ವಿಜ್ಞಾನ ಮತ್ತು ಜಾನಪದ ಕಲೆಗಳ ಅಪೂರ್ವ ಸಂಗಮ | ಆಲ್ಬರ್ಟ್ ಸೇಬಿನ್ ಮತ್ತು ದರೋಜಿ ಈರಮ್ಮ

Most read

ಪೋಲಿಯೊಗೆ ಬಾಯಿಲಸಿಕೆ ಕಂಡುಹಿಡಿದ ಅಮೆರಿಕಾದ ಆಲ್ಬರ್ಟ್ ಸೇಬಿನ್ ಎಲ್ಲಿ? ಸೇಬಿನ್ನರ ಹೆಸರನ್ನೇ ಕೇಳದ ಕರ್ನಾಟಕದ ದರೋಜಿ ಈರಮ್ಮ ಎಲ್ಲಿ? ಎಲ್ಲಿದ್ದರೂ, ಇಬ್ಬರೂ ಪೋಲಿಯೊ ನಿರ್ಮೂಲನೆಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ವಿಜ್ಞಾನ ಮತ್ತು ಜಾನಪದ ಕಲೆಗಳ ಕಾಲಾಂತರದ ಅಪೂರ್ವ ಸಂಗಮವಿದು- ಕೆ ಎಸ್‌ ರವಿಕುಮಾರ್, ವಿಜ್ಞಾನ ಬರಹಗಾರರು.

ಪೋಲಿಯೊ ಮೈಲೈಟಿಸ್ ಐದು ವರುಷದ ಒಳಗಿನ ಮಕ್ಕಳನ್ನು ಕಾಡಿ ಬಹುತೇಕ ಜೀವನಪೂರ್ತಿ ಅವರನ್ನು ಹೆಳವರನ್ನಾಗಿಸುವ ವೈರಸ್ ಮೂಲದ ಒಂದು ಕಾಯಿಲೆ. 3,500 ವರ್ಷಗಳಷ್ಟು ಹಿಂದೆಯೆ ಅದು ಕಾಣಿಸಿಕೊಂಡ ದಾಖಲೆ ಪ್ರಾಚೀನ ಈಜಿಪ್ಟ್ನಲ್ಲಿ ಕಂಡುಬರುತ್ತದೆ. ಆದರೆ ಈ ಕಾಯಿಲೆಗೆ ಲಸಿಕೆ ಕಂಡುಹಿಡಿದದ್ದು ಮಾತ್ರ 20 ನೇ ಶತಮಾನದ ನಡುಭಾಗದಲ್ಲಷ್ಟೆ. ಅಮೆರಿಕಾದ ಜೊನಾಸ್ ಸಾಕ್ ಇಂಜೆಕ್ಷನ್ ಮೂಲಕ ನೀಡಬಹುದಾದ ಲಸಿಕೆಯನ್ನು 1954 ರಲ್ಲಿ ಅಭಿವೃದ್ಧಿಪಡಿಸಿದರು. ಮುಂದಿನ ಒಂದೇ ವರ್ಷದಲ್ಲಿ ಅಮೆರಿಕಾ, ಕೆನಡಾ ಮತ್ತು ಫಿನ್‌ಲ್ಯಾಂಡಿನಲ್ಲಿ ವ್ಯಾಪಕವಾಗಿ ಮಕ್ಕಳನ್ನು ಚುಚ್ಚುಮದ್ದಿಗೆ ಒಳಪಡಿಸಲಾಯಿತು. ಅಮೆರಿಕಾವೊಂದರಲ್ಲೇ ಪ್ರತೀ 1 ಲಕ್ಷ ಮಕ್ಕಳಲ್ಲಿ13.9 ರಷ್ಟಿದ್ದ ಪೋಲಿಯೊ ಪ್ರಕರಣವು ಚುಚ್ಚುಮದ್ದಿನ ನಂತರ 0.8 ಕ್ಕೆ ಕುಸಿಯಿತು. ಜೊನಾಸ್ ಸಾಕ್ ತಮ್ಮ ಲಸಿಕೆ ತಯಾರಿಕೆಯ ವಿಧಾನಕ್ಕೆ ಎಂದೂ ಪೇಟೆಂಟ್ ಪಡೆಯದೆ ಮಾನವೀಯತೆಯನ್ನು ಮೆರೆದರು. 1955 ರ ಅಂತ್ಯದಲ್ಲಿ ಅಮೆರಿಕಾದವರೆ ಆದ ಆಲ್ಬರ್ಟ್ ಸೇಬಿನ್ ಅವರು ಬಾಯಿಯ ಮೂಲಕ ನೀಡಬಹುದಾದ ಪೋಲಿಯೊ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಈ ಲಸಿಕೆ ಸಾಕ್ ಅವರ ಲಸಿಕೆಗಿಂತ ಕೆಲವು ವಿಚಾರಗಳಲ್ಲಿ ಹೆಚ್ಚು ದಕ್ಷವಾಗಿತ್ತು. ಆದರೆ ಸೇಬಿನ್ ಅವರ ಲಸಿಕೆಯನ್ನು ತಮ್ಮ ಮಕ್ಕಳ ಬಾಯಿಗೆ ಹಾಕಿಸಿಕೊಳ್ಳಲು ಹೆತ್ತವರು ಮುಂದೆ ಬರಲೇ ಇಲ್ಲ. ಕಡೆಗೆ ಸೇಬಿನ್ ಅವರೆ ತಮ್ಮ ಇಬ್ಬರು ಹೆಣ್ಣು ಮಕ್ಕಳ ಬಾಯಿಗೆ ಲಸಿಕೆಯನ್ನು ಹಾಕಿ ಯಾವ ಅಪಾಯವೂ ಇಲ್ಲವೆಂದು ಸಾಬೀತು ಪಡಿಸಬೇಕಾಯಿತು. ಆಮೇಲಷ್ಟೆ ಅವರ ಲಸಿಕೆಯ ಕುರಿತು ಜನರಲ್ಲಿ ಭಯದ ತೆರೆ ಸರಿದದ್ದು.

