(ಮಾರ್ಚ್ 25 ರಂದು ಹಾವನೂರು ಅವರ 98 ನೇ ಜನ್ಮದಿನ ಪ್ರಯುಕ್ತ ವಿಶೇಷ ಲೇಖನ)
ನಾಡಿನ ಕಾನೂನು ತಜ್ಞರಲ್ಲಿ ಪ್ರಮುಖರು, ದಕ್ಷಿಣ ಆಫ್ರಿಕಾದ ಸಂವಿಧಾನ ರಚನೆ ಸಲಹಾ ಸಮಿತಿ ಸದಸ್ಯ, ಕನ್ನಡ ನಾಡಿನ ಹಿಂದುಳಿದ ವರ್ಗಗಳ ಪಾಲಿನ ಅಂಬೇಡ್ಕರ್ ಎಂದೇ ಕರೆಯಬಹುದಾದ ಎಲ್.ಜಿ.ಹಾವನೂರ್ ಅವರನ್ನು ಇಂದು ನಾಡು ಮರೆಯುತ್ತಿದೆ. ಎಂದಿಗೂ ಮರೆಯಬಾರದ ಅವರನ್ನು ಸಮಾಜ ವಿಸ್ಮೃತಿಗೆ ಸರಿಸುತ್ತಿದೆ. ಬದುಕಿನುದ್ದಕ್ಕೂ ಎದುರಾದ ಅವಮಾನಗಳನ್ನು ಬೆಳವಣಿಗೆಯ ಮೆಟ್ಟಿಲುಗಳನ್ನಾಗಿ ಕಟ್ಟಿಕೊಳ್ಳುತ್ತ ಎತ್ತರೆತ್ತರಕ್ಕೆ ಬೆಳೆದ ಈ ಮಹಾನ್ ಚೇತನದ ಬದುಕು ಸಾಧನೆಗಳನ್ನು ಸ್ಮರಿಸುವದರೊಂದಿಗೆ, ಅವರು ಕಂಡ ಸಮ ಸಮಾಜದ ಕನಸನ್ನು ನನಸಾಗಿಸಬೇಕಾದ ಹಾದಿಯನ್ನು ನಾವು ಮತ್ತೆ ಮತ್ತೆ ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ.
ಈಗಿನ ಹಾವೇರಿ ಜಿಲ್ಲೆಯ ಅಗಡಿ ಗ್ರಾಮದಲ್ಲಿ ಗೂಳಪ್ಪ ಹಾಗೂ ದುರ್ಗಮ್ಮ ದಂಪತಿಗಳ ನಾಲ್ಕನೇಯ ಮಗನಾಗಿ 1927 ರ ಮಾರ್ಚ್ 25 ರಂದು ಜನಿಸಿದ ಲಕ್ಷ್ಮಣ ಜಿ.ಹಾವನೂರ್ ಅವರು, ರಾಣೆಬೆನ್ನೂರಿನ ಬೇಡರ ಓಣಿಯಲ್ಲಿ ಇತರೆ ಸಹ ಹಿಂದುಳಿದ ಸಮುದಾಯಗಳೊಂದಿಗಿನ ಸೌಹಾರ್ದ ವಾತಾವರಣ ನಡುವೆ ಬೆಳೆಯುತ್ತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದರು. ಗರಡಿಮನೆಯಲ್ಲಿ ಸಾಮು ತೆಗೆಯುತ್ತ ಕಟ್ಟುಮಸ್ತಾದ ದೇಹದಾರ್ಢ್ಯದೊಂದಿಗೆ ಬೆಳೆದರು. ಶೆಟಲ್ ಬ್ಯಾಡ್ಮಿಂಟನ್ ಅವರ ಹವ್ಯಾಸವಾಗಿತ್ತು.
