ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದ ವೋಲ್ವೋ ಬಸ್ ಅಪಘಾತದಲ್ಲಿ 20 ಪ್ರಯಾಣಿಕರು ಅಸುನೀಗಿದ ಹಿನ್ನೆಲೆಯಲ್ಲಿ, ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಎಲ್ಲ ಬಸ್ ಗಳ ಸುರಕ್ಷತೆ ಕುರಿತು ಪರಿಶೀಲನೆ ನಡೆಸುವಂತೆ ಸಚಿವ ರಾಮಲಿಂಗಾರೆಡ್ಡಿ ಆಯಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಡಿಯಲ್ಲಿ ಕಾರ್ಯಾಚರಣೆ ನಡೆಸುವ ಬಸ್‌ಗಳ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಅವರು, ಎಲ್ಲ ಸಾರಿಗೆ ನಿಗಮದ ಬಸ್ ಗಳಲ್ಲಿ ಸುರಕ್ಷತಾ ವ್ಯವಸ್ಥೆ, ಬಸ್‌ಗಳ ನವೀಕರಣ ಮತ್ತು ನಿರ್ವಹಣೆ ಕುರಿತು ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಬಸ್‌ಗಳಲ್ಲಿ ವಾಣಿಜ್ಯ ಸರಕುಗಳು ಅಥವಾ ಸಾಮಾನುಗಳ ಜತೆ ಸುಲಭವಾಗಿ ಉರಿಯುವ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಎಲ್ಲ ಹವಾನಿಯಂತ್ರಿತ ಬಸ್ ಗಳಲ್ಲಿ ಸುತ್ತಿಗೆಗಳನ್ನು ಅಳವಡಿಸಬೇಕು ಮತ್ತು ಲಗೇಜ್ ವಿಭಾಗದ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಮಲಗಲು ಅಥವಾ ವಿಶ್ರಾಂತಿ ಪಡೆಯಲು ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಸ್ಸುಗಳ ನವೀಕರಣ ಮತ್ತು ನಿರ್ವಹಣೆ ಕುರಿತೂ ಪರಿಶೀಲನೆ ನಡೆಸಬೇಕು. ಈ ಅಂಶಗಳಲ್ಲಿ ಯಾವುದೇ ಲೋಪಗಳು ಕಂಡುಬಂದರೆ ಕೂಡಲೇ ಸರಿಪಡಿಸಬೇಕು. ಸರ್ಕಾರಕ್ಕೆ ಪ್ರಯಾಣಿಕರ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ. ಆದ್ದರಿಂದ, ಬಸ್‌ಗಳ ಸುರಕ್ಷತೆ ಪರಿಶೀಲನೆ ನಡೆಸಲು ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲು ತಂಡಗಳನ್ನು ತಕ್ಷಣವೇ ರಚಿಸುವಂತೆ ನಿರ್ದೇಶಿಸಿದ್ದೇನೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

