ಪ್ರವಾಹಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ: ಪರಿಹಾರ ಕಾಮಗಾರಿ ಕೈಗೊಳ್ಳಲು ಸೂಚನೆ

Most read

ಬೀದರ್‌\ ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಲಬುರಗಿ, ಬೀದರ್, ಯಾದಗಿರಿ ಹಾಗು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಪ್ರದೆಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಸಚಿವರಾದ ಎಂ.ಬಿ‌.ಪಾಟೀಲ್, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಮೊದಲಾದವರು ಉಪಸ್ಥಿತರಿದ್ದರು.

ವೈಮಾನಿಕ ಸಮೀಕ್ಷೆ ಬಳಿಕ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಾಲ್ಕು ಜಿಲ್ಲೆಗಳ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಯಿತು.

ಸೆಪ್ಟೆಂಬರ್ ಮೊದಲ ವಾರದವರೆಗೂ ಆಗಿರುವ ಬೆಳೆ ಹಾನಿ ಮತ್ತು ನಂತರ ಆಗಿರುವ ಎರಡೂ ಬೆಳೆ ಹಾನಿಯ ಸಮೀಕ್ಷೆಯನ್ನೂ ಮುಗಿಸಿ ಎಲ್ಲರಿಗೂ ಒಟ್ಟಿಗೇ ಪರಿಹಾರ ಕೊಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲವಾದಲ್ಲಿ ಕೆಲವರಿಗೆ ಮಾತ್ರ ಪರಿಹಾರ ಬಂದಿದೆ, ನಮಗೆ ಬಂದಿಲ್ಲ ಎನ್ನುವ ಗೊಂದಲ, ಅನುಮಾನಗಳು ಶುರುವಾಗಬಹುದು. ಈ ಕಾರಣಕ್ಕೇ ಎಲ್ಲರಿಗೂ ಒಟ್ಟಿಗೇ ಪರಿಹಾರ ಒದಗಿಸುವುದು ಸೂಕ್ತವಾಗಿದೆ. ಸದ್ಯ ಜಮೀನಿಗೆ ಕಾಲಿಡುವ ಪರಿಸ್ಥಿತಿ‌ ಇಲ್ಲ. ಪ್ರವಾಹ ಇಳಿಕೆಯಾದ ಬಳಿಕ ವೈಜ್ಞಾನಿಕ ಜಂಟಿ ಸಮೀಕ್ಷೆ ನಡೆಸಿ ತುರ್ತಾಗಿ ಪರಿಹಾರ ಒದಗಿಸಲು ಸರ್ಕಾರ ತುದಿಗಾಲಲ್ಲಿ ಇದೆ. ಇದಕ್ಕೆ ಸಮೀಕ್ಷೆಯ ಅಗತ್ಯವಿದೆ ಎಂದರು.

ಅಕ್ಕ ಪಕ್ಕದ ಪ್ರವಾಹ ಇಲ್ಲದ ಜಿಲ್ಲೆಗಳಿಂದ ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜಿಸುವ ಬಗ್ಗೆ ಯೂ ಸಭೆಯಲ್ಲಿ ತೀರ್ಮಾನಿಸಲಾಯಿತು. ಸದ್ಯ ಜನ, ಜನವಾರು ಪ್ರಾಣ ಹಾನಿ ಬಗ್ಗೆ ಸಮೀಕ್ಷೆ ಸಿಕ್ಕಿದೆ. ಆದರೆ ಪೂರ್ಣ ಸಮೀಕ್ಷೆ ಆಗಿಲ್ಲದ ಕಾರಣದಿಂದ ಮನೆಗಳ ಹಾನಿ ಬಗ್ಗೆ ಪೂರ್ಣ ವರದಿ ಇಲ್ಲ. ಸಮೀಕ್ಷೆ ಬಳಿಕ ಸರಿಯಾದ ಲೆಕ್ಕ ಸಿಗುತ್ತದೆ. ಆಗ ಎಲ್ಲಾ ಸಂತ್ರಸ್ಥರಿಗೂ ಪರಿಹಾರ ನೀಡಲು ಅನುಕೂಲ ಆಗುತ್ತದೆ.

ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ಮತ್ತು ಪ್ರವಾಹ ಇದಾಗಿರುವುದರಿಂದ ಸಂಪರ್ಕ ರಸ್ತೆಗಳು, ಸೇತುವೆ, ಬ್ಯಾರೇಜ್  ಗಳು ತುಂಬಾ ಹಾನಿಯಾಗಿವೆ, ಮುಳುಗಡೆಯಾಗಿವೆ. ಹೀಗಾಗಿ ಈ ಬಗ್ಗೆಯೂ ಸಮೀಕ್ಷೆ ಮಾಡಿ ವರದಿ ನೀಡಲು ಸೂಚನೆ ನೀಡಲಾಯಿತು.  ಮಹಾರಾಷ್ಟ್ರ, ಉಜನಿಯಲ್ಲಾಗುವ ಮಳೆ ಜೊತೆಗೆ ನಮ್ಮಲ್ಲೂ ಬೀಳುತ್ತಿರುವ ದಾಖಲೆ ಮಳೆ ಸೇರಿ ಅನಾಹುತದ ಪ್ರಮಾಣ ಹೆಚ್ಚಾಗುತ್ತಿದೆ.  ಅಗತ್ಯ ಇರುವ ಕಡೆ ತಾತ್ಕಾಲಿಕ, ಶಾಶ್ವತ ತಡೆಗೋಡೆ ಕಟ್ಟಿಸಿ ಅನಾಹುತದ ಪ್ರಮಾಣ ತಪ್ಪಿಸಲು ಸಿಎಂ ಸೂಚಿಸಿದರು.

ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳ fitness ಪರೀಕ್ಷಿಸುವುದನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳು ಗಮನಿಸಬೇಕು‌. Fitness ಇಲ್ಲದಿದ್ದರೆ ಶಾಲೆಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದನ್ನು ಕಡ್ಡಾಯವಾಗಿ ಮಾಡಬೇಕು. ಇದರಲ್ಲಿ ನಿರ್ಲಕ್ಷ್ಯ ಸಹಿಸಲ್ಲ ಎಂದು ಖಡಕ್ ಸೂಚನೆ ನೀಡಲಾಯಿತು.

ಹಣಕ್ಕೆ ಕೊರತೆ ಇಲ್ಲ. PD ಖಾತೆಯಲ್ಲಿ ಹಣ ಸಂಗ್ರಹ ಇದೆ. ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ನಿರಂತರವಾಗಿ ನಡೆಸಬೇಕು. ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದ ಗ್ರಾಮಗಳ ಸ್ಥಳಾಂತರದ ಬಗ್ಗೆ ಹಿಂದಿನ ಎಲ್ಲಾ ಇಲಾಖೆ ಅನುಭವಗಳನ್ನು ಪರಿಗಣಿಸಿ ಸೂಕ್ತ ಯೋಜನೆ ರೂಪಿಸಲು ಸೂಚನೆ ನೀಡಲಾಯಿತು.

More articles

Latest article