ದೇಶದ ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಮೂಲಕ ಸಮ ಸಮಾಜವನ್ನು ನಿರ್ಮಿಸಬೇಕೆಂಬ ಕನಸು ಕಂಡು ಅದನ್ನು ನನಸಾಗಿಸಲು ಶ್ರಮಿಸಿದ ಮಹಾನ್ ಚೇತನ ಎಲ್.ಜಿ.ಹಾವನೂರ ಅವರು, ಬಾಲ್ಯದಿಂದಲೂ ಬಡತನ, ಹಸಿವು, ಅವಮಾನಗಳನ್ನು ಅರಗಿಸಿಕೊಂಡವರು, ಉಂಡ ನೋವುಗಳೇ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯವಿರುವ ಮದ್ದನ್ನು ರೂಪಿಸುವ ನಿಟ್ಟಿನಲ್ಲಿ ಅವರನ್ನು ಅಣಿಗೊಳಿಸಿದವು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ರಾಣೆಬೆನ್ನೂರಿನಲ್ಲಿ ಪಡೆದ ಎಲ್.ಜಿ.ಹಾವನೂರು ಅವರು ಈಗ ಶಂಕರ್ ಚಿತ್ರಮಂದಿರ ಇರುವ ಸ್ಥಳದಲ್ಲಿ ಆಗ ಇದ್ದ ತಮ್ಮ ಬಂಧು ಕನಕಪ್ಪಜ್ಜನವರ ಕಟ್ಟಿಗೆ ಅಡ್ಡೆಯ ಬೆಳಕಿನಲ್ಲಿ ಅಭ್ಯಾಸ ಮಾಡುತ್ತಿದ್ದರು. ನಂತರ ಮುಂಬಯಿನ ಜೆ ಜೆ ಸ್ಕೂಲ್ ಆಫ್ ಆರ್ಟ್ಸ್ ನಿಂದ ಡ್ರಾಯಿಂಗ್ ಮತ್ತು ಪೇಂಟಿಂಗ್ ಪರೀಕ್ಷೆ ಉತ್ತೀರ್ಣರಾದರು.
ಧಾರವಾಡದಲ್ಲಿ ಪದವಿ ವ್ಯಾಸಂಗ ಮಾಡುವಾಗ ಹಾಸ್ಟೇಲಿನಲ್ಲಿ ಮೇಲ್ವರ್ಗಗಳಿಂದ ಅವಮಾನಿತರಾಗಿ ವಾರ್ಡನ್ನರಿಂದ ಹೊರಗೆ ಹಾಕಿಸಿಕೊಂಡ ಹಾವನೂರ್ ಅವರು, ನಂತರ ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಇವರಲ್ಲಿನ ಪ್ರತಿಭೆ ಗುರುತಿಸಿದ ಪೋಸ್ಟ್ ಮಾಸ್ಟರ್ ಒಬ್ಬರು ಇವರನ್ನು ಕಾನೂನು ಪದವಿ ಪಡೆಯಲು ಪ್ರೇರೇಪಿಸಿ ಬೆಳಗಾವಿಗೆ ಕಳಿಸುತ್ತಾರೆ. ಬೆಳಗಾವಿಯ ಆರ್ ಎಲ್ ಎಸ್ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದು ಮುಂಬಯಿನಲ್ಲಿ ವಕೀಲಿ ವೃತ್ತಿಯ ಸನ್ನದು ಪಡೆದು ರಾಣೆಬೆನ್ನೂರಿನಲ್ಲಿ ವೃತ್ತಿ ಪ್ರಾರಂಭಿಸಿದರು. ಇವರ ಶಿಕ್ಷಣಕ್ಕೆ ಅವರ ಅಣ್ಣ ಲಿಂಗಪ್ಪ ಹಾವನೂರು ಅವರ ಪ್ರೋತ್ಸಾಹವಿತ್ತು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗಿಂತಲೂ ಕಷ್ಟದ, ಸಾಮಾಜಿಕವಾಗಿ ಅವಮಾನಿತರಾಗಿ ಬದುಕು ಸವೆಸಬೇಕಾಗಿದ್ದ ನಾಯಿಂದ(ಹಡಪದ), ಕುಂಬಾರ, ನೇಕಾರ, ಬೆಸ್ತ, ದರ್ಜಿ, ಮಡಿವಾಳ, ಬೇಡ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು, 1956 ರಲ್ಲಿ ರಾಣೆಬೆನ್ನೂರಿನಲ್ಲಿ ಹಿಂದುಳಿದ ಜಾತಿಗಳ ಸಮ್ಮೇಳನ ಸಂಘಟಿಸಿದರು.
