ಮಧ್ಯೆ ದಾರಿಯಲ್ಲಿ ನಿಲ್ಲಿಸಿ, ಯಾರೂ ಇಲ್ಲದ ಮೋರಿಯ ಕಡೆ ಎಳೆದು ಕೊಂಡು ಹೋಗಿ ಬಾಲಕಿಯ ಸ್ತನವನ್ನು ಮುಟ್ಟಿ, ಆಕೆಯ ಪೈಜಾಮದ ಲಾಡಿಯನ್ನು ಕಿತ್ತು ತೆಗೆಯುವ ಹಿಂದಿನ ಉದ್ದೇಶವೇನು? ಇದಕ್ಕೆ ಉತ್ತರ ಬೇಕು. ಹಾಗೆಯೇ ದಾರಿಹೋಕರು ಅಲ್ಲಿ ಮಧ್ಯೆ ಹಸ್ತಕ್ಷೇಪ ಮಾಡದೆ ಹೋಗಿದ್ದರೆ, ಆರೋಪಿಗಳು ತಮ್ಮ ಕೃತ್ಯವನ್ನು ಈ ಹಂತದಲ್ಲೇ ನಿಲ್ಲಿಸುತ್ತಿದ್ದರೆ? ಇದಕ್ಕೂ ಉತ್ತರ ಬೇಕು–
ಸುಚಿತ್ರ ಎಸ್ ಎ, ಜೆನ್ನಿಫರ್ ಡಿ’ಸೋಜಾ, ವಕೀಲರು.
ಇಡೀ ವ್ಯವಸ್ಥೆಯೇ ದುರ್ಬಲವಾಗಿದ್ದರೂ, ನ್ಯಾಯಾಂಗ ವ್ಯವಸ್ಥೆ ಮಾತ್ರ ಸದೃಢವಾಗಿದೆ ಎಂಬ ನಂಬಿಕೆ ಜನರಲ್ಲಿ ಉಳಿದಿರುವುದು ಒಂದು ಸಮಾಜದ ಶಕ್ತಿಯ ಮೂಲ. ತನ್ನ ಬಾಗಿಲಿಗೆ ಬಂದವರಿಗೆ ನ್ಯಾಯವನ್ನು ಕೊಡುತ್ತದೆ ಎಂಬ ವಿಶ್ವಾಸ ಇದ್ದಾಗ, ಯಾವುದೇ ವ್ಯವಸ್ಥೆ ಎಷ್ಟೇ ಕೆಟ್ಟದಾಗಿದ್ದರೂ, ನ್ಯಾಯಾಂಗವೊಂದು ಸರಿಯಾಗಿದ್ದರೆ ಜನಸಾಮಾನ್ಯರು, ಸಮಾಜ ಹೇಗೋ ಅನುಸರಿಸಿಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಎಂತಹ ಕಠಿಣ ಪರಿಸ್ಥಿತಿಯಲ್ಲೂ ನ್ಯಾಯಾಲಯವೇ ಕೊನೆಗೆ ನ್ಯಾಯ ಒದಗಿಸುವ ಅಂತಿಮ ಆಶ್ರಯ (Ultimate Resort) ಎಂದು ಜನಸಾಮಾನ್ಯರು ನಂಬುತ್ತಾರೆ. ಈ ನಂಬಿಕೆಯೇ ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಸಾಮಾನ್ಯ ಜನರಿಗೆ ಸರ್ಕಾರ, ಪೊಲೀಸ್ ಇಲಾಖೆ, ಆಡಳಿತ ವ್ಯವಸ್ಥೆಗಳ ಮೇಲೆ ನಂಬಿಕೆ ಕಡಿಮೆಯಾದರೂ, ನ್ಯಾಯಾಲಯದ ತೀರ್ಪುಗಳು ಆಶಾಕಿರಣವಾಗಿವೆ. ಕೆಲವೊಮ್ಮೆ ನ್ಯಾಯಾಂಗ ಹೇಳುವ ಪ್ರತಿಯೊಂದು ವಾಕ್ಯವೂ ಇಡೀ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ನ್ಯಾಯಾಂಗ ವ್ಯವಸ್ಥೆಯ ಮೇಲಿನ ಈ ಭರವಸೆ ಸಮಾಜದಲ್ಲಿ ಅತ್ಯಂತ ಮಹತ್ವದ್ದು.
ಆದರೆ, ಇದೇ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗಿದೆ ಎಂಬ ಭಾವನೆ ಮೂಡಿಸಿದರೆ ಏನು? ನ್ಯಾಯಾಧೀಶನೇ ಅನ್ಯಾಯವನ್ನು ಮಾಡುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತದೆ? “ಬೇಲಿಯೇ ಎದ್ದು ಹೊಲವ ಮೇದರೆ” ಎನ್ನುವಂತೆಯೇ ರಕ್ಷಕರು ನಾಶಕಾರಕರಾದರೆ, ಅಥವಾ ನ್ಯಾಯ ನೀಡುವವರೇ ಆರೋಪಿಗಳ ಪರ ವಹಿಸಿದರೆ? ಅದು ಸಮಾಜಕ್ಕೆ ಘಾಸಿ. ಒಂದು ಸಮಾಜ ಒಂದು ಪ್ರಬುದ್ಧ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದರೆ, ಸಮಾಜವೂ ಕೂಡ ಪ್ರಬುದ್ಧತೆಯ ದಾರಿಯಲ್ಲಿ ಮುಂದುವರಿಯುತ್ತದೆ. ಬಹಳ ಪ್ರಗತಿ ಪರ ದೇಶಗಳಲ್ಲಿ ಕೂಡ ನ್ಯಾಯಾಲಯಗಳು ಸಲಿಂಗ ಕಾಮ, ಅಬಾರ್ಶನ್ ಇಂತಹುದರ ಬಗ್ಗೆ ತುಂಬಾ ಸಂಪ್ರದಾಯವಾದಿ, ಪುರುಷಪ್ರಧಾನ ಮನಸ್ಥಿತಿಯನ್ನು ವ್ಯಕ್ತಪಡಿಸಿ ಈ ವಿಷಯಗಳ ಬಗ್ಗೆ ಸಂಪ್ರದಾಯಸ್ಥ ನಿಲುವನ್ನು ತಳೆದಿರುವುದನ್ನೂ ನಾವು ಕಾಣಬಹುದು. ಹಾಗೆಯೇ ನಮ್ಮ ದೇಶದಲ್ಲಿ ಈ ವಿಷಯಗಳ ಬಗ್ಗೆ ತುಂಬಾ ಪ್ರಗತಿಪರ ನಿಲುವುಳ್ಳ ನ್ಯಾಯಾಧೀಶರು ವಿಭಿನ್ನ ತೀರ್ಪನ್ನು, ನಿಲುವನ್ನು ತಳೆದದ್ದನ್ನು ಕೂಡ ನಾವು ನೋಡಿದ್ದೇವೆ. ಹಾಗಾಗಿ ಕೆಲವೊಂದು ಬಾರಿ ಯಾವ ಮನಸ್ಥಿತಿಯ, ಯಾವ ನಿಲುವಿನ ನ್ಯಾಯಾಧೀಶರುಗಳು ಯಾವ ತೆರನಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಎಂಬುದರ ಆಧಾರದ ಮೇಲೆ ಒಂದು ನ್ಯಾಯ ವ್ಯವಸ್ಥೆ, ಒಂದು ಸಮಾಜದ ಪ್ರಬುದ್ಧತೆ ರೂಪುಗೊಳ್ಳುವಲ್ಲಿ ಸಹಕಾರಿ ಆಗುತ್ತದೆ.
