ಭಾಗ ಒಂದು
ಶರಾವತಿಯ ದಡದ ಇಕ್ಕೆಲಗಳಲ್ಲಿ ಮದುವೆ ಕಾರ್ಯಕ್ರಮಗಳು ನಡೆದು ಸಂತಸ ಸಂಭ್ರಮದಲ್ಲಿದ್ದ ಕುಟುಂಬಗಳ ಬದುಕು ನುಂಗಿ ಶರಾವತಿ ತನ್ನ ಒಡಲೊಳಗೆ ಹುದುಗಿಸಿಟ್ಟುಕೊಂಡ ಘಟನೆಯನ್ನು ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕರಾದ ಡಾ. ಅಣ್ಣಪ್ಪ ಎನ್. ಮಳೀಮಠ್. ಎರಡು ಭಾಗಗಳಲ್ಲಿ ಪ್ರಕಟವಾಗಲಿರುವ ಈ ಕಥೆಯ ಮೊದಲನೇ ಭಾಗ ಇಲ್ಲಿದೆ.
ಆವಿನಹಳ್ಳಿ ಸೀಮೆಗೂ ಅತ್ತ ಜಾಲಸೀಮೆಗೂ ನಡುವೆ ಹರಿಯುವ ಶರಾವತಿ ಕೆಲವರ ಪಾಲಿನ ಬೆಳಕಿನರಾಣಿ, ಕೆಲವರಿಗೆ ಜಲಸುಂದರಿ, ಕೆಲವರಿಗೆ ಗಂಭೀರೆ, ಇನ್ನೂ ಕೆಲವರಿಗೆ ಹಸಿರ ನಡುವಿನ ಕಡಲರಾಣಿ, ಇನ್ನೋ ಹಲವರಿಗೆ ಬದುಕು ನುಂಗಿದ ರಾಕ್ಷಸಿ, ಅನ್ನ ಕಸಿದ ಬಕಾಸುರೆ, ಮುಗಿಲೆತ್ತರಕೆ ನೋವು ಕಟ್ಟಿದ ಬಣವೆ……. ಹೀಗೆ ಏನೆಂದು ಹೇಳಲಿ ಈ ಶರಾವತಿ ಒಡಲ. ಅತ್ತ ಜಾಲದವರೋ ಕಾಡಿನ ಶಿಶುಗಳು, ಇತ್ತ ಸಾಗರದ ಪೇಟೆಯ ಅಲ್ಪಸ್ವಲ್ಪ ಬೀಸುಗಾಳಿಗೆ ಒಳಗಾಗುತ್ತಿರುವ ಆವಿನಹಳ್ಳಿ ಸೀಮೆಯವರು. ಇವರ ನಡುವೆ ಅಂತರವನ್ನುಂಟು ಮಾಡಿದ ಶರಾವತಿ ಎಲ್ಲರನ್ನು ದೂರ ದೂರ ಮಾಡಿದ್ದಳು. ಶರಾವತಿ ದೇಹವನ್ನು ಸೀಳಿ ಆಚೆದಡ ತಲುಪಿ ಸಂಬಂಧಗಳು ಕುಡಿಯೊಡೆದದ್ದು ಇದೆ. ಅಪ್ಪನೋ ಜಾಲಸೀಮೆಯವನು, ಅವ್ವನೋ ಆವಿನಹಳ್ಳಿ ಸೀಮೆಯವಳು. ‘ಎತ್ತಣ ಕೋಗಿಲೆ, ಎತ್ತಣ ಮಾಮರ…’ ಅಪ್ಪನಿಲ್ಲದ ಅವ್ವ, ಅಪ್ಪನಿಲ್ಲದ ಅಪ್ಪ……ಇಬ್ಬರಿಗೂ ಮದುವೆ ಮಾಡಿಸಿದ್ದೇ ರೋಚಕ. ದೊಡ್ಡ ಮನೆಯ ಅಪ್ಪನೋ ತನ್ನ ಆಕಾರ, ಮೈಬಣ್ಣದಿಂದ ಹೆಣ್ಣು ಕೊಡೋರು ದಿಕ್ಕಿಲ್ಲದೇ ಇದ್ದವನು. ಮುದುಕವ್ವನಿಗೆ ತನ್ನ ಮಗನಿಗೆ ಮದುವೆ ಮಾಡಿಸಬೇಕೆಂಬ ಮಹದಾಸೆಯಿದ್ರು, ಹೆಣ್ಣು ಕೊಡೋರಿಲ್ಲದೆ ದಿಕ್ಕೆಟ್ಟಿದ್ದಳು. ಅಂತೂ ತನ್ನ ಅಳಿಯ ಉಂಡುಗೋಡು ಹೆಡ್‌ಮಾವನನ್ನು ಮುಂದೆ ಮಾಡಿಬಿಟ್ಟು, ಹೆಣ್ಣಿಗಾಗಿ ಊರೂರು ಸುತ್ತಿಸಿದಳು. ಸವೆದ ಚಪ್ಪಲಿ ಲೆಕ್ಕಯಿಲ್ಲ. ಉಳಿದ ಮನೆಗಳ ಲೆಕ್ಕಕ್ಕೆ ಸಿಗದಷ್ಟು.
