ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ದೌರ್ಜನ್ಯಗಳ ವಿಚಾರಣೆಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಆರಂಭಿಸುತ್ತಿದೆ. ಡಾ.ಅಂಬೇಡ್ಕರ್ ಜಯಂತಿ ಆಚರಿಸುವ ಏಪ್ರಿಲ್ 14 ರಂದು 33 ವಿಶೇಷ ಪೊಲೀಸ್ ಠಾಣೆಗಳು ಆರಂಭವಾಗಲಿವೆ. ಕರ್ನಾಟಕದಲ್ಲಿ ಎಸ್ ಟಿ, ಎಸ್ ಸಿ ಸಮುದಾಯಗಳ ಮೇಲೆ ದಾಖಲಾಗುವ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್ ಇ) ಈ ಠಾಣೆಗಳನ್ನು ಆರಂಭಿಸುತ್ತಿದೆ.
2023-24 ರ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಠಾಣೆಗಳ ಆರಂಭ ಮಾಡುವುದಾಗಿ ಘೋಷಿಸಿದ್ದರು. ಈ ಘೋಷಣೆ ಮಾಡಿದ ಎರಡು ವರ್ಷಗಳ ನಂತರ ಈ ಯೋಜನೆ ಜಾರಿಯಾಗುತ್ತದೆ. ದಲಿತರ ಹಕ್ಕುಗಳನ್ನು ರಕ್ಷಿಸಲು ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಐತಿಹಾಸಿಕ ನಿರ್ಧಾರವಾಗಿದ್ದು ಏಪ್ರಿಲ್ 14 ರಂದು ಪೊಲೀಸ್ ಠಾಣೆಗಳು ಆರಂಭವಾಗಲಿವೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಈ ಪೊಲೀಸ್ ಠಾಣೆಗಳ ಪೈಕಿ 2 ಬೆಂಗಳೂರಿನಲ್ಲಿ ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಪೊಲೀಸ್ ಠಾಣೆ ಕಾರ್ಯಾರಂಭವಾಗಲಿದೆ.
2020-24 ರ ಅವಧಿಯ 5 ವರ್ಷಗಳಲ್ಲಿ ದಾಖಲಾದ 10,961 ದೌರ್ಜನ್ಯ ಪ್ರಕರಣಗಳಿಗೆ 3,118 ಪ್ರತಿ ದೂರುಗಳು ದಾಖಲಾಗಿದ್ದವು. ಅಂದರೆ ಒಟ್ಟು ಪ್ರಕರಣಗಳಲ್ಲಿ ಶೇ.28 ರಷ್ಟು ಪ್ರತಿದೂರು ದಾಖಲಾಗಿದ್ದವು. ಈ ವರ್ಷದ ಜನವರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೌರ್ಜನ್ಯ ಪ್ರಕರಣಗಳನ್ನು ಪೊಲೀಸರೇ ದುರ್ಬಲಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸರ್ಕಾರದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 2012 ರಿಂದ 2024 ರ ವರೆಗೆ ಶೇ. 2.4 ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಈ ಪೊಲೀಸ್ ಠಾಣೆಗಳು ಆರಂಭವಾದರೆ ಡಿಸಿಆರ್ ಇ ಎಡಿಜಿಪಿ ಅವರು ತನಿಖಾ ಅಧಿಕಾರಿಯನ್ನು ನೇಮಿಸುತ್ತಾರೆ. ಇವರು ಉಪ ವಿಭಾಗ ಪೊಲೀಸ್ ಅಧಿಕಾರಿಯಿಂದ ಪ್ರಕರಣವನ್ನು ವಹಿಸಿಕೊಂಡು ತನಿಖೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ.