ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಬೃಹತ್ ಗಾತ್ರದ ಮರದ ಕೊಂಬೆಯೊಂದು ಮುರಿದು ಬಿದ್ದು 4 ಮಕ್ಕಳು ಸೇರಿ 6 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಾರುತಿ ಸೇವಾನಗರದಲ್ಲಿ ಘಟನೆ ಸಂಭವಿಸಿದೆ. ಘಟನೆ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಾಣಿಕ್ಯವೇಲ್ ಎಂಬುವವರಿಗೆ ಗಂಭೀರವಾದ ಗಾಯಗಳಾಗಿವೆ. ಮತ್ತೋರ್ವರನ್ನು ವಿಜಯಲಕ್ಷ್ಮಿ ಎಂದು ಗುರುತಿಸಿದ್ದು, ಅವರು ತೊಡೆಯ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ.
ಈ ಘಟನೆಯಿಂದಾಗಿ ನಾಲ್ವರು ಶಾಲಾ ಮಕ್ಕಳಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರ ತೆರವಿಗೆ ಸ್ಥಳೀಯರು ಮನವಿ ಮಾಡಿದ್ದರೂ ತೆರವು ಮಾಡಲಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.