ಆರ್.ನಾಗನಗೌಡ ಸಮಿತಿಯು ನೀಡಿದ್ದ ಹಿಂದುಳಿದ ವರ್ಗಗಳ ವರದಿಯನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದಾಗ ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ಮೀಸಲಾತಿಗೆ ಜಾತಿ ಪರಿಗಣನೆ ಇಲ್ಲ ಎಂಬ ಆದೇಶ ಹೊರಡಿಸುತ್ತಾರೆ, ಇದನ್ನು ಪ್ರಶ್ನಿಸಿ ಎಲ್ ಜಿ ಹಾವನೂರು ದೊಡ್ಡ ಮಟ್ಟದ ಸಂವಿಧಾನಾತ್ಮಕ ಹೋರಾಟ ಪ್ರಾರಂಭಿಸುತ್ತಾರೆ. ಹಿಂದುಳಿದವರ ಏಳ್ಗೆಗಾಗಿ ತಮ್ಮ ವಿದ್ವತ್ತನ್ನೆಲ್ಲ ಧಾರೆ ಎರೆದು ಹೋರಾಡಿದರು. ದೇವರಾಜ ಅರಸು ಅವರಲ್ಲಿ ಈ ಕಾಳಜಿಯನ್ನು ಕಂಡು ಅವರಲ್ಲಿ ಸೂಕ್ತ ನಾಯಕತ್ವ ಗುರುತಿಸಿದರು, 1969 ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ದೇವರಾಜ ಅರಸು ಅವರಿಗೆ ಪ್ರಮುಖ ಸಲಹೆಗಾರರಾಗಿ ಅಧಿಕೃತವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದರು. 1971 ರಲ್ಲಿ ರಾಜ್ಯ ಬುಡಕಟ್ಟು ಸಮಾವೇಶ ಆಯೋಜಿಸಿದರು.
ಬೆಂಗಳೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಎಲ್ ಜಿ ಹಾವನೂರ ಅವರ ಕಚೇರಿಯಲ್ಲಿ ಓರಿಸ್ಸಾ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಮಾಜಿ ಸಂಸದರಾದ ಎನ್.ವೈ.ಹನುಮಂತಪ್ಪ, ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ನಾಯಕ್, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್, ಮಾಜಿಸಚಿವ ಎಂ.ಪಿ.ಪ್ರಕಾಶ್ ಮತ್ತಿತರರು ಹಾವನೂರ ಅವರ ಪ್ರಮುಖ ಶಿಷ್ಯ ಮತ್ತು ಆಪ್ತಬಳಗದಲ್ಲಿದ್ದರು.
ಅರಸು-ಹಾವನೂರು ಜೋಡಿ ಕರ್ನಾಟಕದಾದ್ಯಂತ ಸುತ್ತಾಡಿ ಮೂಡಿಸಿದ ಜಾಗೃತಿಯ ಪರಿಣಾಮವಾಗಿ ಅದುವರೆಗೆ ರಾಜಕಾರಣದ ಮುಖ್ಯಧಾರೆಗೆ ಪ್ರವೇಶ ಪಡೆಯದಿದ್ದ ದೇವಾಡಿಗ, ಬಿಲ್ಲವ, ಮುಸ್ಲಿಮ್, ಮೀನುಗಾರರು, ಕ್ರಿಶ್ಚಿಯನ್, ಬ್ರಾಹ್ಮಣ, ರಜಪೂತ, ಬಲಿಜ, ಲಮಾಣಿ, ಗಾಣಿಗ, ಮಾದಿಗ, ಪತ್ತಾರ್, ಕುರುಬರು, ವಾಲ್ಮೀಕಿ, ದಲಿತರು ಹೇಳ ಹೆಸರಿಲ್ಲದ ಸಮುದಾಯಗಳ ಸುಮಾರು 60-70 ಶಾಸಕರು ವಿಧಾನಸಭೆ ಪ್ರವೇಶಿಸುವಂತೆ ಮಾಡಿದ್ದು ನಾಡಿನ ಸಾಮಾಜಿಕ ನ್ಯಾಯದ ಹಾದಿಗೆ ಹೊಸ ದಿಕ್ಕು ತೋರಿತು.
