“ಕಟ್ಟಡ ಹೇಳುವ ಕತೆ”

Most read

ಮಹಾನಗರವೊಂದರನ್ನು ಚಂದಗಾಣಿಸುವ ಚರ್ಚೆಗಳು ಶುರುವಾದಾಗ ಅದರ ಐತಿಹಾಸಿಕ ಹಿನ್ನೆಲೆ ಮತ್ತು ಜಾಗತಿಕ ಪ್ರಾಮುಖ್ಯತೆಗಳಿಗೆ ತಕ್ಕಂತೆ ಅಲ್ಲಿಯ ಕಟ್ಟಡಗಳನ್ನು ನಿರ್ಮಿಸುವುದು ಕೂಡ ಮುಖ್ಯವಾಗುತ್ತದೆ. ಇದರಿಂದೇನು ಲಾಭ ಎಂದು ಹೆಚ್ಚಿನವರು ಕೇಳಬಹುದು. ಮಹಾ ಏನಿಲ್ಲದಿದ್ದರೂ ನಗರಗಳ ಸೌಂದರ್ಯವನ್ನು ಈ ಬಗೆಯ ಕೆಲ ಚಿಕ್ಕ ಹೆಜ್ಜೆಗಳು ಒಂದಿಷ್ಟು ವರ್ಧಿಸಬಲ್ಲವು. ಇದೂ ಒಂದು ಬಗೆಯ ಸೌಂದರ್ಯಪ್ರಜ್ಞೆಯೇ- ಪ್ರಸಾದ್‌ ನಾಯ್ಕ್‌, ದೆಹಲಿ.

ದಿಲ್ಲಿಯ ನಿವಾಸಿಗಳಿಗೆ ಚಾಣಕ್ಯಪುರಿಯ ಬಗ್ಗೆ ಖಂಡಿತ ಗೊತ್ತಿರುತ್ತದೆ.

ಚಾಣ್ಯಕಪುರಿಯು ನವದೆಹಲಿಯಲ್ಲಿರುವ ಅತ್ಯಂತ ಪ್ರಮುಖವಾದ ಮತ್ತು ಸುಂದರವಾದ ಪ್ರದೇಶಗಳಲ್ಲೊಂದು. ಚಾಣಕ್ಯಪುರಿಯೆಂದರೆ ನಮಗೆ ಥಟ್ಟನೆ ನೆನಪಾಗುವುದೇ ವಿವಿಧ ದೇಶಗಳ ರಾಯಭಾರ ಕಚೇರಿಗಳು. ಭಾರತದ ಖ್ಯಾತ ತತ್ವಶಾಸ್ತ್ರಜ್ಞ, ರಣತಂತ್ರ ಪರಿಣತ ಮತ್ತು ರಾಜತಾಂತ್ರಿಕ ನಿಪುಣನಾಗಿದ್ದ ಚಾಣಕ್ಯನ ಹೆಸರನ್ನಿಡಲಾಗಿರುವ ಸದರಿ ಪ್ರದೇಶವು ಈ ರೀತಿಯಲ್ಲಿ ನಿಜಕ್ಕೂ ಚಾಣಕ್ಯನ ನಗರಿಯೇ. ಒಂದೆಡೆ ದೇಶದ ಶಕ್ತಿಕೇಂದ್ರಗಳಂತಿರುವ ಸಂಸತ್ ಭವನ, ರಾಷ್ಟ್ರಪತಿ ಭವನಗಳಿಗೂ ಸಮೀಪ. ಇತ್ತ ತನ್ನ ಉದ್ದಗಲಕ್ಕೂ ರಾಯಭಾರ ಕಚೇರಿಗಳನ್ನೊಳಗೊಂಡು ಜಾಗತಿಕ ಮಾಧ್ಯಮಗಳಿಗೆ ಆಹಾರವಾಗಬಲ್ಲ ಸೂಕ್ಷ್ಮ ಪ್ರದೇಶವೂ ಹೌದು.

