ಬೆಂಗಳೂರು: ಪ್ರತಿಷ್ಠಿತ ನಮ್ಮ ಮೆಟ್ರೋದಲ್ಲಿ ಯುವತಿಯೊಬ್ಬಳನ್ನು ಗುರಿಯಾಗಿಟ್ಟುಕೊಂಡು ಪ್ರಯಾಣಿಕರ ಎದುರು ಭದ್ರತಾ ಸಿಬ್ಬಂದಿಯೊಬ್ಬಾತ ಹಸ್ತಮೈಥುನ ಮಾಡಿಕೊಳ್ಳುವ ಆತಂಕಕಾರಿ ಘಟನೆಯೊಂದು ವರದಿಯಾಗಿದೆ.
ಘಟನೆಯಿಂದ ವಿಚಲಿತರಾದ ಮಹಿಳೆಯರು, ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ಹಂಚಿಕೊಂಡಿದ್ದು, ಬೆಂಗಳೂರು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿಡಿಯೋದಲ್ಲಿ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್ ಬಳಿ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ಮುಟ್ಟುತ್ತ, ಪ್ರಯಾಣಿಕರ ಎದುರೇ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯ ಕಂಡುಬಂದಿದೆ.
ಮಹಿಳೆ ಈ ಸಂಬಂಧ ಪೋಸ್ಟ್ ಮಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ʻʻಇಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ನನ್ನನ್ನೇ ಗುರಾಯಿಸಿಕೊಂಡು ಎದುರು ಪ್ಲಾಟ್ ಫಾರ್ಮ್ ನಲ್ಲಿ ತನ್ನ ಖಾಸಗಿ ಅಂಗವನ್ನು ಮುಟ್ಟುತ್ತ ಇರುವುದನ್ನು ಗಮನಿಸಿದೆ. ಇದು ಮಧ್ಯಾಹ್ನ 2.30ರ ಸುಮಾರಿಗೆ ನಡೆಯಿತುʼʼ ಎಂದು ಅವರು ಹೇಳಿದ್ದಾರೆ.
ಈ ಘಟನೆ ಹಾಡಹಗಲೇ ನಡೆಯುತ್ತಿತ್ತು. ನನಗೆ ಅತ್ಯಂತ ಮುಜುಗರ ತಂದ ದೃಶ್ಯವದು. ನಾನು ಆತನನ್ನು ಈ ಬಗ್ಗೆ ಕೇಳಬೇಕೆಂದುಕೊಂಡೆ, ಆತ ಕೆಟ್ಟದಾಗಿ ಸನ್ನೆ ಮಾಡುತ್ತ ನನ್ನನ್ನೇ ಗುರಾಯಿಸುತ್ತಿದ್ದ. ಹೀಗಾಗಿ ನಾನು ಅವನ ವಿಡಿಯೋ ಮಾಡಿಕೊಂಡೆ ಅವರು ಹೇಳಿದ್ದಾರೆ.
ಮಹಿಳೆ ವಿಡಿಯೋವನ್ನು ಬೆಂಗಳೂರು ಮೆಟ್ರೋ ಅಧಿಕಾರಿಗಳಿಗೆ ಕಳುಹಿಸಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ದೂರು ನೀಡಿದ ಮೇಲೆ ಮೆಟ್ರೋ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಮಹಿಳೆ ಘಟನೆಯ ವಿವರಗಳನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಆಕೆಯನ್ನು ಸಂಪರ್ಕಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಮೆಟ್ರೋ ಅಧಿಕಾರಿಗಳು ಈಗಾಗಲೇ ವ್ಯಕ್ತಿಯನ್ನು ಗುರುತಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಮೆಟ್ರೋ ವಕ್ತಾರ ಯಶವಂತ ಚೌಹಾಣ್ ಹೇಳಿದ್ದಾರೆ.