ನಯನಾಜೂಕಿನ ಮಾತು ಬಾರದ ಅಪ್ಪ ಕಟ್ಟುಮಸ್ತಾದ ಆಳು. ಕೆಲಸಕ್ಕೂ ಸೈ….. ಉಣ್ಣಾಕು ಸೈ…ಅನ್ನೋ ಜಾಯಮಾನದವನು. ಅಂಬಾರಗೊಡ್ಲಿನ ಕಲ್ಲುಬಂಡೆ, ಜಾಲದ ಕಣಿವೆ ಕಾನನದ ಹಾಗೆ. ಒಂದು ದಿನ ಜಾಲದ ಬೈರಣ್ಣ “ಆವಿನಹಳ್ಳಿ ಸೀಮೆಯ ಬೇಸೂರು ಹುಚ್ಚಪ್ಪಂಗೆ ಹೆಣ್ಣುಮಕ್ಳಿವೆ. ಮದುವೆ ಮಾಡ್ತಾನಂತೆ.. ಅನ್ನೋ ಸುದ್ದಿ ಸಕಣಸರದ ಮದುವೆ ಮನೆಯಲ್ಲಿ ಮಾತಾಡ್ತಾ ಇದ್ರು. ಅಂವ ಸತ್ತು ಏಳೆಂಟು ವರ್ಷ ಆಗೈತೆ. ಅವನ ಹೇಂಡ್ತಿ ಗಾಮಮ್ಮ ಅದಾಳೆ. ಕೇಳಿದ್ರೆ ಕೊಡ್ತಿದ್ರೀನೋ” ಅಂತ ಗಾಳಿಯಲ್ಲಿ ಮಾತುಬಿಟ್ಟ. ಇದನ್ನೇ ಸತ್ಯ ಎಂದು ಭಾವಿಸಿದ ಉಂಡುಗೋಡು ಹೆಡ್‌ಮಾವ ತನ್ನ ಬಾವನನ್ನು ಕರ‍್ಕೊಂಡು ಆವಿನಹಳ್ಳಿ ಸೀಮೆಯ ಬೇಸೂರರ ಮನೆಗೆ ಕೆತ್ಲುಗುಡ್ಡ ಹೊಳೆ ದಾಟಿ ಹೆಜ್ಜೆ ಹಾಕಿದ. ಬೇಸೂರು ಅಂದ್ರೆ ದೊಡ್ಡ ಮನೆತನ. ಎಪ್ಪತ್ತು ಎಂಬತ್ತು ಜನ ಇರೋ ಈ ಕೂಡುಕುಟುಂಬಕ್ಕೆ ಅನ್ನಕ್ಕೆ ಕೊರತೆಯಿಲ್ಲ. ಹಂಗೇನೆ ಮಳೆಮಠದರು ಜಾಲಸೀಮೆಯಲ್ಲಿ ಹೆಸರು ಇಟ್ಟುಕೊಂಡವರು. ಅನ್ನಕ್ಕೆ ಇವರು ಮನೆಯಲ್ಲಿಯೂ ಕೊರತೆಯಿಲ್ಲ. ಬೇಸೂರು ಮನೆ ದೊಡ್ಡ ಮನೆತನವಾಗಿದ್ರು ಅಂತರ್ಯದಲ್ಲಿ ಮನುಷ್ಯಸಹಜ ಸಣ್ಣತನಗಳಿಗೇನೂ ಕೊರತೆಯಿಲ್ಲ. ಅನ್ನಕ್ಕೆ ಕೊರತೆಯಿಲ್ಲದವನೇ ಆ ದಿನಗಳಲ್ಲಿ ಶ್ರೀಮಂತ. ಬೇಸೂರು ಮನೆ ಯಜಮಾನ ಬಿಳಿಯನಾಯ್ಕರದ್ದು ದೊಡ್ಡ ಹೆಸರು. ಇವರ ಎದುರಿಗೆ ಹೆಂಗಸ್ರು, ಗಂಡಸ್ರು, ಮಕ್ಕಳು ಮರಿ ನಿಂತು ಮಾತನಾಡ್ತಿರಲಿಲ್ಲ. ಬಿಳಿಯನಾಯ್ಕರ ಹೆಂಡತಿ ಭೈರಮ್ಮ ತನ್ನದೇ ಘನತೆ ಗೌರವಗಳನ್ನು ಮನೆತನದಲ್ಲಿ ಸಂಪಾದಿಸಿ ಕೊಂಡವಳು. ಈ ಬಿಳಿಯನಾಯ್ಕರಿಗೆ ಬೇಸೂರಿನ ಮೇಷ್ಟ್ರು ಅಂತ ಹೆಸರು