ನಿಸ್ಸಂದೇಹವಾಗಿ ಇದರ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡೇ ಚಾಣಕ್ಯಪುರಿಯನ್ನು ವಿನ್ಯಾಸ ಮಾಡಲಾಗಿದೆ ಮತ್ತು ಅದರ ನಿರ್ವಹಣೆಯೂ ಕಾಲಕಾಲಕ್ಕೆ ನಿಯಮಿತವಾಗಿ ನಡೆಯುತ್ತದೆ. ಅಸಲಿಗೆ ಲ್ಯೂಟೆನ್ಸ್ ದಿಲ್ಲಿಯ ಮೊದಲ ವಿಸ್ತರಣೆಯಾಗಿ ಚಾಣಕ್ಯಪುರಿಯನ್ನೇ 50ರ ದಶಕದಲ್ಲಿ ಅಭಿವೃದ್ಧಿ ಪಡಿಸಲಾಯಿತು. ಆಯಾ ದೇಶಗಳ ಸಂಸ್ಕೃತಿಯನ್ನು ಬಿಂಬಿಸುವಂತೆ ಕಾಣುವ ವಿವಿಧ ದೇಶಗಳ ರಾಯಭಾರ ಕಚೇರಿಗಳು, ಕಣ್ಣುಹಾಯಿಸಿದಲ್ಲೆಲ್ಲ ಮುದ ನೀಡುವ ಹಸಿರು, ಹೆಸರೇ ಗೊತ್ತಿಲ್ಲದ ಬಣ್ಣಬಣ್ಣದ ಮಿನುಗುವ ಹೂಗಳು, ಅಗಲವಾದ ರಸ್ತೆಗಳು, ಅಗತ್ಯವಿಲ್ಲದ ಸೌಲಭ್ಯಗಳು-ಪರಿಕರಗಳಿಂದ ಸಂಪೂರ್ಣವಾಗಿ ಕಳಚಿಕೊಂಡಿರುವ ಶಿಸ್ತುಬದ್ಧವಾದ ವ್ಯವಸ್ಥೆ… ಹೀಗೆ ಚಾಣಕ್ಯಪುರಿಯನ್ನು ನೋಡುವುದೇ ಒಂದು ಚಂದ. ಇಲ್ಲಿಯ ರಾಯಭಾರ ಕಚೇರಿಗಳಿಗೆ ಎಲ್ಲರಿಗೆ ಹೋಗುವುದು ಕಷ್ಟವಾದರೂ ಈ ರಸ್ತೆಯಿಂದ ಹಾದುಹೋಗುವುದೇ ಬಹುತೇಕರಿಗೆ ಒಂದು ಸೊಗಸು.

ದೆಹಲಿಯ ಲೋಟಸ್‌ ಟೆಂಪಲ್

ಇದು ಚಾಣಕ್ಯಪುರಿಯೆಂಬ ಸ್ವರ್ಗದ ವಾಸ್ತವ. ಇದು ವರ್ತಮಾನದ ಒಂದು ಮುಖ. ಈಗ ವರ್ತಮಾನದ ಮತ್ತೊಂದು ಮುಖದತ್ತ ಬರೋಣ. ಇಂತಹ ರಸ್ತೆಯಲ್ಲೊಂದು ಕಟ್ಟಡ ಕಾಮಗಾರಿ ನಡೆಯುತ್ತಿದೆ. ಅದನ್ನು ಸರಕಾರಿ ಕಟ್ಟಡವೆಂದೇ ಇಟ್ಟುಕೊಳ್ಳೋಣ. ಕಟ್ಟಡ ನಿರ್ಮಾಣದ ಯೋಜನೆಯನ್ನು ಹಾಕಿಕೊಂಡಿದ್ದ ಸರಕಾರಿ ಮಂತ್ರಾಲಯವೂ, ಕೆಲಸವನ್ನು ವಹಿಸಿಕೊಂಡ ಗುತ್ತಿಗೆದಾರನೂ ಈ ಬಗ್ಗೆ ಅಗ್ರಿಮೆಂಟ್ ಒಂದಕ್ಕೆ ಸಹಿ ಹಾಕಿರುತ್ತಾರೆ. ಅದರಲ್ಲಿ ಎರಡು ವರ್ಷದೊಳಗೆ ಕಾಮಗಾರಿ ಮುಗಿದು ಕಟ್ಟಡವನ್ನು ಮಂತ್ರಾಲಯಕ್ಕೆ ಹಸ್ತಾಂತರಿಸಬೇಕು ಎಂದು ದಾಖಲಾಗಿರುತ್ತದೆ. ಆದರೆ ಥರಹೇವಾರಿ ಸಮಸ್ಯೆಗಳಿಂದಾಗಿ ಕಟ್ಟಡವು ಆರು ವರ್ಷಗಳ ನಂತರ ಸಿದ್ಧವಾಗುತ್ತದೆ. ನಂತರ ಪರಿಶೀಲನೆ, ಹಸ್ತಾಂತರ ಸಂಬಂಧಿ ದಸ್ತಾವೇಜುಗಳ ಸಿದ್ಧತೆ, ಅಂತಿಮ ಬಿಲ್ಲುಗಳ ಪಾವತಿ ಇತ್ಯಾದಿಗಳು ಮುಗಿಯುವಷ್ಟರಲ್ಲಿ ಮತ್ತೊಂದು ವರ್ಷ ಕಳೆದಿರುತ್ತದೆ. ಇದು ಸಾಮಾನ್ಯ ಲೋಕರೂಢಿ ಎಂಬಂತೆ ಎಲ್ಲರೂ ತಲೆದೂಗುತ್ತಾರೆ ಕೂಡ.

