ಮೊಬೈಲ್‌ ಕಿತ್ತುಕೊಂಡ ಸಿಟ್ಟಿಗೆ ಅಪ್ಪ, ಅಪ್ಪ, ಸೋದರಿಯನ್ನು ಗುಂಡಿಟ್ಟು ಕೊಂದ ಬಾಲಕ

Most read

ಸಾವೊ ಪೌಲೊ (ಬ್ರೆಜಿಲ್): ಮೊಬೈಲ್‌ ಫೋನ್‌ ಕಿತ್ತುಕೊಂಡರೆಂಬ ಸಿಟ್ಟಿಗೆ 16 ರ್ಷದ ಬಾಲಕ ತನ್ನ ತಂದೆ, ತಾಯಿ ಮತ್ತು ಸೋದರಿಯನ್ನು ಗುಂಡಿಕ್ಕಿ ಕೊಂದ ಆಘಾತಕರ ಘಟನೆ ವರದಿಯಾಗಿದೆ.

ತ್ರಿವಳಿ ಹತ್ಯೆ ಮಾಡಿದ ಬಾಲಕ, ಮೂರು ದಿನ ಹೆಣಗಳ ಜೊತೆ ಕಾಲ ಕಳೆದಿದ್ದು, ನಂತರ ಪೊಲೀಸರಿಗೆ ಕರೆ ಮಾಡಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸ್‌ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮುನ್ಸಿಪಲ್‌ ಪೊಲೀಸ್‌ ಆಗಿದ್ದ ತಂದೆಯ ಬಳಿ ಇದ್ದ ಸರ್ವಿಸ್‌ ಗನ್‌ ಬಳಸಿ ಈ ಹತ್ಯಾಕಾಂಡ ನಡೆಸಿರುವ ಬಾಲಕ ಪೋಷಕರು ಮೊಬೈಲ್‌ ಕಿತ್ತುಕೊಂಡಿದ್ದರಿಂದ ಹತಾಶೆಗೊಂಡು ಈ ಕ್ರೂರ ಕಾಂಡ ನಡೆಸಿರುವುದಾಗಿ ತಿಳಿಸಿದ್ದಾನೆ.

ಆತ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಮೊದಲು ಆತ ತನ್ನ 57 ವರ್ಷದ ತಂದೆಯನ್ನು ಶೂಟ್‌ ಮಾಡಿ ಸಾಯಿಸಿದ್ದಾನೆ. ನಂತರ ಮೇಲ್ಮಹಡಿಗೆ ತೆರಳಿ ತನ್ನದೇ ವಯಸ್ಸಿನ ಸೋದರಿಯ ಮುಖಕ್ಕೆ ಶೂಟ್‌ ಮಾಡಿ ಕೊಂದು ಹಾಕಿದ್ದಾನೆ. ಕೆಲವು ಗಂಟೆಗಳ ನಂತರ ಆತನ ತಾಯಿ ಮನೆಗೆ ಬಂದಿದ್ದಾರೆ. ತಾಯಿ ಬರುತ್ತಿದ್ದಂತೆ ಅದೇ ಗನ್‌ ನಿಂದ ಆಕೆಯನ್ನು ಕೊಂದುಹಾಕಿದ್ದಾನೆ.

ಘಟನೆಗೆ ಬಾಲಕನ ಮಾನಸಿಕ ಖಿನ್ನತೆ ಕಾರಣವಾಗಿರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದು, ಈ ಘಟನೆಯಲ್ಲಿ ಬಾಲಕನಲ್ಲದೆ ಬೇರೆ ಯಾರಾದರೂ ಪಾಲ್ಗೊಂಡಿರಬಹುದೇ ಎಂಬ ಕೋನದಲ್ಲೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಆತ ಫೋನ್‌ ಮೂಲಕ ಯಾರೊಂದಿಗೆ ಮಾತಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಕಳೆದ ಶುಕ್ರವಾರ ಈ ಭೀಕರ ದುಷ್ಕೃತ್ಯ ಎಸಗಿದ ಬಾಲಕ, ಸೋಮವಾರದವರೆಗೆ ಮೂರೂ ಮೃತದೇಹಗಳೊಂದಿಗೆ ಅದೇ ಮನೆಯಲ್ಲಿ ಕಳೆದಿದ್ದಾನೆ. ಈ ಸಂದರ್ಭದಲ್ಲಿ ಅವನು ಮನೆಯಿಂದ ಹೊರಗೂ ಹೋಗಿಬಂದಿದ್ದಾನೆ.  ಎಂದಿನಂತೆ ಜಿಮ್‌ ಗೆ ಹೋಗಿ ಬಂದಿದ್ದಾನೆ. ಬೇಕರಿಯಿಂದ ತಿನಿಸುಗಳನ್ನು ತಂದುಕೊಂಡಿದ್ದಾನೆ

ಶುಕ್ರವಾರ ಮೂವರನ್ನು ಕೊಂದುಹಾಕಿದ ಮೇಲೂ ಅವನ ಸಿಟ್ಟು ಕಡಿಮೆಯಾಗಿರಲಿಲ್ಲ. ಶನಿವಾರ ಒಂದು ಚಾಕುವಿನಿಂದ ಸತ್ತು ಹೋದ ತಾಯಿಯ ಮೃತದೇಹವನ್ನು ಚುಚ್ಚಿದ್ದಾನೆ.

ಬಾಲಕನನ್ನು ಈಗ ಬಾಲಾಪರಾಧಿಗಳ ಕೇಂದ್ರದಲ್ಲಿ ಇಡಲಾಗಿದ್ದು, ತಾನು ಎಸಗಿದ ಕ್ರೌರ್ಯದ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ತಣ್ಣಗೆ ವಿವರಿಸುತ್ತಾನೆ. ಬ್ರೆಜಿಲ್‌ ನ ನ್ಯಾಯಾಂಗ ವ್ಯವಸ್ಥೆಯ ಪ್ರಕಾರ ಬಾಲಪರಾಧಿಗಳನ್ನು ಇತರ ಅಪರಾಧಿಗಳ ಹಾಗೆ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. ಬಾಲಾಪರಾಧಿಗಳಿಗೆ ವಿಶೇಷ ರಕ್ಷಣೆ ಇರುತ್ತದೆ.

More articles

Latest article