ಪಡೆದ ತಿಮ್ಮನಾಯ್ಕ, ದ್ಯಾವಣ್ಣ, ಪುಟ್ಟಪ್ಪ, ಚನ್ನಪ್ಪ, ಪಾರ್ವತಮ್ಮ, ಪುಟ್ಟಮ್ಮ, ನಾಗಮ್ಮ ಅನ್ನೋ ಮಕ್ಕಳಿದ್ದರು. ಯಜಮಾನನ ಮಕ್ಕಳಾಗಿದ್ದ ಕಾರಣಕ್ಕೆ ಇವರಿಗೆ ಮನೆ ಮತ್ತು ಊರಿನಲ್ಲಿ ಸಹಜವಾದ ಗೌರವಾದರಗಳು ಬಂದಿದ್ದವು. ಜನಸಂಖ್ಯೆಯ ಪರಿಣಾಮ ರಾಜಕೀಯ ನೇತಾರರು ಇವರ ಮನೆಗೆ ಆವಾಗೀವಾಗ ಬಂದು ಹೋಗೋದು ಸಹಜವಾಗಿತ್ತು. ಬಿಳಿಯನಾಯ್ಕರ ದೊಡ್ಡಮಗ ಮೇಷ್ಟ್ರು, ಊರಿನಲ್ಲಿ ಜನಬಾಂಧವ್ಯ ಇಟ್ಟುಕೊಂಡವರು. ಊರಿನಲ್ಲಿ ಗೌಂಟಿ ಶಾಲೆ ಮಾಡಿ, ಊರಿನ ಮಕ್ಕಳಿಗೆ ಅಕ್ಷರ ಜ್ಞಾನ ಬಿತ್ತಿದವರು. ಒಂದು ಕಡೆ ಓದು ಬರಹ, ಇನ್ನೊಂದು ಕಡೆ ಅಪ್ಪ ಯಜಮಾನ ಎಂಬ ಹಣೆಪಟ್ಟಿ ಎಲ್ಲವೂ ಸೇರಿ ತಿಮ್ಮನಾಯ್ಕರ ವ್ಯಕ್ತಿತ್ವವನ್ನು ಇಮ್ಮಡಿ ಮಾಡಿತ್ತು.
ಇತ್ತ ಬಿಳಿಯನಾಯ್ಕರಿಗೆ ಹುಚ್ಚಪ್ಪ, ಕೊಲ್ಲನಾಯ್ಕ, ಕರಿಮುತ್ತನಾಯ್ಕರೆಂಬ ಸಹೋದರ ಸಂಬಂಧಿಗಳಿದ್ದರು. ಹುಚ್ಚಪ್ಪನಿಗೆ ಕೊಲ್ಲನಾಯ್ಕನೆಂಬ ಸ್ವಂತ ಸಹೋದರನಿದ್ದನು. ಹುಚ್ಚಪ್ಪ ಮತ್ತು ಗಾಮಮ್ಮಳಿಗೆ ಬಸವಿ, ಮೋಟಿ, ಹಿಂಗಾರಿ, ಬಂಗಾರಿ, ಬಿಳ್ಕಿ ಅನ್ನೋ ಐದು ಜನ ಹೆಣ್ಣು ಮಕ್ಕಳು, ತಿಮ್ಮಪ್ಪ, ನಾರಾಯಣಪ್ಪ ಅನ್ನೋ ಇಬ್ಬರು ಗಂಡು ಮಕ್ಕಳಿದ್ದರು. ಹಂಗಾಗಿ ನನಗೆ ಹುಚ್ಚಪ್ಪ ಅವ್ವನ ಅಪ್ಪನಾದ್ದರಿಂದ ಅಜ್ಜನಾಗಬೇಕು. ಗಾಮಜ್ಜಿಗೆ ನಾವೆಲ್ಲ ‘ಬೇಸೂರಮ್ಮ’ ಅಂತಾನೆ ಕರಿತಿದ್ವಿ. ಹುಚ್ಚಪ್ಪಜ್ಜನಿಗೆ ತನ್ನ ಸಹೋದರ ಕೊಲ್ಲಪ್ಪನ ಮೇಲೆ ಅತೀವ ಪ್ರೀತಿ. ಇವನನ್ನು ನೋಡಿ, ಹೆಣ್ಣು ಕೊಡೋರು ಯಾರು ಗತಿ ಇರಲಿಲ್ಲ. ತನ್ನ ತಮ್ಮನಿಗೆ ಏನಾದರೂ ಒಂದು ಮದುವೆ ಮಾಡಲೇಬೇಕು ಅನ್ನೋ ಒತ್ತಾಸೆ ಹುಚ್ಚಪ್ಪನಿಗೆ. ಕೊನೆಗೂ ತನ್ನ ಮಗಳು ಒಂಬತ್ತು ವರ್ಷದ ಬಸಮ್ಮನನ್ನು ಕತ್ರಿಕೊಪ್ಪದ ದೊಡ್ಡನಾಯ್ಕರಿಗೆ ಕೊಟ್ಟು, ಅಲ್ಲಿಂದ ಚಂದ್ರಮ್ಮಳನ್ನು ತರೋದು ಅನ್ನೋದು ಹಿರಿಯರು ತೀರ್ಮಾನ ಮಾಡಿದರು. ಕತ್ರಿಕೊಪ್ಪದ ಸಂಬಂಧ ಏನೋ ನಿರ್ಧಾರವಾಯಿತು. ಆದರೆ ದೊಡ್ಡನಾಯ್ಕರು ಯಾರು, ಹೇಗಿದ್ದಾರೆ, ಮನೆಪರಿಸ್ಥಿತಿ ಎಂತು, ಏನು ಯಾವ ಪೂರ್ವಪರ ಮಾಹಿತಿ ಇಲ್ಲದೇ ತೀರ್ಮಾನವನ್ನು ಹಿರಿಯರು ಮಾಡಿದರು. ಇದು ಗಾಮಜ್ಜಿಯ ಗಮನಕ್ಕೂ ಬಾರಲಿಲ್ಲ. ಮದುವೆ ದಿನ ಬಸಮ್ಮನಿಗೆ ಗೊತ್ತಾಗಿದ್ದು ತನಗೆ ಸರಿಯಾಗಿ ನಡೆಯಲು, ನಿಲ್ಲಲು ಬಾರದ, ಕಾಲಿನ ಸತು ಕಳೆದುಕೊಂಡ ವ್ಯಕ್ತಿಗೆ ತನ್ನನ್ನು ಮದುವೆ ಮಾಡಿಕೊಡುತ್ತಿದ್ದಾರೆಂಬ ಸುದ್ದಿ. ದೊಡ್ಡನಾಯ್ಕರಿಗೆ ಅಗಾಧ ಬುದ್ಧಿವಂತಿಕೆ, ಮನುಷ್ಯಪ್ರೀತಿ ಇದ್ದರೂ, ದೈಹಿಕ ಊನತೆಯನ್ನು ಮಾತ್ರ ಬಯಲು ಮಾಡದೇ ಬಸಮ್ಮಳನ್ನು ಕೊಟ್ಟು ಮದುವೆ ಮಾಡಿಸಿದ್ದರು. ಹಿರಿಯರ ತೀರ್ಮಾನವನ್ನು ಅಸಹಾಯಕತೆಯಿಂದ ಒಪ್ಪಿಕೊಂಡದ್ದು, ಗಾಮಮ್ಮಳಿಗೆ ಇದು ಯಾತನೆಗೂ ಕಾರಣವಾಯಿತು. ಮದುವೆ ಮಾಡಿ ಬಸಮ್ಮಳನ್ನು ಕಳಿಸಿದ್ದರೂ, ತಾನು ಹೋಗುವುದಿಲ್ಲವೆಂದು ಹಠ ಹೊತ್ತ ಒಂಬತ್ತರ ಪ್ರಾಯದ ಹುಡುಗಿಗೆ ಗಾಮಮ್ಮ ನೀಡಿದ ಬರೆ, ಹಿಡಿಮುಂಡಿ ಹೊಡ್ತ, ಸಿಕ್ಕಿ ಸಿಕ್ಕಿದ್ರಲ್ಲಿ ಬಡೆದದ್ದು ಒಂದೋ ಎರಡೋ ಬಾರಿಯಲ್ಲ. ಸಹಿಸಲಸಾಧ್ಯವಾಗಿ ಅಂತೂ ಕತ್ರಿಕೊಪ್ಪದ ದೊಡ್ಡಮನೆ ಸೇರಿದಳು. ಗಾಮಜ್ಜಿಗೆ ಬಂದ ಸಿಟ್ಟು ಬಾಹ್ಯದಲ್ಲ. ಅಂತರಂಗದ್ದು. ಹಗಲೆಲ್ಲ ಮಗಳಿಗೆ ಹೊಡೆದ್ರು, ರಾತ್ರಿಯೆಲ್ಲ ಕಣ್ಣಿಗೆ ನಿದ್ರೆ ಬಾರದೆ ಮಲಗಿದ ಹಾಸಿಗೆಯಲ್ಲಿಯೇ ಕಣ್ಣೀರಿಂದ ಒದ್ದೆಯಾಗಿದ್ದಳು.
