ಆನೇಕಲ್‌ ನಲ್ಲಿ ಕೆರೆಗೆ ಬಿದ್ದು ಯುವತಿ ಸಾವು; ಮರ್ಯಾದಾ ಹತ್ಯೆ ಶಂಕೆ

Most read

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಕೆರೆಯಲ್ಲಿ ಯುವತಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಂದೆ, ಮಗಳು ಬೈಕ್​ನಲ್ಲಿ ಸಾಗುತ್ತಿದ್ದ ವೇಳೆ ಕೆರೆಗೆ ಬೈಕ್ ಬಿದ್ದಿದೆ. ಈಜಿ ದಡ ಸೇರಿದ ತಂದೆ ರಾಮಮೂರ್ತಿ ಹೆಬ್ಬಗೋಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ. ಆದರೆ ಮಗಳು ಸಹನಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಗಳನ್ನು ರಕ್ಷಿಸದೆ ದೂರು ಸಲ್ಲಿಸಲು ಠಾಣೆಗೆ ರಾಮಮೂರ್ತಿ ಆಗಮಿಸಿದ್ದಾರೆ. ಆದರೆ ಆಕೆಯ ಪ್ರಿಯಕರ ನಿತಿನ್ ಇದೊಂದು ಮರ್ಯಾದಾ ಹತ್ಯೆ ಎಂದು ಆರೋಪ ಮಾಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಒಂದು ವರ್ಷದಿಂದ ನಿತಿನ್ ಮತ್ತು 21 ವರ್ಷದ ಸಹನಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ದಿನದ ಹಿಂದೆ ಪೋಷಕರಿಗೆ ಮಗಳ ಪ್ರೀತಿಯ ವಿಚಾರ ಗೊತ್ತಾಗಿದೆ. ಅಂದು ರಾತ್ರಿ ಪ್ರಿಯಕರ ನಿತಿನ್​ಗೆ ಕರೆ ಮಾಡಿದ್ದ ಸಹನಾ ತಂದೆ, ಬೆಳಗ್ಗೆ ಮಾತುಕತೆಗೆ ಬರುವಂತೆ ತಿಳಿಸಿದ್ದಾರೆ. ಸಹನಾ ತಂದೆ ಸ್ನೇಹಿತನ ಮನೆಯಲ್ಲಿ ನ್ಯಾಯ ಪಂಚಾಯಿತಿ ನಡೆದಿದೆ. ಈ ವೇಳೆ ಪುತ್ರಿ ಮೇಲೆ ರಾಮಮೂರ್ತಿ ಹಲ್ಲೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಈ ಪ್ರೀತಿಗೆ ಒಪ್ಪುವುದಿಲ್ಲ ಎಂದು ಖಡಕ್‌ ಆಗಿ ತಿಳಿಸಿದ್ದಾರೆ.

ನಿತಿನ್‌ ತಾಯಿ ಕೇಳಿಕೊಂಡರೂ ರಾಮಮೂರ್ತಿ ಅವರು ಮದುವೆಗೆ ಒಪ್ಪಿಲ್ಲ. ಕೊನೆಗೆ ಎರಡು ದಿನ ಸಮಯ ಕೇಳಿದ್ದಾರೆ. ಇಂದು ಮಗಳನ್ನು ರಾಮಮೂರ್ತಿ ಬೈಕ್‌ ನಲ್ಲಿ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಪುತ್ರಿ ಸಹನಾರನ್ನು ರಾಮಮೂರ್ತಿ ಕೆರೆಗೆ ತಳ್ಳಿದ್ದಾರೆ. ದೂರಿನ ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸದ್ಯ ಯುವತಿ ಸಾವಿನ ಸುತ್ತ ಅನುಮಾನ ಕಾಡುತ್ತಿದೆ. ಆಕಸ್ಮಿಕವಾಗಿ ಕೆರೆಗೆ ಬಿದ್ದರೇ ಅಥವಾ ಅಪ್ಪನೇ ಕೆರೆಗೆ ತಳ್ಳಿದರೇ ಎಂಬ ಅನುಮಾನ ಕಾಡುತ್ತಿದೆ. ನಿತಿನ್​ನನ್ನೇ ಮದುವೆಯಾಗುವುದಾಗಿ ಯುವತಿ ಹಠ ಹಿಡಿದಿದ್ದಳು. ಆದರೆ ಪೋಷಕರು ಅಕ್ಕನ ಮಗನ ಜೊತೆ ವಿವಾಹಕ್ಕೆ ಮುಂದಾಗಿದ್ದರು. ಇದೇ ವಿಚಾರಕ್ಕೆ ಅಪ್ಪ ಮಗಳ ನಡುವೆ ಜೋರು ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ.

More articles

Latest article