ನವದೆಹಲಿ: ದೇಶದ ಮಿಲಿಟರಿಗೆ ಹೆಚ್ಚೆಚ್ಚು ಸೈನ್ಯಾಧಿಕಾರಿಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸೈನಿಕ ಶಾಲೆಗಳ ಸ್ಥಾಪನೆಯಲ್ಲಿ ಕೇಂದ್ರ ಸರಕಾರ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(PPP) ವನ್ನು ಜಾರಿಗೊಳಿಸಿದ ನಂತರ ಸ್ಥಾಪನೆಯಾದ ಬಹುತೇಕ ಸೈನಿಕ ಶಾಲೆಗಳು ಬಲಪಂಥೀಯ ರಾಜಕೀಯ ಧುರೀಣರ ಒಡೆತನದ ಶಾಲೆಗಳಾಗಿವೆ ಎನ್ನುವ ಕಳವಳಕಾರಿ ಸಂಗತಿಯನ್ನು “ದಿ ರಿಪೋರ್ಟರ್ಸ್ ಕಲೆಕ್ಟಿವ್” ಸುದ್ದಿತಾಣ ಬಹಿರಂಗಪಡಿಸಿದೆ.
ಕೇಂದ್ರ ಸರಕಾರದ ಪತ್ರಿಕಾ ಪ್ರಕಟಣೆಗಳು ಮತ್ತು ಮಾಹಿತಿ ಹಕ್ಕಿನಡಿ ತಾನು ಪಡೆದ ಪ್ರತ್ಯುತ್ತರಗಳಿಂದ ದಿಟ್ಟ ಪತ್ರಕರ್ತೆ ಅಸ್ಟಾ ಸವ್ಯಸಾಚಿ ಸಂಗ್ರಹಿಸಿ ರಚಿಸಿದ ಸತ್ಯಶೋಧನೆಯ ವರದಿಯನ್ನು ಇತ್ತೀಚೆಗೆ “THE REPORTERS’ COLLECTIVE” ಜಾಲತಾಣ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
2021 ರ ತನ್ನ ಬಜೆಟ್ ನಲ್ಲಿ ಕೇಂದ್ರ ಸರಕಾರ ಭಾರತದಾದ್ಯಂತ PPP (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ 100 ಸೈನಿಕ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿತು. ಅದರಂತೆ ದೇಶಾದ್ಯಂತ ಇಲ್ಲಿಯವರೆಗೆ ಆದ ಸೈನಿಕ ಶಾಲೆಯ 40 ಒಪ್ಪಂದಗಳಲ್ಲಿ ಶೇ.62 ರಷ್ಟು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮತ್ತು ಅದರ ಮಿತ್ರ ಸಂಘಟನೆಗಳು, ಭಾರತೀಯ ಜನತಾ ಪಕ್ಷದ (BJP) ನಾಯಕರು, ಅದರ ರಾಜಕೀಯ ಧುರೀಣರು, ಮಿತ್ರರು, ಹಿಂದುತ್ವವಾದಿ ವಿಚಾರಧಾರೆ ಹೊಂದಿರುವ ಮಾಲೀಕರ ಶಾಲೆಗಳೊಂದಿಗೆ ಆಗಿರುವ ಆಘಾತಕಾರಿ ವಿಷಯ ಇದರಿಂದ ಹೊರಬಿದ್ದಿದೆ.
ಅಲ್ಲಿಯವರೆಗೆ ಭಾರತೀಯ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈನಿಕ್ ಸ್ಕೂಲ್ಸ್ ಸೊಸೈಟಿ (SSS) ಹಿಡಿತದಲ್ಲಿದ್ದ ಸೈನಿಕ ಶಾಲೆಗಳನ್ನು ಖಾಸಗಿಯವರ ಸಹಭಾಗಿತ್ವಕ್ಕೆ ತಂದು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯನ್ನು ಬಲಪಂಥೀಯ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿ ತರುವಂತಾಯಿತು. 2021ರ ಅಕ್ಟೋಬರ್ 12 ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಅಪಾಯಕಾರಿ ನೀತಿಯನ್ನು ಜಾರಿಗೊಳಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು SSS ನೊಂದಿಗೆ ಸಂಯೋಜನೆಗೊಂಡು ಸರಕಾರದಿಂದ ಭಾಗಶಃ ಹಣಕಾಸಿನ ನೆರವು ಪಡೆಯಲು ಮತ್ತು ಶಾಖೆಗಳನ್ನು ನಡೆಸಲು ಅವಕಾಶಗಳನ್ನು ಪಡೆದಿರುವುದು ಸೈನಿಕ ಶಿಕ್ಷಣ ವ್ಯವಸ್ಥೆಯ ಇತಿಹಾಸದಲ್ಲೇ ಮೊದಲು ಎಂದು ದಿ ರಿಪೋರ್ಟರ್ಸ್ ಕಲೆಕ್ಟಿವ್ ಸುದ್ದಿ ತಾಣ ವಿಶ್ಲೇಷಿಸಿದೆ.
ಒಪ್ಪಂದಕ್ಕೆ ಕನಿಷ್ಟ ಮಾನದಂಡ ನಿಗದಿ
ಯಾವುದೇ ಶಾಲೆಯು ಭೂಮಿ, ಭೌತಿಕ ಮತ್ತು IT ಮೂಲಸೌಕರ್ಯ, ಹಣಕಾಸು ಸಂಪನ್ಮೂಲ, ಸಿಬ್ಬಂದಿ ಸೇರಿದಂತೆ ಇತರ ಸಾಮಾನ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದರೆ ಸೈನಿಕ ಶಾಲೆಯ ಒಪ್ಪಂದಕ್ಕೆ ಸಹಿ ಅನುಮೋದನೆ ಪಡೆಯಬಹುದು. ಶಾಲೆ ಹೊಂದಿರುವ ಮೂಲಸೌಕರ್ಯವು SSS ನಿಗದಿಪಡಿಸಿದ ಏಕೈಕ ಮಾನದಂಡ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಈ ಕನಿಷ್ಟ ಮಾನದಂಡಗಳು ಸಂಘಪರಿವಾರದೊಂದಿಗೆ ಸಂಪರ್ಕ ಹೊಂದಿದ ಶಾಲೆಗಳು ಮತ್ತು ಹೀಗೆ ಬಲಪಂಥೀಯ ಸಿದ್ಧಾಂತಗಳನ್ನು ಹೊಂದಿರುವ ಸಂಸ್ಥೆಗಳನ್ನು ಸೈನಿಕ ಶಾಲೆಗಳಿಗೆ ಅನ್ವಯಿಸಲು ಅನುವು ಮಾಡಿಕೊಟ್ಟವು.
ಸೈನಿಕ ಶಾಲೆಗೆ ಸರಕಾರದಿಂದ ಬೆಂಬಲ ಮತ್ತು ಪ್ರೋತ್ಸಾಹ
ದಾಖಲೆಯ ಪ್ರಕಾರ ಸೈನಿಕ ಶಾಲೆಗೆ ಅನುಮೋದನೆಗೊಂಡ ಯಾವುದೇ ಶಾಲೆಯು SSS ಮೂಲಕ ಸರಕಾರದಿಂದ ವಾರ್ಷಿಕ ಶುಲ್ಕದ ಶೇ.50 ರಷ್ಟು ಬೆಂಬಲವನ್ನು ಒದಗಿಸುತ್ತದೆ (50 ವಿದ್ಯಾರ್ಥಿಗಳ ಮಿತಿಗೆ ವಾರ್ಷಿಕ 40,000 ರೂ. ಕ್ಕಿಂತ ಮೇಲೆ ಶುಲ್ಕ ಒಳಪಟ್ಟಿರುತ್ತದೆ). 6 ನೇ ತರಗತಿಯಿಂದ 12 ನೇ ತರಗತಿಯವರೆಗೆ ಮೆರಿಟ್/ಮೀನ್ಸ್ ಆಧಾರದ ಮೇಲೆ ಅಂದರೆ 12 ನೇ ತರಗತಿಯವರೆಗೆ ತರಗತಿಗಳನ್ನು ಹೊಂದಿರುವ ಶಾಲೆಗೆ, SSS ವರ್ಷಕ್ಕೆ ಗರಿಷ್ಠ ರೂ. 1.2 ಕೋಟಿ ರೂ. ಬೆಂಬಲವನ್ನು ಸರಕಾರ ನೀಡುತ್ತದೆ. ಇದು ವಿದ್ಯಾರ್ಥಿಗಳ ಭಾಗಶಃ ಆರ್ಥಿಕ ಬೆಂಬಲವಾಗಿ ನೀಡಲಾಗುತ್ತದೆ. ಸರಕಾರದಿಂದ ಅನುಮೋದನೆಗೊಂಡ ಸೈನಿಕ ಶಾಲೆಗಳಿಗೆ 12ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವಾರ್ಷಿಕವಾಗಿ 10 ಲಕ್ಷ ರೂ. ತರಬೇತಿ ಅನುದಾನವಾಗಿ ನೀಡಲಾಗುತ್ತದೆ.
ಸರಕಾರದ ಬೆಂಬಲ ಮತ್ತು ಪ್ರೋತ್ಸಾಹದ ಹೊರತಾಗಿಯೂ, ಹಿರಿಯ ಮಾಧ್ಯಮಿಕ ವಿದ್ಯಾರ್ಥಿಗಳಿಂದ ವಾರ್ಷಿಕ ಶುಲ್ಕವಾಗಿ 13,800 ರಿಂದ 2,47,900 ರೂ ವರೆಗೆ ಸಂಸ್ಥೆಗಳು ಸಂಗ್ರಹಿಸುತ್ತಿವೆ ಎಂದು ಕಲೆಕ್ಟಿವ್ ವರದಿ ಸಂಶೋಧಿಸಿದೆ. ಇದು ಹೊಸ ಮತ್ತು ಹಳೆಯ ಸೈನಿಕ ಶಾಲೆಗಳ ಶುಲ್ಕದಲ್ಲಿ ಆಗುವ ಗಮನಾರ್ಹ ಅಸಮಾನತೆ ಎಂದು ಕಲೆಕ್ಟಿವ್ ವರದಿ ಹೇಳುತ್ತದೆ.
ಹೊಸ ಸೈನಿಕ ಶಾಲೆಗಳನ್ನು ನಡೆಸುತ್ತಿರುವವರು ಯಾರು?
