ದಿಂಗಾಲೇಶ್ವರ ಸ್ವಾಮಿಗಳು ಸ್ಪರ್ಧಿಸಿದರೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡುತ್ತದೆ. ಸ್ವಾಮಿಗಳು ಗೆಲ್ಲದೇ ಹೋದರೂ ತಮ್ಮ ಸಮುದಾಯದ ಮತಗಳನ್ನು ಸೆಳೆದು ಜೋಶಿಯವರನ್ನು ಸೋಲಿಸುತ್ತಾರೆ. ಈ ಲಿಂಗಾಯತ ಸ್ವಾಮಿಗಳಿಗೆ ತಾವು ಗೆಲ್ಲುವುದಕ್ಕಿಂತಲೂ ಬ್ರಾಹ್ಮಣ ಪ್ರಹ್ಲಾದ್ ಜೋಶಿಯವರನ್ನು ಸೋಲಿಸುವುದು ಮುಖ್ಯ ಉದ್ದೇಶವಾಗಿದೆ. ಈ ಇಬ್ಬರ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಗೆಲ್ಲುವ ಸಂಭವನೀಯತೆ ಹೆಚ್ಚಿದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಕಳೆದ 20 ವರ್ಷದಿಂದ ನಾಲ್ಕು ಬಾರಿ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಎಂಪಿ ಯಾಗಿ ಆಯ್ಕೆಯಾಗುತ್ತಿರುವ ಪ್ರಹ್ಲಾದ್ ಜೋಶಿಯವರ ಗೆಲುವಿನ ನಾಗಾಲೋಟಕ್ಕೆ ಈ ಸಲ ತಡೆ ಬೀಳುತ್ತಾ? ಕಳೆದ 28 ವರ್ಷಗಳಿಂದ ಧಾರವಾಡ ಲೋಕಸಭಾ ಕ್ಷೇತ್ರವನ್ನು ತನ್ನ ಭದ್ರಕೋಟೆಯಾಗಿಸಿಕೊಂಡ ಬಿಜೆಪಿಯ ಹಿಡಿತ ಈ ಬಾರಿ ಛಿದ್ರವಾಗುತ್ತಾ? ಹೀಗೊಂದು ಪ್ರಶ್ನೆ ರಾಜಕೀಯಾಸಕ್ತರನ್ನು ಕಾಡುತ್ತಿದೆ.
ಯಾಕೆಂದರೆ 2004 ರಿಂದ 2019 ರ ವರೆಗಿನ ನಾಲ್ಕೂ ಲೋಕಸಭಾ ಎಲೆಕ್ಷನ್ನಿನಲ್ಲಿ ಪ್ರಹ್ಲಾದ್ ಜೋಶಿಯವರು ಲಕ್ಷ ಲಕ್ಷಗಳ ಓಟ್ ಲೀಡ್ ಪಡೆದು ಆರಿಸಿ ಬರುತ್ತಲೇ ಇದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಜೋಶಿಯವರು ಪ್ರತಿನಿಧಿಸುತ್ತಿರುವ ಬ್ರಾಹ್ಮಣ ಸಮುದಾಯದ ಮತಗಳು ಇಡೀ ಕ್ಷೇತ್ರದಲ್ಲಿ ಇರುವುದೇ ಒಂದು ಲಕ್ಷದ ಒಳಗೆ. 18 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಸಂಖ್ಯೆಯಲ್ಲಿ ಕಡಿಮೆ ಇರುವ ಬ್ರಾಹ್ಮಣ ಸಮುದಾಯದ ವ್ಯಕ್ತಿ ಅದು ಹೇಗೆ ನಿರಂತರವಾಗಿ ನಾಲ್ಕು ಬಾರಿ ಲಕ್ಷಾಂತರ ಮತಗಳ ಲೀಡಲ್ಲಿ ಆಯ್ಕೆಯಾಗಲು ಸಾಧ್ಯ? 6 ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತದಾರರು ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಲಿಂಗಾಯತ ಅಭ್ಯರ್ಥಿಗಳು ಸೋಲಲು ಸಾಧ್ಯ?
