ನವದೆಹಲಿ: ಜೂನ್ 12ರಂದು ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಏಋ ಇಂಡಿಯಾ ಬೋಯಿಂಗ್ ಡ್ರೀಮ್ ಲೈನರ್ 787-8 ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಪ್ರಾಥಮಿಕ ತನಿಖಾ ವರದಿಯನ್ನು ಬಿಡುಗಡೆ ಮಾಡಿದೆ. ವಿಮಾನದ ಎಂಜಿನ್ ಗಳಿಗೆ ಇಂಧನ ಪೂರೈಕೆಯಾಗದೆ ಸ್ಥಗಿತಗೊಂಡಿರುವುದೇ ಪತನಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ
ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಸಹ ಪೈಲಟ್ ವಿಮಾನ ಚಲಾಯಿಸುತ್ತಿದ್ದು, ಕ್ಯಾಪ್ಟನ್ ಮೇಲ್ವಿಚಾರಣೆ ಮಾಡುತ್ತಿದ್ದರು. ಟೇಕಾಫ್ ಆದ ಕೆಲವೇ ಕ್ಷಣಗಳಿಗೆ ವಿಮಾನದ ಎರಡು ಎಂಜಿನ್ ಗಳಿಗೆ ಇಂಧನ ಪೂರೈಕೆಯಾಗುವುದು ಸ್ಥಗಿತಗೊಂಡಿದೆದೆ. ವಿಮಾನ ಪತನವಾಗುವ ಕೆಲವೇ ಸೆಕೆಂಡ್ ಗಳ ಮೊದಲು ‘ಮೇ ಡೇ’ ಕೂಗಿದ್ದಾರೆ. ಈ ಸಂದರ್ಭದಲ್ಲಿ ಪೈಲಟ್ ಗಳು ನಡೆಸಿದ ಸಂಭಾಷಣೆ ರೆಕಾರ್ಡ್ ಆಗಿದ್ದು, ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್ ಗೆ ಏಕೆ ಕಟ್ ಆಫ್ ಮಾಡಿದ್ದೀರಿ ಎಂದು ಕೇಳಿದ್ದಾರೆ. ಆಗ ಇನ್ನೊಬ್ಬ ಪೈಲಟ್ ನಾನು ಹಾಗೆ ಮಾಡಿಲ್ಲ ಎಂದು ಉತ್ತರಿಸಿದ್ದಾರೆ. 15 ಪುಟಗಳ ಈ ವರದಿಯಲ್ಲಿ ಹಲವು ಅಂಶಗಳು ಬಹಿರಂಗಗೊಂಡಿದ್ದು, ಬೋಯಿಂಗ್ 787-8 ವಿಮಾನ ನಿರ್ವಾಹಕರ ಮೇಲೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದೂ ಶಿಫಾರಸು ಮಾಡಿದೆ.
ಜೂನ್ 12ರಂದು ಈ ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು. ಈ ದುರಂತದಲ್ಲಿ 240 ಪ್ರಯಾಣಿಕರು, ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮತ್ತು ವಿಮಾನ ಬಿದ್ದ ಕಟ್ಟಡದಲ್ಲಿದ್ದ ವೈದ್ಯರೂ ಸೇರಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ–171 ವಿಮಾನವು ಅಹಮದಾಬಾದ್‌ನ ಮೇಘನಿನಗರದ ವೈದ್ಯಕೀಯ ಕಾಲೇಜಿನ ಕಟ್ಟಡದ ಮೇಲೆ ಅಪ್ಪಳಿಸಿತ್ತು. ದುರಂತದಲ್ಲಿ ಒಬ್ಬರು ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದರು.
ತನಿಖೆಗೆ ಸಂಪೂರ್ಣ ಸಹಕಾರ, ಬೋಯಿಂಗ್ ಮುಖ್ಯಸ್ಥ:
ವಿಮಾನ ದುರಂತಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ವರದಿ ಬಿಡುಗಡೆಯಾದ ನಂತರ ಪ್ರತಿಕ್ರಿಯೆ ನೀಡಿರುವ ವಿಮಾನ ತಯಾರಕ ಕಂಪನಿ ಬೋಯಿಂಗ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಬೋಯಿಂಗ್ ಮುಖ್ಯಸ್ಥ ಕೆಲ್ಲಿ ಆರ್ಟ್‌ಬರ್ಗ್, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಏರ್ ಇಂಡಿಯಾ ಮುಖ್ಯಸ್ಥ ಎನ್. ಚಂದ್ರಶೇಖರನ್ ಅವರೊಂದಿಗೆ ಮಾತನಾಡಿದ್ದು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದೇವೆ. ಭಾರತದ ವಿಮಾನ ಅಪಘಾತ ತನಿಖಾ ಸಂಸ್ಥೆ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಗೂ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.