ನಲವತ್ತೈವತ್ತು ಕೋಟಿ ಜನ ಒಂದೂವರೆ ತಿಂಗಳ ಅವಧಿಯಲ್ಲಿ ನೆರೆದ ಮಹಾಜಾತ್ರೆಯ ಬಳಿಕ ಅಲ್ಲಿಯ ಊರು, ಜನ, ನದಿ, ನೆಲಗಳ ಕಾಣಬೇಕೆಂದು, ಅಕ್ಬರ್ ಕಟ್ಟುವಾಗ ಇಲಾಹಾಬಾದ್ ಆಗಿದ್ದದ್ದು ನಂತರ ಅಲಹಾಬಾದ್ ಆಗಿ ಈಗ ಪ್ರಯಾಗರಾಜ್ ಆಗಿರುವ ಊರಿಗೆ ಹೋದಾಗ ಅಲ್ಲಿ ಕಣ್ಣಿಗೆ ಕಂಡ, ಬೊಗಸೆಗೆ ದಕ್ಕಿದ ಅನುಭವಗಳನ್ನು ನವಿರಾಗಿ ಕಟ್ಟಿಕೊಟ್ಟಿದ್ದಾರೆ ಡಾ. ಎಚ್ ಎಸ್ ಅನುಪಮಾ. ಮೂರು ಕಂತುಗಳ ಈ ಲೇಖನದ ಎರಡನೆಯ ಕಂತು ಇಲ್ಲಿದೆ.
ಸಂಗಮದ ಬಳಿಯೇ ಇರುವ ಅಕ್ಬರನ ಕಾಲದ ಭಾರೀ ಕೋಟೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧವಿದ್ದದ್ದು ತೆರವುಗೊಂಡಿತ್ತು. ನದಿಯೋ ನಾನೋ ಎನ್ನುವಂತೆ ನಿಂತ ಕೋಟೆ ನಮ್ಮನ್ನು ಕರೆಯಿತು. ಬ್ರಿಟಿಷರ ಸೇನಾ ಪ್ರದೇಶಗಳಾಗಿದ್ದ ದೆಹಲಿ, ಆಗ್ರಾ ಕೋಟೆಗಳು ಸ್ವಾತಂತ್ರ್ಯಾನಂತರ ಸಾರ್ವಜನಿಕರಿಗೆ ತೆರೆದುಕೊಂಡರೆ ಅಲಹಾಬಾದ್ ಕೋಟೆ ಮುಚ್ಚಿಕೊಂಡೇ ಉಳಿದಿದೆ. ಕಾರಣ ಅದರೊಳಗೆ ಈಗ ಭಾರತೀಯ ಸೇನೆಯ ಶಸ್ತ್ರಾಸ್ತ್ರ ತಯಾರಿ ಘಟಕ ಮತ್ತು ಸಂಗ್ರಹಾಗಾರವಿದೆ. ಎಂದೇ ಅನುಮತಿ ಪಡೆದು ಒಳಗೆ ಹೋಗಬೇಕಾಗುತ್ತದೆ.
