ಬಳ್ಳಾರಿ: ಕೇಂದ್ರ ಸರ್ಕಾರ ಇಡಿ, ಸಿಬಿಐ, ಐಟಿ ಇತ್ಯಾದಿ ತನಿಖಾ ಸಂಸ್ಥೆಗಳನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಟ್ಲರ್ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಜಾಸ್ತಿ ಮಾತನಾಡಿದೆ ಇಡಿ ಬಿಡುತ್ತಾರೆ, ವಿಮರ್ಶೆ ಮಾಡಿದರೆ ಸಿಬಿಐ ಬಿಡುತ್ತಾರೆ. ಕೇಂದ್ರ ಸರಕಾರವನ್ನು ಕಿತ್ತೊಗೆಯಲು ಇದೊಂದು ಸದವಕಾಶ ಎಂದು ಅವರು ಅಭಿಪ್ರಾಯಪಟ್ಟರು.
ಆಂತರಿಕ ಸರ್ವೆಯಿಂದ ರಾಜ್ಯದಲ್ಲಿ 20 ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಇದರ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಕಳಂಕವಿಲ್ಲದ ನಾಯಕ. ನಾಲ್ಕು ಬಾರಿ ಶಾಸಕರಾದ ಸೌಮ್ಯ ಅಭ್ಯರ್ಥಿ. ಪ್ರತಿಸ್ಪರ್ಧಿ ಯಾರೆಂಬುದು ನೋಡುವುದಿಲ್ಲ, ಅಭ್ಯರ್ಥಿ ಗೆಲುವಿಗೆ ನಾನು, ಸಚಿವರಾದ ಜಮೀರ್ ಅಹಮದ್, ಸಂತೋಷ ಲಾಡ್, ನಾಸೀರ್ ಹುಸೇನ್ ಎಲ್ಲರನ್ನು ಒಳಗೊಂಡು ಶ್ರಮಿಸುತ್ತೇವೆ. ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಚುನಾವಣೆಯಲ್ಲಿ ಒಂದಾಗಿ ಗೆಲ್ಲಿಸುತ್ತೇವೆ. ಬಳ್ಳಾರಿ ಕ್ಷೇತ್ರದಲ್ಲಿ ಗೆದ್ದು ಗೆಲುವನ್ನು ಖರ್ಗೆ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಸಿಎಂಗೆ ಉಡುಗೊರೆ ಕೊಡುತ್ತೇವೆ ಎಂದು ಅವರು ಹೇಳಿದರು.
ರಾಜ್ಯದ ಬೊಕ್ಕಸಕ್ಕೆ ಭಾರವಾದರೂ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಈ ಐದು ಗ್ಯಾರಂಟಿಯೇ ನಮಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಿವೆ. ನಮ್ಮ ತಂತ್ರಗಾರಿಕೆಯನ್ನು ಷಡ್ಯಂತ್ರ ಎಂದು ರಾಮುಲು ಹೇಳುತ್ತಾರೆ. ನಾವು ಬಿಜೆಪಿಯಂತೆ ಆಡಳಿತ ಯಂತ್ರಾಂಗವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಅವರು ನುಡಿದರು.