ಹೀಗೆ ಎರಡು ವರ್ಷಗಳ ಗುರಿಯನ್ನಿಟ್ಟುಕೊಂಡು ಆರೇಳು ವರ್ಷಗಳಲ್ಲಿ ಸಿದ್ಧವಾಗುವ ಈ ಕಟ್ಟಡವು ನೋಡಲಾದರೂ ಲಾಯಕ್ಕಿರಬಹುದು ಅಂತನ್ನಿಸಿದರೆ ಅಂಥದ್ದೇನೂ ಇರುವುದಿಲ್ಲ. ಅದೊಂದು ಸಾಮಾನ್ಯ ಶಾಪಿಂಗ್ ಕಾಂಪ್ಲೆಕ್ಸಿನಷ್ಟೇ ಸರಳವಾಗಿರುತ್ತದೆ. ಕ್ರಿಯೇಟಿವಿಟಿಯ ಯಾವುದೇ ಕುರುಹಿಲ್ಲದ, ಅದೇ ಚಚ್ಚೌಕ-ಆಯತಾಕಾರದ, ಎತ್ತರದ ಕಟ್ಟಡ. ಅಷ್ಟೇ! ಯಾವುದೋ ಒಂದು ಸಾಮಾನ್ಯ ಮಾರುಕಟ್ಟೆ ಸಂಕೀರ್ಣದಲ್ಲೋ, ರಿಯಲ್ ಎಸ್ಟೇಟಿನ ಫ್ಲಾಟಿನಲ್ಲೋ ಇಂತಹ ಕಟ್ಟಡವೊಂದು ಎದ್ದೇಳುವುದು ವಿಶೇಷವಲ್ಲ. ಆದರೆ ಐತಿಹಾಸಿಕ ಹಿನ್ನೆಲೆಯಿರುವ, ಜಾಗತಿಕ ಪ್ರಾಮುಖ್ಯತೆಯಿರುವ, ಶಕ್ತಿಕೇಂದ್ರಗಳಂತಹ ಪ್ರದೇಶಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳು ಆಯಾ ಪ್ರದೇಶದ ಆತ್ಮವನ್ನೂ ತನ್ನೊಳಗೆ ತುಂಬಿಕೊಂಡಿದ್ದರೆ ಆ ವಾಸ್ತುಶಿಲ್ಪವು ಬಿಂಬಿಸುವ ಒಟ್ಟಾರೆ ಪರಿಣಾಮವೇ ಬೇರೆ.