1972 ರಲ್ಲಿ ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎಲ್.ಜಿ.ಹಾವನೂರ ಅವರ ಅಧ್ಯಕ್ಷತೆಯಲ್ಲಿ ಯುವರಾಜಕಾರಣಿಗಳಾದ ಧರ್ಮಸಿಂಗ್, ವೈ.ರಾಮಚಂದ್ರ, ಕೆಎಸ್ಆರ್ ನಾಯ್ಡು, ಕೆ.ಎಂ.ನಾಗಣ್ಣ, ಎ.ಎಂ.ಚೆಟ್ಟಿಯವರು ಸದಸ್ಯರಾಗಿದ್ದ ಹಿಂದುಳಿದ ವರ್ಗಗಳ ಆಯೋಗ ರಚನೆಯಾಯಿತು. 193 ಗ್ರಾಮಗಳು, 185 ಪಟ್ಟಣ, ನಗರ ಪ್ರದೇಶಗಳಿಗೆ ಭೇಟಿ ನೀಡಿ ಸುಮಾರು 171 ಕ್ಕೂ ವಿವಿಧ ಜಾತಿಗಳ 3.5 ಲಕ್ಷಕ್ಕೂ ಹೆಚ್ಚು ಜನರನ್ನು ಮುಖಾಮುಖಿಯಾಗಿ ಭೇಟಿಯಾಗಿ ವೈಜ್ಞಾನಿಕವಾಗಿ ಮಾಹಿತಿ ಕ್ರೋಢೀಕರಿಸಿ ಸಂವಿಧಾನದ 16(4) ನೇ ವಿಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಕಾರಣವಾದ ವರದಿ ನೀಡಿದರು.
ಕರ್ನಾಟಕದ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಸಂಚಲನವೇ ಉಂಟಾಯಿತು, ಪ್ರಬಲ ಜಾತಿಗಳು ಹಾವನೂರರ ವಿರುದ್ಧ ಹರಿಹಾಯ್ದರು, ಹಾವನೂರರ ಮೇಲೆ ಹಲ್ಲೆ, ಕೊಲೆ ಯತ್ನಗಳು ನಡೆದವು. ವೀರಶೈವ ಮಹಾಸಭೆ ಅಧ್ಯಕ್ಷರಾಗಿದ್ದ ಜೆ.ಬಿ.ಮಲ್ಲಾರಾಧ್ಯರ ನೇತೃತ್ವದಲ್ಲಿ ಹಾವನೂರ ಅವರ ವಿರುದ್ಧ ರಾಜ್ಯದೆಲ್ಲೆಡೆ ಹೋರಾಟಗಳು ನಡೆದವು.ಹಾವನೂರ ಅವರು ಸ್ಥಾಪಿಸಿದ್ದ ಕಾನೂನು ಕಾಲೇಜಿನ ಪ್ರಾಚಾರ್ಯರಾಗಿದ್ದ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಸಾಹಿತಿ ಪಿ.ಲಂಕೇಶ್, ಪತ್ರಕರ್ತರಾದ ಎಸ್.ಜಿ.ಮೈಸೂರುಮಠ, ಕಲ್ಲೇ ಶಿವೋತ್ತಮರಾವ್ ಮೊದಲಾದವರು ಹಾವನೂರರ ಬೆಂಬಲಕ್ಕೆ ನಿಲ್ಲುತ್ತಾರೆ.