ಹುಚ್ಚಪ್ಪಜ್ಜನಿಗೆ ನಮ್ಮವ್ವಂಗೆ ಹತ್ತು ವರ್ಷವಾಗಿದ್ದಾಗ ಕಾಲಿಗೆ ಬಿದಿರು ಮುಳ್ಳು ಹೊಕ್ಕಿದ್ದೇ ನೆಪವಾಗಿ, ಕಾಲು ಕೊಳೆತು, ನರಳಿ ಮರಣ ಹೊಂದಿದನು. ಅವಿಭಕ್ತ ಕುಟುಂಬದಲ್ಲಿ “ಬದುಕಿದವನು ಬದುಕಿದ, ಸತ್ತವನು ಸತ್ತ” ಅನ್ನೋ ಮಾತಿದೆ. ಗೌಂಟಿ ಔಷಧಿ ಫಲನೀಡದೆ ಮಕ್ಕಳನ್ನು ಬಿಟ್ಟು ಹೊರಟುಹೋದ. ಇನ್ನು ಮಕ್ಕಳೆಲ್ಲಾ ಚಿಕ್ಕಪ್ಪಂದಿರ ನೆರಳಲ್ಲಿ ಬದುಕು ಕಟ್ಟಿಕೊಳ್ಳಬೇಕಾಯಿತು. ಅಸಮಾನ ವಾತಾವರಣದಲ್ಲಿ ಜೀವ ಇಟ್ಟುಕೊಂಡು, ಬೇಸೂರ ಮನೆತನದಲ್ಲಿ ಬೇಯಿಸಿದ ಬಾಳೆಕಾಯಿಯಾದವಳು ಈ ಗಾಮಮ್ಮ. ಹುಟ್ಟಿದ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳಿಸೋದು ಹೆಂಗಪ್ಪ ಎಂದು ಕಣ್ಣೀರ ಕೂಳು ತಿಂದವಳು.
ಬೇಸೂರು ಮನೆತನದ ಬಿಳಿನಾಯ್ಕರ ಜೇಷ್ಠ ಪುತ್ರಿ ಪಾರ್ವತಿಗೆ ಹೊಳೆಂದಾಚೆಗೆ ವನಗದ್ದೆಗೆ ಸಂಬಂಧವಾಯಿತು. ಪಾರ್ವತಿಗೇನೋ ಒಳ್ಳೆ ಸಂಬಂಧ ಆಯಿತು. ಮನೆಮಂದಿಯೆಲ್ಲ ಸಂಭ್ರಮಿಸಿದರು. ಅದೇ ಹೊತ್ತಿಗೆ ಪಾರ್ವತಿ ಪ್ರಾಯದ ಹಿಂಗಾರಿ ಮನೆಯಲ್ಲಿದ್ದಳು. ಪಾರ್ವತಿಗೆ ಮದುವೆ ಮಾಡಿ, ಹಿಂಗಾರಿಯನ್ನು ಮನೆಯಲ್ಲಿಟ್ಟುಕೊಂಡರೆ ಜನ ಏನಂದರು ಅನ್ನೋ ಚಿಂತೆ ಬಿಳಿನಾಯ್ಕರನ್ನು ಕಾಡಿತು. ಹಂಗಾಗಿ ಖರ್ಚಿನಲ್ಲಿ ಖರ್ಚು. ಯಾವುದಾದ್ರೂ ಒಂದು ಸಂಬಂಧ ಇದ್ರೆ ಮದುವೆ ಮಾಡಿಬಿಡಬಹುದಿತ್ತಲ್ಲ… ಕಾಳನೊ ಬೋಳನೋ.. ಹೆಣ್ಣಿಗೊಂದು ಗಂಡು…..ಹಿಂಗೆ ಯೋಚ್ನೆಯಲ್ಲಿರುವ ಬಿಳಿನಾಯ್ಕರಿಗೆ ಉಂಡುಗೋಡು ಹೆಡ್‌ನಾಯ್ಕರು ಒಂದು ಸಂಬಂಧ ಹುಡ್ಕೊಂಡು ಬೇಸೂರಿಗೆ ಬಂದದ್ದು ಗೊತ್ತಾಯಿತು. ಅಪ್ಪ ಮತ್ತು ಹೆಡ್‌ಮಾವ ಹೆಣ್ ಹುಡ್ಕೊಂಡು ಬೇಸೂರು ಮನೆಯ ಉಣಗೋಲು ದಾಟುವಾಗ ಹತ್ತಾರು ಹುಡ್ಗೇರು ಈಚುಲು ಗುಡ್ಡದಲ್ಲಿನ ಗೇರುಮರದ ಚಂಡೆಯಲ್ಲಿ ಗೇರು ಹಣ್ಣು ಕೊಯ್ಯುವುದರಲ್ಲಿ ಮಗ್ನವಾಗಿದ್ದರು. ಯಾರೋ ಇಬ್ಬರು ಬಿಳಿ ಪಂಚೆ ಉಟ್ಕೊಂಡು ಬರೋದನ್ನು ನೋಡಿದ ಹುಡ್ಗೇರು ದಬಕ್ಕನೆ ಗೇರು ಮರದಿಂದ ಹಾರಿ ಮನೆಯತ್ತ ಓಡಿದರು. ಆಗ ಹೆಡ್ಮಾವ “ಏ ಹುಡ್ಗ ಅಲ್ನೋಡು… ಅಲ್ನೋಡು… ಅದೇ ಹುಡುಗಿ ಅಂತ ಅವ್ವನ ಕಡೆ ಕೈಬೆರಳ ತೋರಿಸಿ ಹೇಳಿದ”. ಇಲ್ಲಿ ನೋಡಿದವನು ಅವ್ವನನ್ನು ಗುರುತಿಸಿದವನು ಉಂಡುಗೋಡು ಹೆಡ್ಮಾವ. ಅದ್ಯಾವ ಸೂಕ್ಷ್ಮವೂ ಅಪ್ಪನಿಗಿರಲಿಲ್ಲ. ಆದರೆ ಅವ್ವ ಅಪ್ಪನನ್ನು, ಅಪ್ಪ ಅವ್ವನನ್ನು ಆ ದಿನಗಳಲ್ಲಿ ನೋಡಲಿಲ್ಲ….ಕಾಣಲಿಲ್ಲ.
