ಬೆಂಗಳೂರು: ನಾನು ಸ್ವಾಮೀಜಿಯನ್ನು ರಾಜಕೀಯಕ್ಕೆ ಎಳೆದು ತರುತ್ತಿಲ್ಲ. ನಾನು ಸ್ವಾಮೀಜಿ ಉತ್ತರ ಕೊಡಲಿ ಅಂತ ಕೇಳುತ್ತಿಲ್ಲ. ಪಾಪ ಕುಮಾರಸ್ವಾಮಿಯವರು ಸ್ವಾಮೀಜಿ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಇಲ್ಲಿ ಆಪರೇಷನ್ ಮುಗಿದು ಹೋಗಿತ್ತು. ಸ್ವಾಮೀಜಿಯವರಿಗೂ ಒಕ್ಕಲಿಗ ಒಬ್ಬ ಸಿಎಂ ಆಗಿದ್ದಾನೆ ಅಂತ ಅಭಿಮಾನ. ನಮಗೂ ಅಭಿಮಾನ, ನಿಮಗೂ ಅಭಿಮಾನ ಅಲ್ವಾ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟಾಂಗ್ ನುಡಿದಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪದಚ್ಯುತಿಯ ದಿನಗಳನ್ನು ನೆನಪಿಸಿಕೊಂಡು ಬಿಜೆಪಿ-ಜೆಡಿಎಸ್ ಹೊಸ ಮೈತ್ರಿಯನ್ನು ಲೇವಡಿ ಮಾಡಿದರು.
ಚೆಲುವರಾಯಸ್ವಾಮಿ, ಕೃಷ್ಣ ಭೈರೇಗೌಡ ಕೂಡ ಸ್ವಾಮೀಜಿ ಹತ್ರ ಹೋಗಿ ಆಶೀರ್ವಾದ ಪಡೆದುಕೊಂಡರು. ಹಿರಿಯರ ಆಶೀರ್ವಾದ ಬೇಕಲ್ಲ ಅದರಲ್ಲಿ ತಪ್ಪೇನಿಲ್ಲ. ಕುಮಾರಸ್ವಾಮಿ ಆಶೀರ್ವಾದ ಕೇಳಿದ್ರಲ್ಲಿ ತಪ್ಪು ಅಂತ ಹೇಳಲ್ಲ, ಮಂಜುನಾಥ್ ಆಶೀರ್ವಾದ ಕೇಳಲಿ ತಪ್ಪೂ ಅಂತ ಹೇಳಲ್ಲ. ಆದರೆ ಬೆನ್ನಿಗೆ ಚೂರಿ ಹಾಕಿದ್ರಲ್ಲ ಅವರನ್ನು ಕರೆದುಕೊಂಡು ಹೋದ್ರೆ, ಯಾರು ಸರ್ಕಾರ ತೆಗೆದ್ರಲ್ಲ ಅವರನ್ನೆಲ್ಲ ಕರೆದುಕೊಂಡು ಹೋದ್ರೆ ಸಮಾಜಕ್ಕೆ ಏನಂತ ಉತ್ತರ ಕೊಡ್ತಾರೆ ಇವರು ಅಂತ ಅಷ್ಟೇ ನನ್ನ ಪ್ರಶ್ನೆ ಎಂದು ಅವರು ಹೇಳಿದರು.
ಎಸ್. ಟಿ. ಸೋಮಶೇಖರ್ ಸ್ಥಳೀಯ ವಿಷಯಗಳ ಹಿನ್ನೆಲೆಯಲ್ಲಿ ಬಿಜೆಪಿ ಮೇಲೆ ಸಿಟ್ಟಾಗಿದ್ದಾರೆ ಅವರನ್ನು ನಾವು ಇನ್ನೂ ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಸರ್ಕಾರ ಬೀಳಿಸುವಾಗ ಕಾಂಗ್ರೆಸ್ ನಿಂದ ಶಾಸಕರನ್ನು ಯಾರು ಕಳಿಸಿದ್ದು ಅಂತ ಅಶ್ವತ್ಥ ನಾರಾಯಣ ಅವರೇ ಹೇಳಲಿ. ಸ್ವಾಮೀಜಿಯನ್ನು ನಾನು ಎಳೆಯುತ್ತಲೇ ಇಲ್ಲ. ಸ್ವಾಮೀಜಿಗೆ ಗೌರವ ಕೊಡಲೇಬೇಕು ಅಂತ ನಾನೂ ಹೇಳ್ತಾ ಇದ್ದೇನೆ. ಒಕ್ಕಲಿಗರ ಸರ್ಕಾರ ಅಂತ ಅಭಿಮಾನ ಇದ್ದೇ ಇರುತ್ತದೆ. ಅವರವರ ಜಾತಿ, ಅವರವರ ಧರ್ಮ ಯಾರನ್ನೂ ಬಿಡುವುದಿಲ್ಲ ಎಂದು ಅವರು ನಯಡಿದರು.
ಹುಟ್ಟುವಾಗ ಜಾತಿ ಇರದೇ ಇರಬಹುದು, ಸಾಯುವಾಗ ಜಾತಿ ಬಂದೇ ಬರುತ್ತದೆ. ನಾವ್ಯಾರೂ ಇಂಥ ಜಾತಿ ಬೇಕು ಅಂತ ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಆದರೆ ನಮ್ಮ ಅಪ್ಪ ಅಮ್ಮ ಧರ್ಮ ಜಾತಿ ಬಂದೇ ಬರುತ್ತದೆ. ನಾಮಕರಣ ಮಾಡುವುದೂ ಒಂದು ಧರ್ಮವೇ, ಕಿವಿ ಚುಚ್ಚುವುದೂ ಒಂದು ಧರ್ಮವೇ, ಮೂಗು ಚುಚ್ಚುವುದೂ ಒಂದು ಧರ್ಮವೇ. ಒಕ್ಕಲಿಗರು ಯಾರೂ ದಡ್ಡರಲ್ಲ, ಯಾವ ಜಾತಿಯವರೂ ದಡ್ಡರಲ್ಲ. ವೀರಶೈವ ಇರಬಹುದು ಎಸ್ ಸಿ, ಎಸ್ ಟಿ ಇರಬಹುದು ಯಾವುದೇ ಜಾತಿಯವರೂ ದಡ್ಡರಲ್ಲ. ಅವರವರ ಹಿತಾಸಕ್ತಿ ಏನು ಅಂತ ಎಲ್ಲರೂ ನೋಡ್ತಾರೆ. ದೇಶಕ್ಕೆ ರಾಜ್ಯಕ್ಕೆ ನನಗೆ ಏನು ಒಳ್ಳೆಯದಾಗುತ್ತದೆ ಎಂದು ನೋಡ್ತಾರೆ. ಬದುಕು ನೋಡ್ತಾರೆ, ಭಾವನೆ ನೋಡುವುದಿಲ್ಲ. ಬದುಕು ಕಟ್ಟಿಕೊಳ್ಳುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಅವರು ನುಡಿದರು.