ಬೆಂಗಳೂರು: ಬೆಂಗಳುರಿನ ರಸ್ತೆಗಳನ್ನು ನಾನು ದುರಸ್ತಿ ಮಾಡಿಸುತ್ತೇನೆ ಎಂದು ಹೇಳಿಯೇ ಇಲ್ಲ, ಇದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಬೆಂಗಳೂರಿನ ಕೆಲವು ರಸ್ತೆಗಳನ್ನು ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ತಮ್ಮ ಸ್ವತಂ ಹಣದಿಂದ ಸರಿಪಡಿಸುತ್ತಾರೆ ಎಂಬ ಸುದ್ದಿ ಉತ್ತಮ ಬೆಳವಣಿಗೆಗೆ ನಾಂದಿ ಹಾಡಿದೆ. ಅವರಿಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‘ನಲ್ಲಿ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿರುವ ಕಿರಣ್ ಮಜುಂದಾರ್ ಷಾ ಅವರು ಈ ರೀತಿ ನಾನು ಹೇಳಿಯೇ ಇಲ್ಲ. ಇದು ಮಾಧ್ಯಮಗಳು ಸೃಷ್ಟಿಸಿರುವ ಸುಳ್ಳು ಸುದ್ದಿ. ನಾನು ಬೆಂಗಳೂರಿನ ರಸ್ತೆಗಳ ದುರಸ್ತಿಗೆ ಹಣ ನೀಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ರಸ್ತೆ ದುರಸ್ತಿಗೆ ನಾನು ಹಣಕಾಸಿನ ನೆರವು ನೀಡುತ್ತೇನೆ ಎಂದು ಹೇಳಿದ್ದೇನೆ ಎನ್ನುವುದಕ್ಕೆ ಸಾಕ್ಷಿ ನೀಡಿ ಎಂದು ಮಾಧ್ಯಮಗಳಿಗೆ ಸವಾಲು ಹಾಕಿದ್ದಾರೆ.
ಕೆಲವು ದಿನಗಳ ಹಿಂದೆ ಷಾ ಅವರು, ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಅವುಗಳನ್ನು ತಕ್ಷಣ ದುರಸ್ತಿಗೊಳಿಸಿ ಸರ್ಕಾರವನ್ನು ಒತ್ತಾಯಿಸಿದ್ದರು. ಇವರ ಹೇಳಿಕೆ ಸಾಕಷ್ಟು ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವೊದಗಿಸಿತ್ತು. ನಂತರ ಷಾ ಅವರು ಸ್ವಂತ ಹಣದಲ್ಲಿ ಬೆಂಗಳೂರಿನ 15 ರಸ್ತೆಗಳ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಅವರು ಸ್ಪಷ್ಟನೆ ನೀಡಿದ್ದಾರೆ.