ಸೇಬಿನ್

ಸೇಬಿನ್ ಸಂಶೋಧನೆಯ ಮಹತ್ವವನ್ನು ಮೊದಲು ಗ್ರಹಿಸಿದ್ದು ಸೋವಿಯತ್ ಒಕ್ಕೂಟ. 1959 ರ ಹೊತ್ತಿಗೆ ಅದು ಒಂದು ಕೋಟಿ ಸೋವಿಯತ್ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಿ ಸೇಬಿನ್ ಅವರ ಸಂಶೋಧನೆಗೆ ಭಾರೀ ವ್ಯಾಪಕತೆಯನ್ನು ತಂದುಕೊಟ್ಟಿತು. ತನ್ನ ದೇಶದ ಅತ್ಯುನ್ನತ ಪ್ರಶಸ್ತಿಯಾದ Order of Friendship ಅನ್ನು ಸೇಬಿನ್ ಅವರಿಗೆ ನೀಡಿ ಗೌರವಿಸಿತು. 1962 ರಲ್ಲಿ ಕ್ಯೂಬಾ ಒಂದು ಹೆಜ್ಜೆ ಮುಂದೆ ಇಟ್ಟಿತು. ಪೋಲಿಯೊ ಬಾಯಿಲಸಿಕೆ ನೀಡುವುದಕ್ಕೆ ಒಂದು ಪರಿಣಾಮಕಾರಿ ರಾಷ್ಟ್ರೀಯ ಆಂದೋಲನದ ರೂಪ ನೀಡಿತು, ಅಂದರೆ ‘ಪಲ್ಸ್ ಪೋಲಿಯೊ’ ಹೆಸರಿನಲ್ಲಿ ನಾವು ಈಗ ನಡೆಸಿಕೊಂಡು ಬರುತ್ತಿದ್ದೇವಲ್ಲ ಹಾಗೆ. 1972 ರಲ್ಲಿ ಜಗತ್ತಿನ ಬಳಕೆಗೆ ಸುಲಭ ಲಭ್ಯವಾಗುವಂತೆ ಸೇಬಿನ್ ಲಸಿಕೆಯ ಮೇಲಿನ ತಮ್ಮ ಹಕ್ಕನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಗೆ ಉಚಿತವಾಗಿ ನೀಡಿಬಿಟ್ಟರು. ಅವರ ಈ ನಡೆಯಿಂದ 1995 ರ ಹೊತ್ತಿಗೆ ಜಗತ್ತಿನ ಶೇಕಡಾ 85 ರಷ್ಟು ಮಕ್ಕಳು ಬಾಯಿಲಸಿಕೆ ಪಡೆಯುವಲ್ಲಿ ಸಫಲರಾದರು. ಎರಡು ಹನಿ ಲಸಿಕೆಯನ್ನು ನೀಡುವ ನಿಗದಿತ ಕ್ರಮ ಜಾರಿಗೆ ಬಂದು ಹಲವು ದೇಶಗಳು ಪೋಲಿಯೊ ಮುಕ್ತವಾಗುವ ದಿಕ್ಕಿನಲ್ಲಿ ದಾಪುಗಾಲು ಹಾಕಿದವು.