ಸಾಧಾರಣವಾಗಿ ಯಾವುದೇ ಐತಿಹಾಸಿಕ/ಪುರಾತತ್ವ ತಾಣಕ್ಕೆ ಹೋದರೆ ಮಾಹಿತಿ ಫಲಕ ಹೊರಗೆ ಸ್ವಾಗತಿಸುತ್ತದೆ. ಅದಕ್ಕೆ ಈ ಕೋಟೆ ಅಪವಾದ. ಬಿಸಿಲು ಮಚ್ಚಿನ ಕೆಳಗೆ ನಡೆದು ಕೋಟೆ ಪ್ರವೇಶಿಸಿದರೆ ಉಬ್ಬುಶಿಲ್ಪದ ಫಲಕಗಳು ಎದುರಾದವು. ಅವೆಲ್ಲ ಪುರಾಣ ಕತೆಗಳ ಉಬ್ಬುಶಿಲ್ಪಗಳು. ಕೋಟೆಯ ಬಗೆಗೆ, ಅದನ್ನು ಕಟ್ಟಿಸಿದವರ ಬಗೆಗೆ ಏನೂ ಮಾಹಿತಿಯಿರಲಿಲ್ಲ. ಕೋಟೆ ಪ್ರವೇಶಿಸಿದ ಮೇಲೆ ಬಲಕ್ಕೆ ಪಾತಾಳ ಮಂದಿರ್, ಎಡಕ್ಕೆ ಅಕ್ಷಯವಟ. ಪಾತಾಳ ಮಂದಿರ್ ಗೆ ಹೋಗುವ ದಾರಿಯಲ್ಲಿ ಎರಡೂ ಪಕ್ಕ ಹತ್ತಾಳೆತ್ತರದ ವಿಷ್ಣುವಿನ ದಶಾವತಾರದ ಚಿತ್ರಗಳನ್ನು ಬಿಡಿಸಿದ್ದರು. ಬುದ್ಧ ದಶಾವತಾರದಲ್ಲಿ ಒಬ್ಬನಾಗಿ ಸೇರಿಹೋಗಿದ್ದ. ಒಳಗೆ ಸಣ್ಣ ಗೋಪುರದಂತಹ ಗುಡಿಯ ಬಳಿ ಹುಡುಗಿಯೊಬ್ಬಳು ಭಕ್ತಾದಿಗಳಿಗೆ ತೀರ್ಥ ಕೊಟ್ಟು ಹಣೆಗೆ ಗಂಧ-ಕುಂಕುಮ ಹಚ್ಚಿ ಪ್ರಸಾದ ನೀಡುತ್ತಿದ್ದಳು. ಪಾತಾಳ ಮಂದಿರದ ಪ್ರವೇಶ ದ್ವಾರದ ಮೆಟ್ಟಿಲಿಳಿದರೆ ನೆಲಮಾಳಿಗೆಯಲ್ಲಿ ಒಂದು ಬಾವಿಯಿದ್ದು ಅದರಲ್ಲಿರುವ ನೀರೇ ಸರಸ್ವತಿ ನದಿ ಎಂದೂ, ಅದು ಎಲ್ಲಿಂದಲೋ ಗುಪ್ತಗಾಮಿನಿಯಾಗಿ ಹರಿದು ಬಂದು ಇಲ್ಲಿ ಪ್ರಕಟಗೊಂಡು ತ್ರಿವೇಣಿ ಸಂಗಮ ತಾಣದಲ್ಲಿ ಮೇಲೇಳುತ್ತದೆಂದೂ ನಾಲ್ಕಾರು ಪುರೋಹಿತರು ಹೇಳುತ್ತಿದ್ದರು. ಅವರು ಬಣ್ಣಿಸುವುದನ್ನು ಭಕ್ತಾದಿಗಳು ಕೈಮುಗಿದು ಕೇಳುತ್ತಿದ್ದರು. ಮಹಾನದಿ ಯಮುನೆಯ ತಟದಲ್ಲಿ ಒಂದು ಬಾವಿ ತೆಗೆದರೆ ನೀರು ತುಂಬಲು ಸರಸ್ವತಿ ನದಿ ಬರಬೇಕೇ? ಕೇಳುತ್ತಿದ್ದ ಜನ ಅವರು ಹೇಳುವುದನ್ನೇ ನಂಬಿದಂತೆ ಕಂಡರು.