ಸರ್ಕಾರ ಹಾವನೂರ ವರದಿ ಅಂಗೀಕರಿಸಿ ಹಿಂದುಳಿದ ಸಮುದಾಯಗಳಿಗೆ ಶೇ.20, ಹಿಂದುಳಿದ ಜಾತಿಗಳಿಗೆ ಶೇ.10, ಹಿಂದುಳಿದ ಪಂಗಡಗಳಿಗೆ ಶೇ.5 ಹಾಗೂ ವಿವಿಧ ಸಮುದಾಯಗಳ ಬಡವರ ವಿಶೇಷ ಗುಂಪಿಗೆ ಶೇ.5 ರಷ್ಟು ಮೀಸಲಾತಿಯನ್ನು ಪ್ರಾರಂಭದಲ್ಲಿ ಶಿಕ್ಷಣಕ್ಕೆ ನೀಡಿ, ನಂತರ ಸರ್ಕಾರಿ ಉದ್ಯೋಗಕ್ಕೂ ಮೀಸಲಾತಿ ವಿಸ್ತರಿಸಲಾಯಿತು.
ಈ ವರದಿಯಿಂದ ಪ್ರೇರಿತರಾಗಿ ಭಾರತದಾದ್ಯಂತ 1978 ರಲ್ಲಿ ಬಿ.ಪಿ.ಮಂಡಲ್ ವರದಿ ರೂಪುಗೊಂಡಿತು.
1976 ರಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಹಾವನೂರು ಅವರನ್ನು ದೇವರಾಜ ಅರಸು ನೇಮಿಸುತ್ತಾರೆ, ನಂತರ 1978 ರಲ್ಲಿ ಮತ್ತೊಮ್ಮೆ ಸರ್ಕಾರ ಅಧಿಕಾರಕ್ಕೆ ಬಂದಾಗ ಹಾವನೂರ ಅವರಿಂದ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ ವಿಧಾನಪರಿಷತ್ ಸದಸ್ಯತ್ವ ನೀಡಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಮಂತ್ರಿಯನ್ನಾಗಿ ನೇಮಿಸುತ್ತಾರೆ. ಹಿಂದುಳಿದವರು, ಪರಿಶಿಷ್ಟರ ಏಳ್ಗೆಗೆ ಹಲವು ಐತಿಹಾಸಿಕ ಕ್ರಮಗಳನ್ನು ಅನುಷ್ಠಾನ ಮಾಡಿದರು. ಶೈಕ್ಷಣಿಕ ಅಭಿವೃದ್ಧಿಗಾಗಿ ಆಶ್ರಮ ಶಾಲೆಗಳು, ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಕರ್ಯದ ಹಾಸ್ಟೇಲುಗಳನ್ನು ಸ್ಥಾಪಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಿದ್ದು ರಾಜ್ಯದ ಇಂದಿನ ಸಾಮಾಜಿಕ ಸಮಾನತೆಗೆ ಹಾಕಿದ ಭದ್ರ ಬುನಾದಿಯಾಗಿದೆ.
ಅರಸು ನಿಷ್ಠೆ ಮೆರೆದ ಹಾವನೂರು
ಮುಖ್ಯಮಂತ್ರಿ ಹುದ್ದೆಯ ಆಹ್ವಾನದ ನಿರಾಕರಣೆ