ಇತ್ತೀಚೆಗೆ ತುಂಬಾ ಟೀಕೆಗೆ ಒಳಗಾಗಿದ್ದು, ಅಲಹಾಬಾದ್ ಹೈಕೋರ್ಟ್‌ನ ತೀರ್ಪು ಹಾಗೂ ಈ ತೀರ್ಪು ನೀಡುವ ಸಂದರ್ಭದಲ್ಲಿ ಅಲ್ಲಿನ ನ್ಯಾಯಾಧೀಶರು ಮಾಡಿರುವ ಉಲ್ಲೇಖಗಳು. 2025ರ ಮಾರ್ಚ್ 17ರಂದು ನ್ಯಾಯಮೂರ್ತಿ ರಾಮ ಮನೋಹರ ನಾರಾಯಣ ಮಿಶ್ರಾ ನೀಡಿದ ಈ ತೀರ್ಪು, ಭಾರತದಲ್ಲಿ ಮಹಿಳಾ ಸುರಕ್ಷತೆ, ಮಹಿಳಾ ಘನತೆ ಮತ್ತು ನ್ಯಾಯ ವ್ಯವಸ್ಥೆಯ ಮೌಲ್ಯಗಳ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ.
ಘಟನೆಯ ವಿವರ 2021ರ ನವೆಂಬರ್ 10ರಂದು, ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯ ಪಟಿಯಾಲಿಯಲ್ಲಿ, 14 ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಸಂಬಂಧಿಕರ ಮನೆಗೆ ಹೋಗಿ ಸಂಜೆ 5 ಗಂಟೆ ವೇಳೆಗೆ ಮರಳುತ್ತಿದ್ದಾಗ, ಅವರ ಗ್ರಾಮದ ನೆರೆಹೊರೆಯವರಾದ ಪವನ್, ಆಕಾಶ್ ಮತ್ತು ಅಶೋಕ್ ಅವರು ದಾರಿಯಲ್ಲಿ ಸಿಗುತ್ತಾರೆ. ಪವನ್ ತನ್ನ ಬೈಕ್ನಲ್ಲಿ ಲಿಫ್ಟ್ ನೀಡುವುದಾಗಿ ಹೇಳಿದಾಗ, ಬಾಲಕಿಯ ತಾಯಿ ತನ್ನ ಮಗಳನ್ನು ಅವರೊಂದಿಗೆ ಕಳುಹಿಸುತ್ತಾರೆ. ದಾರಿ ಮಧ್ಯೆ ಪವನ್ ಮತ್ತು ಆಕಾಶ್ ಬೈಕ್ ನಿಲ್ಲಿಸಿ, ಬಾಲಕಿಯ ಸ್ತನವನ್ನು ಮುಟ್ಟಿ, ಆಕೆಯ ಪೈಜಾಮಾದ ಲಾಡಿಯನ್ನು ಹರಿದು, ಆಕೆಯನ್ನು ದಾರಿ ಬದಿಯ ಮೋರಿಯೊಂದರ ಕಡೆ ಎಳೆದುಕೊಂಡು ಹೋಗಲು ಯತ್ನಿಸುತ್ತಾರೆ. ಆ ವೇಳೆ, ಬಾಲಕಿಯ ಬೊಬ್ಬೆ ಕೇಳಿ, ಅಲ್ಲಿ ಟ್ರ್ಯಾಕ್ಟರ್ನಲ್ಲಿ ಹೋಗುತ್ತಿದ್ದ ದಾರಿಹೋಕರು (ಅದೇ ಗ್ರಾಮದವರು) ಬಂದು ಮಧ್ಯಪ್ರವೇಶ ಮಾಡುತ್ತಾರೆ. ಇದರಿಂದ ಬಾಲಕಿ ಪಾರಾಗುತ್ತಾಳೆ. ಆರೋಪಿಗಳು ತಮ್ಮಲ್ಲಿದ್ದ ಪಿಸ್ತೂಲಿನಿಂದ ಮಧ್ಯಪ್ರವೇಶಿಸಿದವರನ್ನು ಗದರಿಸಿ ಹೆದರಿಸಲು ಪ್ರಯತ್ನಿಸಿದರೂ ಅದು ವಿಫಲವಾಗುತ್ತದೆ ಮತ್ತು ಆರೋಪಿಗಳು ಅಲ್ಲಿಂದ ಪರಾರಿಯಾಗುತ್ತಾರೆ.
ತೀರ್ಪು
ಪ್ರಕರಣದಲ್ಲಿ, ಬಾಲಕಿಯ ತಾಯಿ ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 18 ಮತ್ತು ಐಪಿಸಿ ಸೆಕ್ಷನ್ 376 ಅಡಿಯಲ್ಲಿ ದೂರು ನೀಡಿದ್ದರು. ಕಾಸ್ಗಂಜಿನ ಪೋಕ್ಸೋ ವಿಶೇಷ ನ್ಯಾಯಾಲಯವು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 18 ಅಡಿಯಲ್ಲಿ ಹೊರಿಸಲಾದ ಆರೋಪಗಳ ವಿಚಾರಣೆಗೆ ಸಮನ್ಸ್ ನೀಡಿತ್ತು. ಈ ಆದೇಶದ ವಿರುದ್ಧ ಆರೋಪಿಗಳು ಅಲಹಾಬಾದ್ ಹೈಕೋರ್ಟ್ ನ್ನು ಸಂಪರ್ಕಿಸಿದ್ದಾರೆ. ಈ ಮೇಲ್ಮನವಿ ಹಂತದಲ್ಲಿ, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಮಿಶ್ರಾ ಅವರು, ಇದು “ಅತ್ಯಾಚಾರದ ಯತ್ನ (Attempt to rape)”ವಲ್ಲ, ಬದಲಿಗೆ ಸಣ್ಣ ಅಪರಾಧವಾದ “ಅತ್ಯಾಚಾರದ ಪ್ರಯತ್ನಕ್ಕೆ ತಯಾರಿ (preparation to attempt to rape)” ಮಾತ್ರ ಎಂದು ಹೇಳಿ—ಅದಕ್ಕಾಗಿ ಕೇವಲ ಐಪಿಸಿ ಸೆಕ್ಷನ್ 354-ಬಿ ಅಡಿಯಲ್ಲಿ ಮಾತ್ರ ಪ್ರಕರಣ ದಾಖಲು ಮಾಡುವುದು ಸಮರ್ಪಕ ಎಂದು ತೀರ್ಪು ನೀಡಿದ್ದಾರೆ. ಇದುವೇ ಇವತ್ತು ಚರ್ಚೆಗೆ ಒಳಪಟ್ಟಿರುವ ತೀರ್ಪು.
ತೀರ್ಪಿನಲ್ಲಿ ಅಲಾಹಾಬಾದ್ ಹೈ ಕೋರ್ಟಿನ ಹೇಳಿಕೆ ಈ ರೀತಿ ಇದೆ- ಪ್ರಾಸಿಕ್ಯೂಷನ್ “ಅತ್ಯಾಚಾರದ ಯತ್ನ (attempt to rape)” ಸಾಬೀತುಪಡಿಸಲು “ಕೃತ್ಯವು ತಯಾರಿಯ ಹಂತ”ವನ್ನು ಮೀರಿದೆ ಎಂಬುದನ್ನು ತೋರಿಸಬೇಕು. ಇಲ್ಲಿನ ಘಟನೆಯಲ್ಲಿ ಅದು ಆಗಿಲ್ಲ.” -ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ.
ನ್ಯಾಯಾಲಯ ಇನ್ನೂ ಮುಂದುವರೆದು ಹೇಳತ್ತೆ (ಪ್ಯಾರಾಗ್ರಾಫ್ 21):
“ಪ್ರಸ್ತುತ ಪ್ರಕರಣದಲ್ಲಿ, ಆರೋಪಿ ಪವನ್ ಮತ್ತು ಆಕಾಶ್ ವಿರುದ್ಧದ ಆರೋಪವೆಂದರೆ, ಅವರು ಸಂತ್ರಸ್ತ ಬಾಲಕಿಯ ಸ್ತನಗಳನ್ನು ಹಿಡಿದಿದ್ದಾರೆ ಮತ್ತು ಆಕಾಶ್ ಬಾಲಕಿಯ ಕೆಳ ಉಡುಪನ್ನು ಕಳಚಲು ಯತ್ನಿಸುತ್ತ, ಅವಳ ಕೆಳಗಿನ ಉಡುಪಿನ (ಪೈಜಾಮ) ಲಾಡಿಯನ್ನು ತುಂಡು ಮಾಡಿದ್ದಾರೆ. ಬಳಿಕ ಆಕೆಯನ್ನು ದಾರಿ ಬದಿಯ ಹತ್ತಿರದ ಮೋರಿಯೊಳಗೆ (culvert) ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಇದರ ನಡುವೆ ಸಾಕ್ಷಿಗಳ ಹಸ್ತಕ್ಷೇಪದಿಂದಾಗಿ ಆರೋಪಿಗಳು ಬಾಲಕಿಯನ್ನು ಬಿಟ್ಟು ಘಟನೆಯ ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಈ ಮೇಲಿನ ಅಂಶಗಳು ಸಾಕಾಗುವುದಿಲ್ಲ. ಏಕೆಂದರೆ ಈ ಮೇಲಿನ ಸಂಗತಿಗಳನ್ನು ಹೊರತುಪಡಿಸಿ ಬಾಲಕಿಯ ಮೇಲೆ “ಅತ್ಯಾಚಾರ ಮಾಡುವ ಬಯಕೆ”ಯನ್ನು ಆರೋಪಿಗಳು ಹೊಂದಿದ್ದರು ಎಂದು ಹೇಳಲು ಇನ್ನಾವುದೇ ಇತರ ಕೃತ್ಯಗಳನ್ನು ಅವರ ಮೇಲೆ ಆರೋಪಿಸಲಾಗಿಲ್ಲ”.
ಹಾಗಾದರೆ ಈ ಕೇಸಿನಲ್ಲಿ ನ್ಯಾಯಮೂರ್ತಿ ಹೇಳಿದ್ದು ಸರಿಯೇ?
ಇಂತಹ ನಿರ್ಧಾರಕ್ಕೆ ಬರಲು ಇಲ್ಲಿ ಅಲಹಾಬಾದ್ ಕೋರ್ಟ್ ಉಲ್ಲೇಖಿಸಿರುವ ಇನ್ನೊಂದು ತೀರ್ಪು: ಎಕ್ಸ್‌ಪ್ರೆಸ್ v. ಶಂಕರ್, (1881) ILR 5 Bom 403. ಇದರಲ್ಲಿ ಆರೋಪಿಯ ಮೇಲೆ ಅತ್ಯಾಚಾರ ಪ್ರಯತ್ನದ ಆರೋಪ ಹೊರಿಸಲಾಗಿತ್ತು. ಆ ಕೇಸಿನ ತೀರ್ಪಿನಲ್ಲಿ ನ್ಯಾಯಮೂರ್ತಿ ಮ. ಮಲಯಿಲ್ ಜೆ. ಅವರ ಹೇಳಿಕೆ ಹೀಗಿದೆ: “ಈ ದೇಶದಲ್ಲಿ ಅಸಭ್ಯ ಹಲ್ಲೆ (indecent assault)ಗಳನ್ನು ಹೆಚ್ಚಾಗಿ “ಅತ್ಯಾಚಾರದ ಪ್ರಯತ್ನ” (Attempt at rape) ಗಳಾಗಿ ಮತ್ತು ಇನ್ನೂ ಹೆಚ್ಚಾಗಿ ಅತ್ಯಾಚಾರ (rape) ವಾಗಿ ಪರಿಗಣಿಸಲಾಗುತ್ತಿದೆ ಎಂದು ನಾವು ನಂಬುತ್ತೇವೆ; ಮತ್ತು ಆರೋಪಿಯ ನಡವಳಿಕೆಯು ಎಲ್ಲಾ ಸಂದರ್ಭಗಳಲ್ಲಿ ಮತ್ತು ಎಲ್ಲಾ ಪ್ರತಿರೋಧದ ಹೊರತಾಗಿಯೂ ಅವನ “ಭಾವೋದ್ರೇಕಗಳನ್ನು ತೃಪ್ತಿಪಡಿಸುವ (gratify his passions)” ನಿರ್ಣಯವನ್ನು ಸೂಚಿಸುತ್ತದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡದ ಹೊರತು “ಅತ್ಯಾಚಾರದ ಪ್ರಯತ್ನ”ದ ಅಪರಾಧವೆಂಬ ನಿರ್ಣಯವನ್ನು ತಲುಪಬಾರದು ಎಂದು ನಾವು ಭಾವಿಸುತ್ತೇವೆ.”
ನಾವು, ಈ ಮೇಲೆ ಉಲ್ಲೇಖಿಸಿದ ತೀರ್ಪನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಇದು ಕೂಡ ಗಂಭೀರ ಸಮಸ್ಯೆಗಳನ್ನೊಳಗೊಂಡ ತೀರ್ಪು ಎಂಬುದು ಸ್ಪಷ್ಟವಾಗುತ್ತದೆ. ಅತ್ಯಾಚಾರ ಹಾಗೂ ಅತ್ಯಾಚಾರಕ್ಕೆ ನಡೆದ ಪ್ರಯತ್ನಗಳ ನಡುವಿನ ಅಂತರಕ್ಕೆ ಹಲವು ಆಯಾಮಗಳಿವೆ. ಅತ್ಯಾಚಾರ ಎಂಬುದು ಕೇವಲ ಕಾಮೋದ್ರೇಕದ ತೃಪ್ತಿಗಾಗಿ ಮಾತ್ರ ನಡೆಯುವ ಅಪರಾಧವಲ್ಲ. ಅನೇಕ ಸಂದರ್ಭಗಳಲ್ಲಿ, ಅತ್ಯಾಚಾರವನ್ನು ಶಕ್ತಿಯ ಪ್ರದರ್ಶನಕ್ಕೆ, ಅಥವಾ ಬೇರೊಬ್ಬರಿಗೆ ಪಾಠ ಕಲಿಸಲು ಉಪಯೋಗಿಸುವ ಭಯಾನಕ ಸಾಧನವಾಗಿಯೂ ಬಳಸಲಾಗುತ್ತದೆ. ಅಂತಹ ಕ್ರೂರ ಮನೋಭಾವನೆಗಳು ಅತ್ಯಾಚಾರ ಕೃತ್ಯಗಳ ಹಿಂದೆ ಇರುವ ಇನ್ನೊಂದು ಭೀಕರವಾದ ಉದ್ದೇಶವಾಗಿದೆ.
