ಆಳಂದ ಕ್ಷೇತ್ರದ ಮತ ಕಳವು: ಪ್ರತಿ ವೋಟ್‌ ಅಳಿಸಲು ರೂ. 80 ಪಾವತಿ; ಬಿಜೆಪಿ ಮುಖಂಡ ಸುಭಾಷ್‌ ಗುತ್ತೇದಾರ್‌ ಕೈವಾಡ?

Most read

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮತಗಳ್ಳತನ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ ಐಟಿ) ಮತಗಳನ್ನು ಅಳಿಸಲು ನಡೆಸಿರುವ ಪ್ರಯತ್ನಗಳನ್ನು ಪತ್ತೆ ಹಚ್ಚಿದೆ. ಈ ಕೃತ್ಯದಲ್ಲಿ 6 ಮಂದಿ ಬಾಗಿಯಾಗಿರುವ ಶಂಕೆ ಇದೆ.

ಎಸ್‌ ಐಟಿ ಪ್ರಕಾರ ಡಿಸೆಂಬರ್‌ 2022 ರಿಂದ ಫೆಬ್ರವರಿ 2023ರ ಅವಧಿಯಲ್ಲಿ ಮತಗಳನ್ನು ಅಳಿಸಿ ಹಾಕುವಂತೆ 6,018 ಅರ್ಜಿಗಳನ್ನು ಸಲ್ಲಿಸಲಾಗಿದೆ. ಪ್ರತಿ ಮತವನ್ನು ಅಳಿಸಿ ಹಾಕಲು ರೂ. 80 ರಂತೆ ಒಟ್ಟು ರೂ. 4.8 ಲಕ್ಷ ನೀಡಿರುವುದನ್ನು ಪತ್ತೆ ಹಚ್ಚಿದೆ. ಈ ಕೃತ್ಯ ಖಾಸಗಿ ಡಾಟಾ ಸೆಂಟರ್‌ ನಲ್ಲಿ ನಡೆದಿದೆ. ಈ ಅರ್ಜಿಗಳೆಲ್ಲವೂ ಬಹುತೇಕ ನಕಲಿಯಾಗಿದ್ದವು ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಸುದ್ದಿಗೋಷ್ಠಿ ನಡೆಸಿ ಆಳಂದ ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿದೆ ಎಂದು ಸಾಕ್ಷ್ಯಗಳ ಸಹಿತ ಆಪಾದಿಸಿದ್ದರು. ನಂತರ ರಾಜ್ಯ ಸರ್ಕಾರ ಹಿರಿಯ ಐಪಿಎಸ್‌ ಅಧಿಕಾರಿ ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ಎಸ್‌ ಐಟಿ ರಚಿಸಿತ್ತು.

ಕಳೆದ ವಾರ ಎಸ್‌ ಐಟಿಯು ಬಿಜೆಪಿ ಮುಖಂಡ ಮಾಜಿ ಶಾಸಕ ಸುಭಾಷ್‌ ಗುತ್ಥೇದಾರ್‌ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಎಸ್‌ ಐಟಿಯು ಕಲಬುರಗಿ ನಗರದ ಡಾಟಾ ಸೆಂಟರ್‌ ನಲ್ಲಿ ಮತಗಳನ್ನು ಅಳಿಸಲು ಪ್ರಯತ್ನಗಳನ್ನು ನಡೆಸಿದ್ದನ್ನು ಪತ್ತೆ ಹಚ್ಚಿದೆ.

ಕಳೆದ ವಾರ ಸುಭಾಷ್‌ ಗುತ್ತೇದಾರ್‌, ಅವರ ಪುತ್ರರಾದ ಹರ್ಷಾನಂದ, ಸಂತೋಷ್‌ ಮತ್ತು ಚಾರ್ಟೆಡ್‌ ಅಕೌಂಟೆಂಟ್‌ ಮಲ್ಲಿಕಾರ್ಜುನ್‌ ಮಹಾಂತಗೋಳ್‌ ಅವರ ನಿವಾಸಗಳ ಮೇಲೂ ದಾಳಿ ನಡೆಸಲಾಗಿತ್ತು. ಈ ವೇಳೆ ಲ್ಯಾಪ್‌ ಟಾಪ್‌ ಮತ್ತು ಹಲವು ಮೊಬೈಲ್‌ ಪೋನ್‌ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಹಣವನ್ನು ವರ್ಗಾವಣೆ ಮಾಡಲಾದ ಮೂಲಗಳನ್ನು ಪತ್ತೆಹಚ್ಚಲು ಮುಂದಾಗಿದೆ.