ನಾವೂ ಸಮರ ಗೆದ್ದೆವು

ಬುರುಡೆಯಿಂದ ಬರುವ ಕಾವ್ಯಗಳು

ದರೋಜಿ ಈರಮ್ಮ

‘ಬುರ‍್ರಕತಾ’ ಕತೆ ಹೇಳುವ ಒಂದು ಜಾನಪದ ಕಲಾಪ್ರಕಾರ. ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಕಾಣಬರುವ ಕಲೆ ಇದು. ಸಾಮಾನ್ಯವಾಗಿ ಇಬ್ಬರು ಅಥವಾ ಮೂರು ಜನರ ಒಂದು ತಂಡ ಬುರ‍್ರಕತಾವನ್ನು ಪ್ರಸ್ತುತಪಡಿಸುತ್ತದೆ. ವಿವರಣೆ, ಹಾಡುಗಳೊಂದಿಗೆ ಒಬ್ಬರು ತಂಬೂರಿ ಮೀಟುತ್ತ, ಕಡಗದಂತಿರುವ ಅಂದೇಲು ಎಂಬ ಕಿಂಕಿಣ (Jingle)ಯಲ್ಲಿ ಸದ್ದು ಹೊರಡಿಸುತ್ತ ಕತೆ ಹೇಳಿದರೆ ಉಳಿದವರು ಕೋರಸ್ ಕೊಡುತ್ತ ಒಂದು ಕಡೆ ಚರ್ಮದ ಹೊದಿಕೆಯಿರುವ ಬುಡಿಕೆ ಅಥವಾ ಸಣ್ಣ ಡಕ್ಕೆಯನ್ನು ಲಯಬದ್ಧವಾಗಿ ಬಡಿಯುತ್ತಾರೆ. ಜೊತೆಗೆ ಪೂರಕ ಆಂಗಿಕ ಚಲನೆಯೂ ಇರುತ್ತದೆ. ಬುರ‍್ರಕತೆಯಲ್ಲಿ ಪ್ರಸ್ತುತಪಡಿಸುವ ಕತೆಗಳು ಪೌರಾಣಿಕ, ಜಾನಪದ ಇಲ್ಲವೇ ಸಾಮಾಜಿಕ ಮೂಲದವಾಗಿರುತ್ತವೆ. ಬಹುಪಾಲು ನಿಡುಗಾವ್ಯದ ರೂಪದಲ್ಲಿ ಪ್ರಸ್ತುತಗೊಳ್ಳುತ್ತವೆ. ಬುರ‍್ರಕತಾ ಕಲಾವಿದರು ಬುಡ್ಗ ಜಂಗಮ ಎಂಬ ಅರೆ ಅಲೆಮಾರಿ ಆದಿವಾಸಿ ಸಮುದಾಯಕ್ಕೆ ಸೇರಿದವರು. 84 ವರ್ಷ ಬದುಕಿದ್ದ ದರೋಜಿ ಈರಮ್ಮ ತಮ್ಮ ಬದುಕಿನ ಆರು ದಶಕಗಳನ್ನು ಕತೆ ಹೇಳುತ್ತಲೇ ಕಳೆದವರು. ಸರ್ಕಾರ ಆಶ್ರಯ ಯೋಜನೆಯಡಿ ನೀಡಿದ್ದ ಮನೆಯಲ್ಲೇ ಮಗಳು, ಅಳಿಯ ಮತ್ತು ಮೊಮ್ಮಕ್ಕಳೊಂದಿಗೆ ಈರಮ್ಮ ಕಡೆವರೆಗೂ ಬದುಕಿದರು.