ಅಲ್ಲದೆ, ಅತ್ಯಾಚಾರವನ್ನು ಕೇವಲ ಲೈಂಗಿಕ ಶೋಷಣೆಯ ಕೃತ್ಯ ಎಂದು ಮಾತ್ರ ಪರಿಗಣಿಸಬಾರದು. ಇತಿಹಾಸವನ್ನು ನೋಡಿದರೆ, ಹಾಗೂ ಆಧುನಿಕ ಸಮಾಜದಲ್ಲೂ ನಾವು ಕಾಣುವ ಪ್ರಕಾರ ಅತ್ಯಾಚಾರವನ್ನು ಬಹಳ ಬಾರಿ ಸೇಡು ತೀರಿಸಿಕೊಳ್ಳಲು ಉಪಯೋಗಿಸಲಾಗಿದೆ. ಇದು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಬಲವಂತದ ಮೂಲಕ ಒಂದು ವ್ಯಕ್ತಿಯ ಮಾನ-ಘನತೆ ಮತ್ತು ಆತ್ಮವಿಶ್ವಾಸವನ್ನು ಕೆಡವಲು, ಅವರ ಮೇಲೆ ಶಾಶ್ವತ ಭಯವನ್ನು ಬಿತ್ತಲು ಬಳಸಲ್ಪಟ್ಟಿದೆ.
ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಅಥವಾ ರಾಜಕೀಯವಾಗಿ ವ್ಯಕ್ತಿ ಅಥವಾ ಸಮುದಾಯವನ್ನು ಅಪಮಾನಗೊಳಿಸುವ ಸಾಧನವಾಗಿ ಅತ್ಯಾಚಾರವನ್ನು ಉಪಯೋಗಿಸಿದ ಉದಾಹರಣೆಗಳು ಹಲವಾರಿವೆ. ತೀವ್ರ ಮಾನಸಿಕ ಹಿಂಸೆ ಮತ್ತು ಶೋಷಣೆಯ ಈ ರೂಪವು, ಶಕ್ತಿಯ ಅಸಮತೋಲನವನ್ನು ಸ್ಪಷ್ಟ ಪಡಿಸುತ್ತದೆ. ಅತ್ಯಾಚಾರವು ಬರೀ ಶಾರೀರಿಕ ಹಿಂಸೆ ಅಲ್ಲ; ಇದು ಆ ವ್ಯಕ್ತಿಯ ಮಾನಸಿಕ ಸಮತೋಲನವನ್ನು ಭಂಗಗೊಳಿಸಿ, ಅವರಿಗೆ ಭೀತಿಯ ಜೀವನವನ್ನು ಮೀಸಲಿಡುತ್ತದೆ. ಅದು ಶಕ್ತಿಯ ಪ್ರದರ್ಶನಕ್ಕಾಗಿಯೂ ಮತ್ತೆ ಮತ್ತೆ ಬಳಸಲ್ಪಡುತ್ತದೆ. ಅತ್ಯಾಚಾರವು ಕೆಲವೊಮ್ಮೆ ಆತ್ಮಸ್ಥೈರ್ಯವನ್ನು ಕುಗ್ಗಿಸಿ, ಆ ವ್ಯಕ್ತಿಯ ಅಥವಾ ಸಮುದಾಯದ ಮೇಲಿನ ಪ್ರಭುತ್ವವನ್ನು ಸ್ಥಾಪಿಸಲು, ಅಥವಾ ಅವರನ್ನು ಸಮಾಜದಲ್ಲಿ ನಿರ್ಗತಿಕರನ್ನಾಗಿ ಮಾಡಲೆಂದು ನಡೆಯುವ ಕ್ರೂರ ಸಾಧನವಾಗಿದೆ. ಈ ಕಾರಣಗಳಿಂದಾಗಿ,ಅತ್ಯಾಚಾರವನ್ನು ಕೇವಲ ಕಾಮಕ್ಕೆ ಸಂಬಂಧ ಪಟ್ಟ ಅಪರಾಧವೆಂದು ಮಾತ್ರ ನೋಡದೆ, ಇದು ಶಕ್ತಿಯ ಮಾದರಿಗಳನ್ನು ಮತ್ತು ಸಮಾಜದ ಯಥಾರ್ಥಗಳನ್ನು ಪ್ರತಿಬಿಂಬಿಸುವ ಕ್ರಿಮಿನಲ್ ನಡತೆ ಕೂಡ ಹೌದು ಎಂಬುದನ್ನು ಅರಿಯಬೇಕು.
ಇಲ್ಲಿ ಉದ್ಭವಿಸುವ ಪ್ರಶ್ನೆ ಏನೆಂದರೆ…
ಅಲಹಾಬಾದ್ ಪ್ರಕರಣದಲ್ಲಿ ಮೇಲಿನ ತೀರ್ಪನ್ನು ಉಲ್ಲೇಖಿಸಿರುವುದು ಹಾಗೂ ಅದರ ಮೂಲಕ, ಆರೋಪಿಗಳ ಕೃತ್ಯ ಅತ್ಯಾಚಾರದ ಪ್ರಯತ್ನ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಹೇಳಿದಾಗ, ಉದ್ಭವಿಸುವ ಪ್ರಶ್ನೆ: ಹಾಗಾದರೆ ಮಧ್ಯೆ ದಾರಿಯಲ್ಲಿ ನಿಲ್ಲಿಸಿ, ಯಾರೂ ಇಲ್ಲದ ಮೋರಿಯ ಕಡೆ ಎಳೆದು ಕೊಂಡು ಹೋಗಿ ಬಾಲಕಿಯ ಸ್ತನವನ್ನು ಮುಟ್ಟಿ, ಆಕೆಯ ಪೈಜಾಮದ ಲಾಡಿಯನ್ನು ಕಿತ್ತು ತೆಗೆಯುವ ಹಿಂದಿನ ಉದ್ದೇಶವೇನು? ಇದಕ್ಕೆ ಉತ್ತರ ಬೇಕು. ಹಾಗೆಯೇ ದಾರಿಹೋಕರು ಅಲ್ಲಿ ಮಧ್ಯೆ ಹಸ್ತಕ್ಷೇಪ ಮಾಡದೆ ಹೋಗಿದ್ದರೆ, ಆರೋಪಿಗಳು ತಮ್ಮ ಕೃತ್ಯವನ್ನು ಈ ಹಂತದಲ್ಲೇ ನಿಲ್ಲಿಸುತ್ತಿದ್ದರೇ? ಇದಕ್ಕೂ ಉತ್ತರ ಬೇಕು.
ಮಿಶ್ರಾ ಅವರು ‘ಪ್ರಯತ್ನ’ ಮತ್ತು ‘ತಯಾರಿ’ ನಡುವಿನ ತಾರತಮ್ಯವನ್ನು ಹೀಗೆ ಉಲ್ಲೇಖಿಸಿದ್ದಾರೆ..
