ನಟಿ ಸೌಂದರ್ಯ ಸಾವಿಗೆ ನಟ ಮೋಹನ್‌ ಬಾಬು ಕಾರಣ: ಆಂಧ್ರಪ್ರದೇಶದಲ್ಲಿ ದೂರು ದಾಖಲು

Most read

ಬೆಂಗಳೂರು: 2004 ರಲ್ಲಿ ಬೆಂಗಳೂರು ಹೊರವಲಯದಲ್ಲಿ ನಡೆದಿದ್ದ ಲಘು ವಿಮಾನ ಅಪಘಾತದಲ್ಲಿ ಆಪ್ತಮಿತ್ರ ಕನ್ನಡ ಚಿತ್ರದ ಖ್ಯಾತಿಯ ನಟಿ ಸೌಂದರ್ಯ ಮೃತಪಟ್ಟಿದ್ದರು. ಅಪಘಾತಕ್ಕೆ ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಮಧ್ಯೆ ತೆಲಂಗಾಣದಲ್ಲಿ ಯುವಕನೊಬ್ಬ 32 ನೇ ವಯಸ್ಸಿನ ನಟಿ ಸೌಂದರ್ಯ ಸಾವಿಗೆ ತೆಲುಗು ಹಿರಿಯ ನಟ ಮಂಚು ಮೋಹನ್ ಬಾಬು ಕಾರಣ ಎಂದು ಕಮ್ಮಂ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಆ ಯುವಕ ಕಮ್ಮಂ ಗ್ರಾಮೀಣ ಪ್ರದೇಶದ ಚಿಟ್ಟಿಬಾಬು. ಇವರು ನೀಡಿರುವ ದೂರು ಸ್ವೀಕರಿಸಿರುವ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಂಶಾಬಾದ್‌ನ ಜಾಲಪಲ್ಲಿಯಲ್ಲಿ ನಟಿ ಸೌಂದರ್ಯ ಅವರಿಗೆ ಸೇರಿದ್ದ 6 ಎಕರೆ ವಿಸ್ತಾರ ಪ್ರದೇಶದಲ್ಲಿದ್ದ ಗೆಸ್ಟ್‌ ಹೌಸ್‌ ಮೇಲೆ ಮೋಹನ್ ಬಾಬು ಕಣ್ಣಿಟ್ಟಿದ್ದರು. ಗೆಸ್ಟ್ ಹೌಸ್ ಮತ್ತು ಆರು ಎಕರೆಭೂಮಿಯನ್ನು ಖರೀದಿಸಲು ಮೋಹನ್ ಬಾಬು ಆಸಕ್ತಿ ತೋರಿಸಿದ್ದರು. ಆದರೆ ಸೌಂದರ್ಯ ಸಹೋದರ ಅಮರನಾಥ್  ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ  ಸೌಂದರ್ಯ ಆಸ್ತಿಯನ್ನು ಮಾರಲು ನಿರಾಕರಿಸಿದ್ದರು. ಹೀಗಾಗಿ ಸಂಚು ರೂಪಿಸಿ  ಹತ್ಯೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜಾಲಪಲ್ಲಿಯ ಗೆಸ್ಟ್ ಹೌಸ್ ಹಾಗೂ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಅಲ್ಲಿ ಅನಾಥರಿಗೆ, ನಿವೃತ್ತ ಸೈನಿಕರಿಗೆ ಮನೆಗಳನ್ನು ಕಟ್ಟಿಕೊಡಬೇಕು‘ ಎಂದು ಚಿಟ್ಟಿಬಾಬು ಮನವಿ ಮಾಡಿಕೊಂಡಿದ್ದಾರೆ. ಮೋಹನ್ ಬಾಬು ಅವರಿಂದ ನನಗೆ ಜೀವ ಬೆದರಿಕೆ ಇದೆ. ಹಾಗಾಗಿ ನನಗೆ ಭದ್ರತೆ ಒದಗಿಸಬೇಕು ಎಂದೂ ಕೇಳಿಕೊಂಡಿದ್ದಾರೆ. ಮೋಹನ್ ಬಾಬು ಅವರಿಂದ ಅವರ ಎರಡನೇ ಹೆಂಡತಿಯ ಮಗ ಮಂಚು ಮನೋಜ್‌ಗೆ ಸಾಕಷ್ಟು ಅನ್ಯಾಯವಾಗಿದೆ ಎಂದು ಬಾಬು  ಆರೋಪಿಸಿದ್ದಾರೆ.