ಹೊಸ PPP ನೀತಿ ಜಾರಿಗೆ ಬರುವ ತನಕ ದೇಶದಲ್ಲಿ 33 ಸೈನಿಕ ಶಾಲೆಗಳು ಇದರಿಂದ ಹೊರಬಂದ 16 ಸಾವಿರ ಕೆಡೆಟ್ ಗಳನ್ನು ಸೈನಿಕ್ ಸ್ಕೂಲ್ಸ್ ಸೊಸೈಟಿ(SSS) ಅವುಗಳ ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸುವುದರೊಂದಿಗೆ ದೇಶದಲ್ಲಿ ಅಸ್ತಿತ್ವದಲ್ಲಿತ್ತು. SSS ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಅನೇಕ ಸರಕಾರಿ ವರದಿಗಳ ಪ್ರಕಾರ ರಕ್ಷಣಾ ಸಂಸ್ಥೆಗಳಿಗೆ ಕೆಡೆಟ್ ಗಳನ್ನು ಕಳುಹಿಸುವಲ್ಲಿ ಸೈನಿಕ ಶಾಲೆಗಳ ಪ್ರಾಮುಖ್ಯತೆ ಹೆಚ್ಚಾಗಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA) ಮತ್ತು ಇಂಡಿಯನ್ ನೇವಲ್ ಅಕಾಡೆಮಿಗೆ ಕೆಡೆಟ್ ಗಳನ್ನು ಸಿದ್ಧಪಡಿಸುವಲ್ಲಿ ಸೈನಿಕ ಶಾಲೆಗಳ ಪಾತ್ರವನ್ನು ರಕ್ಷಣಾ ಸ್ಥಾಯಿ ಸಮಿತಿಗಳು ಒತ್ತಿ ಹೇಳಿವೆ. 2013-14ರ ಸ್ಥಾಯಿ ಸಮಿತಿಯ ಪ್ರಕಾರ NDA ಗೆ ಸೇರಲು ಹೆಚ್ಚು ಬೇಡಿಕೆಯಿರುವ ಮಿಲಿಟರಿ ಪ್ರವೇಶ ಪರೀಕ್ಷೆಗಳಲ್ಲಿ ಸುಮಾರು ಶೇ.20ರಷ್ಟು ಸೈನಿಕ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ.
ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಲ್ಲಿ ಸಲ್ಲಿಸಿದ ಅಂಕಿಅಂಶಗಳ ಪ್ರಕಾರ, ಕಳೆದ ಆರು ವರ್ಷಗಳಲ್ಲಿ 11 ಪ್ರತಿಶತದಷ್ಟು ಸೈನಿಕ್ ಸ್ಕೂಲ್ ಕೆಡೆಟ್ ಗಳು ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ. ಸಶಸ್ತ್ರ ಪಡೆಗಳಿಗೆ ಸೈನಿಕ ಶಾಲೆಗಳಿಂದ 7 ಸಾವಿರಕ್ಕೂ ಹೆಚ್ಚು ಅಧಿಕಾರಿಗಳನ್ನು ಕೊಡುಗೆ ನೀಡಿದ ಹೆಗ್ಗಳಿಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಸಲ್ಲುತ್ತದೆ. ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು ಮತ್ತು ರಾಷ್ಟ್ರೀಯ ಭಾರತೀಯ ಮಿಲಿಟರಿ ಶಾಲೆಗಳ ಜೊತೆಗೇ ಸೈನಿಕ ಶಾಲೆಗಳು ಸಹ ಭಾರತೀಯ ಸಶಸ್ತ್ರ ಪಡೆಗಳ ವಿವಿಧ ತರಬೇಟಿ ಅಕಾಡೆಮಿಗಳಿಗೆ ಶೇ. 25 – 30 ಕ್ಕೂ ಹೆಚ್ಚು ಕೆಡೆಟ್ ಗಳನ್ನು ಕಳುಹಿಸುತ್ತದೆ.
ಸೈನಿಕ್ ಸ್ಕೂಲ್ಸ್ ಸೊಸೈಟಿಯಿಂದ RTI ಮೂಲಕ ಪಡೆದ ಮಾಹಿತಿಯ ಪ್ರಕಾರ, ಮೇ 5, 2022 ಮತ್ತು ಡಿಸೆಂಬರ್ 27, 2023 ರ ನಡುವೆ ಕನಿಷ್ಠ 40 ಶಾಲೆಗಳು SSS ನೊಂದಿಗೆ ಮೆಮೊರಂಡಮ್ ಆಫ್ ಅಸೋಸಿಯೇಷನ್ ಗೆ ಸಹಿ ಹಾಕಿವೆ. ಇದರಲ್ಲಿ ಕಲೆಕ್ಟಿವ್ ಜಾಲತಾಣ ಸೂಕ್ಷವಾಗಿ ಗುರುತಿಸಿ ವರದಿ ಮಾಡಿದ ಅಂಶ ಏನೆಂದರೆ, ಈ 40 ಶಾಲೆಗಳಲ್ಲಿ 11 ಶಾಲೆಗಳು ನೇರವಾಗಿ ಬಿಜೆಪಿ ರಾಜಕಾರಣಿಗಳ ಒಡೆತನದಲ್ಲಿವೆ. ಅಥವಾ ಅವರ ಅಧ್ಯಕ್ಷತೆಯ ಟ್ರಸ್ಟ್ ಗಳಿಂದ ನಿರ್ವಹಿಸಲ್ಪಡುತ್ತಿವೆ ಅಥವಾ ಬಿಜೆಪಿಯ ಸ್ನೇಹಿತರು ಮತ್ತು ರಾಜಕೀಯ ಮಿತ್ರರಿಗೆ ಸೇರಿವೆ. 8 ಶಾಲೆಗಳು ಆರ್.ಎಸ್.ಎಸ್ ಮತ್ತು ಅದರ ಮಿತ್ರ ಸಂಸ್ಥೆಗಳಿಂದ ನೇರವಾಗಿ ನಿರ್ವಹಿಸಲ್ಪಡುತ್ತಿವೆ. ಹೆಚ್ಚುವರಿಯಾಗಿ ಆರು ಶಾಲೆಗಳು ಹಿಂದುತ್ವ ಸಂಘಟನೆಗಳು ಅಥವಾ ಬಲಪಂಥೀಯ ದಂಗೆಕೋರರು ಮತ್ತು ಇತರ ಹಿಂದೂ ಧಾರ್ಮಿಕ ಸಂಘಟನೆಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿವೆ. ಮತ್ತೊಂದು ಗಮನಾರ್ಹ ಸಂಗತಿ ಏನೆಂದರೆ ಈ ಅನುಮೋದಿತ ಶಾಲೆಗಳಲ್ಲಿ ಯಾವುದೂ ಕ್ರಿಶ್ಚಿಯನ್ ಅಥವಾ ಮುಸ್ಲಿಂ ಸಂಘಟನೆಗಳು ಅಥವಾ ಭಾರತದ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರಿಂದ ನಡೆಸಲ್ಪಡುವ ಶಾಲೆಗಳಾಗಿಲ್ಲ ಎಂದು ಕಲೆಕ್ಟಿವ್ ಜಾಲತಾಣದ ವರದಿ ಬಹಿರಂಗಪಡಿಸಿದೆ.