ಅವರ ಹೇಳಿಕೆಯ ಪ್ರಕಾರ, ಅತ್ಯಾಚಾರಕ್ಕೆ “ಪ್ರಯತ್ನ” ಮತ್ತು “ತಯಾರಿ” ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಸಾಬೀತುಪಡಿಸುವುದು ಮುಖ್ಯ. ಪ್ರಸ್ತುತ ಪ್ರಕರಣದಲ್ಲಿ, ಮಿಶ್ರಾರವರ ಪ್ರಕಾರ, ಆರೋಪಿಗಳು ಇನ್ನೂ “ಪ್ರಯತ್ನ” ಹಂತಕ್ಕೆ ಪ್ರವೇಶಿಸಿಲ್ಲ. ಅವರ ಮಾತಿನ ಪ್ರಕಾರ, ಅಪರಾಧ ಎಸಗಲು ನೈಜ ಯತ್ನವಿಲ್ಲದೆ, ಕೇವಲ ಸಿದ್ಧತೆಯ ಹಂತದಲ್ಲಿರುವುದನ್ನು “ಪ್ರಯತ್ನ”ವೆಂದು ಪರಿಗಣಿಸಲಾಗದು. ಅವರ ಅಭಿಪ್ರಾಯದಲ್ಲಿ, ಆರೋಪಿಗಳು ಇನ್ನೂ ಅತ್ಯಾಚಾರ ಮಾಡಲು ಸಿದ್ಧತೆ ಹಂತದಲ್ಲೇ ಇದ್ದರು; ಆದರೆ ಅವರು “ಪ್ರಯತ್ನ” ಹಂತಕ್ಕೆ ಮುಂದಾಗಿಲ್ಲ.
ಇಲ್ಲಿ ಉದ್ಭವಿಸುವ ಮುಖ್ಯ ಪ್ರಶ್ನೆ ಏನೆಂದರೆ-
ಹಾಗಾದರೆ ಅತ್ಯಾಚಾರವನ್ನು ಸಾಬೀತುಪಡಿಸಲು, “ಹೆಣ್ಣಿನ ದೇಹದ ಮೇಲೆ ಉದ್ದೇಶಪೂರ್ವಕವಾಗಿ ಬಲಪ್ರಯೋಗ ನಡೆಸುವುದು” ತಯಾರಿಯಷ್ಟೆ ಎಂಬ ನಿರ್ಧಾರಕ್ಕೆ ಬಂದುಬಿಟ್ಟರೆ, ʼಅತ್ಯಾಚಾರ ಪ್ರಯತ್ನʼವನ್ನು ಗುರುತಿಸುವ ಮಾನದಂಡವೇನು? ಇಂದಿನ ನ್ಯಾಯಾಂಗ ವ್ಯವಸ್ಥೆ, ಕ್ರಿಮಿನಲ್ ನ್ಯಾಯ ಸಂಹಿತೆ ಮತ್ತು ನ್ಯಾಯ ತತ್ವಶಾಸ್ತ್ರಗಳು ಈ ಪ್ರಶ್ನೆಗೆ ಸ್ಪಷ್ಟ ಮತ್ತು ಸಮರ್ಥ ಉತ್ತರ ನೀಡಬೇಕು. ಈ ಸ್ಪಷ್ಟತೆಯಿಲ್ಲದಿದ್ದರೆ, ನಮ್ಮ ನ್ಯಾಯಾಧೀಶರು ಇಂತಹ ಅತ್ಯಾಚಾರಿಗಳಿಗೆ ಅತ್ಯಾಚಾರವೆಸಗಲು ಇನ್ನಷ್ಟು ಅವಕಾಶ ಕಲ್ಪಿಸಿದಂತಾಗುತ್ತದೆ. ನಾಳೆ ಯಾವುದೇ ವ್ಯಕ್ತಿ ಬಾಲಕಿಯ ದೇಹವನ್ನು ಮುಟ್ಟಿ, ಆಕೆಯ ದೇಹದ ಯಾವುದೇ ಭಾಗವನ್ನು ಸ್ಪರ್ಶಿಸಿ, ಅವಳನ್ನು ವಿವಸ್ತ್ರಗೊಳಿಸಿದರೂ ಸಹ, ಆತನನ್ನು ದೊಡ್ಡ ಅಪರಾಧಿಯೆಂದು ಪರಿಗಣಿಸದೆ ಆತ ಸುಲಭವಾಗಿ ಹೊರಬರುವ ಸಾಧ್ಯತೆ ಇದೆ ಎಂಬ ಭೀತಿಯು ಉಂಟಾಗುವುದು ಸಹಜ.
ದೊಡ್ಡ ಅಪರಾಧ ಎನಿಸಬೇಕಾದ ಪರಿಸ್ಥಿತಿ ಯಾವಾಗ ಉಂಟಾಗುತ್ತದೆ?
ಈ ಪರಿಸ್ಥಿತಿಯಲ್ಲಿ, ನಮ್ಮ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕು. ಇಂತಹ ವರ್ತನೆಗಳು ನಡೆದರೂ, ಅವು ದೊಡ್ಡ ಅಪರಾಧವಾಗುತ್ತಿಲ್ಲವೆಂದು ನಿರ್ಧಾರವಾಗುವುದಾದರೆ, ದೊಡ್ಡ ಅಪರಾಧ ಎನಿಸಬೇಕಾದ ಪರಿಸ್ಥಿತಿ ಯಾವಾಗ ಉಂಟಾಗುತ್ತದೆ? ಹೆಣ್ಣುಮಕ್ಕಳು ತಮ್ಮ ಒಟ್ಟು ದೇಹವನ್ನೇ ಸಮರ್ಪಿಸಬೇಕೆ? ಅವರನ್ನು ವಿವಸ್ತ್ರಗೊಳಿಸಿ, ಅವರ ದೇಹದ ಭಾಗಗಳನ್ನು ಸ್ಪರ್ಶಿಸಿದ್ದು ಸಾಲದೆ? ಇಂದಿಗೂ ಎಷ್ಟೋ ಅತ್ಯಾಚಾರಗಳು, ವಿಶೇಷವಾಗಿ ಪುಟ್ಟ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರಗಳು, ಬೆಳಕಿಗೆ ಬರುತ್ತಿಲ್ಲ. ಇದಕ್ಕೆ ಕಾರಣ, ಸಮಾಜದಲ್ಲಿ “ಮರ್ಯಾದೆ ಹೋಗುತ್ತದೆ” ಎಂಬ ಭಾವನೆ. ನಮ್ಮ ಸಮಾಜ ಮತ್ತು ಜನರ ಮನಸ್ಥಿತಿ ಇದುವರೆಗೆ ಬದಲಾಗಿಲ್ಲ. ಹೀಗಿರುವಾಗ, ನ್ಯಾಯವನ್ನು ಅಪೇಕ್ಷಿಸಿ ಕೋರ್ಟ್ ಮೆಟ್ಟಿಲು ಹತ್ತುವವರು ಕೂಡ ನ್ಯಾಯ ಪಡೆಯಲಾರರು ಎಂಬುದು ಸ್ಪಷ್ಟವಾಗುತ್ತಿದೆ. ಇಂತಹ ತೀರ್ಪುಗಳು ನಮ್ಮ ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ನಾಶಗೊಳಿಸುತ್ತಿವೆ.
ಇನ್ನೊಂದು ಅಂಶ..
