ಕಾರವಾರ: ಈ ಬಾರಿ ಲೋಕಸಭಾ ಚುನಾವಣೆಯ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಭಾಗದ ಜನರ ಬಾಯಲ್ಲಿ ಅಂಜಲಿ ತಾಯಿ ಎಂದೇ ಹೆಸರಾಗಿರುವ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ನಾಳೆ ಕಾರವಾರದ ಮಾಲಾದೇವಿ ಮೈದಾನದಿಂದ ಡಿ.ಸಿ.ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.
ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ಕಾಂಗ್ರೆಸ್ ನಾಯಕರು ಡಾ. ಅಂಜಲಿ ಅವರ ಜೊತೆ ಮೆರವಣಿಯಲ್ಲಿ ಸಾಗಲಿದ್ದಾರೆ. ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕರುಗಳಾದ ಆರ್.ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್, ಸಚಿವ ಮಂಕಾಳು ವೈದ್ಯ, ಶಿರಸಿಯ ಶಾಸಕ ಭೀಮಣ್ಣ, ಕಾರವಾರದ ಶಾಸಕ ಸತೀಶ್ ಕೃಷ್ಣ ಸೈಲ್, ಕಿತ್ತೂರು ಶಾಸಕ ಬಾಬಾ ಸಾಹೇಬ್ ಡಿ.ಪಾಟೀಲ್, ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವ ಸೇರಿದಂತೆ ಹಲವು ದಿಗ್ಗಜರು ಡಾ. ಅಂಜಲಿ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಹಾಜರಿರಲಿದ್ದಾರೆ.
ಮೂವತ್ತು ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ಉತ್ತರ ಕನ್ನಡ ಕ್ಷೇತ್ರದಲ್ಲಿ ಗೆಲುವಿನ ಕನಸು ಕಾಣುತ್ತಿದ್ದು, ಈ ಬಾರಿ ಕುಮಟಾ, ಯಲ್ಲಾಪುರ ಮತ್ತು ಖಾನಾಪುರ ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗೆ ಇಟ್ಟಿದ್ದು ಸ್ವತಃ ಅವರ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಬಿಜೆಪಿ ಈ ಬಾರಿ ದುರ್ಬಲವಾಗಿ ಕಾಣಿಸುತ್ತಿದೆ.
ಶಿರಸಿ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಇದರಿಂದಾಗಿ ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಬೆಂಬಲಿಗರು ತಟಸ್ಥರಾಗಿದ್ದಾರೆ. ಮತ್ತೊಂದೆಡೆ ಕಳೆದ ಮೂವತ್ತು ವರ್ಷಗಳಿಂದ ಒಂದು ಸಮುದಾಯದವರಿಗೆ ಎಂಪಿ ಟಿಕೆಟ್ ಕೊಡುತ್ತ ಬಂದಿದ್ದ ಬಿಜೆಪಿ ಈ ಬಾರಿಯಾದರೂ ಬೇರೆ ಸಮುದಾಯಗಳಿಗೆ ಆದ್ಯತೆ ನೀಡಬೇಕಿತ್ತು ಎಂಬ ಕೂಗು ಬಿಜೆಪಿಯಲ್ಲೇ ಕೇಳಿಬಂದಿದ್ದು, ಅದೂ ಸಹ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಮುಳುವಾಗುವ ಸಾಧ್ಯತೆ ಇದೆ.
ನಾಳೆ ಬೆಳಿಗ್ಗೆ 9-30ಕ್ಕೆ ಕಾರವಾರದ ಮಾಲಾದೇವಿ ಮೈದಾನದಿಂದ ಮೆರವಣಿಗೆ ಹೊರಡಲಿದ್ದು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ನೆರೆಯುವ ಸಾಧ್ಯತೆ ಇದೆ.