Saturday, May 18, 2024

ರೈತರ ಬದಲು ಅದಾನಿ, ಅಂಬಾನಿ ಸಾಲ ಮನ್ನಾ ಮಾಡಲು ಬಿಜೆಪಿ ಸರ್ಕಾರ ಸಿದ್ದವಿದೆ : ರಾಹುಲ್ ಗಾಂಧಿ

Most read

ಬಿಹಾರದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎರಡನೇ ದಿನವಾದ ಮಂಗಳವಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರೈತರ ವಿಷಯವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯು ರೈತರಿಗೆ ಸಾಲ ಮನ್ನಾ ಮಾಡಲು ಸಾಧ್ಯವಙಾಗುತ್ತಿಲ್ಲ ಆದರೆ “ಅದಾನಿ ಮತ್ತು ಅಂಬಾನಿಯ ಸಾಲ ಮನ್ನಾ” ಮಾಡಲು ಸಿದ್ಧವಾಗಿದೆ ಎಂದು ಕಿಡಿಕಾರುದ್ದಾರೆ.

ಪೂರ್ಣಿಯಾದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. “ನಾನು ಸುಳ್ಳು ಭರವಸೆಗಳನ್ನು ನೀಡುತ್ತಿಲ್ಲ. ನಾವು ಸರ್ಕಾರದಲ್ಲಿದ್ದಾಗ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ. ನಾವೂ ಭೂಸ್ವಾಧೀನ ಮಸೂದೆ ಜಾರಿಗೆ ತಂದಿದ್ದೇವೆ ಆದರೆ ಬಿ.ಜೆ.ಪಿ ಅಧಿಕಾರಕ್ಕೆ ಬಂದ ನಂತರ ಆ ಮಸೂದೆಯನ್ನು ಹಳ್ಳ ಹಿಡಿಸಿದೆ. ಅವರದು ಮೂಲತಃ ರೈತ ವಿರೋಧಿ ಸರ್ಕಾರ ಎಂದುವಾಗ್ದಾಳಿ ಮಾಡಿದ್ದಾರೆ.

“ರೈತರು ದೇಶದ ಬೆನ್ನೆಲುಬು ಆದರೆ ಬಿಜೆಪಿ ಸರ್ಕಾರವು ಕೃಷಿ ಭೂಮಿಯನ್ನು ಅದಾನಿ ಮತ್ತು ಅಂಬಾನಿಗೆ ಅಗ್ಗದ ದರದಲ್ಲಿ ನೀಡಿ ಆ ಬೆನ್ನೆಲುಬನ್ನೆ ಮುರಿಯುತ್ತಿದ್ದಾರೆ. ಹೆಚ್ಚಿನ ಬೆಲೆಗೆ ರಸಗೊಬ್ಬರ ಮತ್ತು ಬೀಜಗಳನ್ನು ಖರೀದಿಸುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರು ರೈತ ವಿರೋಧಿ ಕಾನೂನನ್ನು ತರಲು ಯೋಜಿಸಿದ್ದರು ಆದರೆ ನೀವು ಆ ಕಾನೂನಿನ ವಿರುದ್ಧ ದೃಢವಾಗಿ ನಿಂತಿದ್ದೀರಿ. ನಿಮ್ಮ ಹೋರಾಟಕ್ಕೆ ಮಣಿದು ಸರ್ಕಾರವು ಅದನ್ನು ಹಿಂಪಡೆದುದೆ ಎಂದು ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಅದಾನಿ, ಅಂಬಾನಿ ಮತ್ತು ಮಲ್ಯ ಅವರ ಸಾಲ ಮನ್ನಾ ಮಾಡಲು ಸಿದ್ಧರಿದ್ದಾರೆ ಆದರೆ ರೈತರ ಸಾಲ ಮನ್ನಾ ಬಗ್ಗೆ ಯೋಚನೆ ಸಹ ಮಾಡಲ್ಲ. ನೀವು ಕಾರ್ಪೊರೇಟ್‌ಗಳ ಸಾಲ ಮನ್ನಾ ಮಾಡಲು ಸಾಧ್ಯವಾದರೆ ರೈತರ ಸಾಲ ಮನ್ನಾ ಏಕೆ ಮಾಡಬಾರದು? ನಾವು ಸರ್ಕಾರ ರಚಿಸಿದರೆ ಕೃಷಿ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡುತ್ತೇನೆ. ಸಂಸತ್ತಿನಲ್ಲೂ ಈ ಅಂಶಗಳನ್ನು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ.

More articles

Latest article