ಈರಮ್ಮ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದರೋಜಿಯಲ್ಲಿ ಜನಿಸಿದರು (1930). ಶಾಲಾ ಕಲಿಕೆಯಿಲ್ಲ. ಮುಂದೆಂದೋ ಸಹಿ ಮಾಡಲಷ್ಟೆ ಕಲಿತದ್ದು. ಊರೂರು ತಿರುಗುವ ಕುಟಂಬದ ಮಕ್ಕಳಿಗೆ ಶಿಕ್ಷಣವಾದರೂ ಹೇಗೆ ಸಿಗಬೇಕು. ಜೊತೆಗೆ ಬಡತನ. ಬುರ‍್ರಕತಾ ಕುಲಕಸುಬಾಗಿತ್ತು. ಕಸುಬೆಂದರೆ ಹೊಟ್ಟೆಪಾಡಿನ ಮೂಲವಲ್ಲವೆ? ಶಿಷ್ಟರಿಗೆ ಕಲೆ ಎನಿಸಿದ್ದು ಬುಡ್ಗ ಜಂಗಮರಿಗೆ ಕಸುಬು. ಕಲಿಕೆ ಇರಲಿಲ್ಲವಾದ್ದರಿಂದ ಹಲವು ಕಥನ ಕಾವ್ಯಗಳನ್ನು ಬಾಯಿಪಾಠದಲ್ಲೇ ಕಲಿಯುವ ಅನಿವಾರ್ಯತೆ ಈರಮ್ಮ ಅವರದಾಗಿತ್ತು. ಈರಮ್ಮನಿಗೆ ಹೆತ್ತವರೆ ಬುರ‍್ರಕತಾ ಕಲಿಸಿದ ಮೊದಲ ಗುರುಗಳು. ತೆಲುಗು ಮನೆಭಾಷೆ. ಕತೆ ಹೇಳುತ್ತಿದ್ದುದು ಕನ್ನಡದಲ್ಲಿ. ಮದುವೆ ಆಕೆಗೆ ಹೆಚ್ಚು ಕಾಲ ದಾಂಪತ್ಯಸುಖವನ್ನು ತರಲಿಲ್ಲ. ಒಬ್ಬ ಮಗಳು ಜನಿಸಿದ ಮೇಲೆ ಗಂಡ ತೀರಿಕೊಂಡರು. ಈರಮ್ಮ ವಿಧವೆಯಾದರು. ಈಗಂತೂ ಬದುಕು ಬೇರೆ ದಿಕ್ಕಿಗೆ ಹೊರಳುವುದು ಸಾಧ್ಯವೇ ಇರಲಿಲ್ಲ. ಕತೆ ಹೇಳುತ್ತ ಅವರು ಮುನ್ನಡೆದರು.

ಕರೆದಲ್ಲಿಗೆ ತೆರಳಿ, ಜನ ಸೇರಿದ ಕಡೆ, ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ಕೊಡುವುದು ಮುಂದುವರಿಯಿತು. ಪ್ರತೀ ಪ್ರಸ್ತುತಿಗೆ ಇಷ್ಟು ಸಂಭಾವನೆ ನೀಡಲೇಬೇಕು ಎಂದು ಈರಮ್ಮ ಎಂದೂ ಒತ್ತಾಯಿಸುತ್ತಿರಲಿಲ್ಲ. ಕೊಟ್ಟಷ್ಟು ತಕ್ಕೊಂಡು, ಕೊಡದಿದ್ದರೆ ಗೊಣಗಾಟವಿಲ್ಲದೆ ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗುವುದು ಅವರ ಸ್ವಭಾವವಾಗಿತ್ತು. ಕತೆಗಳ ಮೂಲಕ ಜನರಿಗೆ ಒಳ್ಳೆಯ ಸಂದೇಶಗಳನ್ನು ತಲುಪಿಸಬೇಕು ಎಂಬ ವಿಚಾರದಲ್ಲಿ ಮಾತ್ರ ಎಂದೂ ರಾಜೀ ಇರಲಿಲ್ಲ. ಸಂಭಾವನೆ ಕೊಡಲಿಲ್ಲವೆಂದೋ, ಕಡಿಮೆ ಕೊಟ್ಟರೆಂದೋ ಬೇಸರಿಸಿ ಹೇಳಬೇಕಾದ ಕತೆಯನ್ನು ಅರ್ಧಕ್ಕೆ ಕಡಿತಗೊಳಿಸುವುದಾಗಲಿ, ಅರೆಮನಸ್ಸಿನಿಂದ ಹೇಳುವುದಾಗಲಿ, ಹಾರಿಸಿ ಹಾರಿಸಿ ಮುಗಿಸುವುದಾಗಲಿ ಆಕೆಯ ಜಾಯಮಾನವಾಗಿರಲಿಲ್ಲ. ಹೊಟ್ಟೆಗೆ ಅನ್ನ ಕೊಡುವ ಕತೆಗಳ ಬಗ್ಗೆ ಅಪಾರ ಗೌರವವಿತ್ತು ಆಕೆಗೆ. ಎಲ್ಲೂ ಕರೆಯಿಲ್ಲದಿದ್ದರೆ ಎಂದಿನಂತೆ ಮನೆಮನೆಯ ಬಾಗಿಲಿಗೆ ಬಂದು ಹಾಡುತ್ತ ಬೇಡುವುದು ಆಕೆಗೆ ಅನಿವಾರ್ಯವಾಗಿತ್ತು ಎಂಬುದನ್ನು ಇಲ್ಲಿ ಪ್ರಸ್ತಾಪಿಸದಿದ್ದರೆ ಆತ್ಮವಂಚನೆಯಾದೀತು. ಬೀದಿ ಕಲಾವಿದರ ಬದುಕು ವೇದಿಕೆ ಮೇಲಿನ ಶಿಷ್ಟ ಕಲಾವಿದರ ಬದುಕಿನಂತೆ ಸಲೀಸಲ್ಲ. ಅನ್ನ ಮತ್ತು ಗೌರವಗಳು ಬೀದಿ ಕಲಾವಿದರನ್ನು ಅರಸಿ ಬರುವುದಿಲ್ಲ.

