ಕೋಲಾರ : ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಟಿಕೆಟ್ ಯುದ್ಧ ನಡೆದಿತ್ತು. ಕೆ.ಹೆಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ಗುದ್ದಾಟದ ನಡುವೆ ಅಚ್ಚರಿಯ ಅಭ್ಯರ್ಥಿಯಾಗಿ ಗೌತಮ್ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ತಮ್ಮ ಸ್ಪರ್ಧೆಯ ಹಿನ್ನೆಲೆಯಲ್ಲಿ ಯಾರಿಗೂ ಅಸಮಾಧಾನ ಇಲ್ಲ, ಎಲ್ಲರೂ ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಗೌತಮ್ ಹೇಳಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಸಮಾಧಾನ ಇಲ್ಲದೆ ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಕೆ.ಹೆಚ್. ಮುನಿಯಪ್ಪ ಮುನಿಸಿಕೊಂಡಿದ್ದರು ಎಂಬುದು ಸತ್ಯ. ಆದರೆ ಈಗ ಅಸಮಾಧಾನ ಇಲ್ಲ. ಅನೇಕ ಕಾರ್ಯದೊತ್ತಡದಿಂದಾಗಿ ಕೋಲಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಕಾರ್ಯಕ್ರಮದಲ್ಲಿ ಕೆ.ಹೆಚ್ ಮುನಿಯಪ್ಪ ಪಾಲ್ಗೊಳ್ಳುತ್ತಾರೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಕೆ.ಹೆಚ್.ಮುನಿಯಪ್ಪ ರಾಜ್ಯ ನಾಯಕರು, ಕೋಲಾರಕ್ಕೆ ಅಷ್ಟೇ ಸೀಮಿತ ಅಲ್ಲ. ಬಿಡುವಿನ ವೇಳೆಯಲ್ಲಿ ಕೋಲಾರ ಕ್ಷೇತ್ರಕ್ಕೆ ಆಗಮಿಸುತ್ತಾರೆ. ತನ್ನ ಸಂಬಂಧಿಕರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರವಿದೆ ಅಷ್ಟೇ. ನನ್ನನ್ನು ಬೆಂಬಲಿಸುವುದಾಗಿ ಅವರು ಮುಕ್ತ ಮನಸ್ಸಿನಿಂದ ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಪ್ರಚಾರದ ಸಭೆಗಳಿಂದ ದೂರ ಇರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಗೌತಮ್ ಭೇಟಿ ನೀಡಿ ಮಾತುಕತೆ ನಡೆಸಿದರು. ಇದೇ ವೇಳೆ ಮಾತನಾಡಿದ ಗೌತಮ್, ರೂಪ ಕಲಾ ಮೇಡಂ ಅವರೇ ನನಗೆ ಉಪಹಾರ ನೀಡಿ ಗೌರವಿಸಿದ್ದಾರೆ. ಕ್ಷೇತ್ರದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಯಾವುದೇ ರೀತಿ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಪಕ್ಷ ಗೆಲುವಿಗೆ ಶ್ರಮಿಸುತ್ತಾರೆ. ನನ್ನನ್ನು ಯಾರು ಬಲಿಪಶು ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.