ಅಲ್ಲಿಂದ ಹೊರಬಂದು ಮತ್ತೊಂದು ದಿಕ್ಕಿಗೆ ಹೋದೆವು. ಲೋಹದ ಕಂಬಿಗಳ ಹಿಂದೆ ಸಂರಕ್ಷಿಸಲ್ಪಟ್ಟ ಹಳೆಯ ಆಲದ ಮರ ಕಾಣಿಸಿತು. ಅದು `ಅಕ್ಷಯ ವಟ’. ಪ್ರಯಾಗಕ್ಕೆ ಬಂದಿದ್ದ ಹ್ಯುಯೆನ್ ತ್ಸಾಂಗನು ಸ್ವರ್ಗದ ಅಪೇಕ್ಷೆಗೆ ಕೆಲವರು `ಅಕ್ಷಯವಟ’ ಎಂಬ ವೃಕ್ಷದಿಂದ ಹಾರಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ದಾಖಲಿಸಿದನು. ಅದಕ್ಕೆಂದೋ, ರೆಂಬೆಕೊಂಬೆ ಮುರಿದಾರು ಎಂದೋ ಅಂತೂ ಮರವನ್ನು ಬಂದೋಬಸ್ತು ಮಾಡಿದ್ದರು. ಅದಕ್ಕೆ ಜನ ಕೈ ಮುಗಿದು, ನಮಸ್ಕರಿಸಿ ಸಾಗುತ್ತಿದ್ದರು. ಅಲ್ಲಿ ಬರೆಸಿದ ಫಲಕದ ಮಾಹಿತಿ ಹೀಗಿತ್ತು: `ಅಕ್ಷಯವಟದ ಅರ್ಥ `ಅವಿನಾಶಿ ವಟ ವೃಕ್ಷ’ ಎಂದು. ಇದು ಧಾರ್ಮಿಕ, ಪೌರಾಣಿಕ, ಐತಿಹಾಸಿಕ ಮಹತ್ವದ ಸ್ಥಳವಾಗಿದೆ. ಬ್ರಹ್ಮ, ವಿಷ್ಣು, ಶಿವರು ಸೃಷ್ಟಿಯ ಸ್ಥಿರತೆಯ ಪ್ರತೀಕವಾಗಿ ಇದನ್ನು ಸ್ಥಾಪಿಸಿದರು ಎಂದು ಮಾನ್ಯ ಮಾಡಲಾಗಿದೆ. ಪ್ರಳಯಕಾಲದಲ್ಲೂ ಇದು ನಾಶವಾಗುವುದಿಲ್ಲ. ಇಲ್ಲಿಯೇ ನಾರಾಯಣ ವಿಷ್ಣುವು ಮಾರ್ಕಂಡೇಯ ಮಹರ್ಷಿಗೆ ಬಾಲಮುಕುಂದನ ರೂಪದಲ್ಲಿ ದರ್ಶನ ನೀಡಿದನು. ರಾಮ, ಸೀತೆ, ಲಕ್ಷ್ಮಣರೂ ವನವಾಸದ ಬಳಿಕ ಆ ಮರಕ್ಕೆ ಪೂಜೆ ಸಲ್ಲಿಸಿದರು. ಜೈನ ತೀರ್ಥಂಕರ ರಿಷಭದೇವನಿಗೆ ಇಲ್ಲಿಯೇ ಕೈವಲ್ಯಜ್ಞಾನ ಪ್ರಾಪ್ತಿಯಾಯಿತು. ಅಕ್ಷಯವಟದ ದರ್ಶನದಿಂದ ಮೋಕ್ಷ ಪ್ರಾಪ್ತಿಯ ಮಾರ್ಗ ಸುಗಮವಾಗುವುದು..’
ಇತಿಹಾಸಕ್ಕಿಂತ ಪುರಾಣವೇ ಮೇಲುಗೈಯಾಗಿರುವ ಭಾರತ!
ಕೋಟೆಯಿಂದ ಹೊರಬಂದಾಗ ಪ್ರವೇಶ ದ್ವಾರದಲ್ಲೇ ಅರವತ್ತೆಪ್ಪತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ತಲೆ ತಗ್ಗಿಸಿ, ಎಡಗೈಯಲ್ಲಿ ಪೆನ್ನು ಹಿಡಿದು ಸಣ್ಣಗೆ ದುಂಡನೆಯ ಅಕ್ಷರದಲ್ಲಿ `ಶ್ರೀರಾಮ ಜಯರಾಮ ಜಯಜಯರಾಮ’ ಎಂದು ಬರೆಯುತ್ತಿದ್ದರು.
ಯಾಕೆ ಬರೆಯುತ್ತಿದ್ದಾರೆ?
`ಅಯೋಧ್ಯೆಗೆ ಕಳಿಸಲು.’
ಯಾವಾಗಿನಿಂದ ಬರೆಯುತ್ತಿದ್ದಾರೆ?
`ಇದುವರೆಗೆ ನೂರಾರು ಪುಸ್ತಕ ತುಂಬಿಸಿ ಕಳಿಸಿದ್ದಾರೆ.’
ಏಕೆ ಕಳಿಸುವುದು?
`ನಾಮಸ್ಮರಣೆ ಮಾಡಿದರೆ ಎಲ್ಲ ಕಷ್ಟಗಳು ಪರಿಹಾರ ಆಗುತ್ತವೆ’
ಆದರೂ ಇಲ್ಲೇ ಕಾಣುವಂತೆ ಎಷ್ಟೊಂದು ಜನ ಕಷ್ಟದಲ್ಲಿದ್ದಾರೆ, ಬಡತನದಲ್ಲಿದ್ದಾರಲ್ಲ?