ಅದಕ್ಕೆ ಕಾರಣ ಹಿಂದುತ್ವ. ಈ ಮತಕ್ಷೇತ್ರದ ಮತದಾರರು ಜಾತಿ ರಾಜಕಾರಣಕ್ಕಿಂತಲೂ ಹಿಂದುತ್ವವಾದಿ ಸಿದ್ಧಾಂತಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಕೋಮು ಪ್ರಚೋದನೆಯ ಹಿನ್ನೆಲೆಯಲ್ಲಿ ಹಿಂದೂ ಮತಗಳು ಕ್ರೋಢೀಕರಣಗೊಂಡಿವೆ. ಅದರ ಜೊತೆಗೆ ಮೋದಿಯವರ ಹೆಸರು ಹಾಗೂ ಬಿಲ್ಡಪ್ ಹೆಚ್ಚು ಜನರನ್ನು ಆಕರ್ಷಿಸುತ್ತಾ ಬಂದಿದೆ. ಹಿನ್ನೆಲೆಯಲ್ಲಿ ಆರೆಸ್ಸೆಸ್ ಸಹ ಕ್ಷೇತ್ರದ ಮೇಲೆ ಅಗೋಚರ ಹಿಡಿತ ಸಾಧಿಸಿದೆ. ಯಡಿಯೂರಪ್ಪನವರ ಕಾರಣಕ್ಕೆ ಬಹುಸಂಖ್ಯಾತ ಲಿಂಗಾಯತರೂ ಸಹ ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿದ್ದಾರೆ.
ಬಿಜೆಪಿ ಪಕ್ಷದ ಬೇರುಗಳು ಧಾರವಾಡ ಪ್ರಾಂತ್ಯದಲ್ಲಿ ಬಲವಾಗಿ ಹರಡಲು ಮೂಲ ಕಾರಣವಾಗಿದ್ದು 1993 ರಲ್ಲಿ ಶುರುವಾದ ಹುಬ್ಬಳ್ಳಿ ಈದ್ಗಾ ಮೈದಾನದ ರಾಷ್ಟ್ರದ್ವಜಾರೋಹಣ ವಿವಾದದಿಂದಾಗಿ. ಅಂಜುಮನ್ ಸಂಸ್ಥೆಗೆ ಸೇರಿದ್ದ ಈ ಮೈದಾನದಲ್ಲಿ ರಾಷ್ಟ್ರ ದ್ವಜವನ್ನು ಬಲವಂತವಾಗಿ ಹಾರಿಸಲು ಬಿಜೆಪಿ ಪ್ರಯತ್ನಿಸಿ, ಗಲಾಟೆ ಎಬ್ಬಿಸಿ, ಸಾರ್ವಜನಿಕರ ನೆಮ್ಮದಿಯನ್ನೇ ಕೆಡಿಸಿ ಅದನ್ನೊಂದು ದೊಡ್ಡ ರಾಷ್ಟ್ರೀಯ ಸಮಸ್ಯೆಯನ್ನಾಗಿಸಿತು. ನಾಗಪುರದ ಆರೆಸ್ಸೆಸ್ ಕಚೇರಿಯಲ್ಲೇ ರಾಷ್ಟ್ರ ಬಾವುಟ ಹಾರಿಸದ ಸಂಘಿಗಳು ಮುಸ್ಲಿಂ ಮೈದಾನದಲ್ಲಿ ಬಾವುಟ ಹಾರಿಸಲು ಹಂಗಾಮವನ್ನೇ ಸೃಷ್ಟಿಸಿದ್ದರು. ಮೂರು ಬಣ್ಣದ ತಿರಂಗಾವನ್ನೇ ಅಪಶಕುನ ಎಂದು ಆರೋಪಿಸಿ ಮಾನ್ಯಮಾಡದ ಇದೇ ಸಂಘದ ನಾಯಕರುಗಳು ಹಾಗೂ ಅನುಯಾಯಿಗಳು ಈದ್ಗಾ ಮೈದಾನದಲ್ಲಿ ತಿರಂಗಾ ಹಾರಿಸಲು ದೊಂಬಿಯನ್ನೇ ಎಬ್ಬಿಸಿದರು. ಮತಾಂಧತೆಯನ್ನು ಬಡಿದೆಬ್ಬಿಸಿ, ಮುಸ್ಲಿಂ ದ್ವೇಷವನ್ನು ಪ್ರಚೋದಿಸಿ ಹಿಂದೂ ಹೆಸರಲ್ಲಿ ಕೋಮು ಧ್ರುವೀಕರಣ ಮಾಡಿ ಮತಗಳ ಕ್ರೋಢೀಕರಣ ಮಾಡಿದ್ದರಿಂದಾಗಿ ಬಿಜೆಪಿ ಪಕ್ಷವೇ ಪ್ರತಿ ಸಲ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದೆ. ಇದರ ಜೊತೆಗೆ ದೇಶಾದ್ಯಂತ ಬಾಬರಿ ಮಸೀದಿ ಧ್ವಂಸ ಹಾಗೂ ರಾಮಜನ್ಮಭೂಮಿ ವಿವಾದ ಉಲ್ಬಣಿಸಿ ಧರ್ಮಾಂಧತೆ ಉನ್ಮಾದವಾಗಿ ಪರಿವರ್ತನೆಯಾಗಿದ್ದರಿಂದಾಗಿ ಧಾರವಾಡ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರ ಕೋಟೆಯಾಗಿ ಬದಲಾಗಿ ಬಿಟ್ಟಿತು. ಪ್ರತಿ ಸಲವೂ ಪ್ರಹ್ಲಾದ್ ಜೋಶಿಯವರೇ ಸಂಸದರಾಗಿ ಆಯ್ಕೆಯಾಗುತ್ತಲೇ ಬಂದರು.
ಆದರೆ ಈ ಸಲ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಪ್ರತಿ ಸಲ ಅತೀ ಸುಲಭವಾಗಿ ಗೆಲ್ಲುತ್ತಿದ್ದ ಜೋಶಿಯವರಿಗೆ ಈ ಸಲದ ಸ್ಪರ್ಧೆ ಕಠಿಣವಾಗಲಿದೆ. ಗೆಲುವು ದಕ್ಕಿಸಿಕೊಳ್ಳಲು ಬೆವರು ಹರಿಸ ಬೇಕಿದೆ. ಹಾಗಂತ ಅವರ ವಿರುದ್ಧ ಸ್ಪರ್ಧಿಸುತ್ತಿರುವುದು ಬಲಿಷ್ಟ ಎದುರಾಳಿ ಏನಲ್ಲ. ಮೊದಲ ಸಲ ಲೋಕಸಭೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಈಗಾಗಲೇ ನವಲಗುಂದ ಅಸೆಂಬ್ಲಿ ಚುನಾವಣೆಯಲ್ಲಿ ಸೋತವರು. ಒಟ್ಟಾರೆ ಮತದಾರರ ಸಂಖ್ಯೆಗೆ ಹೋಲಿಸಿದರೆ ಅಸೂಟಿಯವರು ಪ್ರತಿನಿಧಿಸುವ ಕುರುಬ ಸಮುದಾಯದ ಮತಗಳು 1.2 ಲಕ್ಷ ಅಷ್ಟೇ. ಹೀಗಿದ್ದರೂ ಪಳಗಿದ ರಾಜಕಾರಣಿ ಪ್ರಹ್ಲಾದ್ ಜೋಶಿಯವರಿಗೆ ಇರುವ ಆತಂಕವಾದರೂ ಏನು?
ಅದು ದಿಂಗಾಲೇಶ್ವರ ಸ್ವಾಮಿಗಳು ಹುಟ್ಟಿಸಿದ ದಿಗಿಲು. ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ಸ್ವಾಮಿಗಳು ಜೋಶಿಯವರ ವಿರುದ್ದ ಸಿಡಿದೆದ್ದು ತಾವೇ ಚುನಾವಣಾ ಅಖಾಡಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಅದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಸ್ವಜಾತಿ ಪ್ರೇಮ. ಲಿಂಗಾಯತ ಸಮುದಾಯದ ಮತಗಳು ಧಾರವಾಡ ಮತ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವುದರಿಂದ ಈ ಬಾರಿ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ಕೊಡಬೇಕೆಂದು ಸ್ವಾಮಿಗಳು ಬಿಜೆಪಿಯನ್ನು ಆಗ್ರಹಿಸಿದ್ದರು. ಎರಡನೆಯದು ವ್ಯಕ್ತಿಗತ ಅಪಮಾನದ ವಿರುದ್ಧದ ಸೇಡು. ಮೂರು ವರ್ಷಗಳ ಹಿಂದೆ ಈ ಫಕೀರ ಸ್ವಾಮಿಗಳು ಜೋಶಿಯವರಿಗೆ ಫೋನ್ ಮಾಡಿ ತಮ್ಮದೊಂದು ಕೆಲಸ ಮಾಡಿಕೊಡಲು ಒತ್ತಾಯಿಸಿದ್ದರಂತೆ. ಅದಕ್ಕೆ ” ಯಾಕೆ ನಿಮ್ಮ ಲಿಂಗಾಯತ ಸಮುದಾಯದ ನಾಯಕರು ಯಾರೂ ಇಲ್ವಾ?, ಅವರಿಂದಲೇ ಕೆಲಸ ಮಾಡಿಸಿಕೊಳ್ಳಿ” ಎಂದು ಸಂಸದ ಜೋಶಿ ಉಡಾಫೆಯಿಂದ ಉತ್ತರಿಸಿದ್ದರಂತೆ. ಈ ಅವಮಾನದ ಸೇಡನ್ನು ತೀರಿಸಿಕೊಳ್ಳಲು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಜೋಶಿಯವರಿಗೆ ಟಿಕೆಟ್ ಸಿಗದ ಹಾಗೆ ಮಾಡಲು ಲಿಂಗಾಯತ ಟ್ರಂಪ್ ಕಾರ್ಡ್ ಬಳಸಿದರು. ಅದಕ್ಕೆ ಬಿಜೆಪಿ ಬೆಲೆ ಕೊಡದೇ ಇದ್ದಾಗ ಖುದ್ದಾಗಿ ಸ್ವಾಮಿಗಳೇ ಚುನಾವಣೆಗೆ ನಿಲ್ಲಲು ನಿರ್ಧರಿಸಿಯಾಗಿದೆ.
ಈ ನಿರ್ಧಾರ ಜೋಶಿಯವರ ನಿದ್ದೆಗೆಡಿಸಿದೆ. ಯಾಕೆಂದರೆ ಪ್ರತಿ ಸಲ ಅವರ ಗೆಲುವಿನಲ್ಲಿ ಲಿಂಗಾಯತ ಮತಗಳೇ ಹೆಚ್ಚು ಕೊಡುಗೆ ಕೊಡುತ್ತಿದ್ದವು. ಈ ಲಿಂಗಾಯತ ಮಠದ ಸ್ವಾಮಿಗಳು ಚುನಾವಣೆಗೆ ತಮ್ಮ ವಿರುದ್ಧ ಸ್ಪರ್ಧಿಸಿದರೆ ಲಿಂಗಾಯತ ಸಮುದಾಯದ ಮತಗಳು ವಿಭಜನೆಯಾದರೆ ಸೋಲು ಗ್ಯಾರಂಟಿ ಎಂಬುದು ಜೋಶಿಯವರಿಗೆ ಮನವರಿಕೆಯಾಗಿದೆ. ಆದ್ದರಿಂದ ಸ್ವಾಮಿಗಳ ಸ್ಪರ್ಧೆ ತಪ್ಪಿಸಲು ನಾನಾ ಸರ್ಕಸ್ ಗಳನ್ನು ಮಾಡಿದರೂ ಗೆಲುವು ಸಿಕ್ಕಿಲ್ಲ. ಅದಕ್ಕಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಲಿಂಗಾಯತ ಮಠಗಳನ್ನು ಸುತ್ತುತ್ತಿದ್ದಾರೆ. ಮಠಾಧೀಶರ ಆಶೀರ್ವಾದದ ನೆಪದಲ್ಲಿ ಸಮುದಾಯದ ಬೆಂಬಲ ಕೋರುತ್ತಿದ್ದಾರೆ.
ದಿಂಗಾಲೇಶ್ವರ ಸ್ವಾಮಿಗಳು ಸ್ಪರ್ಧಿಸಿದರೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡುತ್ತದೆ. ಸ್ವಾಮಿಗಳು ಗೆಲ್ಲದೇ ಹೋದರೂ ತಮ್ಮ ಸಮುದಾಯದ ಮತಗಳನ್ನು ಸೆಳೆದು ಜೋಶಿಯವರನ್ನು ಸೋಲಿಸುತ್ತಾರೆ. ಈ ಲಿಂಗಾಯತ ಸ್ವಾಮಿಗಳಿಗೆ ತಾವು ಗೆಲ್ಲುವುದಕ್ಕಿಂತಲೂ ಬ್ರಾಹ್ಮಣ ಪ್ರಹ್ಲಾದ್ ಜೋಶಿಯವರನ್ನು ಸೋಲಿಸುವುದು ಮುಖ್ಯ ಉದ್ದೇಶವಾಗಿದೆ. ಈ ಇಬ್ಬರ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಗೆಲ್ಲುವ ಸಂಭವನೀಯತೆ ಹೆಚ್ಚಿದೆ.
ಈ ಹಿಂದಿನ ಚುನಾವಣೆಗಳಂತೆ ಈ ಸಲ ಮೋದಿ ಅಲೆಯಲ್ಲಿ ಸೆಳೆತವಿಲ್ಲ. ರಾಮ, ಪುಲ್ವಾಮಾ ಸೃಷ್ಟಿಸಿದ ಸುನಾಮಿ ಇಲ್ಲ. ಚುನಾವಣಾ ಬಾಂಡ್ ಹಗರಣದ ಕಳಂಕದಿಂದ ಬಿಜೆಪಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶೆಟ್ಟರ್ ಸಮೇತ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಿದ ಆರೋಪದಿಂದ ಜೋಶಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಡಿಯೂರಪ್ಪನವರಿಗೆ ಬಿಜೆಪಿ ಮಾಡಿದ ಅಪಮಾನವನ್ನು ಲಿಂಗಾಯತರು ಇನ್ನೂ ಮರೆತಿಲ್ಲ. ಲಿಂಗಾಯತ ಮೀಸಲಾತಿ ಬೇಡಿಕೆಗೆ ಜೋಶಿ ನಿರುತ್ಸಾಹ ತೋರಿದ್ದನ್ನು ಲಿಂಗಾಯತ ಸಮುದಾಯ ನಿರ್ಲಕ್ಷಿಸಲು ಸಾಧ್ಯವಿಲ್ಲ. ಇವೆಲ್ಲಾ ಕಾರಣಗಳಿಂದಾಗಿ ಈ ಸಲದ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿಯವರ ಗೆಲವು ಸುಲಭ ಸಾಧ್ಯವಲ್ಲ.
ಇದರ ಜೊತೆಗೆ ಧಾರವಾಡ ಜಿಲ್ಲೆಗೆ ಅತ್ಯಗತ್ಯವಾದ ಮಹದಾಯಿ ನೀರನ್ನು ತರುವಲ್ಲಿ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲು ಸಂಸದರಾದ ಜೋಶಿಯವರಿಗೆ ಸಾಧ್ಯವಾಗಿಲ್ಲ. ಪ್ರತಿ ಸಲದ ಚುನಾವಣೆಯಲ್ಲೂ ಮಹದಾಯಿ ನೀರು ತಂದೇ ತರುತ್ತೇನೆಂದು ಭರವಸೆ ಕೊಟ್ಟು ಮತಗಳನ್ನು ಪಡೆಯುತ್ತಿದ್ದ ಜೋಶಿಯವರ ಸುಳ್ಳನ್ನು ಮತ್ತೆ ನಂಬಲು ರೈತರು ಹಾಗೂ ಧಾರವಾಡ ಜಿಲ್ಲೆಯ ಜನರು ಸಿದ್ಧರಿಲ್ಲ. ಮಹದಾಯಿ ಹೋರಾಟ ಸಮಿತಿ ಒಂದು ವರ್ಷದಿಂದ ಜೋಶಿಯವರ ವಿರುದ್ಧ ಆನ್ಲೈನ್ ಅಭಿಯಾನ ಮಾಡುತ್ತಲೇ ಬಂದಿದೆ. ಹಾಗೂ ಈ ಸಲ ಕಾಂಗ್ರೆಸ್ಸನ್ನು ಬೆಂಬಲಿಸಲು ನಿರ್ಧರಿಸಿದೆ. ಈ ಲೋಕಸಭಾ ವ್ಯಾಪ್ತಿಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳ ಬಲವೂ ಇದೆ. ಬಿಜೆಪಿ ಶಾಸಕರೂ ಪೂರ್ಣ ಪ್ರಮಾಣದಲ್ಲಿ ಜೋಶಿಯವರ ಬೆಂಬಲಿಕ್ಕಿಲ್ಲ. ಇದೇ ಲೋಕಸಭಾ ಕ್ಷೇತ್ರವ್ಯಾಪ್ತಿಯ ಶಾಸಕರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಹಾವೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಅಲ್ಲಿ ಬ್ಯೂಸಿ ಆಗಿದ್ದಾರೆ. ಇತ್ತೀಚೆಗೆ ತಮ್ಮ ಕಚೇರಿಯಿಂದ ಅಂಬೇಡ್ಕರ್ ಮತ್ತು ವಾಲ್ಮೀಕಿ ಫೋಟೋಗಳನ್ನು ತೆರವುಗೊಳಿಸಿ ಆರೆಸ್ಸೆಸ್ ಹಾಗೂ ಬಿಜೆಪಿ ಸಂಸ್ಥಾಪಕರ ಫೋಟೋಗಳನ್ನು ಮಾತ್ರ ಉಳಿಸಿಕೊಂಡ ಜೋಶಿಯವರು ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಆಕ್ರೋಶಕ್ಕೂ ಕಾರಣರಾಗಿದ್ದಾರೆ.
ಹೀಗಾಗಿ ಎಲ್ಲಾ ಕಡೆಯಿಂದ ಪ್ರತಿರೋಧವನ್ನು ಎದುರಿಸುತ್ತಿರುವ ಜೋಶಿಯವರಿಗೆ ಈ ಸಲ ಮೋದಿಯವರ ನಾಮಬಲ ಹಾಗೂ ಆರೆಸ್ಸೆಸ್ ಬೆಂಬಲವೇ ಶ್ರೀರಕ್ಷೆಯಾಗಿದೆ. ಗೆಲುವು ಮರೀಚಿಕೆಯಾಗುವ ಸಾಧ್ಯತೆಗಳೂ ತೋರುತ್ತಿವೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಗ್ಯಾಸ್ ಬೆಲೆ ಏರಿಕೆ |ನೌಟಂಕಿ ಬೀಸಿದ ಮಾಯಾಜಾಲ