ಕಾಂಗ್ರೆಸ್ ವಿಭಜನೆಗೊಂಡು ಅರಸು ಹಿಂದಿದ್ದ ಅನೇಕ ಶಾಸಕರು ಹೊಸ ಮುಖ್ಯಮಂತ್ರಿ ಆರ್ ಗುಂಡೂರಾಯರ ಹಿಂದೆ ಹೋದಾಗ, ಎಲ್.ಜಿ.ಹಾವನೂರ ಅಚಲವಾಗಿ ಅರಸು ಅವರೊಂದಿಗೆ ನಿಲ್ಲುತ್ತಾರೆ. ಆಗ ಪ್ರಧಾನಿ ಇಂದಿರಾ ಗಾಂಧಿಯವರು ಖುದ್ದು ಫೋನ್ ಮಾಡಿ ಪಕ್ಷಕ್ಕೆ ಆಹ್ವಾನಿಸುತ್ತಾರೆ, ಪಕ್ಷದ ಅಧ್ಯಕ್ಷ ಸ್ಥಾನ, ಬೇಕಿದ್ದರೆ ಮುಖ್ಯಮಂತ್ರಿಯನ್ನಾಗಿಸುವುದಾಗಿ ಹೇಳಿದಾಗ ಹಾವನೂರು ಅವರು ನಯವಾಗಿ ತಿರಸ್ಕರಿಸಿ ಬೇಕಾದರೆ ರಾಜಕೀಯ ಬಿಟ್ಟು ಅರಸು ಅವರೊಂದಿಗೆ ಇರುತ್ತೇನೆ, ಅರಸು ಅವರನ್ನು ಬಿಟ್ಟು ರಾಜಕೀಯ ಮಾಡಲಾರೆ ಎಂದು ಹೇಳುತ್ತಾರೆ. ಈ ಘಟನೆಗೆ, ಸಂಭಾಷಣೆಗೆ ಸಾಕ್ಷಿಯಾಗಿರುವ ಪ್ರೊ.ರವಿವರ್ಮಕುಮಾರ್ ಅವರು ಅನೇಕ ಕಡೆ ಈ ನೆನಪನ್ನು ದಾಖಲಿಸಿದ್ದಾರೆ.
ನ್ಯಾಯಮೂರ್ತಿ ದೇಸಾಯಿಯವರು ಇ.ಎಸ್.ವೆಂಕಟ ರಾಮಯ್ಯನವರೊಂದಿಗೆ ಖಾಸಗಿಯಾಗಿ ಮಾತನಾಡುತ್ತ,”ಹಾವನೂರ ಅವರಂತಹ ಕಾನೂನು ಪಂಡಿತರು, ಹಿಂದುಳಿದ ವರ್ಗಗಳಿಗಾಗಿ ಅವರು ಮಾಡಿದ ಹೋರಾಟ, ತ್ಯಾಗ ಬೇರೆ ಯಾವ ದೇಶದಲ್ಲಿಯಾದರೂ ಆಗಿದ್ದರೆ ಪ್ರತಿಯೊಂದು ಊರುಗಳಲ್ಲಿಯೂ ಅವರ ಅಮೃತಶಿಲೆಯ ಪ್ರತಿಮೆ ಎದ್ದು ನಿಲ್ಲುತ್ತಿದ್ದವು” ಎಂದು ಹೇಳಿದ್ದನ್ನು ಸಮಕಾಲೀನರು ದಾಖಲಿಸಿದ್ದಾರೆ.
ನ್ಯಾ.ದೇಸಾಯಿಯವರ ಮಾತುಗಳೇ ಸಾಕು ನಮ್ಮ ಸಮಾಜ, ಹಾವನೂರರ ಪ್ರಯತ್ನದಿಂದ ಮುಂದೆ ಬರಲು ಸಾಧ್ಯವಾದ ಹಿಂದುಳಿದ ವರ್ಗಗಳ ಸಮುದಾಯಗಳೂ ಕೂಡ ಎಲ್.ಜಿ.ಹಾವನೂರು ಎಂಬ ಮಹಾನ್ ನೇತಾರನನ್ನು ಮರೆತಿವೆ. ಹುಟ್ಟು ಹಬ್ಬದ ನೆಪದಲ್ಲಾದರೂ ಕೂಡ ಆ ಚೇತನ ಸ್ಮರಿಸಿ, ಅವರ ಮಾರ್ಗವನ್ನು ಗಟ್ಟಿಗೊಳಿಸುವ ಸಾಮಾಜಿಕ ನ್ಯಾಯಕ್ಕೆ ಅರ್ಥ ಬರುವಂತೆ ಮಾಡಿದ ಮಹನೀಯರನ್ನು ಗೌರವಿಸುವ ಕಾರ್ಯಗಳು ಆಗಬೇಕಾಗಿದೆ.
-ಮಂಜುನಾಥ ಡಿ.ಡೊಳ್ಳಿನ
ಜಂಟಿ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಬೆಂಗಳೂರು
ಮೊ.9480654365