ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಬಂದೂಕು ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತ್ತು ಮಾಡಲಾಗಿದೆ. ಎಂದು ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದ್ದಾರೆ. ದರ್ಶನ್ ತಮ್ಮ ರಕ್ಷಣೆಗಾಗಿ ಪರವಾನಗಿ ಹೊಂದಿದ್ದ ಬಂದೂಕನ್ನು ಪಡೆದುಕೊಂಡಿದ್ದರು.
ತಮಗೆ ಭದ್ರತೆಯ ಅವಶ್ಯಕತೆ ಇರುವುದರಿಂದ ದರ್ಶನ್, ತಮ್ಮ ಬಂದೂಕು ಲೈಸೆನ್ಸ್ ಅನ್ನು ರದ್ದು ಮಾಡದಂತೆ ಮನವಿ ಮಾಡಿಕೊಂಡಿದ್ದರು. ಆದರೆ ದರ್ಶನ್ ಮನವಿಯನ್ನು ತಿರಸ್ಕರಿಸಿರುವ ಪೊಲೀಸ್ ಇಲಾಖೆ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಬಂದೂಕನ್ನು ಇಟ್ಟುಕೊಳ್ಳುವಂತಿಲ್ಲ ಎಂಬ ಕಾರಣವನ್ನು ಹೇಳಿ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ. ಇದೀಗ ದರ್ಶನ್ ತಮ್ಮ ಬಂದೂಕನ್ನು ಆರ್ ಆರ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಬೇಕಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಪರವಾನಗಿ ರದ್ದಾಗಲಿದೆ. ತಮ್ಮ ನಿವಾಸದಿಂದ ವಶಪಡಿಸಿಕೊಂಡಿರುವ 37 ಲಕ್ಷ ರೂಪಾಯಿ ಹಣವನ್ನು ಮರಳಿಸುವಂತೆಯೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಸಿಕ್ಕಿದೆ. ಮತ್ತೊಂದು ಕಡೆ ಜಾಮೀನು ರದ್ದುಗೊಳಿಸುವಂತೆ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ವಕೀಲರನ್ನೂ ನೇಮಿಸಿದ್ದಾರೆ.