ಬೇಸೂರು ಮನೆಗೆ ಹೋದ ಉಂಡುಗೋಡು ಹೆಡ್ಮಾವ ತಾನು ಬಂದಿರುವ ವಿಚಾರ ಹೇಳಿದ. ಇದನ್ನೇ ಕಾಯುತ್ತಿದ್ದ ಬಿಳಿನಾಯ್ಕರು ಕೊಟ್ಟಿಗೆಯಲ್ಲಿ ಸೆಗಣಿ ಬಾಚುತ್ತಿದ್ದ ಗಾಮಮ್ಮನನ್ನು ಕರೆದು, “ಹಿಂಗೊಂದು ಸಂಬಂಧ ಬಂದೈತೆ, ಹಿಂಗಾರಿ ಮದುವೆ ಮಾಡೋದನೆ….ಏನ್ ಹೇಳ್ತಿಯಾ…ಅಂತ ಕೇಳಿದ”. ಮೊದಲೇ ನಿರ್ಧಾರ ಮಾಡಿದ ಬಿಳಿನಾಯ್ಕರು ಕೇವಲ ಒಂದ್ಮಾತಿಗೆ ಕೇಳಿದಂಗಿತ್ತು ಅನ್ನೋದನ್ನು ಅರ್ಥ ಮಾಡ್ಕೊಂಡ ಗಾಮಮ್ಮ ‘ತಾಯಿಲ್ಲದ ಕರುವನ್ನು ಯಾರು ಹೊಡ್ಕಂಡು ಹೋದ್ರೆ ಏನು… “ನೀವೆಲ್ಲ ಒಪ್ಪಿದ್ರೆ ನಂದು ಅಂತ ಏನು ಹೇಳೋದು…” ಅನ್ನೊ ಉತ್ತರ ನೀಡಿದಳು. ಗಾಮಮ್ಮನ ಮಾತು ಕೇಳಿಸಿಕೊಂಡ್ರು ಕೇಳಿಸಿಕೊಳ್ಳದ ಬಿಳಿನಾಯ್ಕರು ನಮ್ಮ ಹುಡುಗಿ ಮಳೆಮಠಕ್ಕೆ ಕೊಡ್ತೀವಿ ಅನ್ನೋ ಮುದ್ರೆ ಒತ್ತಾಯ್ತು. ಮುಂದೆ ಮಳೆಮಠದ ಯಜಮಾನಜ್ಜ ಬಂದು ಒಂದು ಕೊಡ ಬೆಲ್ಲ, ಐವತ್ತು ಕೆಜಿ ಅಕ್ಕಿ, ಒಂದು ಕಂಡ್ಗ ಭತ್ತಕ್ಕೆ ತೆರೆ ಕೊಡಲು ಒಪ್ಪಿ ಸಂಬಂಧ ಕುದುರಿಸಿದ.
