Sunday, September 8, 2024

ವಿಧಾನಸಭೆಯಲ್ಲಿ ಆಹೋರಾತ್ರಿ ಧರಣಿ ಆರಂಭಿಸಿದ ಮೈತ್ರಿ ಪಕ್ಷಗಳು: ಸರ್ಕಾರದ ಊಟ ನಿರಾಕರಣೆ

Most read

ಬೆಂಗಳೂರು: ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಚರ್ಚೆಗೆ ಅವಕಾಶ ನೀಡಿಲ್ಲವೆಂದು ಆರೋಪಿಸಿ ವಿಧಾನಸಭೆಯಲ್ಲಿಂದು ಬಿಜೆಪಿ-ಜೆಡಿಎಸ್ ಶಾಸಕರು ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಶಾಸಕರಿಗೆ ರಾತ್ರಿ ಊಟದ ವ್ಯವಸ್ಥೆ ಮಾಡುವ ಕುರಿತು ವಿಚಾರಿಸಿದರು. ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣದ ಹಣದಿಂದ ನಮಗೆ ಊಟ ಬೇಡ ಎಂದು ಪ್ರತಿಪಕ್ಷ ಶಾಸಕರು ಕಾರ್ಯದರ್ಶಿಗೆ ಹೇಳಿದರು. ರಾತ್ರಿಯ ಊಟ, ಹಾಸಿಗೆ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ ಎಂದ ಶಾಸಕರು ಊಟ ಮತ್ತು ಹಾಸಿಗೆ ತರಿಸಿಕೊಂಡಿದ್ದಾರೆ.

ಬಿಜೆಪಿ ಶಾಸಕರು ಮುಡಾ ಪ್ರಕರಣದ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿದ್ದರು. ಆದರೆ ಸ್ಪೀಕರ್ ಯು.ಟಿ.ಖಾದರ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದಾಗಿ ಧರಣಿ ಆರಂಭಿಸಿದ ಬಿಜೆಪಿ-ಜೆಡಿಎಸ್ ಶಾಸಕರು ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿ ಉಂಟು ಮಾಡಿದರು.

ಈ ನಡುವೆ ಮುಡಾ ಪ್ರಕರಣ ಖಂಡಿಸಿ ಬಿಜೆಪಿ ಒಂದುವಾರದ ಕಾಲ ಪಾದಯಾತ್ರೆ ನಡೆಸಲು‌ ನಿರ್ಧರಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಗೆ ತೀರ್ಮಾನಿಸಲಾಗಿದ್ದು, ದಿನಕ್ಕೆ 15 ರಿಂದ 30 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ.

ಪಾದಯಾತ್ರೆ ದಿನಾಂಕ‌ ಇನ್ನೂ ನಿಗದಿಯಾಗಬೇಕಿದ್ದು, ಬಿಜೆಪಿ‌ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ‌ ನಾಯಕ ಆರ್. ಅಶೋಕ್ ನೇತೃತ್ವ ವಹಿಸಲಿದ್ದಾರೆ.

More articles

Latest article