವಿಧ ಗಂಭೀರ ಕಾಯಿಲೆಗಳ ಚಿಕಿತ್ಸೆಗಳಿಗೆ ನೀಡುತ್ತಿರುವ ವೈದ್ಯಕೀಯ ವೆಚ್ಚಗಳ ಸಹಾಯ ಧನ ಹಲವಾರು ವರ್ಷಗಳಿಂದ ಪಾವತಿಯಾಗುತ್ತಿಲ್ಲ, ಕೂಡಲೇ ಪಾವತಿಸಲು ಕ್ರಮ ವಹಿಸಬೇಕು. ಸಹಾಯ ಧನವನ್ನು ಕನಿಷ್ಠ ರೂ. 2 ಲಕ್ಷ ಗಳಿಗೆ ಹೆಚ್ಚಿಸಬೇಕು. ಈಗಾಗಲೇ ನಿವೃತ್ತಿಯಾದ ನೌಕರರಿಗೆ ರೂ. 50,000 ಮತ್ತು ರೂ. 30,000 ನಿವೃತ್ತಿ ಪರಿಹಾರ ಹಣ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿ ಸರಳವಾಗಿ ನಿವೃತ್ತಿ ಪರಿಹಾರ ಸಿಗುವಂತೆ ಸೂಕ್ತ ಕ್ರಮವಹಿಸಬೇಕು ಮತ್ತು ನೌಕರರನ್ನು ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸಬೇಕು ಅಲ್ಲಿಯವರೆಗೂ ನಿವೃತ್ತಿ ಪರಿಹಾರ ಇಡುಗಂಟು ರೂ. 5 ಲಕ್ಷಗಳಿಗೆ ನಿಗದಿ ಮಾಡಬೇಕು ಎಂದೂ ಆಗ್ರಹಪಡಿಸಿದರು.
ಸೇವಾ ಹಿರಿತನವನ್ನು ಆಧರಿಸಿ ಶೇ.50 ಮತ್ತು ಮೆರಿಟ್ ಆಧರಿಸಿ ಶೇ.50 ಆಧರಿಸಿ ಮೇಲಿನ ಹುದ್ದೆಗೆ ಮುಂಬಡ್ತಿ ಹೊಂದಲು ಈ ಹಿಂದೆ ಇದ್ದ ಆದೇಶವನ್ನು ಮುಂದುವರಿಸಬೇಕು. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ, ಐಸಿಡಿಎಸ್ ಕೆಲಸಗಳನ್ನು ಹೊರತುಪಡಿಸಿ, ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ಹೇರಬಾರದು ಮತ್ತು ಈಗ ಮಾಡುತ್ತಿರುವ ಹೆಚ್ಚುವರಿ ಕೆಲಸಗಳಿಂದ ಬಿಡುಗಡೆ ಮಾಡಬೇಕು ಎಂದು ಅಂಗನವಾಡಿ ನೌಕರರು ಒತ್ತಾಯಿಸಿದರು.