ಬೆಂಗಳೂರು: ಮಹಿಳಾ ವಕೀಲ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 30ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ಪರಿಶೀಲಿಸಿ ಎಂದು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಬೆನ್ನಲ್ಲೇ ಬೆಂಗಳೂರು ವಕೀಲರ ಸಂಘಕ್ಕೆ (ಎಎಬಿ) ಫೆಬ್ರುವರಿ 2ರಂದು ನಡೆಯಬೇಕಿದ್ದ ಚುನಾವಣೆಯನ್ನು ರದ್ದುಪಡಿಸಲಾಗಿದೆ.
ಚುನಾವಣೆಯ ಉಸ್ತುವಾರಿ ಹೊತ್ತಿರುವ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು ನೋಟಿಸ್ ಹೊರಡಿಸಿದ್ದು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2025ರ ಜನವರಿ 8ರಂದು ಪ್ರಕಟಿಸಿರುವ ಚುನಾವಣಾ ವೇಳಾಪಟ್ಟಿಯನ್ನು
ಅಮಾನತುಗೊಳಿಸಲಾಗಿದ್ದು, ಫೆಬ್ರುವರಿ 2ಕ್ಕೆ ನಿಗದಿಯಾಗಿದ್ದ ಸಂಘದ ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಎಬಿ ಆಡಳಿತ ಮಂಡಳಿಯ ಸದಸ್ಯತ್ವದಲ್ಲಿ ಮಹಿಳೆಯರಿಗೆ ಕನಿಷ್ಠ ಪಕ್ಷ ಶೇ 30ರಷ್ಟು ಪ್ರಾತಿನಿಧ್ಯ ನೀಡಬೇಕು. ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿಡಬೇಕು. ಅಗತ್ಯಬಿದ್ದರೆ ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿ ನಾಮಪತ್ರ ಸ್ವೀಕಾರ ದಿನಾಂಕ ಮತ್ತು ಚುನಾವಣೆಯನ್ನು ಮುಂದೂಡಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರವಷ್ಟೇ ಆದೇಶಿಸಿತ್ತು.
ಎಎಬಿ ಆಡಳಿತ ಮಂಡಳಿಯಲ್ಲಿ ಮಹಿಳಾ ವಕೀಲರಿಗೆ ಶೇ 30ರಷ್ಟು ಮೀಸಲಾತಿ ನೀಡುವಂತೆ ಕೋರಿ ಕರ್ನಾಟಕ ಮಹಿಳಾ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ದ್ವಿಸದಸ್ಯ ಪೀಠ ಈ ಆದೇಶ ಪ್ರಕಟಿಸಿದೆ. ಸಂವಿಧಾನದ 142ನೇ ವಿಧಿಯಡಿ, ಖಜಾಂಚಿ ಹುದ್ದೆ ಮಹಿಳಾ ಅಭ್ಯರ್ಥಿಗೆ ಮಾತ್ರ ಮೀಸಲು ಎಂದು ನಾವು ನಿರ್ದೇಶಿಸುತ್ತೇವೆ. ಈ ಉದ್ದೇಶಕ್ಕಾಗಿ ಉನ್ನತ ಅಧಿಕಾರದ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿ ನಾಮನಿರ್ದೇಶನದ ದಿನಾಂಕ ವಿಸ್ತರಿಸಿ ಚುನಾವಣಾ ದಿನಾಂಕವನ್ನು ಮುಂದೂಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ನಾಮಪತ್ರ ವಾಪಸು ಪಡೆಯುವ ಪ್ರಕ್ರಿಯೆ ಇದೇ ತಿಂಗಳ 20ರಂದು ಪೂರ್ಣಗೊಂಡಿತ್ತು. ವಿವಿಧ ಹುದ್ದೆಗಳಿಗೆ 140 ಮಂದಿ ಸ್ಪರ್ಧಿಸಿದ್ದರು. ಹಾಲಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಎ.ಪಿ.ರಂಗನಾಥ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಬಿರುಸಿನ ಪ್ರಚಾರ ಕೈಗೊಂಡಿದ್ದರು.