ಈರಮ್ಮನವರ ಜೊತೆ ಅವರ ತಂಗಿ ಶಿವಮ್ಮ ಮತ್ತು ಗಂಡನ ಸಹೋದರಿ ಪಾರ್ವತಮ್ಮ ಕೂಡಾ ಸಹಕಲಾವಿದೆಯರಾಗಿ ಪಾಲ್ಗೊಳ್ಳುತ್ತಿದ್ದರು. ಈ ಮೂವರ ತಂಡ ಬರ‍್ರಕತೆಗೆ ಪಟ್ಟು ಹಿಡಿದು ಕುಳಿತಿತೆಂದರೆ ಕೇಳುಗರಿಗೆ ಕತೆಗಳ ರಸದೌತಣ. ಈರಮ್ಮನವರ ಕಾರ್ಯಕ್ರಮವಿದೆಯೆಂದರೆ ದೂರದೂರದ ಊರುಗಳಿಂದ ಜನ ಧಾವಿಸಿ ಬರುತ್ತಿದ್ದರು. ಕ್ರಮೇಣ ಒಂದು ಪ್ರದೇಶಕ್ಕೆ ಸೀಮಿತವಾಗಿದ್ದ ಆಕೆಯ ಕಲೆ ಸರ್ಕಾರ ಮತ್ತು ಸಂಘಸಂಸ್ಥೆಗಳ ಉತ್ತೇಜನದಲ್ಲಿ ಹಲವು ರಾಜ್ಯಗಳಲ್ಲಿ ಪ್ರದರ್ಶನಗೊಂಡು ಈರಮ್ಮ ರಾಷ್ಟ್ರೀಯ ಮಟ್ಟದ ಜಾನಪದ ಕಲಾವಿದೆ ಎನಿಸಿದರು. ಪ್ರಶಸ್ತಿ ಪುರಸ್ಕಾರಗಳು ಅರಸಿ ಬರತೊಡಗಿದವು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಡಾ.ಬಾಬಾಸಾಹೆಬ್ ಅಂಬೇಡ್ಕರ್ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಡಾ.ರಾಜ್‌ಕುಮಾರ್ ಪ್ರಶಸ್ತಿ, ಮಂಗಳೂರು ಸಂದೇಶ ಪ್ರತಿಷ್ಠಾನದ ಸಂದೇಶ ಪ್ರಶಸ್ತಿ, ಪ್ರಸಾರ ಭಾರತಿಯ ಅತ್ಯುತ್ತಮ ಜಾನಪದ ಕಲಾವಿದೆ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ (ಡಾಕ್ಟೊರೇಟ್) ಪ್ರಶಸ್ತಿ ಹೀಗೆ ಇನ್ನೂ ಅನೇಕ ಪ್ರಶಸ್ತಿಗಳು ಆಕೆಯ ಸಾಧನೆಯ ಮುಡಿಗೆ ಸಂದ ಗರಿಗಳಾಗಿವೆ. ಅಂತರರಾಷ್ಟ್ರೀಯ ಅಲೆಮಾರಿ ಮಹಿಳೆಯರ ಸಮಾವೇಶದ ವೇಳೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಮಾಡಿದ ತಂಡದಲ್ಲಿ ಈರಮ್ಮನವರೂ ಇದ್ದರು.