ಬಿಜೆಪಿ ಪಕ್ಷದ ಸದಸ್ಯರು, ಸ್ನೇಹಿತರಿಗೆ ಹೊಸ ಸೈನಿಕ ಶಾಲೆ ಮಂಜೂರು
ಗುಜರಾತ್ ನಿಂದ ಅರುಣಾಚಲ ಪ್ರದೇಶದವರೆಗೆ ಅನುಮೋದನೆಗೊಂಡ ಹೆಚ್ಚಿನ ಸಂಖ್ಯೆಯ ಸೈನಿಕ ಶಾಲೆಗಳು ಬಿಜೆಪಿ ನಾಯಕರ ನೇರ ಒಳಗೊಳ್ಳುವಿಕೆಯನ್ನು ಅಥವಾ ಅವರ ಮುಖ್ಯಸ್ಥರಾಗಿರುವ ಟ್ರಸ್ಟ್ ಗಳ ಒಡೆತನದಲ್ಲಿರುವುದನ್ನು ಕಾಣಬಹುದು.
ಅರುಣಾಚಲದ ಗಡಿ ಪಟ್ಟಣವಾದ ತವಾಂಗ್ ನಲ್ಲಿರುವ ತವಾಂಗ್ ಪಬ್ಲಿಕ್ ಸ್ಕೂಲ್ ರಾಜ್ಯದಲ್ಲಿ ಅನುಮೋದಿಸಲ್ಪಟ್ಟ ಏಕೈಕ ಸೈನಿಕ ಶಾಲೆ. ಈ ಶಾಲೆಯು ರಾಜ್ಯದ ಮುಖ್ಯಮಂತ್ರಿ ಪೆಮಾ ಖಂಡು ಅವರ ಒಡೆತನದಲ್ಲಿದೆ. ಖಂಡು ಅವರ ಸಹೋದರ ತವಾಂಗ್ ನ ಬಿಜೆಪಿ ಶಾಸಕ ತ್ಸೆರಿಂಗ್ ತಾಶಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಗುಜರಾತ್ ನ ಮೆಹ್ಸಾನಾದಲ್ಲಿ, ಶ್ರೀ ಮೋತಿಭಾಯಿ ಆರ್. ಚೌಧರಿ ಸಾಗರ್ ಸೈನಿಕ ಶಾಲೆಯ ದೂಧಸಾಗರ್ ಡೈರಿಯೊಂದಿಗೆ ಸಂಯೋಜಿತವಾಗಿದೆ. ಇದು ಮೆಹ್ಸಾನಾದ ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಭಾವಸಂಗಭಾಯ್ ಚೌಧರಿ ಅವರ ಅಧ್ಯಕ್ಷತೆಯಲ್ಲಿದೆ. ಕಳೆದ ವರ್ಷ ಗೃಹ ಸಚಿವ ಅಮಿತ್ ಶಾ ಶಾಲೆಯ ಅಡಿಪಾಯ ಹಾಕಿದ್ದರು.
ಗುಜರಾತಿನ ಬನಸ್ಕಾಂತದಲ್ಲಿರುವ ಬನಾಸ್ ಸೈನಿಕ ಶಾಲೆ, ಬನಾಸ್ ಡೈರಿಯ ಅಡಿಯಲ್ಲಿ ಗಲ್ಬಾಭಾಯಿ ನಂಜಿಭಾಯ್ ಪಟೇಲ್ ಚಾರಿಟೇಬಲ್ ಟ್ರಸ್ಟ್ ನಿಂದ ನಿರ್ವಹಿಸಲ್ಪಡುತ್ತದೆ. ಈ ಸಂಘಟನೆಯು ಥರಾಡ್ನ ಬಿಜೆಪಿ ಶಾಸಕ ಮತ್ತು ಗುಜರಾತ್ ವಿಧಾನಸಭೆಯ ಪ್ರಸ್ತುತ ಸ್ಪೀಕರ್ ಶಂಕರ್ ಚೌಧರಿ ನೇತೃತ್ವದಲ್ಲಿದೆ.
ಉತ್ತರಪ್ರದೇಶದ ಇಟಾವಾದಲ್ಲಿರುವ ಶಾಕುಂತ್ಲಾಮ್ ಇಂಟರ್ನ್ಯಾಶನಲ್ ಸ್ಕೂಲ್ ಅನ್ನು ಬಿಜೆಪಿ ಶಾಸಕಿ ಸರಿತಾ ಬದೌರಿಯಾ ಅವರ ಅಧ್ಯಕ್ಷತೆಯಲ್ಲಿ ಮುನ್ನಾ ಸ್ಮೃತಿ ಸಂಸ್ಥಾನ ನಡೆಸುತ್ತಿದೆ.
ಹರಿಯಾಣದ ರೋಹ್ಟಕ್ನ ಶ್ರೀ ಬಾಬಾ ಮಸ್ತನಾಥ್ ರೆಸಿಡೆನ್ಶಿಯಲ್ ಪಬ್ಲಿಕ್ ಸ್ಕೂಲ್ ಈಗ ಸೈನಿಕ ಶಾಲೆಯಾಗಿದೆ. ಮಾಜಿ ಬಿಜೆಪಿ ಸಂಸದ ಮಹಂತ್ ಚಂದನಾಥ್ ಇದನ್ನು ಸ್ಥಾಪಿಸಿದರು ಮತ್ತು ಪ್ರಸ್ತುತ ರಾಜಸ್ಥಾನದ ತಿಜಾರಾದಿಂದ ಹಾಲಿ ಬಿಜೆಪಿ ಶಾಸಕರಾದ ಅವರ ಉತ್ತರಾಧಿಕಾರಿ ಮಹಂತ್ ಬಾಲಕನಾಥ್ ಯೋಗಿ ಅವರು ನಡೆಸುತ್ತಿದ್ದಾರೆ.
ರಾಜಸ್ಥಾನದ ತಿಜಾರಾದ ಬಿಜೆಪಿ ಶಾಸಕ ಮಹಂತ್ ಬಾಲಕನಾಥ್ ಯೋಗಿ ಹರಿಯಾಣದ ರೋಹ್ಟಕ್ನಲ್ಲಿ ಸೈನಿಕ ಶಾಲೆಯನ್ನು ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಅಹಮದ್ ನಗರದ ಪದ್ಮಶ್ರೀ ಡಾ ವಿಠಲರಾವ್ ವಿಖೆ ಪಾಟೀಲ್ ಶಾಲೆ ಸೈನಿಕ ಶಾಲೆಯ ಒಪ್ಪಂದಕ್ಕೆ ಸಹಿ ಮಾಡಿದೆ. ಇದು 2019 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಕಾಂಗ್ರೆಸ್ ಶಾಸಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿದೆ. ರಾಜಸ್ಥಾನದ ಮಾಜಿ ಸ್ಪೀಕರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರಿರಾಮ್ ರಾನ್ವಾ ಭಾರತೀಯ ಸಾರ್ವಜನಿಕರನ್ನು ನಿರ್ವಹಿಸುವ ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ.
ಸಾಂಗ್ಲಿಯ ಎಸ್ಕೆ ಇಂಟರ್ನ್ಯಾಶನಲ್ ಸ್ಕೂಲ್, ಸೈನಿಕ್ ಶಾಲೆಯ ಅಂಗಸಂಸ್ಥೆಯನ್ನು ಪಡೆದುಕೊಂಡಿದೆ, 2014 ರ ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿ ಮಿತ್ರರಾದ ಸದಾಭೌ ಖೋಟ್ ಅವರು ಸ್ಥಾಪಿಸಿದ ಸಂಸ್ಥೆ ಇದಾಗಿದೆ.
ಮಧ್ಯಪ್ರದೇಶದ ಕಟ್ನಿಯಲ್ಲಿ, ಅನುಮೋದನೆ ಪಡೆದ ಸೈನಾ ಇಂಟರ್ನ್ಯಾಶನಲ್ ಸ್ಕೂಲ್ ಮಧ್ಯಪ್ರದೇಶದ ಬಿಜೆಪಿ ಶಾಸಕ ಸಂಜಯ್ ಪಾಠಕ್ ಅವರ ಪತ್ನಿ ನಿಧಿ ಪಾಠಕ್ ಅವರ ನೇತೃತ್ವದಲ್ಲಿದೆ.
ಬಿಜೆಪಿಗೆ ನಿಕಟವಾಗಿರುವ ಅದಾನಿ ಗ್ರೂಪ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಷ್ಠಾನ ನಡೆಸುತ್ತಿರುವ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಅದಾನಿ ವರ್ಲ್ಡ್ ಸ್ಕೂಲ್ ಗೂ ಸೈನಿಕ ಶಾಲೆ ತೆರೆಯಲು ಅನುಮೋದನೆ ದೊರೆತಿದೆ.
ಮೇಲೆ ತಿಳಿಸಿದ ಕೆಲವು ಅಸ್ತಿತ್ವದಲ್ಲಿರುವ ಶಾಲೆಗಳು ಸೈನಿಕ ಶಾಲೆಗಳಾಗಲು ಅನುಮೋದನೆಯನ್ನು ಪಡೆದಿವೆ. ಸೈನಿಕ ಶಾಲೆಗಳು, ದೇಶದ ಇತರ ಸರ್ಕಾರಿ-ಚಾಲಿತ ಶಾಲೆಗಳಂತೆ ಪ್ರಾಥಮಿಕವಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಪಠ್ಯಕ್ರಮವನ್ನು ಕೆಲವು ಹೆಚ್ಚುವರಿ ವಿಷಯಗಳೊಂದಿಗೆ ಬೋಧಿಸುತ್ತವೆ. ಉದಾಹರಣೆಗೆ ನೈತಿಕ ಮೌಲ್ಯಗಳು, ದೇಶಭಕ್ತಿ, ಕೋಮು ಸೌಹಾರ್ದತೆ ಮತ್ತು ವ್ಯಕ್ತಿತ್ವ ವಿಕಸನ ಇತ್ಯಾದಿ. ಹೀಗೆ ಹೊಸ PPP ಮಾದರಿಯಿಂದ ಪ್ರಯೋಜನ ಪಡೆಯುತ್ತಿರುವ ಜನರಲ್ಲಿ ಹಲವರು ಬಿಜೆಪಿ ರಾಜಕಾರಣಿಗಳೇ ಹೆಚ್ಚಾಗಿ ಇದ್ದಾರೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟಿವ್ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ. ಈ ಸುದೀರ್ಘ ಪಟ್ಟಿಯಲ್ಲಿ ವಿವಿಧ ರಾಜ್ಯಗಳ ಬಿಜೆಪಿ ನಾಯಕರಿದ್ದಾರೆ.
