ಆಯುರ್ವೇದದವರು ಅಲೋಪತಿಯನ್ನು ದೂರೋದು ಅಲೋಪತಿಯವರು ಆಯುರ್ವೇದವನ್ನು ಸೈಡ್ ಎಫೆಕ್ಟ್ ಅಂತ ಹೀಯಾಳಿಸೋದು ಮತ್ತೊಬ್ಬರು ಹೋಮಿಯೋಪಥಿಯನ್ನು ಲೇವಡಿ ಮಾಡೊದು ಇವೆಲ್ಲಾ ನಿಜಕ್ಕೂ ಬೇಕೇ ?ಕಾರಣವಿಲ್ಲದೆ ಯಾವುದನ್ನೇ ಹೀಗಳಿಸುವುದಾಗಲೀ ಅದೇ ರೀತಿ ಇನ್ನಿಲ್ಲದ ವೈಭವೀಕರಣವಾಗಲೀ ಎರಡೂ ತಪ್ಪು.- ಶಂಕರ್ ಸೂರ್ನಳ್ಳಿ
ಮೊನ್ನೆ ಮೊನ್ನೆ ಯೋಗ ಆಧ್ಯಾತ್ಮ ಖ್ಯಾತಿಯ ಸದ್ಗುರುಗಳೊಬ್ಬರು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗೆ ಸಿಲುಕಿ ಆಧುನಿಕ ಆಸ್ಪತ್ರೆಗೆ ದಾಖಲಾಗಿ ಸುದ್ದಿ ಮಾಡಿದ್ದರು. ಯೋಗದಲ್ಲಿ ಎಲ್ಲಕ್ಕೂ ಪರಿಹಾರವಿದೆ ಆಧುನಿಕ ಔಷಧ ಪದ್ಧತಿ ಜನರಿಗೆ ಹೇಳಿಸಿದ್ದಲ್ಲ ಎಂದು ಭಾಷಣ ಬಿಗಿಯುತ್ತಿದ್ದ ಹಾಗು ಮೆದುಳಿನ ಆರೋಗ್ಯ ಕಾಯ್ದುಕೊಳ್ಳೋದು ತೀರಾ ಸರಳ ಎಂಬಂತೆ ವ್ಯಾಖ್ಯಾನ ನೀಡಿದ್ದ ಸದ್ಗುರು ಕೊನೆಗೆ ಶರಣಾದದ್ದು ಮಾತ್ರ ಆಧುನಿಕ ಚಿಕಿತಾ ಪದ್ಧತಿಗೇ !
ಭಾರತೀಯ ಮೂಲದ ಯೋಗ ಮತ್ತು ಆಯುರ್ವೇದ ಶಾಸ್ತ್ರಗಳು ಮಾನವ ಕುಲಕ್ಕೆ ಅಮೂಲ್ಯವಾದ ಕೊಡುಗೆಗಳು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಶಾಸ್ತ್ರಗಳ ಇನ್ನಿಲ್ಲದ ವೈಭವೀಕರಣ ಮತ್ತು ಅತಿರಂಜಿತ ಕಲ್ಪನೆಗಳೇ ಇವುಗಳ ಪಾಲಿನ ದೊಡ್ಡ ಶತ್ರುವಾಗಿ ಪರಿಣಮಿಸಿರುವುದೂ ಕೂಡ ಅಷ್ಟೇ ಸತ್ಯ. ಪ್ರಾಚೀನ ಆಯುರ್ವೇದ ಮತ್ತು ಯೋಗ ಶಾಸ್ತ್ರಗಳು ಇದೀಗ ಕೇವಲ ಆರೋಗ್ಯ ಅಥವಾ ಸ್ವಸ್ಥ ಬದುಕಿಗೆ ಸಂಬಂಧಿಸಿದ ವಿಷಯಗಳಷ್ಟೇ ಆಗಿರದೇ ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ವ್ಯಾವಹಾರಿಕ ಉದ್ಯಮವಾಗಿ ಬದಲಾಗಿದೆ. ಯಾವ ವ್ಯವಹಾರಗಳೂ ವಿದ್ಯೆಯೂ ಕೈ ಹತ್ತದಿದ್ದಾಗ ಯೋಗ ಅಥವಾ ಆಯುರ್ವೇದದ ಹೆಸರಲ್ಲಿ ’’ಅಂಗಡಿ” ತೆಗೆದು ಉದ್ದಾರ ಆದವರಿದ್ದಾರೆ. ಹಲವಾರು ಸ್ವಯಂ ಘೋಷಿತ ಯೋಗ ಗುರುಗಳು ತಮ್ಮ ಶಿಷ್ಯ ಸಮೂಹದಿಂದ ಆಧ್ಯಾತ್ಮ ಗುರು ಅಥವಾ ದೇವ ಮಾನವರೆಂದು ಕರೆಸಿಕೊಂಡು ಪ್ರಭಾವಿಗಳಾಗಿ ಬಿಲಿಯನೇರ್ ಗಳಾಗಿ ಹಣವಂತ ವಿದೇಶಿ ಶಿಷ್ಯರುಗಳನ್ನಾಕರ್ಷಿಸಿಕೊಂಡು ಸಖತ್ತಾಗಿ ಬೆಳೆದ, ಬೆಳೆಯುತ್ತಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಸಾಕಷ್ಟಿವೆ. ಈ ಯೋಗ ಆಯುರ್ವೇದದ ಆಕರ್ಷಣೆಯೇ ಅಂತಾದ್ದು.
ಕೆಲ ಸಮಯದ ಹಿಂದೆ ವಸ್ತು ಪ್ರದರ್ಶನದ ಸ್ಟಾಲ್ ಒಂದರಲ್ಲಿ ಕಾಳುಜೀರಿಗೆ (Nigella sativa) ಯ ಸಣ್ಣ ಸಣ್ಣ ಪ್ಯಾಕೆಟನ್ನು ಮಾರಾಟಕ್ಕಿಟ್ಟು ಸತ್ತವರನ್ನು ಬದುಕಿಸುವುದು ಬಿಟ್ಟು ಕ್ಯಾನ್ಸರ್, ಡಯಾಬಿಟೀಸ್, ಚರ್ಮರೋಗ ಮೊದಲಾದ ಎಲ್ಲಾ ಸಮಸ್ಯೆಗೂ ಇದು ಮದ್ದು ಎಂದು ಮಾರುತ್ತಿದ್ದದ್ದನ್ನು ಕಂಡಿದ್ದೆ. ರಸ್ತೆ ಬದಿಯಲ್ಲಿ ಸೆಲಾಜಿನೆಲ್ಲಾ ಎಂಬ ಜರಿಗಿಡ (Fern)ವನ್ನ ನೀರಲ್ಲಿ ಸೋಕಿಸಿ ಇದೇ ಹಿಮಾಲಯದ ಸಂಜೀವಿನಿ (ಸತ್ತವರನ್ನ ಬದುಕಿಸುವ) ಸಸ್ಯ ಎಂದು ಮಾರುವುದನ್ನು ನೀವೆಲ್ಲ ಕಂಡಿರಬಹುದು. ಅಷ್ಟೇ ಯಾಕೆ ಟೀವಿಯಲ್ಲಿ ಆಯುರ್ವೇದ ಮದ್ದುಗಳ ಹೆಸರಲ್ಲಿ ಬೊಜ್ಜು ಕರಗಿಸಲು, ಮಂಡಿನೋವಿನ ಶಾಶ್ವತ ನಿವಾರಣೆಗೆ, ಎತ್ತರ ಆಗಲಿಕ್ಕೆ, ಮಕ್ಕಳಾಗಲಿಕ್ಕೆ (ಕೆಲ ವರ್ಷಗಳ ಹಿಂದೆ ಗಂಡು ಮಕ್ಕಳಾಗಲಿಕ್ಕೆ ಖ್ಯಾತ ಯೋಗಗುರು ಒಬ್ಬ ಔಷಧವೊಂದನ್ನು ಮಾರುಕಟ್ಟೆಗೆ ತಂದು ಸುದ್ದಿಯಾಗಿದ್ದರು. ಇದೇ ವ್ಯಕ್ತಿ ತನ್ನ ಆಯುರ್ವೇದ ಪ್ರಾಡಕ್ಟ್ ನ ದಾರಿ ತಪ್ಪಿಸುವ ಸುಳ್ಳು ಜಾಹೀರಾತುಗಳಿಗಾಗಿ ಸುಪ್ರೀಂ ಕೋರ್ಟಿನಿಂದ ಇತ್ತೀಚೆಗೆ ಛೀಮಾರಿ ಹಾಕಿಸಿಕೊಂಡಿದ್ದರು) ಬೆಳ್ಳಗಾಗಲಿಕ್ಕೆ ಎಂಬಿತ್ಯಾದಿಯಾಗಿ ಬರುವ ಬಗೆಬಗೆಯ ಅತಿರಂಜಿತ ಜಾಹೀರಾತುಗಳನ್ನ ನೋಡೇ ಇರುತ್ತೀರಿ. ಒಟ್ಟಾರೆ ಯೋಗದಂತೆ ಈ ಆಯುರ್ವೇದವೂ ಕೂಡ ಅನೇಕರಿಗೆ ಕಾಸು ಮಾಡುವ ದಾರಿಯಾಗಿ ಪರಿವರ್ತಿತವಾಗಿದ್ದ ಸಂಗತಿ ಹೊಸತೇನಲ್ಲ.
ಅಸಲಿಗೆ ನಾವು ಸಾಮಾನ್ಯವಾಗಿ ನೋಡುವ ಯೋಗಕ್ಕೂ ಈಗ ಬಿಂಬಿತವಾಗುತ್ತಿರುವ ಯೋಗಕ್ಕೂ ಅಜಗಜಾಂತರವಿದೆ. ವಿಶ್ವ ಯೋಗ ದಿವಸದ ಹೆಸರಲ್ಲಿ ನಾವು ಮಾಡುತ್ತಿರುವುದು ಯೋಗದ ಸಣ್ಣ ಒಂದು ಭಾಗವೇ ವಿನಹ ಅದೇ ಯೋಗವಲ್ಲ. ಯೋಗ ವಿಧಾನವನ್ನು ಪರಿಷ್ಕರಿಸಿ ರೂಪು ಕೊಟ್ಟ ಪತಂಜಲಿಯೇ ಈ ಬಗ್ಗೆ ಸ್ಪಷ್ಟವಾಗಿ ಯೋಗಃ ಚಿತ್ತ ವೃತ್ತಿ ನಿರೋಧಃ ಎಂದು ಇದನ್ನು ಉಲ್ಲೇಖಿಸಿದ್ದಾನೆ. ಅಂದರೆ ಯೋಗವೆಂದರೆ ಚಿತ್ತವೃತ್ತಿಗಳಿಗೆ ಅರ್ಥಾತ್ ಮನಸ್ಸಿನ ಭಾವಗಳಿಗೆ ಸಂಬಂಧಪಟ್ಟದ್ದು ಎಂದು. ಆತ ತನ್ನ ಅಷ್ಟಾಂಗ ಯೋಗ ಸೂತ್ರದಲ್ಲಿ ಉಲ್ಲೇಖಿಸುವ ಯಮ, ನಿಯಮ, ಆಸನ, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳೆಲ್ಲ ಅಷ್ಟಾಂಗ ಯೋಗದ ಭಾಗಗಳೇ ವಿನಹ ಅವೇ ಯೋಗ ಎಂದೆನಿಸದು. ಡ್ರಿಲ್ ಮಾಡುವಂತೆ ಕೈಕಾಲು ಮೇಲೆ ಮಾಡುವುದನ್ನೇ ಯೋಗವೆಂದು ತಿಳಿದವರಿದ್ದಾರೆ, ಧ್ಯಾನದ ಭಂಗಿಯಲ್ಲಿ ಕೂತು ಮನಸಲ್ಲಿ ವಿಡಿಯೋಗ್ರಾಫರ್ ನನ್ನ ವೀಡಿಯೋವನ್ನ ಸರಿಯಾಗಿ ತೆಗೀತಿದ್ದಾನಾ ಅಂತ ಯೋಚಿಸಿದರೆ ಪತಂಜಲಿ ಸೂಚಿಸಿದ ಚಿತ್ತ ವೃತ್ತಿ ಹತೋಟಿಯ ನಿಯಮದಂತೆ ಅದು ಖಂಡಿತ ಧ್ಯಾನವೆಂದೆನಿಸದು.