ಮಹಾಭಾರತಕ್ಕೂ ಸಾಟಿಯಿಲ್ಲದ ನೆನಪಿನ ಶಕ್ತಿ

ಪೋಲಿಯೋ ವೈರಸ್

 ದರೋಜಿ ಈರಮ್ಮ ಕಲಿತ ಕಾವ್ಯಕತೆಗಳಾದರೂ ಎಂತಹವು, ಒಂದೆರಡು ಗಂಟೆಗಳಲ್ಲಿ ಪ್ರಸ್ತುತಪಡಿಸಿ ಮುಗಿದು ಹೋಗುವಂತಹವುಗಳಲ್ಲ. ಆಲಿಸುವವರಿಗೆ ಉತ್ಸಾಹವಿದ್ದರೆ ದಿನಗಟ್ಟಲೆ ಕೇಳಿಸಬಹುದಾದಷ್ಟು ಸುದೀರ್ಘವಾದವುಗಳು ಅವು. ಒಂದು ಶಬ್ದ, ಒಂದು ಸಾಲೂ ಮರೆಯದ ಹಾಗೆ ಕತೆಯ ಘಟನೆಗಳು ಕಣ್ಣಿಗೆ ಕಟ್ಟುವಂತೆ ಆಕೆ ಪ್ರಸ್ತುತ  ಪಡಿಸುತ್ತಿದ್ದರು. ರಾತ್ರಿ ಕಳೆದು ಬೆಳಗಾದರೂ ಆಕೆಯ ಶ್ರೋತೃಗಳು ಜಾಗ ಬಿಟ್ಟು ಕದಲುತ್ತಿರಲಿಲ್ಲ. ಈರಮ್ಮ ಒಟ್ಟು ಹನ್ನೆರಡು ಕಾವ್ಯಕತೆಗಳನ್ನು ಬಾಯಿಪಾಠ ಮಾಡಿಕೊಂಡಿದ್ದರು. ಅವೆಲ್ಲವನ್ನು ಮುದ್ರಿಸಿದರೆ 7,000 ಪುಟಗಳಲ್ಲಿ ವಿಸ್ತರಿಸಿಕೊಳ್ಳುತ್ತವೆ. ಎರಡು ಲಕ್ಷ ಸಾಲುಗಳಲ್ಲಿ ಹಂಚಿಹೋಗುತ್ತವೆ (ನೆನಪಿರಲಿ, ಜಗತ್ತಿನ ದೀರ್ಘ ಕಾವ್ಯವಾದ ಮಹಾಭಾರತದಲ್ಲೂ ಎರಡು ಲಕ್ಷ ಸಾಲುಗಳಿವೆ)! ಈರಮ್ಮನವರ ಸ್ಮರಣ ಶಕ್ತಿ ನಿಜಕ್ಕೂ ದಂಗುಬಡಿಸುತ್ತದೆ. ಇಳಿವಯಸ್ಸಿನಲ್ಲೂ ಆ ಶಕ್ತಿ ತನ್ನ ಮೊನಚು ಕಳಕೊಂಡಿರಲಿಲ್ಲ.

ಈರಮ್ಮನವರ ದನಿಯಲ್ಲಿ ಬೆಳಕು ಕಂಡ ಕಾವ್ಯಕತೆಗಳೆಂದರೆ ಕುಮಾರ ರಾಮನ ಮಹಾಕಾವ್ಯ, ಕೃಷ್ಣ ಗೊಲ್ಲರ ಮಹಾಕಾವ್ಯ, ಯಲ್ಲಮ್ಮನ ಕಾವ್ಯ, ಬೊಬ್ಬಿಲಿ ನಾಗಿರೆಡ್ಡಿ ಕಾವ್ಯ, ಬಾಲನಾಗಮ್ಮನ ಕಾವ್ಯ, ಜೈಸಿಂಗ ರಾಜನ ಕಾವ್ಯ, ಬಲಿ ಚಕ್ರವರ್ತಿಯ ಕಾವ್ಯ, ಸ್ಯಾಸಿ ಚಿನ್ನಮ್ಮನ ಕಾವ್ಯ, ಅದೋನಿ ಲಕ್ಷ್ಮನ ಕಾವ್ಯ, ಮೊಹಮದ್ ಖಾನನ ಕಾವ್ಯ, ಮಾರವಾಡಿ ಸೇಠಿಯ ಕಾವ್ಯ ಮತ್ತು ಗಂಗಿಗೌರಿಯ ಕಾವ್ಯ. ಇವುಗಳಲ್ಲಿ ಹಲವನ್ನು ಸಂಶೋಧಕ ವಿದ್ವಾಂಸರಾದ ಡಾ.ಕೆ.ಎಮ್.ಮೇತ್ರಿ, ಡಾ.ಚಲುವರಾಜು, ಡಾ.ಸ.ಚಿ.ರಮೇಶ್, ಡಾ.ವೇಷಗಾರು ರಾಮಾಂಜಿನೀಯ ಮುಂತಾದವರು ಸಂಪಾದಿಸಿ ಅಕ್ಷರ ರೂಪಕ್ಕೆ ತಂದಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಈರಮ್ಮನವರ ಕಾವ್ಯಗಳನ್ನು ಪ್ರಕಟಿಸಿ ಜನಪದ ಲೋಕಕ್ಕೆ ಆಕೆ ನೀಡಿದ ಕೊಡುಗೆಗಳನ್ನು ಸ್ಮರಣೀಯಗೊಳಿಸಿದೆ. ಡಾ.ಸಾರಿಕಾದೇವಿ ಕಲಗಿಯವರು ತಮ್ಮ ‘ದರೋಜಿ ಈರಮ್ಮ: ಒಂದು ಅಧ್ಯಯನ’ ಮತ್ತು ಡಾ.ನಿಂಗಪ್ಪ ಮುದೇನೂರು ಅವರು ‘ಬರ‍್ರಕತಾ ಈರಮ್ಮ: ಅಲೆಮಾರಿಯ ಆತ್ಮಕಥನ’ ಎಂಬ ಅಧ್ಯಯನ ಪ್ರಬಂಧಗಳನ್ನು ಮಂಡಿಸಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿ ಗಳಿಸಿದ್ದಾರೆ. ಆ ಮೂಲಕ ದರೋಜಿ ಈರಮ್ಮನವರನ್ನು ಜಾನಪದ ಕಲಾ ಜಗತ್ತಿನ ಚಾರಿತ್ರಿಕ ವ್ಯಕ್ತಿಯಾಗಿಸಿದ್ದಾರೆ. ‘ಬುಡ್ಗಜಂಗಮ ಸಮುದಾಯ’ ಎಂಬ ಡಾ.ವಡ್ಡಗೆರೆ ನಾಗರಾಜಯ್ಯನವರ ಅರಕೆಯ ಕೃತಿಯಲ್ಲಿ ದರೋಜಿ ಈರಮ್ಮನವರ ವ್ಯಕ್ತಿತ್ವ ಪರಿಚಯಕ್ಕೆ ಹೆಚ್ಚಿನ ಮನ್ನಣೆ ದಕ್ಕಿದೆ.

