ಬೆಂಗಳೂರು: ಬರಪರಿಹಾರದ ವಿಷಯದಲ್ಲಿ ಸುಳ್ಳು ಹೇಳಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಇಲ್ಲಿಗೆ ಬಂದು ಭಾಷಣ ಮಾಡೋದಲ್ಲ, ಕೋರ್ಟ್ ಮುಂದೆ ಅಫಿಡೆವಿಟ್ ನೀಡಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸವಾಲೊಡ್ಡಿದ್ದಾರೆ.
ರಾಜ್ಯ ಸರ್ಕಾರದಿಂದ ತಡವಾಗಿ ಪ್ರಸ್ತಾಪ ಬಂದಿದ್ದರಿಂದ ಬರಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ, ಇದನ್ನೇ ಅವರು ಸುಪ್ರೀಂ ಕೋರ್ಟ್ ನಲ್ಲಿ ಹೇಳಲಿ ನೋಡೋಣ ಎಂದು ಸವಾಲೆಸೆದ ಅವರು, ಅಮಿತ್ ಶಾ, ನಿರ್ಮಲಾಸೀತಾರಾಮನ್ ಅವರು ಇಬ್ಬರೂ ಮಹಾ ಸುಳ್ಳುಗಾರರು ಎಂದಿದ್ದಾರೆ.
ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ. ಹಾರಿಕೆ ಉತ್ತರ ಕೊಟ್ಟರೆ ನಡೆಯುವುದಿಲ್ಲ. ತಡವಾಗಿದೆ, ಈಗಲಾದರೂ ಕೊಡುತ್ತೇವೆ ಎಂದು ಒಪ್ಪಿಕೊಂಡರೆ ಮಾನ ಹರಾಜಾಗುವುದಾದರೂ ತಪ್ಪುತ್ತದೆ. ಜನರೂ ಕ್ಷಮಿಸುತ್ತಾರೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಭವಿಸುತ್ತಿದೆ ಅನ್ನುವುದು ಕರ್ನಾಟಕದ ಜನತೆಗೆ ಗೊತ್ತಾಗಿದೆ. ಎಲ್ಲ ವಿಚಾರಗಳಲ್ಲೂ ನಮ್ಮ ಜನರಿಗೆ ಅನ್ಯಾಯ ಆಗಿದೆ.
ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಿಪಕ್ಷ ನಾಯಕರಾಗಿ ಅವರಿಗೆ ಜ್ಞಾನದ ಕೊರತೆಯಿದೆ. ಅವರು ಹೀಗೆ ಮಾತಾಡುತ್ತ ಹೋದರೆ ವಿಪಕ್ಷದ ಸ್ಥಾನಕ್ಕೂ ಮರ್ಯಾದೆ ಇರುವುದಿಲ್ಲ ಎಂದು ಅವರು ನುಡಿದರು.
ಅಮಿತ್ ಷಾ ಒಂದು ಲೆಕ್ಕ ಕೊಟ್ಟು ಹೋಗಿದ್ದಾರೆ. 4.6 ಲಕ್ಷ ಕೋಟಿ ಕೊಟ್ಟಿದ್ದೇವೆ ಅಂತ ಹೇಳಿದ್ದಾರಲ್ಲವೇ? ರಾಜ್ಯದಿಂದ ಕೇಂದ್ರಕ್ಕೆ ನಾವು ಕೊಟ್ಟದ್ದು ಎಷ್ಟು ಅಂತ ಹೇಳಲಿ. ಆಗ ಗೊತ್ತಾಗಲಿದೆ ಎಷ್ಟು ಕೊಟ್ವಿ ವಾಪಸ್ ಎಷ್ಟು ಕೊಟ್ಟಿದ್ದಾರೆ ಅನ್ನೋದು ಎಂದ ಅವರು, ಅವರೇ ಇದನ್ನು ಹೇಳಲಿ, ಇಲ್ಲವಾದಲ್ಲಿ ನಾವೇ ಒಂದೆರಡು ದಿನಗಳಲ್ಲಿ ಸಂಪೂರ್ಣ ಅಂಕಿಅಂಶ ಬಹಿರಂಗಪಡಿಸುತ್ತೇವೆ ಎಂದು ಅವರು ನುಡಿದರು.
ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯತ್ನಾಳ್ ಅವರದು ವಿಕೃತ ಮನಸ್ಥಿತಿ. ನಾಲಿಗೆ ಮೇಲೆ ಹಿಡಿತ ಇಲ್ಲ. ಬಿಜೆಪಿಯಲ್ಲಿ ಇಂಥವರ ಸಂಖ್ಯೆ ಹೆಚ್ಚಿದೆ. ಜನರ ನಡುವೆ ದ್ವೇಷ ಹೆಚ್ವಿಸೋದು ಅವರ ಕೆಲಸ. ಹೀಗಾಗಿಯೇ ನಮ್ಮ ಶ್ರೀಮತಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಚುನಾವಣೆ ಆಯೋಗಕ್ಕೂ ದೂರು ಕೊಡುವ ಕೆಲಸ ಆಗಲಿದೆ. ಮುಖ್ಯ ವಿಚಾರಗಳು ಬೇರೆ ಬೇರೆ ಇವೆ. ಕೀಳು ಮಟ್ಟದ ರಾಜಕಾರಣ ಅಷ್ಟೆ ಇದು. ಸೋಲಿನ ಅಂಚಿನಲ್ಲಿ, ಹತಾಶೆಯಿಂದ ಹೀಗೆ ಮಾತಾಡ್ತಾ ಇದ್ದಾರೆ. ಈ ಬಾರಿ ಬಿಜೆಪಿಗೆ 200ಕ್ಕಿಂತ ಕಡಿಮೆ ಸ್ಥಾನ ಬರಲಿದೆ ಎಂದು ಅವರು ಹೇಳಿದರು.