ನವದೆಹಲಿ: ಮೋಟಾರು ವಾಹನ ಅಪಘಾತಗಳಲ್ಲಿ ಗಾಯಗೊಂಡವರು ನಗದು ರಹಿತವಾಗಿ ಚಿಕಿತ್ಸೆ ಪಡೆಯಲು ಅಗತ್ಯವಿರುವ ಯೋಜನೆಯನ್ನು ರೂಪಿಸುವಲ್ಲಿ ವಿಳಂಬ ಧೋರಣೆ ಪ್ರದರ್ಶಿಸುತ್ತಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಯೋಜನೆಯನ್ನು ರೂಪಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ವಿವರಣೆ ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿಯನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ಈ ಸಂಬಂಧ ಜನವರಿ 8ರಂದೇ ನ್ಯಾಯಾಲಯ ಆದೇಶ ನೀಡಿದ್ದರೂ ಕೇಂದ್ರ ಸರ್ಕಾರ ಅದನ್ನು ಪಾಲಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ವಲ್ ಭೂಯಾನ್ ಅವರ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಮಾರ್ಚ್ 15 ರೊಳಗೆ ಯೋಜನೆಯನ್ನು ರೂಪಿಸುವಂತೆ ಸೂಚಿಸಲಾಗಿತ್ತು. ಇದೀಗ ಆ ಗಡುವು ಅಂತ್ಯಗೊಂಡಿದೆ. ಇದು ಈ ನ್ಯಾಯಾಲಯದ ಆದೇಶದ ಗಂಭೀರ ಉಲ್ಲಂಘನೆಯಷ್ಟೇ ಅಲ್ಲ, ಇದು ಬಹಳ ಉಪಯುಕ್ತವಾದ ಕಾನೂನಿನ ಅನುಷ್ಠಾನದಲ್ಲಿನ ಲೋಪವೂ ಆಗಿದೆ ಎಂದು ಪೀಠ ಗರಂ ಆಗಿದೆ. ಏಪ್ರಿಲ್ 28ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರು ಅನುಷ್ಠಾನದ ವಿಚಾರವಾಗಿ ಕೆಲವು ಅಡ್ಡಿಗಳು ಇವೆ ಎಂದು ಸಮಜಾಯಿಷಿ ನೀಡಲು ಮುಂದಾದಾಗ, ಇದು ನೀವೇ ರೂಪಿಸಿದ ಶಾಸನ. ನಗದು ರಹಿತ ಚಿಕಿತ್ಸೆಯ ಸೌಲಭ್ಯ ಇಲ್ಲವಾಗಿರುವ ಕಾರಣಕ್ಕೆ ಸಾರ್ವಜನಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ವಿಫಲವಾದರೆ ನ್ಯಾಯಾಂಗ ನಿಂದನೆ ಕಾನೂನಿನ ಅಡಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಕಾರ್ಯದರ್ಶಿಗಳಿಗೆ ವಿವರಣೆ ನೀಡಲು ತಿಳಿಸಿ ಎಂದು ನ್ಯಾಯಮೂರ್ತಿಗಳು ಹೇಳಿದರು.
ಅಪಘಾತ ಸಂಭವಿಸಿದ ನಂತರ ಒಂದು ತಾಸಿನ ಒಳಗಾಗಿ ಗಾಯಾಳುಗಳಿಗೆ ನಗದು ರಹಿತವಾಗಿ ಚಿಕಿತ್ಸೆ ಒದಗಿಸಲು ಅಗತ್ಯವಿರುವ ಯೋಜನೆಯನ್ನು ಸಿದ್ಧಪಡಿಸುವಂತೆ ಸುಪ್ರೀಂಕೋರ್ಟ್ ಜನವರಿ 8ರಂದು ಸೂಚಿಸಿ, ಯೋಜನೆಯ ವಿವರವನ್ನು ಮಾರ್ಚ್ 14ಕ್ಕೆ ಮುನ್ನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಿಳಿಸಿತ್ತು.ಆದರೆ ಸರ್ಕಾರ ಈ ಯೋಜನೆಯನ್ನು ರೂಪಿಸಿರಲಿಲ್ಲ.