ಬೆಂಗಳೂರು: ಅಡುಗೆ ಮನೆಯಲ್ಲಿ ಇರಲೇಬೇಕಾದ ತರಕಾರಿಗಳಲ್ಲಿ ಟೊಮ್ಯಾಟೋ ಕೂಡ ಒಂದು. ಆದರೆ ದಿಢೀರನೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿರುವುದು ಗೃಹಿಣಿಯರ ಆತಂಕಕ್ಕೆ ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ 80 ರುಪಾಯಿ ದಾಟಿದ್ದು, ಇಷ್ಟು ದುಡ್ಡುಕೊಟ್ಟು ಕೊಳ್ಳೋದು ಹೇಗೆ ಎಂದು ಗ್ರಾಹಕರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ದರ ಏರಿಕೆಯಾಗುತ್ತಲೇ ಇದೆ. ಮಳೆಯಿಂದಾಗಿ ಟೊಮ್ಯಾಟೋ ಇಳುವರಿ ಕಡಿಮೆಯಾಗಿದ್ದು ದರ ಹೆಚ್ಚಾಗುತ್ತಿದೆ. 15 ದಿನದ ಹಿಂದಷ್ಟೇ 30 ರೂ. ಆಸುಪಾಸಿನಲ್ಲಿದ್ದ ಟೊಮ್ಯಾಟೋ ದರ ಇಂದು 80 ರೂ. ಆಗಿದೆ.
ಟೊಮ್ಯಾಟೋ ಬೆಲೆ ಹೆಚ್ಚಳಕ್ಕೆ ಬೇರೆ ಕಡೆಗಳಿಂದ ಆಮದು ಕಡಿಮೆಯಾಗಿರುವುದೂ ಒಂದು ಕಾರಣ. ಹೀಗೇ ಮುಂದುವರೆದರೆ ಬೆಲೆ ಶತಕ ದಾಟಿದರೂ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ ತರಕಾರಿ ಮಾರಾಟಗಾರರು.
ಟೊಮ್ಯಾಟೋ ಬೆಳೆದ ರೈತರಿಗೆ ಉತ್ತಮ ಆದಾಯ ಬಂದಿದೆ. ಇದರಿಂದಾಗಿ ಹೆಚ್ಚಿನ ರೈತರು ಟೊಮ್ಯಾಟೋ ಬೆಳೆಯಲು ಮುಂದಾಗಿದ್ದಾರೆ. ಆದರೆ ದಿನಬಳಕೆಯ ಟೊಮ್ಯಾಟೋ ಬೆಲೆ ಏರಿಕೆ ಗ್ರಾಹಕರಿಗೆ ಹೊರೆಯಾಗಿದೆ. ರಾಜ್ಯದ ನಾನಾ ಕಡೆಗಳಿಂದ ಬೆಂಗಳೂರು ಮಾರುಕಟ್ಟೆಗೆ ಬರುತ್ತಿದ್ದ ಟೊಮ್ಯಾಟೋ ಪ್ರಮಾಣ ಕಡಿಮೆಯಾಗಿದ್ದು, ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಮಹಾರಾಷ್ಟ್ರದಲ್ಲೂ ಮಳೆ ಜಾಸ್ತಿಯಾಗಿದ್ದು ಬೆಲೆ ಏರುತ್ತಲೇ ಸಾಗಿದೆ.
ಕೆಲದಿನಗಳಲ್ಲಿ ಟೊಮ್ಯಾಟೋ ಬೆಲೆ 100-120 ರೂ. ಆದರೂ ಆಶ್ಚರ್ಯಪಡಬೇಕಾಗಿಲ್ಲ ಎನ್ನುತ್ತಾರೆ ವರ್ತಕರು.