ದೆಹಲಿಯ ಪೈಜಾಮಾ ಬಿಲ್ಡಿಂಗ್

ಉದಾಹರಣೆಗೆ ಸಂಸತ್ ಭವನದಂತಹ ಆಯಕಟ್ಟಿನ ಪ್ರದೇಶದಲ್ಲಿ ಸರಕಾರಿ ಕಾರ್ಯಾಲಯವೊಂದನ್ನು ಕಟ್ಟುವುದಾದರೆ ಅದನ್ನೊಂದು ಶೆಡ್ಡಿನಂತೆ ಅಥವಾ ಕೋಳಿಗೂಡಿನಂತೆ ನಿರ್ಮಿಸಲಾಗುವುದಿಲ್ಲ. ಇದು ವಿಧಾನಸೌಧ, ಹೈಕೋರ್ಟ್ ಆವರಣ ಅಥವಾ ಈ ಬಗೆಯ ಬಹುತೇಕ ಎಲ್ಲಾ ಜಾಗಗಳಿಗೆ ಅನ್ವಯವಾಗುವಂಥದ್ದು. ಅಷ್ಟಕ್ಕೂ ನಿರ್ಮಿಸಿದ್ದೇ ಆದಲ್ಲಿ ಅದೊಂದು ಅಪಸವ್ಯದಂತೆ ಕಾಣುವುದು ಖಚಿತ. ಹಾಗಾದಾಗ ಇಡೀ ಏರಿಯಾದ ಸೌಂದರ್ಯಕ್ಕೆ ಒಂದೇ ಒಂದು ಕಟ್ಟಡದಿಂದಾಗಿ ಕಪ್ಪುಚುಕ್ಕೆ ಬಂದಂತಾಗುತ್ತದೆ. ಆದರೆ ಕೆಲ ಅಧಿಕಾರಿಗಳ ಮತ್ತು ದೂರದೃಷ್ಟಿಯಿಲ್ಲದ ಸಂಸ್ಥೆಗಳ ಮುಖ್ಯಸ್ಥರಿಂದಾಗಿ ಕೆಲವೊಮ್ಮೆ ಹೀಗಾಗುವುದೂ ಇದೆ. ಕಟ್ಟಡಗಳ ನವೀಕರಣ, ಇರುವ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಹೊಸದನ್ನು ನಿರ್ಮಿಸಬೇಕಾಗುವ ಅನಿವಾರ್ಯತೆ… ಇತ್ಯಾದಿ ಸನ್ನಿವೇಶಗಳು ಸೃಷ್ಟಿಯಾಗುವುದು ಇಂತಹ ಸಂದರ್ಭಗಳಲ್ಲೇ!

ಹಾಗಂತ ಅಧಿಕಾರಿಯೊಬ್ಬನಿಗೆ ದೂರದೃಷ್ಟಿಯಿದ್ದ ಮಾತ್ರಕ್ಕೆ ಎಲ್ಲವೂ ಆಗುವುದಿಲ್ಲ. ರಾಷ್ಟ್ರೀಯ  ಚಲನಚಿತ್ರೋತ್ಸವಕ್ಕೆ ಸಂಬಂಧಪಟ್ಟಂತೆ ಬೃಹತ್ ಆಡಿಟೋರಿಯಂ ಒಂದನ್ನು ನಿರ್ಮಿಸುವ ಯೋಜನೆಯ ಕೆಲ ಮಾತುಕತೆಗಳಲ್ಲಿ ನಾನು ಭಾಗವಹಿಸಿದ್ದೆ. ಮಂತ್ರಾಲಯದಲ್ಲಿದ್ದ ಐ.ಎ.ಎಸ್, ಐ.ಆರ್.ಎಸ್ ಅಧಿಕಾರಿಗಳು ಇಲಾಖೆಯು ತನ್ನ ಅಸ್ತಿತ್ವವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಬಲ್ಲ ಕಟ್ಟಡವೊಂದನ್ನು ನಿರ್ಮಿಸುವ ಉಮೇದಿನಲ್ಲಿದ್ದರು. ಈ ದೇಶದ ಪ್ರಖ್ಯಾತ ವಾಸ್ತುಶಿಲ್ಪ ತಜ್ಞರನ್ನು ಸಂಪರ್ಕಿಸಿ, ಅವರಿಂದ ವಿನೂತನ-ಪರಿಸರ ಸ್ನೇಹಿ ವಿನ್ಯಾಸವೊಂದನ್ನು ತರಿಸಿಕೊಳ್ಳುವ ಯೋಜನೆಗಳೂ ಅವರಿಗಿದ್ದವು. ಆದರೆ ಮುಂದಿನ ಹಂತದಲ್ಲಿ ಬೆಳವಣಿಗೆಗಳು ಕೊಂಚ ನಿಧಾನವಾದವು. ಇನ್ನು ಇವೆಲ್ಲದರ ಸಂಪೂರ್ಣ ಪ್ರಕ್ರಿಯೆಯು ಬಹಳ ದೀರ್ಘವಾದ್ದರಿಂದ ಇದು ನಿರೀಕ್ಷಿತವೂ ಆಗಿತ್ತು. ಎಷ್ಟಾದರೂ ಸುಮ್ಮನೆ ಒಂದು ಶೆಡ್ಡನ್ನೋ, ಗೋದಾಮನ್ನೋ ನಿರ್ಮಿಸಿ ಕೈತೊಳೆದು ಹೋಗುವುದಲ್ಲವಲ್ಲ!

