ಅಕ್ಕ, ಅಕ್ಕ ಶೋಭಕ್ಕ, ಮುಂದಿನ ಚುನಾವಣೆ ಎಲ್ಲಕ್ಕ? : ಶೋಭ ಕರಂದ್ಲಾಜೆ ಗೇಲಿ ಮಾಡಿದ ಕೃಷ್ಣಭೈರೇಗೌಡ

Most read

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಏನೂ ಕೆಲಸ ಮಾಡದ ಶೋಭಾ ಕರಂದ್ಲಾಜೆ ಅವರಿಗೆ ಅಲ್ಲಿನ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಅಂದ್ರು.. ಈಗ ಇಲ್ಲಿಗೆ ಬಂದಿದ್ದಾರೆ. ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದ ಮತದಾರರು ಸೋಲಿಸಬೇಕು ಎಂದು ಸಚಿವ ಕೃಷ್ಣಭೈರೇಗೌಡ ಕರೆ ನೀಡಿದ್ದಾರೆ.

ಬೆಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜೀವ್‌ ಗೌಡ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಪ್ರೊ. ರಾಜೀವ್ ಗೌಡ ಪಕ್ಕಾ ಲೋಕಲ್ ಕ್ಯಾಂಡಿಡೇಟ್. ಬೆಂಗಳೂರು ಜನರ ಸಂಕೇತ ರಾಜೀವ್ ಗೌಡ. ಬೆಂಗಳೂರು ಉತ್ತರದಲ್ಲಿ ಬಿಜೆಪಿ ನಾಲ್ಕು ಬಾರಿ ಗೆದ್ದಿದೆ. ಸಾಂಗ್ಲಿಯಾನಗೆ ಟಿಕೆಟ್ ಕೊಟ್ರು ಗೆದ್ರು. ಅವರು ಸುತ್ತಲೂ ಕಾಮಾಂಡೋಗಳನ್ನ ಇಟ್ಟುಕೊಂಡು ಬರ್ತಿದ್ರು. ಚಿಕ್ಕಮಗಳೂರಿನಿಂದ ಚಂದ್ರೇಗೌಡರನ್ನ ಕರೆದುಕೊಂಡು ಬಂದ್ರು, ಅವರನ್ನು ವಾಪಾಸ್‌ ಕಳಿಸಿದರು. ಮಂಗಳೂರಿನವರಾದ ಸದಾನಂದ ಗೌಡ ಹತ್ತು ವರ್ಷಗಳ ಕಾಲ ಸಂಸದರಾಗಿದ್ದರು. ಈಗ ಅಕ್ಕ ಬಂದಿದ್ದಾರೆ, ಜನ ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದರು ಅವರು ಹೇಳಿದರು.

ಶೋಭಾ ಕರಂದ್ಲಾಜೆಗೆ ಪುತ್ತೂರಿನಲ್ಲೇ ಬೆಂಬಲ ಇಲ್ಲ. ಉಡುಪಿ ಚಿಕ್ಕಮಗಳೂರಿಗೆ ಹೋದ್ರು ಅಲ್ಲಿ ಗೋ ಬ್ಯಾಕ್ ಅಂದ್ರು. ಈಗ ಬೆಂಗಳೂರು ಉತ್ತರಕ್ಕೆ ಬಂದಿದ್ದಾರೆ ಮುಂದಿನ ಚುನಾವಣೆ ಎಲ್ಲಿಂದ ಶೋಭಾಕ್ಕಾ ಎಂದು ಲೇವಡಿ ಮಾಡಿದ ಕೃಷ್ಣಬೈರೇಗೌಡ, ಅಕ್ಕನ ರಾಜಕೀಯ ಟೂರಿಂಗ್ ಟಾಕೀಸ್ ಇದ್ದಂತೆ ಆಗಿದೆ. ನೀವು ಮನೆ ಮನೆಗೂ ಹೋದಾಗ ಇದನ್ನೇ ಹೇಳಿ ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ಬಡವರ ಶ್ರೀಮಂತರ ನಡುವೆ ಅಂತರ ಹೆಚ್ಚಾಗಿದೆ. ಬ್ರಿಟಿಷರ ಕಾಲದಲ್ಲೂ ಇಷ್ಟು ಇರಲಿಲ್ಲ. ನಮ್ಮ ತೆರಿಗೆ ಪಾಲು ಕೊಡ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಕೊಡ್ತಿಲ್ಲ. ನಿರುದ್ಯೋಗದ ಬಗ್ಗೆ ಇವರು ಏನು ಯೋಚನೆ ಮಾಡ್ತಿಲ್ಲ. ಬಿಜೆಪಿ ಗಾಳಿ ಈ ಬಾರಿ ಇಲ್ಲ. ಹತ್ತು ವರ್ಷಗಳ ಕಾಲ ಅವರನ್ನು ನೋಡಿದ್ದಾಗಿದೆ. ಈ ಅವಕಾಶ ನಾವು ಉಪಯೋಗಿಸಿಕೊಳ್ಳಬೇಕು. ಬಿಜೆಪಿ ಒಡೆದ ಮನೆಯಾಗಿದೆ. ಅಲ್ಲಿ ಒಂದು ಮನೆಯ ದರ್ಬಾರ್ ನಡೆಯುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಶೋಭಕ್ಕಾಗೆ ಅವಕಾಶ ಕೊಡಬಾರದು ಅಂತ ನಾಯಕರು ಹೇಳಿದರೂ ಅವರ ಮಾತಿಗೆ ವಿರುದ್ಧವಾಗಿ ಟಿಕೆಟ್ ಕೊಟ್ಟಿದ್ದಾರೆ. ನಾವು ರ್ಯಾಲಿ ಮಾಡಿದರೆ ಲಾಭ ಆಗಲ್ಲ. ಮನೆ ಮನೆಗೂ ಹೋಗಬೇಕು. ಇದು ಕಾರ್ಯಕರ್ತರ ಚುನಾವಣೆ. ನಾವು ಗೆಲ್ಲುವ ಸಂಕಲ್ಪ ಮಾಡಬೇಕು ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.

More articles

Latest article