ಸೈನಿಕ ಶಾಲೆಗಳ ಕೇಸರೀಕರಣ
ಅನುಮೋದನೆಗಳ ಪಟ್ಟಿಯಲ್ಲಿ ಕೇವಲ ಬಿಜೆಪಿ ನಾಯಕರಷ್ಟೇ ಅಲ್ಲದೇ ಖಾಸಗಿ ಸೈನಿಕ ಶಾಲೆಗಳನ್ನು ನಡೆಸುವ ಆರ್ಎಸ್ಎಸ್ ಸಂಸ್ಥೆಗಳು ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಹಲವಾರು ಹಿಂದೂ ಬಲಪಂಥೀಯ ಗುಂಪುಗಳಿಗೂ ಸೈನಿಕ ಶಾಲೆಗಳ ಅನುದಾನ ನೀಡಲು ಅನುಮೋದನೆ ದೊರೆತಿದೆ. ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ (ವಿದ್ಯಾ ಭಾರತಿ) RSS ನ ಶೈಕ್ಷಣಿಕ ವಿಭಾಗವಾಗಿದೆ. ಅಂತಹ ಏಳು ಅಂಗಸಂಸ್ಥೆಗಳು ಈಗಾಗಲೇ ಭಾರತದಾದ್ಯಂತ ಅಸ್ತಿತ್ವದಲ್ಲಿರುವ ವಿದ್ಯಾಭಾರತಿ ಶಾಲೆಗಳಿಗೆ ಹೋಗಿವೆ. ಅವುಗಳಲ್ಲಿ ಮೂರು ಬಿಹಾರದಲ್ಲಿವೆ ಮತ್ತು ತಲಾ ಒಂದು ಮಧ್ಯಪ್ರದೇಶ, ಪಂಜಾಬ್, ಕೇರಳ ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿವೆ. ಆರ್ಎಸ್ಎಸ್ನ ಸಾಮಾಜಿಕ ಸೇವಾ ವಿಭಾಗವಾದ ರಾಷ್ಟ್ರೀಯ ಸೇವಾ ಭಾರತಿಯ ಅಂಗಸಂಸ್ಥೆಯಾದ ಭೌಸಾಹಬ್ ಭುಸ್ಕುತೆ ಸ್ಮೃತಿ ಲೋಕ ನ್ಯಾಸ್ ಕೂಡ ಶಾಲೆಗಳನ್ನು ನಡೆಸುವ ಸಮೂಹದ ಭಾಗವಾಗಿದೆ. ಹೊಸಂಗಾಬಾದ್ನಲ್ಲಿರುವ ಅವರ ಶಾಲೆ, ಸರಸ್ವತಿ ಗ್ರಾಮೋದಯ ಹೈಯರ್ ಸೆಕೆಂಡರಿ ಶಾಲೆ, ಅನುಮೋದನೆ ಪಡೆಯಿತು.
ಈ ಸಂಸ್ಥೆಗಳ ಪಠ್ಯಕ್ರಮ ಸಾಮಾನ್ಯವಾಗಿ ಮುಸ್ಲಿಂ ವಿರೋಧಿ ಪಠ್ಯಕ್ರಮ ಬೋಧನೆ, ಅವಾಸ್ತವಿಕ ದೃಷ್ಟಿಕೋನದಲ್ಲಿ ಇತಿಹಾಸ ವಿಶ್ಲೇಷಣೆ ಮಾಡುವ ಆರೋಪಗಳಿವೆ. 1978ರಲ್ಲಿ ಆರ್.ಎಸ್.ಎಸ್ ಸ್ಥಾಪಿಸಿದ ವಿದ್ಯಾಭಾರತಿ ನಡೆಸುತ್ತಿರುವ ಔಪಚಾರಿಕ ವಿದ್ಯಾ ಸಂಸ್ಥೆಗಳ ಸಂಖ್ಯೆ 12,065. ಒಟ್ಟು 31,58,658 ವಿದ್ಯಾರ್ಥಿಗಳನ್ನು ಹೊಂದಿದೆ. ಭಾರತದಲ್ಲಿ ಖಾಸಗಿ ಶಾಲೆಗಳ ಅತಿದೊಡ್ಡ ನೆಟ್ವರ್ಕ್ ಗಳಲ್ಲಿ ಇದೂ ಒಂದಾಗಿದೆ. ವಿದ್ಯಾಭಾರತಿ ತನ್ನ ವೆಬ್ ಸೈಟ್ ನಲ್ಲಿ ಉಲ್ಲೇಖಿಸಿರುವಂತೆ “ಹಿಂದುತ್ವಕ್ಕೆ ಬದ್ಧವಾಗಿರುವ ಮತ್ತು ದೇಶಭಕ್ತಿಯ ಉತ್ಸಾಹದಿಂದ ತುಂಬಿದ ಯುವ ಪೀಳಿಗೆಯನ್ನು ನಿರ್ಮಾಣ”ವನ್ನು ಇದು ಬಯಸುತ್ತದೆ.