ಪ್ರಸ್ತುತ ಹೈಕೋರ್ಟ್ ನೀಡಿದ ತೀರ್ಪು ಆರೋಪಿಗಳ ಮೇಲೆ ನೀಡುವ ಶಿಕ್ಷೆಯ ಬಗ್ಗೆ ಅಲ್ಲ; ಬದಲಿಗೆ ಅದು ಕೆಳ ನ್ಯಾಯಾಲಯವು ಹೊರಿಸಿದ್ದ ದೋಷಾರೋಪ ಪಟ್ಟಿಯ ಬಗ್ಗೆ. ಪ್ರಕರಣದಲ್ಲಿ ಆರೋಪವು “ಅತ್ಯಾಚಾರದ ಪ್ರಯತ್ನ”ವಾಗಿ ಉಳಿದಿದ್ದರೆ, ವಿಚಾರಣೆಯಲ್ಲಿ ಈ ಪ್ರಕರಣವನ್ನು ಸಾಬೀತುಪಡಿಸಲು ಸಾಕಷ್ಟು ಅವಕಾಶ ಇರುತ್ತಿತ್ತು. ಹಾಗೆಯೇ, ನ್ಯಾಯಾಲಯಕ್ಕೆ ಇಂತಹ ಕೃತ್ಯ “ಅತ್ಯಾಚಾರಕ್ಕೆ ಪ್ರಯತ್ನವೇ? ಅಲ್ಲವೇ?” ಎಂಬುದು ಸ್ಪಷ್ಟವಾಗುತ್ತಿತ್ತು. ಮೇಲಿನ ಬಹುಮುಖ್ಯ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು. ಇಲ್ಲಿ, “ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಮಾಡುವ ಉದ್ದೇಶ ಹೊಂದಿದ್ದಾರೋ ಇಲ್ಲವೋ?” ಎಂಬುದು ಕ್ರಾಸ್ ಎಕ್ಸಾಮಿನೇಶನ್‌ನಲ್ಲಿ ಸಾಬೀತು ಆಗಬೇಕಿತ್ತು. ಆದರೆ, ಅದು ಬಿಟ್ಟು, “ಇದು ಅತ್ಯಾಚಾರ ಪ್ರಯತ್ನವೆಂದಾಗುವುದಿಲ್ಲ” ಎಂದು ಸಮನ್ಸ್ ಜಾರಿ ಮಾಡಿದಾಗಲೇ ತೀರ್ಪು ನೀಡಿ, ದೋಷಾರೋಪ ಪಟ್ಟಿಯಲ್ಲಿ ಆರೋಪವನ್ನು ಬರಿಯ “ಲೈಂಗಿಕ ಹಲ್ಲೆ (sexual assault”) ಎಂದು ಆರೋಪವನ್ನು ಕಡಿಮೆ ಗೊಳಿಸಿದರೆ, ನಮ್ಮಲ್ಲಿ ಉದ್ಭವಿಸುವ ಪ್ರಶ್ನೆ: ಹಾಗಾದರೆ ಬಾಲಕಿಯನ್ನು ಮೋರಿಯೊಳಗೆ ಎಳೆದೊಯ್ದು, ಆಕೆಯ ಸ್ತನಗಳನ್ನು ಹಿಡಿದುಕೊಂಡು, ಆಕೆಯ ಪೈಜಾಮದ ಲಾಡಿ ತುಂಡು ಮಾಡಿದ ಹಿಂದಿನ ಉದ್ದೇಶ ಏನು? ಇದಕ್ಕೆ ಉತ್ತರ ಬೇಕಲ್ಲವೇ? ಈ ಕೃತ್ಯವು ಸಾರ್ವಜನಿಕ ರಸ್ತೆಯಲ್ಲಿ ನಡೆದಿಲ್ಲ. ಇದು ನಡೆದಿರುವುದು ಯಾರೂ ಇಲ್ಲದ ಒಂದು ಮೋರಿಯ ಸಮೀಪದಲ್ಲಿ. ಆ ದಾರಿಹೋಕರು ಮಧ್ಯೆ ಹಸ್ತಕ್ಷೇಪ ಮಾಡದೆ ಹೋಗಿದ್ದರೆ? ಅಂದರೆ, ಇದಕ್ಕಿಂತಲೂ ಹೆಚ್ಚಿನ ಕುಕೃತ್ಯ ನಡೆದರೆ ಮಾತ್ರ ಅದು “ಅತ್ಯಾಚಾರ ಪ್ರಯತ್ನ”, ಇಲ್ಲವಾದರೆ ಅದು ಬರಿಯ ಅಸಭ್ಯ ಹಲ್ಲೆ ಎಂಬ ತೀರ್ಮಾನ ಮಾಡಿ, ಇಂತಹ ಕೃತ್ಯಗಳನ್ನು ಬಹಳ ಕ್ಯಾಶುಯಲ್ ಆಗಿ ಪರಿಗಣಿಸಲಾಗಿದೆ ಎಂಬ ಭಾವನೆ ಮೂಡುತ್ತದೆ. ಹಾಗೆಯೇ, ಹಾಗಾದರೆ ಈ ಕೃತ್ಯ “ಒಂದು ಅತ್ಯಾಚಾರ ಪ್ರಯತ್ನ”ವಾಗಲು ಇನ್ನೆಷ್ಟು ಅಂಶಗಳು ಬೇಕು? ಇದನ್ನು ಮಾನ್ಯ ನ್ಯಾಯಾಲಯವೇ ಹೇಳಬೇಕು.
ನ್ಯಾಯಾಲಯದ ಹೇಳಿಕೆಯ ಪ್ರಕಾರ, ಸಾಕ್ಷಿಗಳ ಹಸ್ತಕ್ಷೇಪದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಾಗಾದರೆ ಆರೋಪಿಗಳು ಬರಿಯ ಹಲ್ಲೆ ಮಾಡಲು ಉದ್ದೇಶಿಸಿದ್ದರೋ ಅಥವಾ ಅತ್ಯಾಚಾರ ಮಾಡಲು ಉದ್ದೇಶಿಸಿದ್ದರೋ ಎಂಬುದು ಇನ್ನೂ ಸಾಬೀತಾಗಿಲ್ಲ. ಹೀಗಿರುವಾಗ, ಇದು ಬರಿಯ “ಅಸಭ್ಯ ಹಲ್ಲೆ/ಲೈಂಗಿಕ ಹಲ್ಲೆ” ಮಾತ್ರವೆಂದರೆ, ನಮಗೆ ಮೇಲಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಂಭವವನ್ನೇ ಈ ತೀರ್ಪು ಇಲ್ಲವಾಗಿಸಿದೆ.
ನ್ಯಾಯಾಧೀಶರು ಕಾನೂನನ್ನು ಕೇವಲ ತಾಂತ್ರಿಕತೆ (technicality) ಗಳಲ್ಲಿ ಅಳವಡಿಸಿ, ಮಾನವೀಯತೆಯ ನಿಟ್ಟಿನಲ್ಲಿ ಪರಿಗಣಿಸದೆ ತೀರ್ಪು ನೀಡಿದರೆ, ಅದು ನ್ಯಾಯದ ತತ್ವಗಳಿಗೆ ಧಕ್ಕೆ ತರುತ್ತದೆ. ಈ ತೀರ್ಪು ಪೋಷಕರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಭಯ ಮತ್ತು ನಿರಾಶೆ ತಂದಿದೆ. ಹಾಗಾದರೆ ಮಾನ್ಯ ನ್ಯಾಯಾಧೀಶರೇ, “ಪುಟ್ಟ ಬಾಲಕಿಯ ಪೈಜಾಮದ ಲಾಡಿಯನ್ನು ತುಂಡರಿಸಿ, ಅವಳ ಸ್ತನವನ್ನು ಮುಟ್ಟಿದರೆ ಅದು ಸಣ್ಣ ಅಪರಾಧವೇ? ಅತ್ಯಾಚಾರದ ಪ್ರಯತ್ನವಲ್ಲವೆ?” .
