ಬೆಂಗಳೂರು: ನಕಲಿ ತುಪ್ಪ ತಯಾರಿಸಿ ನಂದಿನಿ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಪ್ರಮುಖ ಸೂತ್ರದಾರಿ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಶಿವಕುಮಾರ್ ಮತ್ತು ಆತನ ಪತ್ನಿ ರಮ್ಯಾ ಬಂಧಿತ ಆರೋಪಿಗಳು.
ತಮಿಳುಮನಾಡಿನಲ್ಲಿರುವ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬೃಹತ್ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ನಕಲಿ ತುಪ್ಪಕ್ಕೆ ನಂದಿನಿ ಲೇಬಲ್ ಹಾಕಿ ನಂದಿನಿ ಪಾರ್ಲರ್ ಮತ್ತು ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ಪೊಲೀಸರು ನ. 14ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗೋಡೌನ್ ಮೇಲೆ ದಾಳಿ ನಡೆಸಿ 1.50 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪವನ್ನ ಜಪ್ತಿ ಮಾಡಲಾಗಿತ್ತು. ನಕಲಿ ತುಪ್ಪವನ್ನು ವಿತರಣೆ ಮಾಡುತ್ತಿದ್ದ ವಿತರಕರಾದ ಮಹೇಂದ್ರ, ಆತನ ಪುತ್ರ ದೀಪಕ್ ಮತ್ತು ಮುನಿರಾಜು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿತ್ತು.
ತನಿಖೆ ಮುಂದುವರಿಸಿದ ಸಿಸಿಬಿ ಪೊಲೀಸರು, ಆರೋಪಿ ದಂಪತಿಯ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 60 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ನಕಲಿ ತುಪ್ಪದ ರಹಸ್ಯವನ್ನು ಬೇಧಿಸಲು ತುಪ್ಪದ ಮಾದರಿಯನ್ನು ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿದೆ.
ಶಿವಕುಮಾರ್ ದಂಪತಿ ಮೇಲೆ ಈ ಹಿಂದೆಯೂ ಮೈಸೂರಿನಲ್ಲಿ ನಕಲಿ ಉತ್ಪನ್ನ ತಯಾರಿಕೆಯ ಒಂದು ಪ್ರಕರಣ ದಾಖಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

