ಹೈದರಾಬಾದ್: ಪುಷ್ಪ 2 ಚಲನಚಿತ್ರ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಸಲ್ಲಿಸಿರುವ ರೆಗ್ಯುಲರ್ ಜಾಮೀನು ಅರ್ಜಿ ಕುರಿತು ಜನವರಿ 3 ರಂದು ತೀರ್ಪು ಪ್ರಕಟವಾಗಲಿದೆ. ಈ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಾಂಪಲ್ಲಿ ಜಿಲ್ಲಾ ನ್ಯಾಯಾಲ ಜನವರಿ 3 ರಂದು ತೀರ್ಪು ನೀಡುವುದಾಗಿ ತಿಳಿಸಿದೆ. ವಿಚಾರಣೆ ವೇಳೆ ಅಲ್ಲು ಅರ್ಜುನ್ ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ವಿರೋಧಿಸಿದ ಚಿಕ್ಕಡಪಲ್ಲಿ ಪೊಲೀಸರು ಅಫಿಡವಿಟ್ ಸಲ್ಲಿಸಿದ್ದಾರೆ. ರೆಗ್ಯುಲರ್ ಜಾಮೀನು ನೀಡುವಂತೆ ಅಲ್ಲು ಅರ್ಜುನ್ ಪರ ಹಿರಿಯ ವಕೀಲ ನಿರಂಜನ್ ರೆಡ್ಡಿ ವಾದ ಮಂಡಿಸಿದರು. ಇದೇ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದರು.
ಬಾರಿ ಚರ್ಚೆಗೆ ಗ್ರಾಸವೊದಗಿಸಿದ್ದಈ ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜನವರಿ 3 ರಂದು ಈ ಪ್ರಕರಣದ ಬಗ್ಗೆ ತೀರ್ಪು ನೀಡುವುದಾಗಿ ಘೋಷಿಸಿದೆ. ಅಲ್ಲು ಅರ್ಜುನ್‌ಗೆ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿದ್ದು, ಇದೀಗ ಸಾಮಾನ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಡಿಸೆಂಬರ್ 4ರಂದು ಪುಷ್ಪ-2 ಪ್ರೀಮಿಯರ್ ಶೋ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಈ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಟ ಅಲ್ಲು ಅರ್ಜುನ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಡುವಿನ ಮುಸುಕಿನ ಗುದ್ದಾಟಕ್ಕೆ ವೇದಿಕೆಯಾಗಿದೆ.