ಪೋಕ್ಸೋ ಕಾಯ್ದೆ ಮಕ್ಕಳ ಲೈಂಗಿಕ ಶೋಷಣೆಗೆ ವಿರುದ್ಧವಾದ ಕಠಿಣ ಕಾನೂನು. ಈ ಕಾಯ್ದೆಯ ಉದ್ದೇಶ ಮಕ್ಕಳ ಭದ್ರತೆ ಮತ್ತು ನ್ಯಾಯವನ್ನು ಖಚಿತಪಡಿಸುವುದು. ಆದರೆ ಈ ತೀರ್ಪು ಪೋಕ್ಸೋ ಕಾಯ್ದೆಯ ಆತ್ಮವನ್ನೇ ಕುಂದಿಸುತ್ತದೆ. ಅತ್ಯಾಚಾರದ ಯತ್ನದ ಆರೋಪಗಳನ್ನು ತಳ್ಳಿ ಹಾಕಿದ್ದರಿಂದ ಅಪರಾಧಿಗಳಿಗೆ ಲಘು ಶಿಕ್ಷೆಯ ಅವಕಾಶ ಸಿಗುತ್ತದೆ ಎಂಬ ಆತಂಕ ಉಂಟು ಮಾಡಿದೆ. ಹೆಣ್ಣು ಹೆತ್ತವರು, ಹೆಣ್ಣುಮಕ್ಕಳು ಇರುವ ಮನೆಯವರು ಬೆಚ್ಚಿ ಬೀಳುವ ತೀರ್ಪಿದು.
ಇಂತಹ ತೀರ್ಪುಗಳು ಅಪರಾಧಿಗಳಿಗೆ ಧೈರ್ಯ ನೀಡುತ್ತವೆ. ಮಹಿಳೆಯರು ಮತ್ತಷ್ಟು ಭಯಭೀತರಾಗಿ ಸಮಾಜದಲ್ಲಿ ನಡೆಯಬೇಕಾಗುತ್ತದೆ. ಪುಟ್ಟ ಬಾಲಕಿಯರು ಶಾಲೆಗೆ ಹೋಗುವಾಗಲೂ ಭದ್ರತೆಯ ಭಾವನೆ ಇಲ್ಲದೆ ಭಯದಿಂದ ಕಾಲಿಡಬೇಕಾಗುತ್ತದೆ. ಅವರನ್ನು ರಕ್ಷಿಸುವುದು ನಮ್ಮ ಸಮಾಜದ ಜವಾಬ್ದಾರಿ, ಆದರೆ ನ್ಯಾಯಾಲಯವೇ ಇಂತಹ ತೀರ್ಪು ನೀಡಿದರೆ ಭದ್ರತೆ ಎಲ್ಲಿ ಸಿಗಲಿದೆ?.
ಪ್ರಸ್ತುತ ನ್ಯಾಯಾಲಯದ ತೀರ್ಪು ಮತ್ತು ಹೇಳಿಕೆ ನಮ್ಮ ಸಮಾಜದಲ್ಲಿ ಇಂತಹ ಕೃತ್ಯಗಳು ಎಷ್ಟು ಸಾಮಾನ್ಯೀಕರಿಸಲ್ಪಟ್ಟಿವೆ (casualisation) ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹಾಗೆಯೇ, ನ್ಯಾಯಾಲಯವು ಸಮರ್ಪಕವಾದ ವಿಚಾರಣೆಯಿಲ್ಲದೆ, ಸಾಕ್ಷಿಗಳನ್ನು ಪರಿಶೀಲನೆ ಮಾಡದೆ ಇಂತಹ ತೀರ್ಮಾನಕ್ಕೆ ಬಂದರೆ ಮತ್ತು ಪ್ರಕರಣವನ್ನು ಹೀಗೆ ಆರಂಭದಲ್ಲಿಯೇ ಮೊಟಕು ಗೊಳಿಸುತ್ತ ಹೋಗಲು ನಿರ್ಧರಿಸಿದರೆ, ಜನಸಾಮಾನ್ಯರು ಕೋರ್ಟ್ ಮೆಟ್ಟಲು ಹತ್ತಲು ಹಿಂಜರಿಯುವ ಸಾಧ್ಯತೆ ಇದೆ. ಅದು ಕೂಡ, ಅತ್ಯಾಚಾರದ ಪ್ರಕರಣಗಳಲ್ಲಿ, ಸಂತ್ರಸ್ತರು ಬಹುತೇಕ ಸಮಯದಲ್ಲಿ ಪೊಲೀಸ್ ಠಾಣೆಗೂ ಹೋಗಲು, ದೂರು ನೀಡಲು ಕೂಡ ಹಿಂಜರಿಯುತ್ತಾರೆ. ಈ ಹಿಂಜರಿಕೆಯ ಹಿಂದೆ ಹಲವು ಕಾರಣಗಳಿವೆ—ಸಮಾಜದಲ್ಲಿ ಬಾಧಿತರಿಗೆ ನೀಡಲಾಗುವ ಮಾನಸಿಕ ಹಿಂಸೆ, ಕುಟುಂಬದ ಮಾನಮರ್ಯಾದೆಗೆ ಧಕ್ಕೆ ಆಗುವುದು ಎಂಬ ಭಯ, ಹಾಗೂ ನ್ಯಾಯದ ಪ್ರಕ್ರಿಯೆಯ ಗೊಂದಲದಿಂದ ಉಂಟಾಗುವ ಆತಂಕ ಮೊದಲಾದವುಗಳು. ಇಂತಹ ಸನ್ನಿವೇಶದಲ್ಲಿ, ನ್ಯಾಯಾಲಯಗಳಿಂದ ಬರುವ ತೀರ್ಪುಗಳು ಮತ್ತು ಹೇಳಿಕೆಗಳು ಸಮಾಜದಲ್ಲಿ ಬಹುದೊಡ್ಡ ಪ್ರಭಾವ ಬೀರುತ್ತವೆ.
ಇಂತಹ ತೀರ್ಪುಗಳು, ಉಲ್ಲೇಖಗಳು, ಹೇಳಿಕೆಗಳು ಇತ್ಯಾದಿಗಳ ಅಪಾಯಗಳು..
ನ್ಯಾಯಾಲಯದಿಂದ ಹೊರಬರುವ ಇಂತಹ ತೀರ್ಪುಗಳು, ಉಲ್ಲೇಖಗಳು, ಹೇಳಿಕೆಗಳು ಸಮಾಜದಲ್ಲಿ ಮತ್ತು ಜನಸಾಮಾನ್ಯರಲ್ಲಿ ಮತ್ತಷ್ಟು ಭಯ ಹುಟ್ಟಿಸುವಂತೆ ಮಾಡಬಹುದು. ಸಂತ್ರಸ್ತರಿಗೆ ನ್ಯಾಯಾಲಯದಿಂದ ನ್ಯಾಯ ದೊರೆಯುವುದು ಎನ್ನುವ ನಂಬಿಕೆಯನ್ನೇ ಕಸಿದುಕೊಳ್ಳಬಹುದು. ಇದರಿಂದಾಗಿ ಇಡೀ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳ ಕುರಿತು ಮುಕ್ತವಾಗಿ ಮಾತನಾಡಲು, ದೂರು ನೀಡಲು ಜನತೆ ಮತ್ತಷ್ಟು ಹಿಂಜರಿಯುವ ಸಾಧ್ಯತೆ ಇದೆ. ಅತ್ಯಾಚಾರ ಮತ್ತು ಇತರ ಗಂಭೀರ ಲೈಂಗಿಕ ಅಪರಾಧ ಪ್ರಕರಣಗಳನ್ನು ನೈಜ ನ್ಯಾಯದ ದೃಷ್ಟಿಯಿಂದ ಪರಿಗಣಿಸುವುದು ಮಾತ್ರವಲ್ಲದೆ, ಸಾಮಾಜಿಕ ಮತ್ತು ಮಾನವೀಯ ಸೂಕ್ಷ್ಮತೆಗಳನ್ನೂ ಗಮನದಲ್ಲಿ ಇಟ್ಟುಕೊಂಡು ತೀರ್ಪು ನೀಡುವುದು ನ್ಯಾಯಾಲಯದ ಮೂಲಭೂತ ಜವಾಬ್ದಾರಿಯಾಗಿದೆ.