ಬೇಸೂರು ಯಜಮಾನಪ್ಪ ತನ್ನ ಮಗಳು ಪಾರ್ವತಿಯನ್ನು ಕೊಡುವಾಗ ಹತ್ತಾರು ಸಂಬಂಧಗಳಲ್ಲಿ ಹುಡುಕಿ, ಆರಿಸಿ, ಕೇರಿ, ತೂಗಿ, ಅಳೆದು ಸಂಬಂಧ ಮಾಡಿದನು. ವನಗದ್ದೆ ಗಿಡ್ಡನಾಯ್ಕರದ್ದು ಆ ಕಾಲಕ್ಕೆ ದೊಡ್ಡ ಹೆಸರು. ತನ್ನಿಬ್ಬರು ಗಂಡುಮಕ್ಕಳನ್ನು ಬಲುಜೋರಾಗಿ ಮಾಡಬೇಕೆಂಬ ಉಮೇದು. ಸುತ್ತಲಿನ ಜಮೀನ್ದಾರರಿಗೆ ಗಿಡ್ಡನಾಯ್ಕರ ಕಂಡ್ರೆ ಅಷ್ಟಕಷ್ಟೆ. ಯಾವುದಕ್ಕೂ ಜಗ್ಗದ ನಾಯ್ಕರು ಮದುಮಕ್ಕಳಿಗೆ ಸರ್ಜು ಕೋಟು ಹೊಲಿಸಿ ಮದುವೆ ಮಾಡಿಸ್ತಾನೆ ಅನ್ನೋ ಸುದ್ದಿ ಊರಜನಕ್ಕೆ ಎಲೆಅಡಿಕೆ ಆಗಿತ್ತು. ಒಳಗೊಳಗೆ ಉರಿಸಿಕೊಂಡ ಕೆಲ ಮಂದಿ ಗಿಡ್ಡನಾಯ್ಕರಿಂದ ದೂರವಿದ್ದುದ್ದೇ ಜಾಸ್ತಿ. ಯಾವುದಕ್ಕು ಜಗ್ಗದ, ಬಗ್ಗದ ಯಜಮಾನರೆಂದೇ ಹೆಸರು ಪಡೆದ ಗಿಡ್ಡನಾಯ್ಕರು ಸೀತೂರು ಗೌಡ್ರಿಂದ ಹಿಡಿದು ಕೆಲ ಪಾಳೆಗಾರಿಕೆ ಇಟ್ಟುಕೊಂಡವರಿಗೆ ಸಿಂಹಸ್ವಪ್ನವಾಗಿದ್ದವರು. ವನಗದ್ದೆಯವರು ಆ ಕಾಲಕ್ಕೆ ಅಡಿಕೆ ಬೆಳೆಗಾರರು. ಅನ್ನದ ಕೊರತೆ ಅವರ ಮನೆಯಿಂದ ನೂರಾರು ಮೈಲು ದೂರ. ಬೆಟ್ಟಗುಡ್ಡಗಳೋಪಾದಿಯಲ್ಲಿ ಹತ್ತಾರು ಭತ್ತದ ಹುಲ್ಲಿನ ಬಣವೆ, ಸಳ್ಳಿ ಸುತ್ತಿದ ಕಣಜಗಳು, ಭತ್ತ ತುಂಬುವ ಪಣತಗಳು, ನೂರಾರು ದನಕರು ಎಮ್ಮೆಗಳು, ಕೂಲಿಯವರನ್ನು ಹೊಂದಿದೆ ಮನೆತನ. ಅನ್ನವಿಲ್ಲದವರ ಪಾಲಿನ ಅನ್ನದೈವ ಈ ನಾಯ್ಕರು. ಇಂತಹ ಮನೆತನಕ್ಕೆ ಬೇಸೂರಿನ ಬಿಳಿನಾಯ್ಕರ ಜೇಷ್ಟಪುತ್ರಿಗೆ ಸಂಬಂಧ ಕುಲಾಯಿಸಿದ್ದು, ಬೇಸೂರಿನ ಸುತ್ತಮುತ್ತಲ ದೊಡ್ಡ ಸುದ್ದಿಯೇ ಆಗಿತ್ತು.
ನೆಲ್ಲೆಕೊಪ್ಪದ ಮುದ್ದಮ್ಮನ ತಂಗಿ ಸಾವಂತ್ರಿಯನ್ನು ಬೇಸೂರು ಕರಿಮುತ್ತನಾಯ್ಕನಿಗೆ ನಾಲ್ಕಾರು ವರ್ಷ ಹಿಂದೆಯೇ ಮದುವೆ ಮಾಡಿಕೊಟ್ಟಿದ್ದರು. ನೆಲ್ಲೆಕೊಪ್ಪದರು ಅಂದ್ರೆ ಆ ಕಾಲಕ್ಕೆ ಶ್ರೀಮಂತ ಮನೆತನ. ನಿಂಬಿಯರ ಮನೆಯಲ್ಲಿ ಹುಟ್ಟಿದ ಮುದ್ದಮ್ಮಂಗೆ ನೆಲ್ಲಕೊಪ್ಪಕ್ಕೆ ಬಂದಮೇಲೆ ಎಲ್ಲಿಲ್ಲದ ಭಾಗ್ಯವು ಬಂದಿತು. ಹಂಗೆ ಮಾತು ಕೂಡ ಬದಲಾಗಿತ್ತು. ಮುದ್ದಮ್ಮನ ತಂಗಿ ಸಾವಂತ್ರಿ ತಮ್ಮನೆಯಲ್ಲಿ ನಡೆಯುವ ಮದುವೆಗೆ ಮುದ್ದಮ್ಮಳಿಗೆ ‘ಅಕ್ಕ ಬರಲೇ ಬೇಕು’ ಎಂದು ಹಠ ಹಿಡಿದಿದ್ದಳು. ಅಷ್ಟಕ್ಕೂ ಸಾವಂತ್ರಿಗೆ ಆರು ತಿಂಗಳ ಗಂಡು ಕೂಸು ಮನೆಯಲ್ಲಿತ್ತು. ಅಕ್ಕ ಬಂದ್ರೆ ಕೂಸನ್ನಾದರೂ ಸ್ವಲ್ಪ ನೋಡಿಕೊಳ್ತಾಳೆ ಅನ್ನೊ ಸಣ್ಣ ಆಸೆ ಇರಬಹುದು. ಇನ್ನೂ ಸರಿಯಾಗಿ ಬಾಣಂತನ ಹರಿಯದ ಸಾವಂತ್ರಿ, ಮನೆಯಲ್ಲಿ ಲವಲವಿಕೆಯಿಂದ ಮದುವೆ ಕಾರ‍್ಯದಲ್ಲಿ ತೊಡಗಿಸಿ ಕೊಂಡಿದ್ದಳು. ಪಾರ್ವತಿ ಮದುವೆಯನ್ನು ಎಲ್ಲೆಂದರಲ್ಲಿ ಓಡಾಡಿಕೊಂಡು, ಶಾಸ್ತ್ರ, ಸಂಬಂಧ, ಹಸೆಗೋಡೆ, ಮನೆಗೆ ಕೆಮ್ಮಣ್ಣು ಸಾರಿಸೋದ್ರಿಂದ ಹಿಡಿದು, ಊರಿನ ಹೆಂಗಸರನ್ನೆಲ್ಲಾ ಸೇರಿಸಿ, ಅಕ್ಕಿ ಗನಾ ಮಾಡೋದು ಎಲ್ಲಂದರಲ್ಲಿ ಸಾವಂತ್ರಿ ಪಾತ್ರ ದೊಡ್ಡದಿತ್ತು. “ಆರು ತಿಂಗಳ ಕೂಸು ಇಟ್ಟಕೊಂಡು ಮದುವೆ ಮನೆ ಸೌರಸ್ಸೋದನ್ನು ಸಾವಂತ್ರಿ ನೋಡಿ ಕಲಿಯಬೇಕು” ಅಂತ ಎಲ್ಲಾ ಗಂಡಸರು ಹೊಗಳುವಷ್ಟು ಸಾವಂತ್ರಿ ಸಂಭ್ರಮಿಸುತ್ತಿದ್ದಳು. ಮುದ್ದಮ್ಮ ಬಂದವಳೇ “ಗಾಮಿ ಮಗಳು ಹಿಂಗಾರಿನ ಎಲ್ಲಿಗೆ ಕೊಡಾಕೆ ಮಾಡ್ಯಾರೆ…” ಎಂದ ದನಿ ಸೆಳೆದು ಕೇಳಿದಳು. ಅದೇ ಜಾಲ ಸೀಮೆಯ ಮಳೇಮಠಕ್ಕೆ ಎಂದು ಸಾವಂತ್ರಿ ಹೇಳಿದಳು. ಅಲ್ಲೇ ಗಾಮಮ್ಮಳು, ಹಿಂಗಾರಿಯೂ ಅವಳ ತಂಗಿಯರು ಇದ್ರು. ಇದ್ಯಾವುದನ್ನು ಲೆಕ್ಕಿಸದ ಮುದ್ದಮ್ಮ “ತಂಗಳು ಬಾನಕ್ಕೆ ನೀರು ಹೊಯ್ದು ಉಣ್ಣೋರೆಲ್ಲ ಇಂತಹ ಮನೆಗೆ ಸೇರ‍್ತಾವಪ್ಪ” ಎಂದಳು. ಮಳೆಮಠದವರಿಗೆ ಅನ್ನ ಕೊರತೆಯಿಲ್ಲ ಎನ್ನುವುದು ಗೊತ್ತಿದ್ದ ಮುದ್ದಮ್ಮಳು ಗಾಮಮ್ಮಳ ಮಗಳು ಇಂತಹ ಮನೆಗೆ ಸೇರ‍್ತಾಳೆ ಅನ್ನೋದನ್ನು ಕನಸು ಮನಸ್ಸಿನಲ್ಲಿಯೂ ಯೋಚಿಸಿಲ್ಲವನ್ನು ನುಂಗಿಕೊಂಡ ಗಾಮಜ್ಜಿ ಮೌನಿಯಾಗಿದ್ದಳು.
ಡಾ. ಅಣ್ಣಪ್ಪ ಎನ್ ಮಳೀಮಠ್
ಸಹ ಪ್ರಾಧ್ಯಾಪಕರು
(ಈ ಕಥೆಯ ಎರಡನೆಯ ಭಾಗ ನಾಳೆ ಪ್ರಕಟವಾಗಲಿದೆ)
ಇದನ್ನೂ ಓದಿ- ತಿರುಪತಿ ಲಡ್ಡು ಮತ್ತು ಸಮಾಜಕ್ಕೆ ನಾಯ್ಡು ಒಳ ಗುದ್ದು