ಮುಖ್ಯವಾಗಿ ಧ್ಯಾನ ಬೌದ್ಧರ ಕೊಡುಗೆ. ಈ ಧ್ಯಾನವೇ ಬೌದ್ಧರ ಮೂಲಕ ಚೀನಾ ಜಪಾನ್ ದಾಟಿ ಅಲ್ಲಿ ಮನಸ್ಸು ಏಕಾಗ್ರತೆಗೆ ಸಂಬಂಧಪಟ್ಟಂತೆ ’ಝೆನ್” ಎಂದು ಕರೆಸಿಕೊಂಡಿತು ಅನ್ನುವ ವಾದವಿದೆ. ಎಷ್ಟೋ ಮಂದಿಗೆ ಯೋಗ ಅಥವ ಧ್ಯಾನ ಎಂದಾಕ್ಷಣ ಇದರಿಂದ ಅತೀಂದ್ರಿಯ ಶಕ್ತಿಗಳ ಸಿದ್ಧಿ (ಗಾಳಿಯಲ್ಲಿ ತೇಲುವುದು ಮಾಯವಾಗುವುದು, ಇತರರ ಮನಸ್ಸನ್ನು ಓದುವುದು, ಟೆಲಿಪಥಿ ವಿದ್ಯೆ, ಸಿಟ್ಟಲ್ಲಿ ಕಣ್ಣು ಕೆಕ್ಕರಿಸಿ ಶಾಪಕೊಟ್ಟು ಸುಡುವ ಪವರ್) ಎಂಬಿತ್ಯಾದಿ ಭ್ರಮೆಗಳಿದೆ. ಗುರು ಸದ್ಗುರುಗಳೆಲ್ಲ ಈ ಹಿನ್ನೆಲೆಯಲ್ಲೇ ಆಧುನಿಕ ವಿಜ್ಞಾನ ಆಧುನಿಕ ಚಿಕಿತ್ಸಾ ಪದ್ಧತಿಯನ್ನು ಟೀಕಿಸುವುದು.
ಉಸಿರಾಟ ಕೇಂದ್ರೀಕೃತ ಧ್ಯಾನ ವಿಧಾನಗಳು ವಿವಿಧ ಆಸನ ಭಂಗಿಗಳ ನಿಯಮಿತ ಅನುಸರಣೆಯಿಂದ ಆರೋಗ್ಯದಲ್ಲಿ ಪೂರಕ ಲಾಭಗಳು ಸಿಗಬಹುದು. ಆದರೆ ಇವೇ ಎಲ್ಲಕ್ಕೂ ಮದ್ದಲ್ಲ. ಎಷ್ಟೋ ಯೋಗಿಗಳು ಅನಾರೋಗ್ಯಕ್ಕೀಡಾಗಿ ಮರಣಿಸಿದ ಉದಾಹರಣೆಗಳು ಸಾಕಷ್ಟಿವೆ. ರಾಮಕೃಷ್ಣ ಪರಮ ಹಂಸರಂತಹ ನೈಜ ಯೋಗಿಗಳೂ ಕೂಡ ಇದಕ್ಕೆ ಹೊರತಾಗಿರಲಿಲ್ಲ ಎಂಬುದಿಲ್ಲಿ ಗಮನಾರ್ಹ.