ಚುನಾವಣಾ ಆಯೋಗದ ಪೋರ್ಟಲ್‌ ಬಳಸಿಕೊಂಡು ಇವರು ಹೇಗೆ ಮತಗಳನ್ನು ಡಿಲೀಟ್‌ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆಸಿದೆ. ಮತಗಳನ್ನು ಡಿಲೀಟ್‌ ಮಾಡಿರುವ ವಿಷಯ ಚುನಾವಣಾ ಯೋಗ ಅಥವಾ ಮತದಾರರ ಗಮನಕ್ಕೆ ಬಂದಿಲ್ಲ ಎನ್ನುವುದು ಕುತೂಹಲಕಾರಿ ಅಂಶವಾಗಿದೆ.

ಆದರೆ ಈ ಆರೋಪಗಳನ್ನು ಗುತ್ತೇದಾರ್‌ ಅಲ್ಲಗಳೆದಿದ್ದಾರೆ. ವೈಯಕ್ತಕ ಲಾಭ ಮತ್ತು ರಾಜಕೀಯ ಲಾಭಕ್ಕಾಗಿ ತಮ್ಮ ಎದುರಾಳಿ ಬಿ ಆರ್‌ ಪಾಟೀಲ್‌ ಈ ಆರೋಪಗಳನ್ನು ಮಾಡುತ್ತಿದ್ದಾರೆ. ಇವರು ಸಚಿವರಾಗಲು ಮತ್ತು ರಾಹುಲ್‌ ಗಾಂಧಿ ಅವರಿಗೆ ಹತ್ತಿರವಾಗಲು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪಾಟೀಲ್‌ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಸುಭಾಷ್ ಗುತ್ತೇದಾರ್ ವಿರುದ್ಧ ಸುಮಾರು 10,000 ಮತಗಳ ಅಂತರದಿಂದ ಗೆದ್ದಿದ್ದರು.

ತಮ್ಮ ಕ್ಷೇತ್ರದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಸುಮಾರು 6,994 ಕಾಂಗ್ರೆಸ್ ಮತಗಳನ್ನು ಅಳಿಸಿ ಹಾಕಲು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸಿಇಒ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ನಂತರ ಮತ ಅಳಿಸುವಿಕೆ ನಿಂತಿತ್ತು. ಒಂದು ವೇಳೆ ಈ ಪ್ರಮಾಣದ ಮತಗಳನ್ನು ಅಳಿಸಿದ್ದರೆ ನಾನು ಖಂಡಿತವಾಗಿಯೂ ಚುನಾವಣೆಯಲ್ಲಿ ಸೋಲುತ್ತಿದ್ದೆ ಎಂದು ಪಾಟೀಲರು ಹೇಳಿದ್ದರು.

ಸಿಐಡಿ ಮೂಲಗಳ ಪ್ರಕಾರ, ಆರು ಮಂದಿ ಶಂಕಿತರು ಮತಗಳನ್ನು ಅಳಿಸಲು VoIP (voice over internet protocol) ತಂತ್ರಜ್ಞಾನವನ್ನು ಬಳಸಿದ್ದಾರೆ. ಈ ಮಧ್ಯೆ, ಸುಭಾಷ್ ಗುತ್ತೇದಾರ್ ಅವರ ಮನೆಯ ಹತ್ತಿರ ಸುಟ್ಟುಹೋದ ಮತದಾರರ ದಾಖಲೆಗಳು ಪತ್ತೆಯಾಗಿವೆ.

More articles

Latest article