ಚಾಮರಾಜನಗರ: ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹಲವಾರು ಆರೋಪಗಳು ಕೇಳೀ ಬರುತ್ತಿರುವಾಗ, ಅಧಿಕಾರ ಹಸ್ತಾಂತರದ ವಿಷಯ ಗಂಭೀರವಾಗಿ ಚರ್ಚೆಯಾಗುತ್ತಿರುವಾಗ ಅವರ ಈ ಹೇಳಿಕೆ ಕುತೂಹಲ ಕೆರಳಿಸಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದರು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದು ಎಲ್ಲರೂ ಹೇಳುತ್ತಿದ್ದರು. ಜೆ.ಹೆಚ್.ಪಟೇಲರಿಗೂ ಆಗಿನ ಕೆಲವು ಶಾಸಕರು ಹೇಳಿದ್ದರು. ಆಗಿನಿಂದ ಈ ಕಳಂಕ ಚಾಮರಾಜನಗರ ಮೇಲಿದೆ. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ಅವರು ನಂಬಿರಲಿಲ್ಲ, ನಾನೂ ನಂಬಲಿಲ್ಲ ಎಂದರು. ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಘೋಷಣೆ ಮಾಡಿದ್ದೆವು. ಆಗ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ನಾನು ಕನಿಷ್ಠ 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ಸಿಎಂ ಕುರ್ಚಿ ಗಟ್ಟಿಯಾಗಿದೆ ಎಂದರು.
ಅತ್ಯಂತ ಉತ್ಸಾಹದಿಂದ ಹೊಸ ಶಾಲೆಯನ್ನು ಉದ್ಘಾಟನೆ ಮಾಡಿದ್ದೇನೆ ಎಂದ ಅವರು ಜಾನಪದ ಕಲೆಗಳ ತವರೂರು ಹಾಗೂ ದಕ್ಷಿಣದ ಗಡಿ ಈ ಚಾಮರಾಜನಗರ ಎಂದು ಬಣ್ಣಿಸಿದರು. ಸತ್ತೇಗಾಲ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಮರಿಸ್ವಾಮಿ ನೇತೃತ್ವದಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದಾರೆ. ರೂ. 2 ಕೋಟಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣವಾಗಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ.