ನಗೆಪಾಟಲಿಗೆ ಈಡಾದ `ಮೋದಿ ಯುದ್ಧ ನಿಲ್ಲಿಸಿದರು ಅಪ್ಪʼ ವಿಡಿಯೋ

Most read

ಹೊಸದಿಲ್ಲಿ: ರಷ್ಯಾ-ಉಕ್ರೇನ್‌ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಯುದ್ಧ ನಿಲ್ಲಿಸಿದರು ಎಂಬ ಸುಳ್ಳೊಂದು ಹರಡಲು ಆರಂಭವಾಯಿತು. ತಮಾಶೆಯೆಂದರೆ ಇದೇ ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿಯ ಅಧಿಕೃತ ಯೂಟ್ಯೂಬ್‌ ಚಾನಲ್‌ ನ ಪ್ರಚಾರ ವಿಡಿಯೋ ಒಂದರಲ್ಲಿ ಹೇಳಲಾಯಿತು. ಇದೀಗ ಈ ವಿಡಿಯೋ ನಗೆಪಾಟಲಿಗೆ ಈಡಾಗಿದ್ದು, ಮೀಮ್‌ ಆಗಿ ಬಳಕೆಯಾಗುತ್ತಿದೆ.

ಕಳೆದ ತಿಂಗಳು ಪ್ರಧಾನಿಯ ಅಧಿಕೃತ ಯೂಟ್ಯೂಬ್‌ ಚಾನಲ್‌ ನಲ್ಲಿ ಒಂದು ಪ್ರಚಾರದ ವಿಡಿಯೋ ಕಾಣಿಸಿಕೊಂಡಿತ್ತು. ಆ ವಿಡಿಯೋದಲ್ಲಿ ವಿಮಾನ ನಿಲ್ದಾಣದ ಹೊರಗೆ ಆಗಷ್ಟೇ ಬಂದ ಪ್ರಯಾಣಿಕ ಯುವತಿಯೋರ್ವಳು ತನ್ನ ಪೋಷಕರೊಂದಿಗೆ ಸೇರುವ ದೃಶ್ಯವಿದೆ. ಈ ಸಂದರ್ಭದಲ್ಲಿ ಆಕೆ ʻʻ ಮೈನೆ ಕಹಾಥಾನಾ? ಕೈಸೇ ಭೀ ಸಿಚುಯೇಷನ್‌ ಹೋ. ಮೋದಿಜಿ ಹಮೆ ಘರ್‌ ಲೇ ಆಯೇಂಗೆ. ವಾರ್‌ ರುಕ್ವಾದೀ ಪಾಪಾʼʼ (ನಾನು ಹೇಳಿರಲಿಲ್ಲವೇ? ಎಂಥದೇ ಸನ್ನಿವೇಶವಿರಲಿ, ಮೋದಿಜಿ ನಮ್ಮನ್ನು ಮನೆಗೆ ವಾಪಾಸ್‌ ಕರೆತರುತ್ತಾರೆ ಎಂದು? ಯುದ್ಧ ನಿಲ್ಲಿಸಿದರು ಅಪ್ಪಾʼʼ ಎನ್ನುತ್ತಾಳೆ. ಮೋದಿ ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಿ, ಭಾರತದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದರು ಎಂಬುದನ್ನು ವಿಡಿಯೋ ಧ್ವನಿಸುತ್ತದೆ.

ಕಳೆದ ತಿಂಗಳು ಈ ವಿಡಿಯೋ ಹೊರಗೆ ಬಂದಾಗಿನಿಂದ ಸಾಮಾಜಿಕ ಜಾಲತಾಣಗಳ ಮೀಮ್ ಸರಕಾಗಿ ಹೋಗಿದ್ದು, ಟ್ರಾಲ್‌ ಪೋಸ್ಟರ್‌, ವಿಡಿಯೋಗಳಲ್ಲಿ ಅತಿ ಹೆಚ್ಚು ಬಳಕೆಯಾಗಿದೆ.
ಮೋದಿ ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಿದರು ಎಂಬ ಸುಳ್ಳು ವಾಟ್ಸಾಪ್‌ ಯೂನಿವರ್ಸಿಟಿಯಲ್ಲಿ ಯಾವ ಪ್ರಮಾಣದಲ್ಲಿ ಹಬ್ಬಿತೆಂದರೆ ಕೆಲವು ಬಿಜೆಪಿ ನಾಯಕರೇ ಅಧಿಕೃತವಾಗಿ ಈ ಮಹಾಸುಳ್ಳನ್ನು ಲಜ್ಜೆಯಿಲ್ಲದೆ ಹೇಳಿಕೊಂಡರು. ಬೇರೆಯವರ ವಿಷಯ ಹಾಗಿರಲಿ, 2023ರ ಫೆಬ್ರವರಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ, “22,500 ವಿದ್ಯಾರ್ಥಿಗಳನ್ನು ಅಲ್ಲಿಂದ ಭಾರತಕ್ಕೆ ಸ್ಥಳಾಂತರಿಸಲು ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಿದರು” ಎಂದು ಹೇಳಿದ್ದರು.

ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಮಾತ್ರ ಇದನ್ನು ಸ್ಪಷ್ಟವಾಗಿ ನಿರಾಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗುವುದನ್ನು ತಪ್ಪಿಸಿದ್ದರು. ರಷ್ಯಾ- ಉಕ್ರೇನ್‌ ನಡುವಿನ ಯುದ್ಧವನ್ನು ಮೋದಿ ನಿಲ್ಲಿಸಿದರು ಎಂಬ ಹೇಳಿಕೆಗಳು ಸತ್ಯವಲ್ಲ ಎಂದು ಅವರು ಹೇಳಿದ್ದರು.

ಆದರೆ ಇಷ್ಟಾದ ಮೇಲೂ ರಷ್ಯಾ-ಉಕ್ರೇನ್‌ ಯುದ್ಧವನ್ನು ಮೋದಿ ನಿಲ್ಲಿಸಿದರು ಎಂಬ ಸುಳ್ಳು ಇನ್ನೂ ವಾಟ್ಸಾಪ್‌ ಗಳಲ್ಲಿ ಹರಿದಾಡುತ್ತಲೇ ಇದೆ. ತೀರಾ ನಾಚಿಕೆಗೇಡಿನ ಸಂಗತಿಯೆಂದರೆ ಮಾರ್ಚ್ 2024 ರಲ್ಲಿ ಪ್ರಧಾನಿ ಮೋದಿ ಪ್ರಚಾರದ ವಿಡಿಯೋದಲ್ಲೂ ಇದೇ ಪ್ರತಿಪಾದನೆ ಮಾಡಲಾಗಿದೆ. ಈ ಪ್ರಚಾರದ ವಿಡಿಯೋ ಪ್ರಧಾನಿಯ ಅಧಿಕೃತ ಯೂಟ್ಯೂಬ್ ನಲ್ಲಿ ಪ್ರಸಾರವಾಗಿರುವುದು ಮತ್ತೊಂದು ಅಪಮಾನದ ವಿಷಯವಾಗಿದೆ.

More articles

Latest article