ಆದರೆ ಸರಳಾತಿಸರಳ ಕಾಮಗಾರಿಯಲ್ಲೂ ಇಂತಹ ಅಪಸವ್ಯಗಳಾದಾಗ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಉದಾಹರಣೆಗೆ ಬಿಹಾರದಲ್ಲಿ ನಿರ್ಮಿಸಲಾಗಿದ್ದ ಒಂದು ಕ್ಲಾಕ್ ಟವರ್ (ಘಂಟಾಘರ್) ಬೇರೆಯದೇ ಕಾರಣಗಳಿಂದಾಗಿ ಇಂಟರ್ನೆಟ್ ಜಗತ್ತಿನಲ್ಲಿ ಅಪಹಾಸ್ಯಕ್ಕೊಳಗಾಯಿತು. ಅಂದಾಜು ನಲವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆಯೆಂದು ಹೇಳಲಾಗುವ ಈ ಕ್ಲಾಕ್ ಟವರ್ ನೋಡಲು ಸರಳವಾದ ಒಂದು ಕಾಂಕ್ರೀಟು ಕಂಬದಂತಿದೆ. ಥೇಟು ಫ್ಲೈ-ಓವರ್ ಅಥವಾ ಮೆಟ್ರೋ ಲೈನುಗಳ ಪಿಲ್ಲರುಗಳಂತೆ! ಅಂದಹಾಗೆ ಈ ಕ್ಲಾಕ್ ಟವರ್ ಲೋಕಾರ್ಪಣೆಯಾದ ಮರುದಿನವೇ ಗಡಿಯಾರದ ಕೆಲ ಭಾಗಗಳನ್ನು ಯಾರೋ ಕಿಡಿಗೇಡಿಗಳು ಕದ್ದೊಯ್ದಿದ್ದರಂತೆ. ಹೀಗಾಗಿ ಟವರಿನಲ್ಲಿ ಅಳವಡಿಸಲಾಗಿದ್ದ ಗಡಿಯಾರವೂ ಕೈಕೊಟ್ಟಿತ್ತು.

ಬಿಹಾರದ ಘಂಟಾಘರ್

ಇದೇ ಮಾದರಿಯಲ್ಲಿ ಬಹಳ ಟೀಕೆ ಮತ್ತು ಅಪಹಾಸ್ಯಕ್ಕೀಡಾದ ಮತ್ತೊಂದು ಸಂಗತಿಯೆಂದರೆ ಮಧ್ಯಪ್ರದೇಶದಲ್ಲಿದೆಯೆಂದು ಹೇಳಲಾದ ಒಂದು ಫ್ಲೈ-ಓವರ್. ವಿಚಿತ್ರವೆಂದರೆ ತಿರುವಿನ ಜಾಗದಲ್ಲಿ ಮೊನಚಾದ 90 ಡಿಗ್ರಿ ಕೋನವು ಬರುವಂತೆ ಈ ರಸ್ತೆಯನ್ನು ನಿರ್ಮಿಸಲಾಗಿದೆ ಅನ್ನುವಂಥದ್ದು. ತಿರುವುಗಳು ಸಾಮಾನ್ಯವಾಗಿ ವೃತ್ತ ಅಥವಾ ಅಂಡಾಕಾರದಲ್ಲಿದ್ದಷ್ಟು ಚಾಲಕರಿಗೆ ವಾಹನಗಳನ್ನು ತಿರುಗಿಸುವುದು ಸುಲಭ. ಸುರಕ್ಷತೆಯ ದೃಷ್ಟಿಯಲ್ಲೂ ಇದು ಅತ್ಯವಶ್ಯಕ. ಇನ್ನು ನೂರಾರು ಮಂದಿ ಎಂಜಿನಿಯರು / ಅಧಿಕಾರಿಗಳು ಪಾಲುದಾರರಾಗಿರುವ ಪ್ರಾಜೆಕ್ಟುಗಳಲ್ಲಿ ಇಂತಹ ಮೂಲಭೂತ ಅಂಶಗಳು ಕಾಣದಿದ್ದಾಗ ಅಚ್ಚರಿ ಮತ್ತು ವಿರೋಧಗಳು ಬರುವುದು ಕೂಡ ಸಹಜ. ಒಂದು ವರದಿಯ ಪ್ರಕಾರ ಈ ಫ್ಲೈ-ಓವರ್ ನಿರ್ಮಾಣಕ್ಕಾಗಿ ತಗುಲಿರುವ ವೆಚ್ಚ ಅಂದಾಜು 20 ಕೋಟಿ ಮತ್ತು ವ್ಯಯಿಸಿದ್ದ ಸಮಯ ಬರೋಬ್ಬರಿ ಹತ್ತು ವರ್ಷಗಳು.

ಇಲ್ಲೊಂದು ಗಮನಿಸಬೇಕಾದ ಅಂಶವೂ ಇದೆ. ಅದೇನೆಂದರೆ ಮೇಲೆ ಹೇಳಿರುವ ಯಾವ ಕಟ್ಟಡಗಳೂ ಪ್ರವಾಸಿ ತಾಣಗಳಲ್ಲ. ಬದಲಾಗಿ ತಮ್ಮ ಪಾಡಿಗೆ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಆಫೀಸುಗಳು, ಸಾಂಸ್ಕೃತಿಕ ಕೇಂದ್ರಗಳು ಅಥವಾ ಬಹೂಪಯೋಗಿ ಕಟ್ಟಡ ಸಂಕೀರ್ಣಗಳು. ಅಂದರೆ ಈ ಕಟ್ಟಡವನ್ನು ನೋಡಲು ನೂರಾರು ಮಂದಿ ಬರುತ್ತಾರೆ ಎಂಬ ಉದ್ದೇಶವೇ ಇವುಗಳ ಸೃಷ್ಟಿಕರ್ತರಿಗಿರಲಿಲ್ಲ. ಆದರೆ ಈ ಕಟ್ಟಡಗಳ ನಿರ್ಮಾಣದ ಹಿಂದಿರುವ ಪ್ರೀತಿ, ಶ್ರಮ, ದೂರದೃಷ್ಟಿಗಳೆಲ್ಲವನ್ನು ನಾವು ಇವುಗಳ ವಿನ್ಯಾಸದಲ್ಲೇ ಕಾಣಬಹುದು. ಯಾರೇನೇ ಹೇಳಲಿ. ಆಧುನಿಕ ದಿಲ್ಲಿಯ ವಾಸ್ತುಶಿಲ್ಪದ ಪ್ರತೀಕವಾಗಿ ಈ ಕಟ್ಟಡಗಳು ಮುಂದೆಯೂ ನಿಸ್ಸಂದೇಹವಾಗಿ ನಿಲ್ಲಲಿವೆ. ಇಂದಿಗೂ ದಿಲ್ಲಿಯಲ್ಲಿರುವ ಐಕಾನಿಕ್ ಕಟ್ಟಡಗಳನ್ನು ಪಟ್ಟಿ ಮಾಡುವಾಗಲೆಲ್ಲ ಥಟ್ಟನೆ ಎದುರಿಗೆ ಬಂದು ನಿಲ್ಲುವುದು ಇವೇ ಹೆಸರುಗಳು.

ದೆಹಲಿಯ ಬೆಲ್ಜಿಯಂ ಎಂಬೆಸಿ

ಚಾಣಕ್ಯಪುರಿಯಲ್ಲಿರುವ ಅಸ್ಸಾಮ್ ಹೌಸಿಗೆ ಕೆಲಸದ ನಿಮಿತ್ತ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ನಡೆದರೆ ನಮ್ಮ ಕರ್ನಾಟಕ ಭವನವೂ ಇದೆ. ಇದೇ ಏರಿಯಾದಲ್ಲಿ ಕಾಣುವ ಮತ್ತೊಂದು ಅದ್ಭುತ ಕಟ್ಟಡವೆಂದರೆ ವ್ಯಾಟಿಕನ್ ಸಿಟಿಯ ರಾಯಭಾರ ಕಚೇರಿ. “ಎಂಬಸ್ಸಿ ಆಫ್ ದ ಹೋಲಿ ಸೀ ವ್ಯಾಟಿಕನ್” ಎಂಬ ಹೆಸರಿನ ಈ ಕಚೇರಿಯು ಅದೆಷ್ಟು ಭವ್ಯ ಮತ್ತು ಸುಂದರವಾಗಿದೆಯೆಂದರೆ ಇಟಲಿ / ವ್ಯಾಟಿಕನ್ ಸಿಟಿಯ ಚಿಕ್ಕದೊಂದು ಪ್ರತಿರೂಪವನ್ನು ದಿಲ್ಲಿಯಲ್ಲೇ ಸೃಷ್ಟಿಸಿರುವಂತೆ ಭಾಸವಾಗುತ್ತದೆ. ಪೋಪ್ ಜನಸಾಮಾನ್ಯರನ್ನು ಎದುರುಗೊಳ್ಳುವ ಸೈಂಟ್ ಬೆಸಿಲಿಕಾದ ರೂಪವನ್ನು ಹೋಲುವ ಬಾಲ್ಕನಿ, ಮೈಕಲೇಂಜಲೋ ಶೈಲಿಯ ಆಳೆತ್ತರದ ಮೂರ್ತಿಗಳು, ಇಟಾಲಿಯನ್ ನವೋದಯ ವಾಸ್ತುಶಿಲ್ಪ ಶೈಲಿಯ ಚರ್ಚುಗಳನ್ನು ನೆನಪಿಸುವ ಕಟ್ಟಡದ ವಿನ್ಯಾಸ… ಹೀಗೆ ಒಂದೊಂದು ಅಂಶವೂ ವ್ಯಾಟಿಕನ್ ಸಿಟಿಯನ್ನು ಪ್ರತಿನಿಧಿಸುವಂತಿದೆ. ನನಗನಿಸುವಂತೆ ಒಂದು ದೇಶದ ಅಧಿಕೃತ ರಾಯಭಾರ ಕಚೇರಿಯಾಗಿ ಇದು ಅರ್ಥಪೂರ್ಣವೂ ಹೌದು. ದಿಲ್ಲಿಯಲ್ಲಿರುವ ಕತಾರ್ ಮತ್ತು ಥಾಯ್ಲೆಂಡ್ ದೇಶಗಳ ರಾಯಭಾರ ಕಚೇರಿಗಳಲ್ಲೂ ಕೂಡ ಇಂತಹ ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ವಿನ್ಯಾಸವನ್ನು ನಾವು ಕಾಣಬಹುದು.

ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಪಿರಾಮಿಡ್ಡುಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ಈ ದೇಶಕ್ಕೆ ಬಂದು ಹೋದ ಅಷ್ಟೂ ಸಾಮ್ರಾಜ್ಯಗಳ, ಆಯಾ ಶತಮಾನದ ವಾಸ್ತುಶಿಲ್ಪವು ತಮ್ಮ ಕಾಲಮಾನದ ಕತೆಯನ್ನು ಹೇಳುತ್ತಿರುವ ಅದ್ಭುತಗಳಂತೆ ಹೆಮ್ಮೆಯಿಂದ ನಿಂತಿವೆ. ಹೀಗಿರುವಾಗ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನವು ಉತ್ತುಂಗದಲ್ಲಿರುವ ಈ ಕಾಲದಲ್ಲಿ ವಾಸ್ತುಶಿಲ್ಪದ ಪರಿಕಲ್ಪನೆ ಮತ್ತು ನಿರ್ಮಾಣದ ಗುಣಮಟ್ಟಗಳು ನೀರಸವಾಗುತ್ತಾ ನೇಪಥ್ಯಕ್ಕೆ ಸರಿಯುತ್ತಿರುವುದು ಒಂದು ದೊಡ್ಡ ಅಚ್ಚರಿಯೇ ಸರಿ! ಇನ್ನು ಆಯಕಟ್ಟಿನ ಸರಕಾರಿ ಕಚೇರಿಗಳ ಆಸುಪಾಸಿನಲ್ಲಿ ಅಡ್ಡಾಡುತ್ತಿದರೆ, ಕೋಟಿಗಟ್ಟಲೆ ಮೌಲ್ಯದ ಪ್ರಾಜೆಕ್ಟುಗಳನ್ನು ದಕ್ಕಿಸಿಕೊಳ್ಳಲು ಅಲ್ಲಿಂದಿಲ್ಲಿಗೆ ಲಾಬಿ ಮಾಡುತ್ತಾ ಓಡಾಡುತ್ತಿರುವ ಅತಿಬುದ್ಧಿವಂತರನ್ನು ನಾವೆಲ್ಲ ನೋಡಿಯೇ ಇರುತ್ತೇವೆ. ಕಟ್ಟಡ ನಿರ್ಮಾಣಗಳ ಶಿಸ್ತುಬದ್ಧ ಅನುಷ್ಠಾನಕ್ಕಿಂತ, ಈ ಬಗೆಯ ಪ್ರಾಜೆಕ್ಟುಗಳನ್ನು ದಕ್ಕಿಸಿಕೊಳ್ಳುವುದಷ್ಟೇ ಕೆಲ ವ್ಯಕ್ತಿ/ಸಂಸ್ಥೆಗಳ ಆದ್ಯತೆಯಾಗಿಬಿಟ್ಟರೆ ಕೊನೆಗೆ ನಮ್ಮ ಪಾಲಿಗೆ ಉಳಿಯುವುದು ಇಂಥದ್ದೇ ಎಡಬಿಡಂಗಿ ಫಲಿತಾಂಶಗಳು.