ಸೆಂಟ್ರಲ್ ಹಿಂದೂ ಮಿಲಿಟರಿ ಎಜುಕೇಶನ್ ಸೊಸೈಟಿಯಿಂದ ನಡೆಸಲ್ಪಡುವ ನಾಗ್ಪುರದ ಭೋನ್ಸಾಲಾ ಮಿಲಿಟರಿ ಶಾಲೆಯನ್ನು ಸೈನಿಕ ಶಾಲೆಯಾಗಿ ನಡೆಸಲು ಅನುಮೋದಿಸಲಾಗಿದೆ. ಈ ಶಾಲೆಯನ್ನು 1937 ರಲ್ಲಿ ಹಿಂದೂ ಬಲಪಂಥೀಯ ವಿಚಾರವಾದಿ ಬಿ.ಎಸ್. ಮೂಂಜೆ ಸ್ಥಾಪಿಸಿದ್ದರು. 2006ರ ನಾಂದೇಡ್ ಬಾಂಬ್ ಬ್ಲಾಸ್ಟ್ ಮತ್ತು 2008ರ ಮಾಲೆಗಾಂವ್ ಸ್ಫೋಟಗಳ ತನಿಖೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಸ್ಫೋಟದ ಆರೋಪಿಗಳು ತರಬೇತಿ ಪಡೆದಿರುವ ಭೋನ್ಸಾಲಾ ಮಿಲಿಟರಿ ಶಾಲೆಯಲ್ಲಿ ತನಿಖೆ ನಡೆಸಿತ್ತು ಎನ್ನುವ ಆಘಾತಕಾರಿ ವಿಷಯಗಳನ್ನು ಕಲೆಕ್ಟಿವ್ ತನ್ನ ವರದಿಯಲ್ಲಿ ದಾಖಲಿಸಿದೆ.
ಹೀಗೆ ಹಲವಾರು ಇತರ ಹಿಂದೂ ಧಾರ್ಮಿಕ ಟ್ರಸ್ಟ್ ಗಳು, ಅವುಗಳಲ್ಲಿ ಕೆಲವು ಹಿಂದುತ್ವ ದಂಗೆಕೋರರಿಂದ ಸ್ಥಾಪಿಸಲ್ಪಟ್ಟವಾಗಿವೆ. ತಮ್ಮ ಅಸ್ತಿತ್ವದಲ್ಲಿರುವ ಸ್ಥಾಪನೆಯಲ್ಲಿ ಸೈನಿಕ ಶಾಲೆಗಳನ್ನು ನಡೆಸಲು ಅನುಮೋದನೆಯನ್ನು ಪಡೆದಿವೆ. ಇದರಲ್ಲಿ ಮನುವಾದಿ, ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಚಾರಗಳನ್ನು ಹರಡುವ ಹಿಂದೂತ್ವವಾದಿ ನಾಯಕಿ ಸಾದ್ವಿ ಋತಂಭರ ಅವರಿಗೆ ಸೇರಿದ, ವೃಂದಾವನದಲ್ಲಿ ಅಸ್ತಿತ್ವದಲ್ಲಿರುವ ಸಂವಿದ್ ಗುರುಕುಲಂ ಬಾಲಕಿಯರ ಶಾಲೆ ಮತ್ತು ಹಿಮಾಚಲ ಪ್ರದೇಶದ ಸೋಲನ್ ನಲ್ಲಿರುವ ರಾಜ್ ಲಕ್ಷ್ಮೀ ಸಂವಿದ್ ಗುರುಕುಲಂ ಸಹ ಸೈನಿಕ ಶಾಲೆಗಳನ್ನು ನಡೆಸಲು ಅನುಮೋದನೆ ಪಡೆದಿವೆ. ಬಾಬರಿ ಮಸೀದಿ ದ್ವಂಸಕ್ಕೆ ಕರಣವಾದ ತನ್ನ ಭಾಷಣಗಳಿಗೆ ಕುಖ್ಯಾತಿ ಪಡೆದ ಬಲಪಂಥೀಯ ಇತಿಹಾಸಕಾರ ತಾನಿಕಾ ಸರ್ಕಾರ, ಋತಂಭರಾ ಸೇರಿದಂತೆ 68 ಜನ ಹಿಂದೂತ್ವವಾದಿ ಭಾಷಣಕಾರರ ಕುರಿತು, ಬಾಬ್ರಿ ಮಸೀದಿ ದ್ವಂಸ ಪ್ರಕರಣದ ತನಿಖೆ ನಡೆಸಿದ ಲಿಬರ್ಹಾನ್ ಆಯೋಗವು “ಇವರೆಲ್ಲ ಕೋಮು ವೈಷಮ್ಯದ ಅಂಚಿಗೆ ಕೊಂಡೊಯ್ಯುತ್ತಿದ್ದಾರೆ” ಎಂದು ಆರೋಪಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2023ರಲ್ಲಿ ವೃಂದಾವನಕ್ಕೆ ತೆರಳಿ ಋತಂಬರಾ ಅವರ ಜನ್ಮದಿನದ ಶುಭಾಶಯ ಕೋರಿದರು. ಜನವರಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲಾ ಬಾಲಕಿಯರ ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ, ಸಿಂಗ್ ಅವರು ರಾಮಮಂದಿರ ಚಳವಳಿಯಲ್ಲಿ ಪ್ರಮುಖ ಪಾತ್ರಕ್ಕಾಗಿ ಋತಂಭರಾ ಅವರನ್ನು ಶ್ಲಾಘಿಸಿದರು. ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ ಋತಂಭರಾ ಮಹತ್ವದ ಕೊಡುಗೆ ನೀಡಿದ್ದಾರೆ. ಆಕೆ ಸಮಾಜವನ್ನು ತನ್ನ ಕುಟುಂಬವೆಂದು ಪರಿಗಣಿಸಿದ್ದಾಳೆ” ಎಂದು ಸಿಂಗ್ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಿಂದ ಉಲ್ಲೇಖಿಸಿದ್ದಾರೆ.
