ಬೆಂಗಳೂರು: ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಬೆಂಗಳೂರಿನ ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ. ಏರ್ ಶೋ ನಡೆಯುತ್ತಿರುವುದರಿಂದ ಯಲಹಂಕದ 14 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಯಲಹಂಕ ವಾಯುನೆಲೆಯಲ್ಲಿ ವಿಮಾನಗಳ ರಿಹರ್ಸಲ್ ನಡೆಯುತ್ತಿರುವದರಿಂದ ಜನವರಿ 23 ರಿಂದಲೇ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಹಾಗೂ ಮಾಂಸದ ಉದ್ದಿಮೆಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ನಿಮಯ ಉಲ್ಲಂಘಿಸಿದರೆ ಬಿಬಿಎಂಪಿ ಕಾಯ್ದೆ- 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ -1937 ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯಲಹಂಕ ವಲಯ ಜಂಟಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಏಷ್ಯಾದ ಅತಿದೊಡ್ಡ ಏರೋ ಶೋದ 15 ನೇ ಆವೃತ್ತಿ ಏರೋ ಇಂಡಿಯಾ- 2025 ಫೆಬ್ರವರಿ 10 ರಿಂದ 14ರವರೆಗೆ ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ನಲ್ಲಿ ನಡೆಯಲಿದೆ. 1996ರಲ್ಲಿ ಪ್ರಾರಂಭವಾದ ಏಷ್ಯಾದ ಅತಿದೊಡ್ಡ ಏರೋ ಶೋ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುತ್ತದೆ. ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ದೇಶ ವಿದೇಶಗಳ ಗಣ್ಯರು, ಉದ್ದಿಮೆದಾರರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಅನೇಕ ಒಡಂಬಡಿಕೆಗಳು ನಡೆಯುತ್ತವೆ. ಈ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಬಂಡವಾಳವೂ ಹರಿದು ಬರುತ್ತದೆ.