ಬೃಹತ್ ಜಾಹೀರಾತು ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ: ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ

Most read

ಬೆಂಗಳೂರು: ನೂತನ ಜಾಹೀರಾತು ನೀತಿಯ ಆಧಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರದಾದ್ಯಂತ ಆರೂವರೆ ಸಾವಿರ ಜಾಹೀರಾತು ಫಲಕಗಳನ್ನು ಅಳವಡಿಸುವಲ್ಲಿ ಜಾಹೀರಾತು ಹಕ್ಕುಗಳ ಹರಾಜಿಗೆ ಮುಂದಾಗಿದೆ. ಮುಂಬರುವ ದಿನಗಳಲ್ಲಿ ಅಳವಡಿಕೆಯಾಗುವ ಜಾಹೀರಾತು ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯನ್ನು ನೀಡಲು ಕ್ರಮವಹಿಸಬೇಕೆಂದು ಪಾಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ನಿರ್ದೇಶನ ನೀಡಿದ್ದಾರೆ.

ಈ ಕುರಿತಂತೆ ಪಾಲಿಕೆಯ ಮುಖ್ಯ ಆಯುಕ್ತ  ಮಹೇಶ್ವರ ರಾವ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಉಪನಿಯಮ 17ರ ಅವಕಾಶಗಳಂತೆ ಜಾಹೀರಾತು ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯನ್ನು ಕಲ್ಪಿಸುವುದು ಅನುಷ್ಠಾನ ಇಲಾಖೆಯ ಜವಾಬ್ದಾರಿಯಾಗಿರುತ್ತದೆ ಎಂದಿದ್ದಾರೆ.

ಉದ್ದೇಶಿತ ಜಾಹೀರಾತು ನೀತಿಯನ್ನು ನಿರೂಪಿಸುವ ಸಂದರ್ಭದಲ್ಲಿ ಈ ಎಲ್ಲ ಅಂಶಗಳನ್ನು ಪಾಲಿಕೆಯು ಗಮನದಲ್ಲಿಟ್ಟುಕೊಂಡಿದೆ ಎಂದು ಭಾವಿಸಿದ್ದೇನೆ ಎಂದಿರುವ ಬಿಳಿಮಲೆ, ಒಂದು ವೇಳೆ ಪಾಲಿಕೆಯು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದ ಅವಕಾಶಗಳನ್ನು ಗಮನಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅದು ಕಾನೂನು ಉಲ್ಲಂಘನೆಯಾಗಲಿದ್ದು, ಪಾಲಿಕೆಯು ಇದಕ್ಕೆ ಉತ್ತರದಾಯಿತ್ವವನ್ನು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಾಡಿನ ಸಾರ್ವಭೌಮ ಭಾಷೆಯಾದ ಕನ್ನಡಕ್ಕೆ ಸಿಗಬೇಕಾದ ಪ್ರಾಶಸ್ತ್ಯವನ್ನು ಪಾಲಿಕೆಯ ಜಾಹೀರಾತು ನೀತಿ ನೀಡಿದೆ ಎಂಬ ವಿಶ್ವಾಸವನ್ನು ತಾವು ಹೊಂದಿರುವುದಾಗಿಯೂ ಬಿಳಿಮಲೆ ಹೇಳಿದ್ದಾರೆ.

More articles

Latest article