ತುಮಕೂರು: ಗ್ಯಾರೆಂಟಿ ಯೋಜನೆಗಳಿಂದ ನಮ್ಮ ಹಳ್ಳಿಗಳ ತಾಯಂದಿರು ದಾರಿತಪ್ಪಿದ್ದಾರೆ ಎಂದು ಕೀಳುಮಟ್ಟದ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾದ್ಯಂತ ಆಕ್ರೋಶದ ಅಲೆ ಎದ್ದಿರುವ ಹಿನ್ನೆಲೆಯಲ್ಲಿ ʻನಾನು ತಪ್ಪು ಮಾತಾಡಿಲ್ಲ, ನೋವಾಗಿದ್ರೆ ವಿಷಾದಿಸುವೆʼ ಎಂದು ತಿಪ್ಪೆ ಸಾರಿಸುವ ಪ್ರಯತ್ನ ನಡೆಸಿದ್ದಾರೆ.
ತುಮಕೂರಿನಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡುವುದಕ್ಕಿಂತ ಹೆಚ್ಚು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ವಾಗ್ದಾಳಿ ನಡೆಸುವ ಮೂಲಕ ತಮ್ಮನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದರು.
ನಾನು ಮಹಿಳೆಯರನ್ನು ಅವಮಾನಿಸಿಲ್ಲ, ಹೆಣ್ಣು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜಮೀನು ಬರೆಸಿಕೊಂಡಾಗ ದುಃಖ ಬಂದಿಲ್ವಾ. ಇದೆಲ್ಲವನ್ನೂ ನಾನು ಕಂಡಿದ್ದೇನೆ ಎಂದು ಅವರು ಹೇಳಿದರು.
ಗ್ಯಾರೆಂಟಿ ಯೋಜನೆಗಳನ್ನು ಮತ್ತೆ ಟೀಕಿಸಿದ ಅವರು ಇದು ಪಿಕ್ ಪಾಕೇಟ್ ಗ್ಯಾರಂಟಿ, ಇದಕ್ಕೆ ಎಲ್ಲಿಂದ ಹಣ ತಂದಿದ್ಧಾರೆ ನೋಡಿ ಎಂದು ಇಂಗ್ಲಿಷ್ ಪತ್ರಿಕೆಯ ವರದಿಯೊಂದನ್ನು ಓದಿದರು. ಸಚಿವರು, ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದರು. ನಿನ್ನೆ ಮಂಡ್ಯದಲ್ಲಿ ಮಹಿಳೆಯರನ್ನು ಕರೆತಂದು ಧರಣಿ ಮಾಡಿದ್ರು. ಮಹಿಳೆಯರು ಕೇಳಿದ್ರೆ ಹಣ ಕೊಟ್ರು ಪ್ರತಿಭಟನೆಗೆ ಬಂದಿರುವುದಾಗಿ ಅವರು ಹೇಳಿದರು. ಇದೆಂಥ ಪ್ರತಿಭಟನೆ ಎಂದರು.
ಹೆಣ್ಮಕ್ಕಳಿಗೆ ಗೌರವಕೊಡೋದು ನಿಮ್ಮಿಂದ ಕಲಿಯಲ್ಲ. ಕಾಂಗ್ರೆಸಿಗರು ಕಂಗನಾಗೆ ಅಶ್ಲೀಲ ಪದ ಬಳಸಿದ್ರು. ಕಂಗನಾಗೆ ರೇಟ್ ಎಷ್ಟು ಎಂದು ಕೇಳಿದ್ರು. ಇದಕ್ಕೆ ರಾಹುಲ್, ಸೋನಿಯಾ ಏನು ಹೇಳ್ತಾರೆ..? ಉತ್ತರ ಕೊಡಪ್ಪಾ ಶಿವಕುಮಾರ್ ಎಂದು ಏಕವಚನದಲ್ಲಿ ನಿಂದಿಸಿದ ಅವರು ಮಿ. ಶಿವಕುಮಾರ್, ನಿಮ್ಮ ಉಸ್ತುವಾರಿ ಏನ್ ಮಾತಾಡಿದ್ದಾರೆ. ಹೆಸರಾಂತ ನಟಿ ಹೇಮಮಾಲಿನಿ ಬಗ್ಗೆ ಏನು ಹೇಳಿದ್ದಾರೆ? ಅವರ ಹೇಳಿಕೆ ಮಹಿಳೆಯರಿಗೆ ಗೌರವ ಕೊಡುವಂತದ್ದಾ? ಕನ್ನಡದಲ್ಲಿ ಆ ಪದ ಹೇಳೂದಕ್ಕೆ ಆಗೊಲ್ಲ. ಅದಕ್ಕೆ ನೀವೇ ಕ್ಷಮೆ ಕೇಳಿದ್ರಲ್ಲ, ಇದಕ್ಕೆ ಏನಂತೀರಿ ಎಂದರು.
ನಾವು ತಪ್ಪು ಮಾತಾಡಿಲ್ಲ, ನೋವಾಗಿದ್ರೆ ವಿಷಾದಿಸುವೆ. ಮಹಿಳೆಯರಿಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುವೆ. ದಾರಿ ತಪ್ಪಬೇಡಿ ಅನ್ನೋದು ಅಶ್ಲೀಲ ಪದವೇ? ಗ್ಯಾರಂಟಿಗಳನ್ನು ನಂಬಬೇಡಿ ಎಂದು ಹೇಳಿದ್ದೇನೆ. ನಾನಂತೂ ತಪ್ಪು ಮಾಡಿಲ್ಲ ಎಂದು ಮತ್ತೊಮ್ಮೆ ತಮ್ಮನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ ತಮ್ಮ ಆಸ್ತಿ ಪಾಸ್ತಿ ವಿವರ ನೀಡಿದರು.
ನನ್ನದು 48 ಎಕರೆ ಭೂಮಿ ಇದೆ. ರಾಜಕಾರಣಕ್ಕೂ ಬರುಮ ಮೊದಲೇ ನಾನು ಜಮೀನು ಖರೀದಿಸಿದ್ದೆ. 50 ಟನ್ ಕಲ್ಲಂಗಡಿ ಬೆಳೆದಿದ್ದೇನೆ, ವಿಡಿಯೋ ಮಾಡಿದ್ದೇನೆ. 55 ಲಕ್ಷ ಮೌಲ್ಯದ ಬಾಳೆ ಬೆಳೆ ಬೆಳೆದಿದ್ದೇನೆ. 20ಟನ್ ಕೊಬ್ಬರಿ ಬೆಳೆದು ಸ್ಟಾಕ್ ಇಟ್ಟಿದ್ದೇನೆ. ನಾನು ಬೆಳೆದ ಬೆಳೆಯ ಎಲ್ಲ ವಿಡಿಯೋ ಮಾಡಿಟ್ಟಿದ್ದೇನೆ. ಕಷ್ಟಪಟ್ಟು ದುಡಿದು ಹಣ, ಆಸ್ತಿ ಸಂಪಾದನೆ ಮಾಡಿದ್ದೇನೆ.
ಡಿಕೆಶಿ ತರಾತುರಿಯಲ್ಲಿ ಜೂಮ್ ಮೀಟಿಂಗ್ ಮಾಡಿ ನನ್ನ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದರು. ನಿಮ್ಮ ಗೋಬ್ಯಾಕ್ ಪ್ರತಿಭಟನೆಗೆ ನಾನು ಹೆದರಲ್ಲ ಎಂದು ಅವರು ಹೇಳಿದರು.