`ಅವರು ಶ್ರದ್ಧೆಯಿಂದ ನಾಮಸ್ಮರಣೆ ಮಾಡಲ್ಲ, ಅವರ ಕರ್ಮ. ಅದಕ್ಕೆ ಹಾಗಿದ್ದಾರೆ’.
ಹೇಳಲೇನಿದೆ? ಕೇಳಲೇನಿದೆ? ಹೊರಟೆವು.
ಕೋಟೆಯ ಒಳಗೆ ಅತಿವಿಶಿಷ್ಟ ಸ್ತಂಭವೊಂದಿದೆ. ಅದು ಕ್ರಿ. ಪೂ. ಮೂರನೆಯ ಶತಮಾನದ ಅಶೋಕನ ಸ್ತಂಭ ಶಾಸನ. ಅದು ಜೇಮ್ಸ್ ಪ್ರಿನ್ಸೆಪ್ ಎಂಬ ಶಾಸನತಜ್ಞ ಪುರಾತತ್ವ ಶಾಸ್ತ್ರಜ್ಞ ಬ್ರಾಹ್ಮಿ ಲಿಪಿಯನ್ನು ಓದಲು ಸಹಾಯ ಮಾಡಿದ ಶಾಸನ. ಅದೇ ಸ್ತಂಭದ ಮೇಲೆ ಅಶೋಕನ ರಾಣಿಯ ಶಾಸನ, ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಸಮುದ್ರಗುಪ್ತ ಬರೆಸಿದ ಶಾಸನ, ಮೊಘಲ್ ದೊರೆ ಜಹಾಂಗೀರ್ ಮತ್ತು ಅಕ್ಬರನ ಕಾಲದ ಬೀರಬಲ್ ಬರೆಸಿದ ಮಾಘಮೇಳ ಕುರಿತ ಶಾಸನವೂ ಇದೆ.
ಸಾಮ್ರಾಟ ಅಶೋಕ ಹೀಗೆ ಬರೆಸಿದ್ದಾನೆ: `ದೇವನಾಂಪಿಯನು ಕೌಶಾಂಬಿ, ಪಾಟಲಿಪುತ್ರದ ಅಧಿಕಾರಿಗಳಿಗೆ ಹೀಗೆ ನಿರ್ದೇಶಿಸಿದ್ದಾನೆ: ಸಂಘದ ಮಾರ್ಗ ಬಿಟ್ಟು ಅತ್ತಿತ್ತ ಯಾರೂ ಚಲಿಸಬಾರದು. ಭಿಕ್ಕು ಅಥವಾ ಭಿಕ್ಕುಣಿ ಸಂಘಗಳು ಒಗ್ಗಟ್ಟಾಗಿರಬೇಕು ಮತ್ತು ಈ ಒಗ್ಗಟ್ಟು ನನ್ನ ಮಕ್ಕಳು, ಮರಿಮಕ್ಕಳ ಕಾಲಕ್ಕೂ, ಸೂರ್ಯಚಂದ್ರರಿರುವವರೆಗೂ ಇರಬೇಕು. ಭಿಕ್ಕು ಅಥವಾ ಭಿಕ್ಕುಣಿ ಯಾರೇ ಇರಲಿ, ಸಂಘದ ಐಕ್ಯತೆಯನ್ನು ಒಡೆದರೆ ಅವರು ನಂತರ ಶ್ವೇತವಸ್ತ್ರ ಉಡಬೇಕಾಗುತ್ತದೆ. ಸಂಘದವರ ವಸತಿಗಿಂತ ಬೇರೆಯೇ ಆಗಿ ವಾಸಿಸಬೇಕಾಗುತ್ತದೆ. ಯಾಕೆಂದರೆ ನನ್ನ ಅಪೇಕ್ಷೆ ಸಂಘವು ಒಗ್ಗೂಡಿರಬೇಕು ಮತ್ತು ದೀರ್ಘಕಾಲ ಇರಬೇಕು ಎನ್ನುವುದಾಗಿದೆ. ಇದನ್ನು ಭಿಕ್ಕು ಮತ್ತು ಭಿಕ್ಕುಣಿ ಸಂಘಗಳಿಗೆ ತಿಳಿಸಿ. ಒಂದು ಪ್ರತಿಯನ್ನು ನಿಮ್ಮ ಸಭೆ ನಡೆಯುವಲ್ಲಿಟ್ಟುಕೊಳ್ಳಿ. ಸಾಮಾನ್ಯ ಉಪಾಸಕರಿಗೂ ಕೊಡಿ. ಈ ಆದೇಶವನ್ನು ಪಾಲಿಸಲು ನಿಯಮಿತವಾಗಿ ಉಪೋಸತ ದಿನಗಳಿಗೆ ಹೋಗಬೇಕಿರುವ ಅಧಿಕಾರಿಗಳಿಗೂ ಇದು ಅನ್ವಯಿಸುತ್ತದೆ. ಈ ಪಠ್ಯ ಹೇಗಿದೆಯೋ ಹಾಗೆ ಸುತ್ತೋಲೆ ಕಳಿಸಿ ಪ್ರಚಾರ ಮಾಡಬೇಕು. ಅಷ್ಟೇ ಅಲ್ಲ, ನಮ್ಮ ಅಧೀನದಲ್ಲಿರುವ ಕೋಟೆ, ನಗರಗಳಿಗೂ ಸುತ್ತೋಲೆ ಕಳಿಸಿ ನೀವಿದನ್ನು ಪ್ರಚಾರ ಮಾಡಬೇಕು..’
ರಾಜಕುವರ ತಿವಲನ ತಾಯಿ, ಅಶೋಕನ ರಾಣಿ ಕರುವಕಿಯ ದಾನ ಕಾರ್ಯಗಳ ಬಗೆಗೆ ತಿಳಿಸುವ ಒಂದು ಶಾಸನವೂ ಸ್ತಂಭದ ಮೇಲೆ ಬರೆಯಲ್ಪಟ್ಟಿದೆ. `ದೇವನಾಂಪ್ರಿಯನ ಆಜ್ಞೆಯ ಮೇರೆಗೆ, ಎಲ್ಲೆಡೆಯ ಅಧಿಕಾರ ವರ್ಗಕ್ಕೆ ತಿಳಿಸಬೇಕಾದದ್ದು ಏನೆಂದರೆ, ಎರಡನೆಯ ರಾಣಿಯ ದಾನಕಾಣಿಕೆಯು ಮಾವಿನ ತೋಪು, ವಿಹಾರ, ದಾನ ಸಂಸ್ಥೆ, ಅಥವಾ ಇನ್ಯಾವುದೇ ರೂಪದಲ್ಲಿದ್ದರೂ ಅವನ್ನು ರಾಣಿಯ ಲೆಕ್ಕದಲ್ಲೇ ಪರಿಗಣಿಸಬೇಕು: ಎರಡನೆಯ ರಾಣಿ, ತಿವಲನ ತಾಯಿ, ಕರುವಕಿ.’
ಸ್ತಂಭದ ಮೇಲೆ ನಾಲ್ಕನೆಯ ಶತಮಾನದ ಗುಪ್ತ ಸಾಮ್ರಾಟ ಸಮುದ್ರಗುಪ್ತನ ಮೂವತ್ಮೂರು ಸಾಲುಗಳಷ್ಟು ದೀರ್ಘವಾದ `ಪ್ರಯಾಗ ಪ್ರಶಸ್ತಿ’ ಶಾಸನವಿದೆ. ಅಶೋಕನ ಶಾಸನ ಮುಗಿದದ್ದೇ ಅದು ಆರಂಭವಾಗುತ್ತದೆ. ಗುಪ್ತರ ಕಾಲದ ಬಗೆಗೆ ತಿಳಿಸುವ ಆ ಶಿಲಾಶಾಸನವನ್ನು ಸಮುದ್ರಗುಪ್ತನ ಮಂತ್ರಿ, ಕವಿ ಹರಿಶೇಣನು ಸಂಸ್ಕೃತದಲ್ಲಿ ರಚಿಸಿದ ಗುಪ್ತರ ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗಿದೆ. ಕಾವ್ಯಾತ್ಮಕವಾಗಿ ವೈವಿಧ್ಯಮಯವಾಗಿ ಸಮುದ್ರಗುಪ್ತನನ್ನು ಸ್ತುತಿಸುವ ಶಾಸನವು ರಾಜನ ರಾಜಕೀಯ ಮತ್ತು ಸೇನಾ ಸಾಧನೆಗಳ ಬಗೆಗೆ ತಿಳಿಸುತ್ತದೆ. ದಕ್ಷಿಣದೆಡೆಗೆ ರಾಜ್ಯ ವಿಸ್ತಾರ ಮಾಡಿದ್ದನ್ನು ಬಣ್ಣಿಸುತ್ತದೆ. ಗುಪ್ತ ಸಾಮ್ರಾಜ್ಯ, ಅದರ ನೆರೆಹೊರೆಯ ಬಗೆಗೆ ತಿಳಿಸುತ್ತಲೇ ಅಂದಿನ ಭೌಗೋಳಿಕ, ರಾಜಕೀಯ ವಾಸ್ತವಗಳನ್ನು ತಿಳಿಸುವ ಪ್ರಮುಖ ಆಕರವಾಗಿದೆ. ಅಶೋಕನ ಆಶಯಗಳಿಗೆ ವಿರುದ್ಧ ಆಶಯಗಳ ಹಿಂಸೆ, ಯುದ್ಧ, ಸಾಮ್ರಾಜ್ಯ ವಿಸ್ತಾರ, ವಿಜಯಗಳ ವಿವರ ಅದರಲ್ಲಿದೆ.
ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ರಚಿಸಲ್ಪಟ್ಟ ಬೀರಬರಲ್ಲನ ಶಾಸನವೂ ಅಲ್ಲಿದೆ. `ಸಂವತ್ 1632, ಶಕವರ್ಷ 1493, ಮಾಘ ಕೃಷ್ಣ ಪಕ್ಷ ಪಂಚಮಿ, ಸೋಮವಾರ ಗಂಗಾದಾಸನ ಮಗ ಮಹಾರಾಜ ಬೀರಬಲ್ಲನು ತೀರ್ಥರಾಜ ಪ್ರಯಾಗಕ್ಕೆ ಪವಿತ್ರ ಯಾತ್ರೆಯನ್ನು ಮಾಡಿದನು’ ಎಂದು ಬರೆಯಲಾಗಿದೆ. ಅದಲ್ಲದೆ 1319, 1373ರ ನಡುವಿನ ಹಲವು ಸಣ್ಣಪುಟ್ಟ ಬರವಣಿಗೆಗಳನ್ನೂ ಸ್ತಂಭವು ಕಂಡಿದೆ. ಸ್ತಂಭದ ಮೇಲೆ ಬರಹ ಮಾಡಿರುವ ರೀತಿ, ಜಾಗ, ಸಮಯವನ್ನು ಗಮನಿಸಿದರೆ ಮಾಘಮೇಳದ ಸಮಯದಲ್ಲಿ ಪ್ರಯಾಗಕ್ಕೆ ಬರುತ್ತಿದ್ದ ಯಾತ್ರಾರ್ಥಿಗಳು ಕಡೆಸಿರಬಹುದು; ಅದು ಕೆಲಕಾಲ ಉರುಳಿಬಿದ್ದಿರಬಹುದೆಂದು ಪುರಾತತ್ವ ಶಾಸ್ತ್ರಜ್ಞರು ಗುರುತಿಸಿದ್ದಾರೆ.
ಅಶೋಕನ ಶಾಸನದ ಮೇಲೇ ಏಳು ಸಾಲುಗಳ ರಾಜಕುಮಾರ ಸಲೀಮನ ಪರ್ಷಿಯನ್ ಪರಂಪರೆಯ ಹಿನ್ನೆಲೆಯನ್ನು ತಿಳಿಸುತ್ತ ಬರೆಸಿದ ಶಾಸನವಿದೆ. ಆ ಸ್ತಂಭದ ಮೇಲೆ ಅಕ್ಷರ ರೂಪದಲ್ಲಿ ಹೆಸರು ಕೆತ್ತಿದರೆ ರಾಜತ್ವದ ಅರ್ಹತೆ ಸಿಂಧು ಎಂದುಕೊಂಡಂತೆ ಮೊಘಲ್ ದೊರೆ ಜಹಾಂಗೀರ್ ಆಗುವ ಮೊದಲು ರಾಜಕುಮಾರ ಶಾ ಸಲೀಂ ಬರೆಸಿದ ಶಾಸನ ಅದಾಗಿದೆ.