“ಓರ್ವ ನುರಿತ ವಾಸ್ತುಶಿಲ್ಪಿ ವರ್ತಮಾನದಲ್ಲಿ ವಿನ್ಯಾಸ ಮಾಡುವುದೇನೋ ನಿಜ. ಆದರೆ ಈ ಪ್ರಕ್ರಿಯೆಯಲ್ಲಿ ಭೂತಕಾಲದ ಬಗ್ಗೆ ಅರಿವು ಮತ್ತು ಕಾಣದ ಭವಿಷ್ಯತ್ತಿನ ಬಗ್ಗೆ ಕಾಳಜಿಯೂ ಅವನಿಗಿರುವುದು ಮುಖ್ಯ”, ಎಂದಿದ್ದರು ವಿಶ್ವವಿಖ್ಯಾತ ವಾಸ್ತುಶಿಲ್ಪಿಗಳಲ್ಲೊಬ್ಬರಾದ ನಾರ್ಮನ್ ಫಾಸ್ಟರ್. ಅಷ್ಟಕ್ಕೂ ಎಂಜಿನಿಯರಿಂಗ್ ಅದ್ಭುತಗಳು ಸೃಷ್ಟಿಯಾಗುವುದು ಇಂಥದೊಂದು ದೂರದೃಷ್ಟಿ ಇದ್ದಾಗ ಮಾತ್ರ. ತಮ್ಮ ಇರುವಿಕೆಯನ್ನು ದಾಖಲಿಸಲು ಇವುಗಳಿಗೆ ಪ್ರಚಾರವು ಬೇಕಿಲ್ಲ. ಉತ್ಪ್ರೇಕ್ಷೆಗಳ ಅವಶ್ಯಕತೆಯಿಲ್ಲ. ವಿಶೇಷವೆಂದರೆ ನೀವು ಹುಡುಕುವುದು ಹೆಚ್ಚೋ, ನಾವು ಕಾಣುವುದು ಹೆಚ್ಚೋ ಎಂಬ ಶೈಲಿಯಲ್ಲಿ ಇಂತಹ ವಿನ್ಯಾಸಗಳು ನಮ್ಮ ಕಣ್ಣೆದುರಿಗೆ ಥಟ್ಟನೆ ಬಂದು ನಿಲ್ಲುತ್ತವೆ ಕೂಡ. ಥೇಟು ಕೆ.ಆರ್.ಎಸ್. ಎಂದಾಕ್ಷಣ ನಮಗೆ ಶ್ರೀ ಸರ್. ಎಂ. ವಿಶ್ವೇಶ್ವರಯ್ಯನವರು ನೆನಪಾಗುವಂತೆ! 

ವಾಸ್ತುಶಿಲ್ಪವೆಂಬ ಕಲೆ ಇನ್ನೊಮ್ಮೆ, ಮತ್ತೊಮ್ಮೆ ಗೆಲ್ಲುವುದು ಕೂಡ ಇಂತಹ ಅಪರೂಪದ ಕ್ಷಣಗಳಲ್ಲೇ!

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ- http://“ಒಲವೇ ಜೀವನ ಲೆಕ್ಕಾಚಾರ” https://kannadaplanet.com/olave-jivana-lekkacara/

More articles

Latest article