ಬೆಂಗಳೂರು: ಬುಧವಾರ ವ್ಯಕ್ತಿಯೋರ್ವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ಬ್ಲೇಡ್ ನಿಂದ ತನ್ನ ಕತ್ತು ಕೊಯ್ದುಕೊಂಡ ಘಟನೆ ನಡೆದಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಚ್. ಪಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಎಂದಿನಂತೆ ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು.
ಮಧ್ಯಾಹ್ನ 1.15ರ ಸಮಯದಲ್ಲಿ ಕ್ರಮ ಸಂಖ್ಯೆ 26 ರ ಪ್ರಕರಣವನ್ನು ಕೂಗುತ್ತಿದ್ದಂತೆಯೇ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಒಂದಷ್ಟು ಫೈಲುಗಳೊಂದಿಗೆ ನ್ಯಾಯಪೀಠದ ಮುಂದೆ ಬಂದು ನಿಂತರು. ನೋಡ ನೋಡುತ್ತಿದ್ದಂತೆಯೇ ಆ ವ್ಯಕ್ತಿ ಹರಿತವಾದ ಬ್ಲೇಡ್‌ನಂತಹ ಆಯುಧದಿಂದ ತಮ್ಮ ಕತ್ತು ಕೊಯ್ದುಕೊಂಡಿದ್ದಾರೆ.
ತಕ್ಷಣವೇ ಮುಖ್ಯ ನ್ಯಾಯಮೂರ್ತಿಗಳು ಪೊಲೀಸರನ್ನು ಕರೆದು ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು.
ಭದ್ರತೆ ಲೋಪ: ‘ಹೈಕೋರ್ಟ್ ಒಳ ಪ್ರವೇಶಕ್ಕೆ ಭಾರೀ ಬಿಗಿ ಭದ್ರತೆ ಇದ್ದರೂ ಇಂತಹ ಆಯುಧಗಳು ಒಳ ಪ್ರವೇಶಿಸಿದ್ದು ಹೇಗೆ ಮತ್ತು ಪೊಲೀಸರು ಏನು ಮಾಡುತ್ತಿರುತ್ತಾರೆ’ ಎಂದು ನ್ಯಾಯಮೂರ್ತಿ ಪ್ರಭಾಕರ ಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.