ಕದ್ದ ಬೈಕ್‌ ಅನ್ನು ಪೆಟ್ರೋಲ್‌ ಸಹಿತ ಮರಳಿಸಿದ ವ್ಯಕ್ತಿ; ತಮಿಳುನಾಡಿನಲ್ಲಿ ವೈರಲ್‌ ಆದ ಸುದ್ದಿ

Most read

ತಮಿಳುನಾಡು: ಕಳ್ಳತನ ಮಾಡಿ ಕಳವು ಮಾಡಿದ ಚಿನ್ನಭರಣಗಳಗಳನ್ನು ಮರಳಿಸಿರುವ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲೂ ತಾಳಿಯನ್ನು ಕದಿಯದ ಅಥವಾ ಕದ್ದ ಮೇಲೆ ಮರಳಿಸದ ಅನೇಕ ಉದಾಹರಣೆಗಳನ್ನು ದೇಶಾದ್ಯಂತ ಕಂಡುಬರುತ್ತಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೈಕ್‌ ಕದ್ದು ನಂತರ  1500 ರೂ. ಮತ್ತು ಕ್ಷಮಾಪಣಾ ಪತ್ರದೊಂದಿಗೆ ಬೈಕನ್ನು ಮಾಲೀಕನಿಗೆ ಮರಳಿಸಿದ ಉದಾಹರಣೆ ತಮಿಳುನಾಡಿನಲ್ಲಿ ನಡೆದಿದೆ.  

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತಿರುಪ್ಪುವನಂ ಪ್ರದೇಶದ ಬಳಿ ಇರುವ ಡಿ. ಪಳಯೂರು ಎಂಬ ಗ್ರಾಮದಲ್ಲಿ ವೀರಮಣಿ ಎಂಬುವರ ಬೈಕ್‌ ಕಳುವಾಗಿತ್ತು. ವೀರಮಣಿ ತಿರುಪ್ಪುವನಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಬೈಕ್‌ಗಾಗಿ ಹುಡುಕಾಟ ನಡೆಸಿದರಾದರೂ ಬೈಕ್‌ ಪತ್ತೆಯಾಗಿರಲಿಲ್ಲ.

ಕೆಲವು ದಿನಗಳ ನಂತರ ರಾತ್ರಿ ಇದ್ದಕ್ಕಿದ್ದಂತೆ ಬೈಕ್‌ ವೀರಮಣಿಯ ಮನೆಯ ಮುಂದೆ ಪ್ರತ್ಯಕ್ಷವಾಗಿತ್ತು. ಬೈಕ್‌ನಲ್ಲಿ ಒಂದು ಪತ್ರವೂ ಪತ್ತೆಯಾಗಿತ್ತು. ವೀರಮಣಿ ತಕ್ಷಣ ಈ ವಿಷಯದ ಬಗ್ಗೆ ತಿರುಪ್ಪುವನಂ ಪೊಲೀಸರಿಗೆ ಮಾಹಿತಿ ನೀಡಿದನು. ಸ್ಥಳಕ್ಕೆ ಬಂದ ಪೊಲೀಸರೂ ಪತ್ರವನ್ನು ಓದಿ ಆಶ್ಚರ್ಯಚಕಿತರಾದರು.

ನಾನು ಈ ಮಾರ್ಗದಲ್ಲಿ ಸಾಗುತ್ತಿರುವಾಗ ಹೆದ್ದಾರಿಯ ಬಳಿ ಒಂದು ಸಮಸ್ಯೆಯನ್ನು ಎದುರಿಸಿದೆ. ಆ ಸಂದರ್ಭದಲ್ಲಿ ನಿಮ್ಮ ಬೈಕನ್ನು ನೋಡಿದೆ. ಆ ಕ್ಷಣಕ್ಕೆ ನಿಮ್ಮ ಬೈಕ್‌ ಅನ್ನು ತೆಗೆದುಕೊಂಡು ಹೋಗುವುದು ತಪ್ಪೆಂದು ಭಾವಿಸಲಿಲ್ಲ. ನಂತರ ತಪ್ಪು ಮಾಡಿದ್ಧೇನೆ ಎಂಬ ಭಾವನೆ ನನ್ನನ್ನು ಕಾಡತೊಡಗಿತು. ಆದ್ದರಿಂದ 450 ಕಿಲೋಮೀಟರ್‌ ಹಿಂದಕ್ಕೆ ಪ್ರಯಾಣಿಸಿ ನಿಮ್ಮ ಬೈಕನ್ನು ನಿಮಗೆ ತಲುಪಿಸಿದ್ಧೇನೆ. ತುರ್ತು ಸಂದರ್ಭದಲ್ಲಿ ನಿಮ್ಮ ಬೈಕ್‌ ನನಗೆ ತುಂಬಾ ಸಹಾಯ ಮಾಡಿದೆ. ಅದಕ್ಕಾಗಿ ನಿಮಗೆ ನಾನು ಋಣಿಯಾಗಿದ್ದೇನೆ. ಜೊತೆಗೆ ಪೆಟ್ರೋಲ್‌ ಹಣ 1500 ರೂ. ನ್ನು ಕೂಡಾ ಇಟ್ಟಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಈ ಸುದ್ದಿ ತಮಿಳುನಾಡಿನಲ್ಲಿ ಸಾಕಷ್ಟು ವೈರಲ್‌ ಆಗಿದ್ದು ಆ ವ್ಯಕ್ತಿಯ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

More articles

Latest article