ಹೀಗೆ ಅಸ್ತಿತ್ವದಲ್ಲಿರುವ ತಮ್ಮ ವಿದ್ಯಾಸಂಸ್ಥೆಗಳನ್ನು ಸೈನಿಕ ಶಾಲೆಗಳನ್ನು ನಡೆಸಲು ಅನುಮೋದನೆ ಪಡೆದವರೆಲ್ಲ ಸಂಘ ಪರಿವಾರದೊಳಗೆ ಗುರುತರ ಸ್ಥಾನದಲ್ಲಿದ್ದಾರೆ. ಇನ್ನು ಕೆಲವರು ಬಿಜೆಪಿ ನಾಯಕರಿಗೆ ಹತ್ತಿರವಾಗಿದ್ದಾರೆ.
ಈ ಬಗ್ಗೆ “ದಿ ರಿಪೋರ್ಟರ್ಸ್ ಕಲೆಕ್ಟಿವ್” ಜಾಲತಾಣವು, ಹೆಸರು ಪ್ರಸ್ತಾಪಿಸಲು ಇಷ್ಟಪಡದ ಒಬ್ಬ ನಿವೃತ್ತ ಮೇಜರ್ ಜನರಲ್ ಅವರೊಂದಿಗೆ ಸಂವಾದ ಮಾಡಿದಾಗ ಪ್ರಸ್ತಾಪಿಸಿದ ಅಂಶಗಳು ಹೀಗಿವೆ,- “ತಾತ್ವಿಕವಾಗಿ PPP ಮಾದರಿ ಒಳ್ಳೆಯದೇ ಆಗಿದೆ. ಆದರೆ ಈ ಯಾವ ವಿಚಾರಧಾರೆಯ ಸಂಸ್ಥೆಗಳು PPP ಮೂಲಕ SSS ನೊಂದಿಗೆ ಒಪ್ಪಂದಗಳನ್ನು ಗೆಲ್ಲುತ್ತವೆ ಎಂಬುದು ನನ್ನ ಆತಂಕವಾಗಿದೆ. ಮಾಲೀಕತ್ವದ ಬಹುಪಾಲು ಬಿಜೆಪಿ-ಸಂಬಂಧಿತ ವ್ಯಕ್ತಿಗಳು/ಸಂಘಟನೆಗಳ ಕೈಯಲ್ಲಿದ್ದರೆ, ಅದು ಮಕ್ಕಳು ಅಲ್ಲಿ ಪಡೆಯಶಿಕ್ಷಣದ ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯ ಸೈನಿಕ ಶಾಲೆಗಳಂತೆ, ಈ ವಿದ್ಯಾರ್ಥಿಗಳು ಸಹ ಸಶಸ್ತ್ರ ಪಡೆಗಳಿಗೆ ಎನ್.ಡಿ.ಎ ಮತ್ತು ಇತರ ಪ್ರವೇಶ ಪರೀಕ್ಷೆಗಳಿಗೆ ಅರ್ಜಿ ಸಲ್ಲಸಬೇಕಾದರೆ ಅವರು ಪಡೆದ ಶಿಕ್ಷಣವು ಖಂಡಿತವಾಗಿ ಸಶಸ್ತ್ರ ಪಡೆಗಳ ಹೊಂದಬಹುದಾದ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತದೆ” ಎಂದಿದ್ದಾರೆ.
ಈ ಕುರಿತು ಕಲೆಕ್ಟಿವ್ ನೊಂದಿಗೆ ಮಾತನಾಡಿದ ಮತ್ತೊಬ್ಬ ನಿವೃತ್ತ ಸೈನ್ಯಾಧಿಕಾರಿ, ಪ್ರಸ್ತುತ ತಕ್ಷಶಿಲಾ ಸಂಸ್ಥೆಯಲ್ಲಿ ಕಾರ್ಯತಂತ್ರದ ಅಧ್ಯಯನ ಕಾರ್ಯಕ್ರಮದ ನಿರ್ದೇಶಕರಾಗಿರುವ ಮಾಜಿ ಲಿಫ್ಟಿನೆಂಟ್ ಜನರಲ್ ಪ್ರಕಾಶ್ ಮೆನನ್ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ,- “ಯುವಕರನ್ನು ಮತೀಯ ವಿಚಾರಧಾರೆಗಳಿಂದ ಹಿಡಿದಿಡುವ ಪರಿಕಲ್ಪನೆ ಸಶಸ್ತ್ರ ಪಡೆಗಳಿಗೆ ಒಳ್ಳೆಯದಲ್ಲ. ಇಂತಹ ಸಂಸ್ಥೆಗಳಿಗೆ ಗುತ್ತಿಗೆಗಳನ್ನು ನೀಡುವುದು ಸಶಸ್ತ್ರ ಪಡೆಗಳ ಪಾತ್ರ ಮತ್ತು ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ” ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಸರ್ ನೀವು ಒಮ್ಮೆ ಸಂಪೂರ್ಣ ಗಮನಿಸಿ. ಲೇಖನ ಸುದೀರ್ಘವಾಗಿರುವುದರಿಂದ ಕೆಲವನ್ನು ಎಡಿಟ್ ಮಾಡಿ ತೆಗೆದಿದ್ದೇನೆ. ಸಂಪೂರ್ಣ ವರದಿ ಇದ್ದ ಹಾಗೇ ಬರಲಿ ಎಂದರೆ ಇನ್ನಷ್ಟು ಸೇರಿಸುತ್ತೇನೆ.