ಇನ್ನು ಆಯುರ್ವೇದದ ಬಗ್ಗೆ ಹೇಳುವುದಾದಲ್ಲಿ ಭಾರತದಲ್ಲಿ ಆಯುರ್ವೇದ ಎಂದಾಕ್ಷಣ ಗಿಡ ಮೂಲಿಕೆಯ ಔಷಧಗಳನ್ನೆಲ್ಲ ಸಾರಾಸಗಟಾಗಿ ಆಯುರ್ವೇದ ಎಂದು ಕರೆಯುವುದುಂಟು. (ಮೂಲ ಆಯುರ್ವೇದ ಪದ್ಧತಿಯಲ್ಲಿ ಸಸ್ಯವಲ್ಲದೇ ಪ್ರಾಣಿ ಜನ್ಯ ವಸ್ತುಗಳ ಬಳಕೆಯನ್ನೂ ಕೂಡ ಉಲ್ಲೇಖಿಸಲಾಗಿದೆ) ಚರಕ ಸುಶ್ರುತರನ್ನು ಉಲ್ಲೇಖಿಸುವ ಆಯುರ್ವೇದ ಪದ್ಧತಿಯಲ್ಲಿ ಅವರ ಕಾಲದಲ್ಲಿ ಭಾರತ ದೇಶದಲ್ಲೇ ಇದ್ದಿರದ ದಕ್ಷಿಣ ಅಮೆರಿಕಾ ಮೂಲದ ಪಪ್ಪಾಯ, ಪೇರಳೆ ಯಂತಹ ಸಸ್ಯಗಳಿಂದ ಜನ ಕಂಡುಕೊಂಡ ಮನೆ ಮದ್ದನ್ನೂ ಕೂಡ ಆಯುರ್ವೇದ ಎಂದು ಕೆಲವರು ಕರೆಯುವುದುಂಟು. ಡೆಂಗ್ಯು ರೋಗಕ್ಕೆ ಪಪ್ಪಾಯಿ ಎಲೆ ರಸ, ಹಲ್ಲು ನೋವಿಗೆ ಪೇರಳೆ ಚಿಗುರು, ಗಾಯಕ್ಕೆ ಕಮ್ಯುನಿಸ್ಟ್ ಸೊಪ್ಪಿನ ರಸ… ಇವೆಲ್ಲವೂ ಕೆಲವರಿಗೆ ಆಯುರ್ವೇದವೇ.. ವಾಸ್ತವದಲ್ಲಿ ಇಂತವನ್ನ ಹರ್ಬಲ್ ಪ್ರಾಡಕ್ಟ್ ಎನ್ನಬಹುದೇ ವಿನಃ ಆಯುರ್ವೇದ ಅಲ್ಲ. ಸಂಪ್ರದಾಯಸ್ಥರು ಹೇಳುವ ಪ್ರಾಚೀನ ಋಷಿ ಮುನಿಗಳ ಆಯುರ್ವೇದದಲ್ಲಿ ಪರಂಗಿ ಪೋರ್ಚುಗೀಸರು ತಂದ ಸಸ್ಯಗಳು ಬರುವುದಾದರೂ ಹೇಗೆ..!?
ಋಷಿ ಮುನಿಗಳು ಎಂದಾಕ್ಷಣ ತಕ್ಷಣಕ್ಕೆ ಮನಸ್ಸಿಗೆ ಬರುವುದು ಒಂದು ನಿರ್ದಿಷ್ಟ ಸಮುದಾಯದ ಮಂದಿ (ವಾಲ್ಮೀಕಿಯಂತವರೂ ಇದ್ದಾರಾದರೂ ಅವರನ್ನೂ ಆ ಮೂಲದಿಂದಲೇ ಕತೆ ಕಟ್ಟಿ ಬಿಂಬಿಸುವವರಿದ್ದಾರೆ) ಅದೇ ರೀತಿ ಆಯುರ್ವೇದವೂ ಋಷಿ ಮುನಿಗಳದ್ದೇ ಎಂದು ಹೇಳುವ ಮೂಲಕ ಇದು ಆ ಸಮುದಾಯದ್ದೇ ಕೊಡುಗೆ ಎಂಬರ್ಥದಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಈಗ ಆಯುರ್ವೇದ ಎಂದು ಕರೆಯಲ್ಪಡುವ ರೋಗ ನಿದಾನ ವಿಧಾನ ಮುಖ್ಯವಾಗಿ ಅನಾರ್ಯರ ಕೊಡುಗೆಯೇ ಹೊರತು ತಪ್ಪಸ್ಸು ನಿರತರದ್ದಲ್ಲವೇ ಅಲ್ಲ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಿಂತಕ ಡಾ. ಶ್ರೀನಿವಾಸ ಕಕ್ಕಿಲ್ಲಾಯರವರು ಇಂತದ್ದೇ ಮಾತನ್ನು ಉಲ್ಲೇಖಿಸಿದ್ದರು. ಆ ಕಾಲದಲ್ಲಿ ಆಯುರ್ವೇದವನ್ನು ವಿರೋಧಿಸಿದ್ದ ಮಂದಿ ಇವತ್ತು ತಾವೇ ಅದರ ಹಕ್ಕುದಾರರೆಂಬಂತೆ ವರ್ತಿಸುತ್ತಿದ್ದಾರೆಂದವರು ಹೇಳಿದ್ದರು. ಯಾವುದೇ ವೈದ್ಯ ಪದ್ಧತಿಯಾಗಲಿ ಅದು ಮನುಷ್ಯರೆಲ್ಲರನ್ನೂ ಒಂದೇ, ಪ್ರತಿಯೊಬ್ಬರ ಶರೀರ ರಚನಾಕ್ರಮ ಎಲ್ಲವೂ ಒಂದೇ ಎಂದು ತಿಳಿಸುತ್ತದೆ. ಇವನಿಗೆ ಜ್ವರ, ಕೆಮ್ಮು, ಶೀತ ಆಗುವಂತೆ ಅವನಿಗೂ ಆಗುತ್ತದೆ. ಒಬ್ಬನಿಗೆ ಗಾಯವಾಗಿ ಕೆಂಪು ರಕ್ತ ಸೋರಿದರೆ ಮತ್ತೊಬ್ಬನಲ್ಲಿ ಹಾಲಾಗಲೀ ಜೇನಾಗಲೀ ಖಂಡಿತಾ ಸುರಿಯದು. ಹೃದಯ ಎನ್ನುವ ಅಂಗ ರಕ್ತ ಪರಿಚಲನೆಗೆ ಇದ್ದಿರುವಂತಾದ್ದು ಎಂದೇ ಗೊತ್ತಿಲ್ಲದವರಿಂದ ಬಿಪಿ (ರಕ್ತದೊತ್ತಡ) ಶುಗರ್ ಬಗ್ಗೆ ಇಂದು ಉಲ್ಲೇಖವಾಗುತ್ತಿದೆ ಎಂಬರ್ಥದಲ್ಲಿ ಅವರು ಮಾತನ್ನಾಡಿದ್ದರು.
ಅನೇಕ ಆಧುನಿಕ ಔಷಧಿಗಳಿಗೆ ಪಾರಂಪರಿಕ ಗಿಡಮೂಲಿಕಾ ಔಷಧಿಗಳೇ ಮೂಲ. ಅವನ್ನು ಕುದಿಸಿ ಕಷಾಯದಂತಹ ನೇರ ಸಸ್ಯಜನ್ಯ ಉತ್ಪನ್ನವನ್ನು ತಯಾರಿಸುವಂತೆ ಈಗಿನವುಗಳು ಶುದ್ಧ ರೂಪದ ಸಿಂಥೆಟಿಕ್ ಔಷಧಗಳು. ಮಲೇರಿಯಾಕ್ಕೆ ಕೊಡಮಾಡುವ ಸಿಂಕೋನಾ ಮರದ ಪಾರಂಪರಿಕ ಔಷಧವಾಗಲೀ, ತಲೆನೋವು ಜ್ವರಗಳಿಗೆ ಸಾಮಾನ್ಯವಾಗಿ ಬಳಸುವ ಸ್ಯಾಲಿಸ್ಯಾಲಿಕ್ ಆಸಿಡ್ ಮೂಲದ ಔಷಧ ಗಳಾಗಲೀ ಇವೆಲ್ಲ ಮೂಲತ: ಸಸ್ಯಜನ್ಯ ಔಷಧಗಳಾಗಿದ್ದವುಗಳೇ. ಅಂದಹಾಗೆ ಈ ಮೂಲಿಕಾ ಔಷಧಗಳು ಮೇಲೆ ಉಲ್ಲೇಖಿಸಿದ ಮದ್ದಿನಂತೆ ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ. ವಿಶ್ವದಾದ್ಯಂತ ಹಳ್ಳಿ ಗುಡ್ಡಗಾಡು ಜನರು ಇಂತಹ ಸ್ಥಳೀಯ ಲಭ್ಯವುಳ್ಳ ಸಸ್ಯ ಯಾ ಪ್ರಾಣಿಜನ್ಯ ಆಕರಗಳಿಂದ ತಯಾರಿಸುವ ಪಾರಂಪರಿಕ ಔಷಧಿಯನ್ನೇ ರೋಗ ನಿದಾನಕ್ಕಾಗಿ ಬಳಸುತ್ತಿದ್ದರು.
