ಹೊಸದಿಲ್ಲಿ: ಕಸ್ಟಮ್ ತೆರಿಗೆ ವಂಚನೆ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿಯಲ್ಲಿದ್ದ ದಿಲ್ಲಿ ಸರ್ಕಾರದ ಸಚಿವ ರಾಜ್ ಕುಮಾರ್ ಆನಂದ್ ಇಂದು ತಮ್ಮ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಸಲ್ಲಿಸುವ ವೇಳೆ ಅವರು ಎಎಪಿ ನಾಯಕತ್ವದ ಕುರಿತು ಕಟುಟೀಕೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗುವ ಸಂಭವವಿದೆ.
2023ರ ನವೆಂಬರ್ ನಲ್ಲಿ ರಾಜ್ ಕುಮಾರ್ ಆನಂದ್ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿತ್ತು. ಕಸ್ಟಮ್ ತೆರಿಗೆಗೆ ಸಂಬಂಧಿಸಿದಂತೆ 7 ಕೋಟಿ ರುಪಾಯಿಗೂ ಹೆಚ್ಚು ಅವ್ಯವಹಾರ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ರಾಜ್ ಕುಮಾರ್ ಅವರ ನಿವಾಸದ ಮೇಲೂ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಭ್ರಷ್ಟಾಚಾರವನ್ನು ವಿರೋಧಿಸಿ ನಾನು ಎಎಪಿ ಸೇರಿಕೊಂಡೆ. ಆದರೆ ಇಂದು ಪಕ್ಷವೇ ಭ್ರಷ್ಟಾಚಾರದ ಪ್ರಕರಣಗಳಿಂದ ಕುಸಿದು ಹೋಗುತ್ತಿದೆ. ಇದಕ್ಕಾಗಿ ತಾವು ಎಎಪಿ ಪಕ್ಷವನ್ನು ತೊರೆಯುತ್ತಿರುವುದಾಗಿ ಆನಂದ್ ಹೇಳಿಕೊಂಡಿದ್ದಾರೆ.
ರಾಜ್ ಕುಮಾರ್ ಆನಂದ್ ಪಕ್ಷ ತೊರೆದ ಬೆನ್ನಲ್ಲೇ ಎಎಪಿ ಮುಖಂಡ ಸೌರಭ್ ಭಾರದ್ವಾಜ್ ಈ ಕುರಿತು ಹೇಳಿಕೆ ನೀಡಿದ್ದು, ರಾಜ್ ಕುಮಾರ್ ಅವರು ಬಿಜೆಪಿಯ ಒತ್ತಡದಿಂದಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ರಾಜ್ ಕುಮಾರ್ ಅವರು ಎಎಪಿ ಆಡಳಿತದಲ್ಲಿರುವ ದಿಲ್ಲಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮತ್ತು ಎಸ್ ಸಿ- ಎಸ್ ಟಿ ಖಾತೆಯ ಸಚಿವರಾಗಿದ್ದರು. ಪಟೇಲ್ ನಗರ ಕ್ಷೇತ್ರದಿಂದ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನನಗೆ ಇಂದು ಅತ್ಯಂತ ದುಃಖದ ದಿನವಾಗಿದೆ. ಅರವಿಂದ ಕೇಜ್ರಿವಾಲ್ ರಾಜಕಾರಣ ಬದಲಾಗುತ್ತದೆ, ದೇಶ ಬದಲಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ರಾಜಕಾರಣ ಬದಲಾಗಲೇ ಇಲ್ಲ, ರಾಜಕಾರಣಿಗಳು ಬದಲಾದರು ಎಂದು ಅವರು ತಮ್ಮ ರಾಜೀನಾಮೆ ಸಂದರ್ಭದಲ್ಲಿ ತಿಳಿಸಿದ್ದಾರೆ.