ಇತಿಹಾಸ ತಜ್ಞೆ ರೋಮಿಲಾ ಥಾಪರ್ ಹೇಳುವಂತೆ ಅದು ವಾರಣಾಸಿ ಬಳಿಯ ಚುನಾರ್‌ನ ಕಲ್ಲುಗಣಿಯಿಂದ ರೂಪಿಸಲಾದ ಸ್ತಂಭ. ಅಶೋಕನ ಬಹುತೇಕ ಸ್ಮಾರಕ, ಸ್ತಂಭಗಳಂತೆ ಗಂಗಾನದಿಯ ದಡದ ಚುನಾರ್ ನಿಂದಲೇ ಮರಳುಗಲ್ಲಿನ ಶಿಲೆಯನ್ನು ನದಿಯ ಮೂಲಕ ತಂದಿದ್ದಾರೆ. ಮೊದಲು ಅಲಹಾಬಾದಿನಿಂದ ಐವತ್ತಾರು ಕಿಲೋಮೀಟರ್ ದೂರದಲ್ಲಿರುವ, ಯಮುನಾ ದಂಡೆಯಲ್ಲಿರುವ ಕೌಶಾಂಬಿಯಲ್ಲಿದ್ದದ್ದು ನಂತರ ನದಿಯ ಮೂಲಕ ಅಲಹಾಬಾದಿಗೆ ವರ್ಗಾವಣೆಯಾಗಿದೆ. (ಕೆಲವರು ಈ ಸ್ಥಾನಪಲ್ಲಟ ಥಿಯರಿ ನಿರಾಕರಿಸುತ್ತಾರೆ.) ಅದರ ಮೇಲೆ ಒಂದು ಸಿಂಹದ ಮುಖವಿತ್ತು. ಕಾಲಾನಂತರದಲ್ಲಿ ಅದು ನಾಶವಾಗಿ ಕೇವಲ ಸ್ತಂಭವೊಂದು ನಿಂತಿತು. ಹದಿಮೂರನೆಯ ಶತಮಾನದ ವೇಳೆಗೆ ಸ್ತಂಭ ನೆಲಕ್ಕೆ ಬಿತ್ತು. ನಂತರ ಅದನ್ನು ನಿಲ್ಲಿಸುವುದು, ಬೀಳಿಸುವುದು ನಡೆದೇ ಇದೆ. ಸಿಂಹಮುಖವಿದ್ದ ಜಾಗದಲ್ಲಿ ಶಂಕುವಿನಾಕೃತಿಯ ಗೋಲವಿಟ್ಟು, 1605ರಲ್ಲಿ ಜಹಾಂಗೀರನು ಅದನ್ನು ನಿಲ್ಲಿಸಿದನು. 1798ರಲ್ಲಿ ಬ್ರಿಟಿಷ್ ಜನರಲ್ ಒಬ್ಬ ಮತ್ತೆ ಕೆಡವಿದ. 1838ರಲ್ಲಿ ಕ್ಯಾಪ್ಟನ್ ಸ್ಮಿತ್ ತಾನೇ ಸಿಂಹಮುಖವನ್ನು ವಿನ್ಯಾಸಗೊಳಿಸಿ ಅದರ ಮೇಲಿಟ್ಟು ನಿಲ್ಲಿಸಿದ.
ಅಂತೂ ಮೂವತ್ತೈದು ಅಡಿ ಎತ್ತರದ, ಅಜಮಾಸು ಒಂದು ಮೀಟರ್ ವ್ಯಾಸದ ಕೆಂಪುಕಲ್ಲಿನ ಸ್ತಂಭ ಇಷ್ಟೊಂದು ಇತಿಹಾಸವನ್ನು ತನ್ನೊಳಗೆ ಅಡಗಿಸಿಕೊಂಡು ನಿಂತಿರುವುದೇ ಒಂದು ವಿಸ್ಮಯವಾಗಿದೆ.
ಡಾ. ಎಚ್ ಎಸ್ ಅನುಪಮಾ
ವೈದ್ಯೆ, ಸಾಹಿತಿ
ಇದನ್ನು ಓದಿದ್ದೀರಾ – ಮಹಾಜಾತ್ರೆಯ ನಂತರದ ಚಿತ್ರಗಳು | ಭಾಗ 1