2004ರ ಏಪ್ರಿಲ್ 17 ರಂದು ಬೆಂಗಳೂರಿನ ಜಿಕೆವಿಕೆ ಬಳಿ ಲಘು ವಿಮಾನ ಅಪಘಾತ ನಡೆದಿತ್ತು. ಅಂದು ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಚುನಾವಣೆಯ ಪ್ರಯುಕ್ತ ಸೌಂದರ್ಯ ಹಾಗೂ ಅವರ ಸಹೋದರ ಅಮರನಾಥ್ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಕರೀಂನಗರಕ್ಕೆ ತೆರಳುತ್ತಿದ್ದರು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿ ವಿಮಾನ ಹೊತ್ತಿ ಉರಿದಿತ್ತು. ಪರಿಣಾಮ ಸೌಂದರ್ಯ, ಅಮರನಾಥ್ ಹಾಗೂ ಲಘು ವಿಮಾನದಲ್ಲಿದ್ದ ಇತರರ ಮೃತದೇಹಗಳು ಗುರುತು ಸಿಗದಂತೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ಸೌಂದರ್ಯ ಅವರು ಗರ್ಭಿಣಿಯಾಗಿದ್ದರು ಎಂದೂ ಹೇಳಲಾಗುತ್ತಿದೆ.

ಘಟನೆ ನಡೆದ ಸಂದರ್ಭದಲ್ಲಿಯೂ ಕನ್ನಡ ಮೂಲದ ನಟಿ ಸೌಂದರ್ಯ ಸಾವಿನ ಹಿಂದೆ ಆಸ್ತಿ ವಿಚಾರ, ವೃತ್ತಿ ವೈಷಮ್ಯ, ರಾಜಕೀಯ, ಆಕಸ್ಮಿಕ ಘಟನೆ, ‘ನಾಗವಲ್ಲಿ’ ಕಾಟ ಇದೆ ಎಂದೆಲ್ಲಾ ಚರ್ಚೆಗಳು ನಡೆಯುತ್ತಿದ್ದವು. ತನಿಖೆ ನಡೆದರೂ ಅಪಘಾತಕ್ಕೆ ನಿಖರ ಕಾರಣವೇನು ಎನ್ನುವುದು ಸ್ಪಷ್ಟವಾಗಲಿಲ್ಲ. ಹಾಗಾಗಿ ಸೌಂದರ್ಯ ಸಾವು ಇಂದಿಗೂ ನಿಗೂಢವಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಸೌಂದರ್ಯ ಅವರ ಸಾವು ಇಡೀ ಭಾರತೀಯ ಚಿತ್ರರಂಗಕ್ಕೆ ಬಹುದೊಡ್ಡ ಆಘಾತ ನೀಡಿತ್ತು. ಆಪ್ತಮಿತ್ರ ಚಿತ್ರದಲ್ಲಿನ ಅವರ ‘ನಾಗವಲ್ಲಿ’ ಪಾತ್ರ ಜನಮನ ಸೆಳೆದಿತ್ತು.

78 ವರ್ಷದ ನಟ ಮೋಹನ್ ಬಾಬು ಅವರು ಟಾಲಿವುಡ್‌ನ ಪ್ರಭಾವಿಗಳಲ್ಲಿ ಒಬ್ಬರು. ರಾಜಕೀಯದಲ್ಲಿಯೂ ಗುರುತಿಸಿಕೊಂಡಿರುವ ಅವರು  ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ವೈಎಸ್‌ಆರ್‌ಸಿಪಿ ಪಕ್ಷದ ನಂತರ ಟಿಡಿಪಿಯಲ್ಲಿ ಗುರುತಿಸಿಕೊಂಡಿದ್ದರು.

ಇತ್ತೀಚೆಗೆ ಮೋಹನ್ ಬಾಬು ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ. ಎರಡನೇ ಹೆಂಡತಿಯ ಮಗ ಮಂಚು ಮನೋಜ್ ಅವರು ಆಸ್ತಿ ವಿಚಾರವಾಗಿ ತಂದೆಯ ಜೊತೆ ತಕರಾರು ತೆಗೆದಿದ್ದಾರೆ. ಇದೇ ವಿಚಾರವಾಗಿ ಮನೆ ಬಳಿ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದ ಸುದ್ದಿವಾಹಿನಿಯ ವರದಿಗಾರರು ಹಾಗೂ ಕ್ಯಾಮೆರಾಮೆನ್‌ಗಳ ಮೇಲೆ ಮೋಹನ್ ಬಾಬು ಹಲ್ಲೆ ಮಾಡಿದ್ದಾರೆ ಎಂದೂ ವರದಿಯಾಗಿತ್ತು.

ಸೌಂದರ್ಯ ಸಾವಿನ ವಿಚಾರವಾಗಿ ಕೇಳಿ ಬಂದಿರುವ ಆರೋಪಗಳಿಗೆ ಮೋಹನ್ ಬಾಬು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ತಮ್ಮ ಮೊದಲ ಹೆಂಡತಿಯ ಮಗ, ನಟ ಮಂಚು ವಿಷ್ಣು ನಿರ್ಮಿಸುತ್ತಿರುವ ‘ಕಣ್ಣಪ್ಪ’ ಎಂಬ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

More articles

Latest article