ಇದನ್ನೂ ಓದಿ- ಕಾಂಗ್ರೆಸ್ ಪ್ರಣಾಳಿಕೆ: ಸರ್ವರಿಗೂ ಸಮನ್ಯಾಯ
ಅನೇಕರು ಪ್ರಾಚೀನತೆಯನ್ನು ವೈಭವೀಕರಿಸುವ ಗುಂಗಿನಲ್ಲಿ ಆಧುನಿಕ ಶೋಧನೆಯನ್ನು ತುಚ್ಛವಾಗಿ ಬಿಂಬಿಸುವುದುಂಟು. ವಿಜ್ಞಾನದಲ್ಲಿ ಎಲ್ಲವೂ ಸರಿಯೇ ಎಂದೇನೂ ಖಂಡಿತ ಇಲ್ಲ. ಆವತ್ತು ಸರಿ ಎನಿಸಿದ್ದು ಇವತ್ತು ತಪ್ಪಾಗಿ ಕಂಡುಬಂದ ಶೋಧನೆ ಬೇಕಷ್ಟಿವೆ. ಇದು ವಿಜ್ಞಾನದ ಹೆಗ್ಗಳಿಕೆ ಕೂಡ. ನಿಂತ ನೀರಿನಂತಿರದ ಅದರ ನಿರಂತರತೆಯ ದ್ಯೋತಕವಿದು. ಶಸ್ತ್ರ ಚಿಕಿತ್ಸೆ ಅಥವ ಸಣ್ಣಪುಟ್ಟ ಚಿಕಿತ್ಸೆಯಲ್ಲಿ ಬೇಕಾಗುವ ಅನಸ್ತೇಶಿಯಾ ವಿಧಾನಕ್ಕೆ ದೀರ್ಘ ಶೋಧನೆಯ ಸೋಲು ಗೆಲುವಿನ ಇತಿಹಾಸ ಇದೆ. ಅದಕ್ಕೂ ಮೊದಲು ಒಂದುವರೆ ಶತಮಾನದ ಹಿಂದೆ ಶಸ್ತ್ರ ಚಿಕಿತ್ಸೆ ಅಥವಾ ರೋಗಿಯ ಕೈ ಯಾ ಕಾಲು ಕತ್ತರಿಸುವ ಸಂದರ್ಭ ಬಂದಾಗ ಸುತ್ತಲಿದ್ದವರು ಡೋಲು ತಮ್ಮಟೆಗಳನ್ನ ಜೋರಾಗಿ ಭಾರಿಸುತ್ತಿದ್ದರಂತೆ. ಆ ಗೌಜು ಗದ್ದಲ ಬಿಟ್ಟರೆ ಬೇರೆ ನೋವು ನಿವಾರಕ ವಿಧಾನವೇ ಕಂಡು ಕೊಂಡಿರದಂತ ಕಾಲವದು. ಇವತ್ತಿನ ವಿಜ್ಞಾನ ಶೋಧನೆ ನಿಮಗೆ ಹಲ್ಲು ಕಿತ್ತದ್ದು, ಹೊಟ್ಟೆ ಕೊಯ್ದದ್ದು ಗೊತ್ತೇ ಆಗದಷ್ಟು ಮುಂದುವರೆದಿದೆ. ಪನಾಮ ಕಾಲುವೆ ತೋಡುವಾಗ ಅಲ್ಲಿ ಸುಮಾರು ಇಪ್ಪತ್ತು ಸಾವಿರದಷ್ಟು ಜನ ಮಲೇರಿಯಾದಿಂದ ಸತ್ತಿದ್ದರು. ಇಡೀ ವಿಶ್ವವನ್ನೇ ಕಂಗೆಡಿಸಿದ್ದ ಮಲೇರಿಯಾಕ್ಕೆ ಆವತ್ತು ಸರಿಯಾದ ಔಷಧವೇ ಇದ್ದಿರಲಿಲ್ಲ. ಆದರೆ ಮಲೇರಿಯಾದ ನಿಯಂತ್ರಣಕ್ಕೆ ದಾರಿ ಹುಡುಕಿ ಕೋಟ್ಯಂತರ ಜೀವವನ್ನು ಉಳಿಸಿದಾತ ಭಾರತ ಸಂಜಾತ ನೋಬೆಲ್ ವಿಜೇತ ರೊನಾಲ್ಡ್ ರಾಸ್ ಎಂಬ ವಿಜ್ಞಾನಿ. ಬ್ರಿಟಿಷ್ ಭಾರತದಲ್ಲಿ ಜನಿಸಿದ ಆತನ ಶೋಧನೆಯಿಂದಾಗಿ ಮಲೇರಿಯಾ ಬರುವುದು ಸೊಳ್ಳೆಯ ಮೂಲಕ ಎಂದು ಶೋಧಿಸಲ್ಪಟ್ಟು ಮುಂದೆ ಮಲೇರಿಯಾ ನಿಯಂತ್ರಣಕ್ಕೆ ಇದು ತುಂಬಾ ಸಹಕಾರಿಯಾಯಿತು. ಈತ ರೋಗಾಣು ಪತ್ತೆಗೆ ಬಳಸಿದ ಸೂಕ್ಷ್ಮ ದರ್ಶಕ ಯಾವುದೇ ಪಾರಂಪರಿಕ ಪದ್ಧತಿಯದ್ದಂತೂ ಖಂಡಿತಾ ಅಲ್ಲ.
ಆಯುರ್ವೇದದವರು ಅಲೋಪತಿಯನ್ನು ದೂರೋದು ಅಲೋಪತಿಯವರು ಆಯುರ್ವೇದವನ್ನು ಸೈಡ್ ಎಫೆಕ್ಟ್ ಅಂತ ಹೀಯಾಳಿಸೋದು ಮತ್ತೊಬ್ಬರು ಹೋಮಿಯೋಪಥಿಯನ್ನು ಲೇವಡಿ ಮಾಡೊದು ಇವೆಲ್ಲಾ ನಿಜಕ್ಕೂ ಬೇಕೇ ? ಕಾಸರಗೋಡಿನ ವೈದ್ಯರ ತಂಡವೊಂದು ಆನೆಕಾಲಿನ ರೋಗಕ್ಕೆ ಆಯುರ್ವೇದ ಮತ್ತು ಅಲೋಪತಿಯ ಎರಡೂ ಮಿಶ್ರಣದ ಸಂಯೋಜಕ ಚಿಕಿತ್ಸಾ ಪದ್ಧತಿ ಕಂಡುಕೊಂಡು ಅದರ ಯಶಸ್ಸು ದೇಶವಿದೇಶಗಳಲ್ಲೂ ಸುದ್ದಿಮಾಡಿತ್ತು. ಕಾರಣವಿಲ್ಲದೆ ಯಾವುದನ್ನೇ ಹೀಗಳಿಸುವುದಾಗಲೀ ಅದೇ ರೀತಿ ಇನ್ನಿಲ್ಲದ ವೈಭವೀಕರಣವಾಗಲೀ ಎರಡೂ ತಪ್ಪು.
ಶಂಕರ್ ಸೂರ್ನಳ್ಳಿ
ಲೇಖಕರು