ಕಾನೂನು ಎಂದರೆ ಕೇವಲ ಬರೆದಿಟ್ಟ ಅಕ್ಷರಗಳ ಸಮೂಹವಲ್ಲ. ಅದು ಸಮಾಜದ ಅಭಿವೃದ್ಧಿಗೆ ಹಾಗೂ ಮಾನವೀಯ ಮೌಲ್ಯಗಳಿಗೆ ನಿರಂತರವಾಗಿ ಸ್ಪಂದಿಸಬೇಕಾದ ಜೀವಂತ ದಾಖಲೆ. ಕಾನೂನು ಕಾಲಾನುಗತಿಯಾಗಿ ಪ್ರಸ್ತುತ ಸಮಾಜದ ಅಗತ್ಯಗಳಿಗೆ ತಕ್ಕಂತೆ ವ್ಯಾಖ್ಯಾನಗೊಳ್ಳಬೇಕು ಮತ್ತು ಬೆಳೆಯಬೇಕು. ಕಾನೂನಿನ ಈ ದಿಶೆಯಲ್ಲಿ ನಡೆಯುವ ವ್ಯಾಖ್ಯಾನ ಮತ್ತು ನ್ಯಾಯ ನೀಡುವ ಕ್ರಮವು ಕಾಲಾನುಕಾಲ ಸತ್ಯವಾಗಿರಬೇಕು. ಹೀಗಾಗಿ, ನ್ಯಾಯಾಂಗ ವ್ಯವಸ್ಥೆಯ ಉದ್ದೇಶ ಕೇವಲ ಕಾನೂನನ್ನು ಅಕ್ಷರಶ ಪಾಲಿಸುವುದಕ್ಕೆ ಸೀಮಿತವಲ್ಲ. ಬದಲಿಗೆ ಕಾನೂನಿನ ಹಿಂದಿನ ತಾತ್ಪರ್ಯವನ್ನು, ಅದರ ಆದರ್ಶಗಳನ್ನು ಹಾಗೂ ಸಮಾಜದಲ್ಲಿ ನ್ಯಾಯ ಹಾಗೂ ಸಮಾನತೆಯನ್ನು ಬಿಂಬಿಸುವ ದಿಕ್ಕಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಅದು ಸಾಗಬೇಕು.
ಪ್ರಸ್ತುತ ಅಲಹಾಬಾದ್ ಹೈ ಕೋರ್ಟಿನ ತೀರ್ಪು ಕೇವಲ ನ್ಯಾಯಾಂಗದ ಹೇಳಿಕೆಯನ್ನು ನಮ್ಮ ಮುಂದಿಡುವುದಿಲ್ಲ; ಅದು ನಮ್ಮ ನ್ಯಾಯಮೌಲ್ಯಗಳು ಕ್ಷೀಣಿಸುತ್ತಿರುವುದನ್ನು ಕೂಡ ನಮಗೆ ಬೊಟ್ಟು ಮಾಡಿ ತೋರಿಸುತ್ತದೆ. ಇಡೀ ವ್ಯವಸ್ಥೆಯು ಕುಸಿದರೂ, ನ್ಯಾಯಾಲಯ ನಮ್ಮ ಬದಿಯಲ್ಲಿ ನಿಂತು ನ್ಯಾಯ ಕೊಡುತ್ತದೆ ಎಂಬ ನಂಬಿಕೆಗೆ ಇಂತಹ ತೀರ್ಪುಗಳು ಧಕ್ಕೆ ಉಂಟು ಮಾಡುತ್ತಿವೆ. ಕೊನೆಗೊಂದು “ನ್ಯಾಯಾಲಯದಲ್ಲಾದರೂ ನ್ಯಾಯ ಸಿಗುತ್ತದೆ” ಎಂಬ ವಿಶ್ವಾಸವೇ ಇಲ್ಲದಾಗ, ಸಮಾಜದಲ್ಲಿ ಮೌಲ್ಯಗಳು ಪತನವಾಗುತ್ತವೆ. ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆಯಿಂದ ಸಮಾಜ ನಡೆದಾಡುತ್ತದೆ. ಅದು ಉಳಿದಿಲ್ಲದಿದ್ದರೆ ಸುವ್ಯವಸ್ಥೆಯ ಭರವಸೆಯೇ ಕುಸಿದು ಬೀಳುತ್ತದೆ. ಜನರು ಕಾನೂನನ್ನು ಕೈಗೆತ್ತಿಕೊಳ್ಳುವ ಹತಾಶೆಗೆ ಹೋಗುತ್ತಾರೆ. ನ್ಯಾಯಾಧೀಶರು ಕಾನೂನಿನ ಮಾತನ್ನು ಹೇಳುವುದಷ್ಟೇ ಅಲ್ಲ, ಅದು ಮಾನವೀಯತೆಯಿಂದ ಕೂಡಿರಬೇಕು. ಕೇವಲ ಅಕ್ಷರೋಪಾಸನೆ ಮಾಡದೇ, ತತ್ವಜ್ಞಾನ ಮತ್ತು ಮೌಲ್ಯಗಳ ಆಧಾರದ ಮೇಲೆ ತೀರ್ಪು ನೀಡಬೇಕಾಗಿದೆ. ಏಕೆಂದರೆ, ನ್ಯಾಯಾಂಗವೇ ಕೊನೆಯ ಆಶಾಕಿರಣ. ಆ ಆಶಾಕಿರಣವೇ ಕತ್ತಲಾಗಿ ಬಿಡಬಾರದು.
ಸುಚಿತ್ರ ಎಸ್ ಎ
ಕರ್ನಾಟಕ ಹೈ ಕೋರ್ಟ್ ನಲ್ಲಿ ಕೆಲ ಕಾಲ ವಕೀಲರಾಗಿದ್ದು ಪ್ರಸ್ತುತ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪಿ ಎಚ್‌ಡಿ ಮಾಡುತ್ತಿದ್ದಾರೆ
ಜೆನ್ನಿಫರ್ ಡಿ’ಸೋಜಾ, ವಕೀಲರು
ಇದನ್ನೂ ಓದಿ- ಸ್ತನ ಹಿಡಿಯುವುದು ಅತ್ಯಾಚಾರ ಯತ್ನ ಅಲ್ಲ ಎಂಬ ತೀರ್ಪು: ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು; ಸಚಿವೆ ಅನ್ನಪೂರ್ಣದೇವಿ ಆಗ್ರಹ