ಪಲ್ಸ್ ಪೋಲಿಯೊ ಪ್ರಚಾರದಲ್ಲಿ

ಈರಮ್ಮನವರ ಜನಪ್ರಿಯತೆಯನ್ನು ಪಲ್ಸ್ ಪೋಲಿಯೊ ಪ್ರಚಾರದಲ್ಲಿ ಸರ್ಕಾರ ಮತ್ತು ಸಂಘಟನೆಗಳು ಬಳಸಿಕೊಳ್ಳಲು ತೀರ್ಮಾನಿಸಿದ್ದು ಒಂದು ರೀತಿಯಲ್ಲಿ ಸಮಂಜಸವಾಗಿತ್ತು. ಸರ್ವಾಂಗೀಣ ಅಭಿವೃದ್ಧಿಯಲ್ಲಿ ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಹಲವು ಜಿಲ್ಲೆಗಳ ಮೂಲೆಮೂಲೆಗೆ ಸಂದೇಶ ತಲುಪಿಸಲು ಈರಮ್ಮ ನೆರವಾದರು. ಪೋಲಿಯೊ ಹನಿಗಳನ್ನು ಹಾಕಿಸುವುದರ ಮೂಲಕ ಮಕ್ಕಳನ್ನು ಪೋಲಿಯೊ ಕಾಯಿಲೆಯಿಂದ ಕಾಪಾಡಿಕೊಳ್ಳಲು ಪ್ರತೀ ಬುರ‍್ರಕತಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಆಕೆ ಮರೆಯದೆ ಕರೆ ನೀಡುತ್ತಿದ್ದರು. ಈರಮ್ಮ ಹೇಳಿದ್ದಾರೆಂದರೆ ಅದರಲ್ಲಿ ಖಂಡಿತವಾಗಿಯೂ ಒಳ್ಳೆಯದೇನೋ ಇರಬೇಕೆಂದು ಜನ ತಮ್ಮ ಮಕ್ಕಳನ್ನು ಸಮೀಪದ ಪಲ್ಸ್ ಪೋಲಿಯೊ ಕೇಂದ್ರಗಳಿಗೆ ಒಯ್ಯುತ್ತಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಂಘಟನೆಗಳ ಕಾರ್ಯಕರ್ತರಿಗೆ ಈರಮ್ಮ ಕರೆಕೊಟ್ಟಮೇಲೆ ಜನರ ನಡುವೆ ಕಾರ್ಯಾಚರಿಸಲು ದಾರಿ ಸುಗಮವಾಗುತ್ತಿತ್ತು. ಪೋಲಿಯೊ ವಿರುದ್ಧ ಸಮರ ಗೆಲ್ಲುವಲ್ಲಿ ಈರಮ್ಮ ವೇಗವರ್ಧಕದಂತೆ ಕೆಲಸಮಾಡಿ ಒಂದು ಅಮೂಲ್ಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪೋಲಿಯೊಗೆ ಬಾಯಿಲಸಿಕೆ ಕಂಡುಹಿಡಿದ ಅಮೆರಿಕಾದ ಆಲ್ಬರ್ಟ್ ಸೇಬಿನ್ ಎಲ್ಲಿ?, ಸೇಬಿನ್ನರ ಹೆಸರನ್ನೇ ಕೇಳದ ಕರ್ನಾಟಕದ ದರೋಜಿ ಈರಮ್ಮ ಎಲ್ಲಿ?. ಎಲ್ಲಿದ್ದರೂ, ಇಬ್ಬರೂ ಪೋಲಿಯೊ ನಿರ್ಮೂಲನೆಯ ಚರಿತ್ರೆಯಲ್ಲಿ ದಾಖಲೆಯಾಗಿದ್ದಾರೆ. ವಿಜ್ಞಾನ ಮತ್ತು ಜಾನಪದ ಕಲೆಗಳ ಕಾಲಾಂತರದ ಅಪೂರ್ವ ಸಂಗಮವಿದು.

ವೈಧವ್ಯದ ನತದೃಷ್ಟ ಬದುಕನ್ನು ಮರೆತು ಹಾಡುತ್ತ, ಕತೆ ಹೇಳುತ್ತ ಜಾನಪದ ಸಂಸ್ಕೃತಿಯನ್ನು ವೈವಿಧ್ಯಮಯಗೊಳಿಸಿದ ಡಾ. ದರೋಜಿ ಈರಮ್ಮ ಬಳ್ಳಾರಿಯಲ್ಲಿ 2014 ರ ಆಗಸ್ಟ್ 12 ರಂದು ಶ್ವಾಸಕೋಶದ ತೊಂದರೆಯಿಂದ ಕೊನೆಯುಸಿರೆಳೆದಾಗ ಕನ್ನಡ ಜಾನಪದ ಲೋಕ ನಿಜಕ್ಕೂ ಬಡವಾಯಿತು. ವಿಪರ್ಯಾಸವೆಂದರೆ ಇದೇ ವರುಷ ಈರಮ್ಮನವರ ಸಾವಿಗೆ ನಾಲ್ಕುವರೆ ತಿಂಗಳು ಮುಂಚಿತವಾಗಿ ‘ಭಾರತ ಪೋಲಿಯೊಮುಕ್ತ’ ಎಂದು ಜಗತ್ತಿಗೆ ತಿಳಿದುಬಂತು.           

ಕೆ.ಎಸ್.ರವಿಕುಮಾರ್, ಹಾಸನ

ವಿಜ್ಞಾನ ಬರಹಗಾರರು

ಮೊ : 8951055154

More articles

Latest article